ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿದ ಎಲ್ಲಾ 31 ಜಿಲ್ಲೆಗಳಲ್ಲಿಯೂ ಕೋವಿಡ್ ದೃಢಕರಣದ ಪ್ರಕರಣಗಳು ಶೇ. 1ಕ್ಕಿಂತಲೂ ಕಡಿಮೆಯಿದೆ. ಆದರೂ, ನವೆಂಬರ್ ತಿಂಗಳವರೆಗೆ ಪರೀಕ್ಷೆಗಳನ್ನು ಮುಂದುವರೆಸುವಂತೆ ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ.
ಕೋವಿಡ್ ವಾರ್ ರೂಮ್ ಮಾಹಿತಿ ಪ್ರಕಾರ, ಕಳೆದ ಏಳು ದಿನಗಳಲ್ಲಿ 20 ಜಿಲ್ಲೆಗಳಲ್ಲಿ ರಾಜ್ಯದ ಸರಾಸರಿಗಿಂತ ಕೋವಿಡ್ ಸೋಂಕಿತರ ಸಕ್ರಿಯ ಪ್ರಕರಣಗಳು ಕಡಿಮೆ ಇದ್ದವು. ಒಟ್ಟಾರೇ ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಶೇ. 0.31 ರಷ್ಟಿದೆ. ಅಕ್ಟೋಬರ್ ಆರಂಭದಲ್ಲಿ ಚಿಕ್ಕಮಗಳೂರಿನಲ್ಲಿ ಶೇ. 1.69, ಕೊಡಗಿನಲ್ಲಿ ಶೇ 1.56, ಉಡುಪಿ ಶೇ. 1.19 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ, 1. 05ರಷ್ಟು ಕೋವಿಡ್ ಸಕ್ರಿಯ ಪ್ರಕರಣಗಳು ಜಾಲ್ತಿಯಲ್ಲಿದ್ದವು.
ಇದನ್ನು ಓದಿ: ಸೆಪ್ಟೆಂಬರ್ ನಂತರ ಮಕ್ಕಳಿಗೂ ಕೋವಿಡ್ ಲಸಿಕೆ ಸಾಧ್ಯತೆ: ಡಾ. ರಣದೀಪ್ ಗುಲೇರಿಯಾ
ಅಕ್ಟೋಬರ್ 12 ರಂದು ಎರಡು ಜಿಲ್ಲೆಗಳಲ್ಲಿ ಮಾತ್ರ ಶೇ. 1ಕ್ಕಿಂತ ಹೆಚ್ಚಾಗಿತ್ತು. ಮೈಸೂರಿನಲ್ಲಿ ಶೇ. 1. 04 ಮತ್ತು ಹಾಸನದಲ್ಲಿ ಶೇ. 1. 03 ರಷ್ಟಿತ್ತು. ಆದರೆ, ಅಕ್ಟೋಬರ್ 14ರಂದು ಈ ಎರಡು ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 1ಕ್ಕಿಂತ ಕಡಿಮೆಯಿತ್ತು. ಮೈಸೂರಿನಲ್ಲಿ ಶೇ. 0.82 ಮತ್ತು ಹಾಸನದಲ್ಲಿ ಶೇ. 0.77 ರಷ್ಟು ವರದಿಯಾಗಿತ್ತು. ಚಿಕ್ಕಮಗಳೂರಿನಲ್ಲಿ ಶೇ. 0.49, ಉಡುಪಿ ಶೇ. 0.44 ಸೇರಿದಂತೆ ಇತರ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಶೇಕಡಾ 1ಕ್ಕಿಂತಲೂ ಕಡಿಮೆ ದಾಖಲಾಗಿತ್ತು. ಕಲಬುರಗಿ ಮತ್ತು ಯಾದಗಿರಿಯಲ್ಲಿ ಶೂನ್ಯಕ್ಕೆ ಇಳಿದರೆ, ಬಾಗಲಕೋಟೆ ಮತ್ತು ಹಾವೇರಿ ಶೇ. 0.02 ರಷ್ಟು ಸಕ್ರಿಯ ಪ್ರಕರಣಗಳು ಇದ್ದವು.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಪರಿಸ್ಥಿತಿ ಸುಧಾರಿಸಿದ್ದರೂ, ನವೆಂಬರ್ ಕೊನೆಯವರೆಗೂ ಪರೀಕ್ಷೆ ನಡೆಸುವುದನ್ನು ಮುಂದುವರೆಸಬೇಕೆಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಎಂ. ಕೆ ಸುದರ್ಶನ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆಕ್ಟೋಬರ್ ಮತ್ತು ನವೆಂಬರ್ ಮಾಸದಲ್ಲಿ ಇಡೀ ರಾಜ್ಯದಲ್ಲಿ 1,10,000 ಪರೀಕ್ಷೆ ನಡೆಸಬೇಕಾಗುತ್ತದೆ. ಇದರಲ್ಲಿ ಬೆಂಗಳೂರು ಒಂದರಲ್ಲಿಯೇ 50 ಸಾವಿರ ಪರೀಕ್ಷೆಗಳನ್ನು ಮಾಡಬೇಕಾಗಿದೆ. ಮಾಸ್ಕ್ ಧರಿಸುವುದು, ಲಸಿಕೆ ಹಾಗೂ ಟೆಸ್ಟಿಂಗ್ ಪ್ರಮುಖ ಸಂಗತಿಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: ಕೋವಿಡ್ ಲಸಿಕೆ ವಿತರಣೆಯ ಭಾರೀ ಪ್ರಚಾರಕ್ಕೆ ಒಂದು ತಿಂಗಳು: ಗರಿಷ್ಠದಿಂದ ಕನಿಷ್ಠ ಮಟ್ಟಕ್ಕೆ ಇಳಿಕೆ
ಕೋವಿಡ್ ಸೋಂಕಿನ ಪ್ರಮಾಣ ರಾಜ್ಯದಲ್ಲಿ ಕಡಿಮೆಯಾಗಿದ್ದರೂ ನಿರ್ಲಕ್ಷ್ಯ ಸಲ್ಲದು. ಸಾಮುದಾಯಿಕವಾಗಿ ಕೋವಿಡ್ ಸೋಂಕು ಹರಡುವಿಕೆ ಕಂಡುಬರದಿದ್ದರೂ, ಕೌಟುಂಬಿಕವಾಗಿ ಸೋಂಕು ತಗುಲುವುದು ನಡೆದಿದೆ. ಲಸಿಕೆ ನೀಡುವಿಕೆ, ರೋಗ ನಿರೋಧಕ ಶಕ್ತಿ ವೃದ್ಧಿಯಿಂದ ಕೋವಿಡ್ ಪ್ರಕರಣಗಳು ಕಡಿಮೆಯಾಗಿರಬಹುದು, ಅಕ್ಟೋಬರ್- ನವೆಂಬರ್ ನಲ್ಲಿ ಮೂರನೇ ಅಲೆ ಬರಬಹುದೆಂಬ ಊಹಿಸಿತಾದರೂ, ಸಮಯ ಮೀರುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ದೇಶದಲ್ಲಿ 229 ದಿನಗಳಲ್ಲೆ ಕಡಿಮೆ ಪ್ರಕರಣಗಳು ದಾಖಲು
ದೇಶದಾದ್ಯಂತ 24 ಗಂಟೆಗಳ ಅಂತರದಲ್ಲಿ ಕೋವಿಡ್–19 ದೃಢಪಟ್ಟ ಹೊಸ ಪ್ರಕರಣಗಳ ಸಂಖ್ಯೆ 14,623 ಆಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 3,41,08,996ರಷ್ಟು ದಾಖಲಾಗಿದ್ದು, ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 1,78,098ಕ್ಕೆ ಇಳಿಕೆಯಾಗಿದೆ, ಇದು ಕಳೆದ 229 ದಿನಗಳಲ್ಲೇ ದಾಖಲಾಗಿರುವ ಕಡಿಮೆ ಸಕ್ರಿಯ ಪ್ರಕರಣಗಳಾಗಿವೆ.
ಇದೇ ಅವಧಿಯಲ್ಲಿ ಅಂದರೆ, ಕಳೆದ 24 ಗಂಟೆಯಲ್ಲಿ ಕೋವಿಡ್ ಕಾರಣಗಳಿಂದಾಗಿ 197 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 4,52,651 ತಲುಪಿದೆ. ಕಳೆದ 26 ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 30,000ಕ್ಕಿಂತ ಕಡಿಮೆ ಮಟ್ಟದಲ್ಲಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಿಂದ ತಿಳಿದು ಬಂದಿದೆ.
ಕೇರಳದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 7,643 ಹೊಸ ಪ್ರಕರಣಗಳು ಮತ್ತು 77 ಮಂದಿ ಸಾವಿಗೀಡಾಗಿರುವುದು ವರದಿಯಾಗಿದೆ.
ರಾಜ್ಯದಲ್ಲಿ ಹೊಸದಾಗಿ 349 ಪ್ರಕರಣ; 14 ಸಾವು
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಕರಣಗಳ ಸಂಖ್ಯೆಯೂ ಏರಿಳಿತದಲ್ಲಿದ್ದು, ಕಳೆದ 24 ಗಂಟೆಯಲ್ಲಿ 349 ಕೊರೊನಾ ಹೊಸ ಪ್ರಕರಣಗಳು ದೃಢಪಟ್ಟಿವೆ. 14 ಮಂದಿ ನಿಧನ ಹೊಂದಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,84,022ಕ್ಕೆ ಏರಿಕೆಯಾಗಿದೆ.
ಸಾವಿನ ಸಂಖ್ಯೆಯಲ್ಲಿಯೂ ಇಳಿಕೆ ಕಂಡಿದ್ದು, 14 ಮಂದಿ ಕಳೆದ 24 ಗಂಟೆಯಲ್ಲಿ ನಿಧನ ಹೊಂದಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,967ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರದಿ ಮಾಡಿದೆ.
ಇದನ್ನು ಓದಿ: ಲಸಿಕೆ ಪಡೆದ ಶೇಕಡಾ 78ರಷ್ಟು ಜನ ಕೋವಿಡ್ ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಂಡಿದ್ದಾರೆ
ರಾಜ್ಯದಲ್ಲಿಂದು 399 ಸೋಂಕಿತರು ಗುಣಮುಖರಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,36,926ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸದ್ಯ 9,100 ಸಕ್ರಿಯ ಪ್ರಕರಣಗಳಿವೆ. ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು ಶೇ. 0.41ಕ್ಕೆ ಇಳಿದಿದೆ.
ಮಾಸ್ಕ್ ಹಾಕದಿದ್ದರೆ ಇನ್ನು ಮುಂದೆ ದಂಡ ವಸೂಲಿ ಇಲ್ಲ!
ಕೊರೊನಾ ಮಹಾಮಾರಿಯಿಂದ ಕಂಗೆಟ್ಟಿದ್ದ ಜನಕ್ಕೆ ಮಾಸ್ಕ್ ಎಂಬುದು ಅನಿವಾರ್ಯವಾಗಿತ್ತು ಮತ್ತು ಅದನ್ನು ಕಡ್ಡಾಯಗೊಳಿಸಲಾಗಿತ್ತು. ಮಾಸ್ಕ್ ಹಾಕದ್ದವರು ದುಬಾರಿ ದಂಡ ಕಟ್ಟಬೇಕಾದಂತ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಆದರೆ ಪರಿಸ್ಥಿತಿ ಈಗ ತಿಳಿಯಾಗುತ್ತಿದೆ. ಈ ಸಂದರ್ಭದಲ್ಲಿ ಮಾಸ್ಕ್ ಹಾಕದವರಿಂದ ದಂಡ ವಸೂಲಿಗೆ ತಾತ್ಕಾಲಿಕ ತಡೆ ನೀಡಲು ಬಿಬಿಎಂಪಿ ಸಿದ್ದತೆಯಲ್ಲಿದೆ ಎಂಬ ಊಹೆ ಇದೆ.
ಇದುವರೆಗೆ ಮಾಸ್ಕ್ ಹಾಕದವರನ್ನು ಮಾರ್ಷೆಲ್‌ಗಳು ನೂರಾರು ರೂಪಾಯಿ ವಸೂಲಿ ಮಾಡಿಸುತ್ತಿತ್ತು. ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಬಹುತೇಕ ಶೂನ್ಯ ಪ್ರಮಾಣಕ್ಕೆ ಕುಸಿದಿರುವಾಗ ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡದಂತೆ ಮಾರ್ಷೆಲ್ ಗಳಿಗೆ ಬಿಬಿಎಂಪಿ ಮೌಖಿಕ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಮಾಸ್ಕ್ ಹಾಕದವರಿಂದ ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡಲಾಗುತ್ತಿತ್ತು. ಬಿಬಿಎಂಪಿ ಇದುವರೆಗೆ ಅಂದರೆ, ಮೇ 2020 ರಿಂದ 14,03,09,197 ರೂಪಾಯಿ ದಂಡ ವಸೂಲಿ ಮಾಡಿದೆ.