ಆ್ಯಂಬುಲೆನ್ಸ್​ ಇಲ್ಲದೆ ಮಗಳ ಹೆಣ ಹೆಗಲ ಮೇಲೆ ಹೊತ್ತು ಸಾಗಿದ ತಂದೆ!

ಬಕ್ಸ್‌ವಾಹಾ: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಕುಟುಂಬವೊಂದರ ನಾಲ್ಕು ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಮಗಳ ಮೃತದೇಹವನ್ನು ತನ್ನ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್​ ಸಿಗದ ಹಿನ್ನೆಲೆಯಲ್ಲಿ ಆಕೆಯ ತಂದೆ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿರುವ ಧಾರುಣ ಘಟನೆ ನಡೆದಿದೆ.

ಮಗಳ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು, ಆಕೆಯ ಚಿಕಿತ್ಸೆಗಾಗಿ ಸೋಮವಾರ(ಜೂನ್‌ 6) ಬಕ್ಸ್‌ವಾಹಾ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಮಂಗಳವಾರ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯ ಮನೆಯವರು ಪಕ್ಕದ ದಮೋಹ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅದೇ ದಿನ ಚಿಕಿತ್ಸೆ ಫಲಕಾರಿಯಾಗದೆ ಅವಳು ಸಾವನ್ನಪ್ಪಿದ್ದಳು.

ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಆಸ್ಪತ್ರೆಯ ಸಿಬ್ಬಂದಿ ಬಳಿ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡುವಂತೆ ಕೇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೃತ ಬಾಲಕಿಯ ಅಜ್ಜ ಮನ್ಸುಖ್ ಅಹಿರ್ವಾರ್ ಆರೋಪಿಸಿದ್ದಾರೆ. ಖಾಸಗಿ ವಾಹನ ವ್ಯವಸ್ಥೆ ಮಾಡಿಕೊಳ್ಳಲು ನಮ್ಮ ಬಳಿ ಹಣವಿರಲಿಲ್ಲ, ಹಾಗಾಗಿ ನಾವು ಆಕೆಯ ದೇಹವನ್ನು ಕಂಬಳಿಯಲ್ಲಿ ಸುತ್ತಿ ಹೆಗಲ ಮೇಲೆ ಹಾಕಿಕೊಂಡು ಬಕ್ಸ್‌ವಾಹಾಗೆ ಬಸ್ಸಿ​ನಲ್ಲೇ ತೆಗೆದುಕೊಂಡು ಹೋದೆವು ಎಂದು ಅವರು ಹೇಳಿದ್ದಾರೆ.

ಬಸ್​ನಲ್ಲಿ ಬಕ್ಸ್‌ವಾಹಾ ತಲುಪಿದ ನಂತರ ಆ ಬಾಲಕಿಯ ತಂದೆ ಲಕ್ಷ್ಮಣ್ ಅಹಿರ್ವಾರ್ ಶವವನ್ನು ಪೌಡಿ ಗ್ರಾಮಕ್ಕೆ ಕೊಂಡೊಯ್ಯಲು ವಾಹನವನ್ನು ಒದಗಿಸುವಂತೆ ನಗರ ಪಂಚಾಯತ್‌ಗೆ ಕೇಳಿದರು. ಆದರೆ, ಅವರು ಕೂಡ ವಾಹನದ ವ್ಯವಸ್ಥೆ ಮಾಡಲು ನಿರಾಕರಿಸಿದರು.

ದಮೋಹ್ ಜಿಲ್ಲಾಸ್ಪತ್ರೆಯ ಡಾ. ಮಮತಾ ತಿಮೋರಿ ಈ ಆರೋಪವನ್ನು ತಳ್ಳಿಹಾಕಿದ್ದು, “ಯಾರೂ ನನ್ನ ಬಳಿಗೆ ಬಂದಿಲ್ಲ, ನಮ್ಮ ಬಳಿ ಶವದ ವಾಹನವಿದೆ. ನಾವು ಅದನ್ನು ರೆಡ್‌ಕ್ರಾಸ್ ಅಥವಾ ಯಾವುದೇ ಇತರ ಎನ್‌ಜಿಒನಿಂದ ವ್ಯವಸ್ಥೆಗೊಳಿಸುತ್ತಿದ್ದೆವು. ಆದರೆ, ನಮಗೆ ಈ ಘಟನೆಯ ಬಗ್ಗೆ ಮಾಹಿತಿಯೇ ಇರಲಿಲ್ಲ” ಎಂದು ಹೇಳಿದ್ದಾರೆ.

“ನಾನು ಶವದ ವಾಹನವನ್ನು ಕೇಳಿದೆ. ಆದರೆ ಅವರು ಅದಕ್ಕೆ ವ್ಯವಸ್ಥೆ ಮಾಡಲಿಲ್ಲ. ಆದ್ದರಿಂದ, ಖಾಸಗಿ ವಾಹನದ ವ್ಯವಸ್ಥೆ ಮಾಡಲು ನಮ್ಮ ಬಳಿ ಹಣವಿಲ್ಲದ ಕಾರಣ ನಾವು ಮಗಳ ಮೃತದೇಹವನ್ನು ಹೊತ್ತು ಸಾಗಿಸಿದ್ದೇವೆ” ಎಂದು ಬಾಲಕಿಯ ತಂದೆ ಭಗವಾನ್ ದಾಸ್ ಆರೋಪಿಸಿದ್ದಾರೆ.

ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *