ಎನ್‌ಎಲ್‌ಎಂಸಿ-ರಾಷ್ಟ್ರೀಯ ಸೊತ್ತುಗಳ ಲೂಟಿಗೆ ಸರಕಾರೀ ರಿಯಲ್ ಎಸ್ಟೇಟ್ ಕಂಪನಿ?

ನ್ಯಾಷನಲ್ ಮೊನೆಟೈಸೇಷನ್ ಪೈಪ್‌ಲೈನ್(ಎನ್‌ಎಂಪಿ- ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್) ಎಂಬುದನ್ನು ಪ್ರಕಟಿಸಿರುವ ಸರಕಾರ ಈಗ (ನ್ಯಾಷನಲ್ ಲ್ಯಾಂಡ್ ಮೊನೆಟೈಸೇಷನ್ ಕಾರ್ಪೊರೇಷನ್(ಎನ್‌ಎಲ್‌ಎಂಸಿ- ರಾಷ್ಟ್ರೀಯ ಭೂಮಿ ನಗದೀಕರಣ ನಿಗಮ) ರಚಿಸಿರುವುದಾಗಿ ಪ್ರಕಟಿಸಿದೆ. ಇದನ್ನು ವಿವಿಧ ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ರೈಲ್ವೆ , ರಕ್ಷಣೆ, ಟೆಲಿಕಾಂ ಮೊದಲಾದ ಸರಕಾರೀ ಇಲಾಖೆಗಳ ಸುಪರ್ದಿಯಲ್ಲಿರುವ ಅಪಾರ ಪ್ರಮಾಣದ ಭೂಮಿ, ಕಟ್ಟಡ ಮುಂತಾದ ಆಸ್ತಿಗಳನ್ನು ಮಾರಾಟ ಮಾಡುವುದಕ್ಕಾಗಿ ರಚಿಸಿರುವ ಒಂದು ರೀತಿಯ ರಿಯಲ್ ಎಸ್ಟೇಟ್ ಏಜೆನ್ಸಿ ಎಂದು ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ವರ್ಣಿಸಿವೆ.

ಇದು ಸಂಪೂರ್ಣ ಸರಕಾರೀ ಒಡೆತನದ ಕಂಪನಿಯಾಗಿದ್ದು, ಮೂಲರಚನೆಯ ವಲಯದಲ್ಲಿ ಕಳೆದ ಏಳು ದಶಕಗಳಲ್ಲಿ ಕಟ್ಟಿ ಬೆಳೆಸಿದ ರಾಷ್ಟ್ರೀಯ ಆಸ್ತಿಗಳನ್ನೆಲ್ಲ ಒಂದೊಂದಾಗಿ ದೇಶಿ-ವಿದೇಶಿ ಖಾಸಗಿ ಕಾರ‍್ಪೊರೇಟ್‌ಗಳಿಗೆ ಮಾರುವುದಕ್ಕೆ ಅನುಕೂಲ ಕಲ್ಪಿಸಿಕೊಡುವ ಇನ್ನೊಂದು ಕ್ರಮ ಎಂದು ಇದಕ್ಕೆ ಬಲವಾದ ಟೀಕೆಗಳು ವ್ಯಕ್ತವಾಗಿವೆ.

ಲಾಭಗಳಿಸುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ಇಲಾಖೀಯ ಸಂಸ್ಥೆಗಳ ಅಪಾರ ಪ್ರಮಾಣದ ಬೆಲೆಬಾಳುವ ಆಸ್ತಿಗಳನ್ನು ದೇಶದ ಅರ್ಥವ್ಯವಸ್ಥೆಯ ಈ ಪ್ರಧಾನ ವಲಯದ ಉದ್ದಿಮೆಗಳ ಆಧುನೀಕರಣಕ್ಕೆ ಮತ್ತು ವಿಸ್ತರಣೆಗೆ ಬಳಸಬಹುದಾಗಿತ್ತು. ಆದರೆ ತಮ್ಮ ಕಾರ್ಪೊರೇಟ್ ಮಾಲಕರಿಗೆ ಸರಕಾರೀ ಆಸ್ತಿಗಳನ್ನೆಲ್ಲ ವಹಿಸಿಕೊಡುವ ಕುಖ್ಯಾತ ಖಾಸಗೀಕರಣದ ತತ್ವಕ್ಕೆ ಬದ್ಧವಾಗಿರುವ ಸರಕಾರ ಇಂತಹ ಮೂಲಭೂತ ಆರ್ಥಿಕ ವಿವೇಚನೆಗೆ ಬದ್ಧವಾಗಿರುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಇದಕ್ಕೆ ಪ್ರತಿಕ್ರಿಯಿಸುತ್ತ ಹೇಳಿದ್ದಾರೆ.

ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಹೇಗಾದರೂ ಮಾಡಿ ಖಾಸಗೀಕರಿಸಲೇ ಬೇಕು ಎಂಬ ಖಯಾಲಿಯನ್ನು ಹಚ್ಚಿಸಿಕೊಂಡಿರುವ ಸರಕಾರದ ಉಸ್ತುವಾರಿಯಲ್ಲಿ ಈ ರೀತಿಯಲ್ಲಿ ಈ ರಾಷ್ಟ್ರೀಯ ಸೊತ್ತುಗಳ ಮಾರಾಟ ಎಂದೂ ರಾಷ್ಟ್ರೀಯ ಹಿತದಲ್ಲಿ ಇರಲಾರದು ಎಂದು ಮುಂದುವರೆದು ಹೇಳಿರುವ ಅವರು, ಇದುವರೆಗಿನ ಎಲ್ಲ ಖಾಸಗೀಕರಣ ವ್ಯವಹಾರಗಳೇ ಇದಕ್ಕೆ ಸಾಕ್ಷಿ ಎಂದಿದ್ದಾರೆ. ವಿಎಸ್‌ಎನ್‌ಎಲ್‌ನಿಂದ ಹಿಡಿದು ಬಾಲ್ಕೊ, ಐಪಿಸಿಎಲ್, ವಿಮಾನ ನಿಲ್ದಾಣಗಳು, ಏರ್ ಇಂಡಿಯ ಇತ್ಯಾದಿ ಯಾವ ಖಾಸಗೀಕರಣವೂ ನ್ಯಾಯಯುತವಾಗಿರಲಿಲ್ಲ, ಪಾರದರ್ಶಕವಾಗಿರಲಿಲ್ಲ ಎಂಬುದನ್ನು ನೆನಪಿಸಿದ್ದಾರೆ. ಸಿಎಜಿ ಗೆ ಕೂಡ ಇವುಗಳಲ್ಲಿ ಹಲವು ವ್ಯವಹಾರಗಳ ಬಗ್ಗೆ ಟಿಪ್ಪಣಿ ಮಾಡದೇ ಇರಲು ಸಾಧ್ಯವಾಗಿಲ್ಲ.

ಪ್ರಸಕ್ತ ರಾಜಕೀಯ ಮಂದಿಗಳ ಅಡಿಯಲ್ಲಿ ಭೂಸೊತ್ತುಗಳ ನಗದೀಕರಣ ಎಂಬುದು ಖಂಡಿತವಾಗಿಯೂ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಗಣಿತ ನಷ್ಟವನ್ನು ಉಂಟುಮಾಡುತ್ತದೆ. ಅಲ್ಲದೆ ಅಧಿಕಾರದಲ್ಲಿರುವ ಸರಕಾರದ ಉಸ್ತುವಾರಿಯಲ್ಲಿ ಯಾವುದೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಆಸ್ತಿಗಳನ್ನು ಅಗ್ಗದಲ್ಲಿ ಮಾರುವುದು ಒಂದು ಸಾಮಾನ್ಯ ವಿದ್ಯಮಾನ. ಕಾರ್ಪೊರೇಟ್ ವರ್ಗಕ್ಕೆ ಅಪಾರ ರಿಯಾಯ್ತಿಗಳನ್ನು ಕೊಟ್ಟಿರುವುದರಿಂದ ಉಂಟಾಗಿರುವ ಹಣಕಾಸು ಕೊರತೆಯನ್ನು ತುಂಬಿಸಲಿಕ್ಕಾಗಿ ಈ ಮಾರಾಟ ನಡೆಯುತ್ತಿರುವದರಿಂದಂತೂ ಇದಕ್ಕಿಂತ ಭಿನ್ನವಾದುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಕೋಮುವಾದಿ-ಕಾರ್ಪೊರೇಟ್ ನಂಟಿನ ಸರಕಾರ ಈ ಅಪಾರ ಭೂಮಿ ಮತ್ತು ಮೂಲರಚನಾ ಸೊತ್ತುಗಳನ್ನು ಮಾರಲೆಂದು ರಚಿಸಿರುವ ಈ ಎನ್‌ಎಲ್‌ಎಂಸಿ ಅಳ್ವಿಕೆ ನಡೆಸುತ್ತಿರುವವರ ವಿಪರೀತ ಮತ್ತು ಹತಾಶ ವಿಕಾರವನ್ನಲ್ಲದೆ ಬೇರೇನ್ನೂ ಬಿಂಬಿಸುತ್ತಿಲ್ಲ ಎಂದು ಸಿಐಟಿಯು ಈ ನಡೆಗೆ ಕಟುವಾಗಿ ಪ್ರತಿಕ್ರಿಯಿಸಿದೆ.

ಎನ್‌ಎಲ್‌ಎಂಸಿ ಪ್ರಕಟಣೆಯಾದ ಕೂಡಲೇ ಮುಖ್ಯಧಾರೆಯ ಮಾಧ್ಯಮಗಳು ವಿವಿಧ ಸರಕಾರೀ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಸುಪರ್ದಿಯಲ್ಲಿರುವ ಹೆಚ್ಚುವರಿ ಭೂಮಿಯ ವಿವರಗಳನ್ನು ಪ್ರಕಟಿಸಲು ಆರಂಬಿಸಿವೆ. ಸರಕಾರೀ ಅಂಕಿ-ಅಂಶಗಳ ಪ್ರಕಾರ ರೈಲ್ವೇಸ್ ಬಳಿ 11.8ಲಕ್ಷ ಎಕರೆ ಭೂಮಿ ಇದೆ, ಇದರಲ್ಲಿ 1.25 ಲಕ್ಷ ಎಕರೆ ಖಾಲಿಯಿದೆ. ರಕ್ಷಣಾ ಮಂತ್ರಾಲಯದ ಬಳಿ 17.95 ಲಕ್ಷ ಎಕ್ರೆ ಇದ್ದು, ಅದರಲ್ಲಿ 1.6 ಲಕ್ಷ ಎಕ್ರೆ 62 ಕಂಟೋನ್ಮೆಂಟ್‌(ದಂಡುಪ್ರದೇಶ)ಗಳಲ್ಲಿ ಮತ್ತು 16.35 ಲಕ್ಷ ಎಕ್ರೆ ಅವುಗಳ ಗಡಿಗಳ ಹೊರಗೆ ಇವೆಯಂತೆ. ಈ ಅಪಾರ ಪ್ರಮಾಣದ ಭೂಸೊತ್ತುಗಳನ್ನು ದೊಡ್ಡ ದೇಶಿ-ವಿದೇಶಿ ಕಾರ್ಪೊರೇಟ್‌ಗಳಿಗೆ ಈ ಎನ್‌ಎಲ್‌ಎಂಸಿ ಮೂಲಕ ಅಗ್ಗ ದರಗಳಲ್ಲಿ ಕೊಡಲಾಗುವುದು.

ಕರ್ನಾಟಕದಲ್ಲಿ ಬಿಇಎಂಎಲ್ ಮತ್ತು ಹೆಚ್‌ಎಂಟಿಯ ವಿಶಾಲ ಹೆಚ್ಚುವರಿ ಜಮೀನುಗಳನ್ನೂ ಶೀಘ್ರದಲ್ಲೇ ಮಾರಾಟ ಮಾಡಲಾಗುವುದು ಎಂದೂ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಎನ್‌ಎಲ್‌ಎಂಸಿ ಮತ್ತು ಎನ್‌ಎಂಪಿ ರಾಷ್ಟ್ರ-ವಿರೋಧಿಯಾದ ವಂಚಕ ಕಸರತ್ತುಗಳು ಎಂದು ವರ್ಣಿಸಿರುವ ಸಿಐಟಿಯು, ಈ ಕುಖ್ಯಾತ ಲೂಟಿಯ ಸಂಚನ್ನು ಪ್ರತಿರೋಧಿಸಬೇಕು ಮತ್ತು ವಿರೋಧಿಸಬೇಕು ಎಂದು ಕಾರ್ಮಿಕ ವರ್ಗಕ್ಕೆ ಕರೆ ನೀಡಿದೆ. ಮಾರ್ಚ್28-29ರ ಸಾರ್ವತ್ರಿಕ ಮುಷ್ಕರವನ್ನು ಯಶಸ್ಸಿನ ಉನ್ನತ ಮಟ್ಟಕ್ಕೇರಿಸಿ ಿಂತಹ ಸಂಚಿನ ವಿರುದ್ಧ  ಒಂದು ದೃಢ ಪ್ರತಿಭಟನೆ ಮತ್ತು ಪ್ರತಿರೋಧಕ್ಕೆ ದಾರಿಯನ್ನು ಪ್ರಶಸ್ತಗೊಳಿಸಬೇಕು ಎಂದು ಅದು ಹೇಳಿದೆ.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್‌ಜಿತ್ ಕೌರ್ ಕೂಡ ಸರಕಾರದ ಈ ನಡೆಯನ್ನು “ರಾಷ್ಟ್ರೀಯ ಸೊತ್ತುಗಳ ಸಂಘಟಿತ ಲೂಟಿ” ಎಂದು ಬಲವಾಗಿ ಖಂಡಿಸುತ್ತ, ಮೊದಲು ಈ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ತಂದು ರೈತರ ಭೂಮಿಯ ಹಿಂದೆ ಹೋಯಿತು, ಅದರಲಿ ವಿಫಲವಾದಾಗ ಸಾರ್ವಜನಿಕ ವಲಯದ ಬಳಿಯಿರುವ ಅಪಾರ ಭೂಸೊತ್ತುಗಳ ಮಾಲಕತ್ವದ ವರ್ಗಾವಣೆಯ ಬಗ್ಗೆ ಯೋಚಿಸುತ್ತಿದೆ ಎಂದು ಹೇಳಿದ್ದಾರೆ. ಕಾರ್ಮಿಕರ ಎರಡು ದಿನಗಳ ಸಾರ್ವತ್ರಿಕ ಮುಷ್ಕರದಲ್ಲಿ ಈ ವಿಷಯವನ್ನು ಎತಲಾಗುವುದು ಎಂದು ಅವರು ಹೇಳಿದ್ದಾರೆ

Donate Janashakthi Media

Leave a Reply

Your email address will not be published. Required fields are marked *