- ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ
- ಎಂಟನೇ ಬಾರಿ ಮುಖ್ಯಮಂತ್ರಿಯಾದ ದಾಖಲೆ ಮಾಡಿದ ನಿತೀಶ್
- ಉಪ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರತಿಜ್ಞಾವಿಧಿ ಸ್ವೀಕಾರ
- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿತೀಶ್ ಪರೋಕ್ಷ ವಾಗ್ದಾಳಿ
ಪಾಟ್ನಾ: ಬಿಜೆಪಿ ಸಖ್ಯ ಕಡಿದುಕೊಂಡು ಮೈತ್ರಿಸರ್ಕಾರದಿಂದ ಹೊರ ಬಂದ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಆರ್ ಜೆಡಿ ಮೈತ್ರಿಯೊಂದಿಗೆ ದಾಖಲೆಯ 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಿತೀಶ್ ಕುಮಾರ್ ಅವರು ಇಂದು ಮಹಾಘಟಬಂಧನ್ ಸರ್ಕಾರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದು, ನಿತೀಶ್ ಕುಮಾರ್ ಅವರಿಗೆ ಪಾಟ್ನಾದ ರಾಜಭವನದಲ್ಲಿ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಉಪಮುಖ್ಯಮಂತ್ರಿಯಾಗಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿನ್ನೆಯಷ್ಟೇ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂಪುಟ ವಿಸ್ತರಣೆಯು ಆಗಸ್ಟ್ 15ರ ಬಳಿಕ ನಡೆಯಲಿದೆ. ಸಿಎಂ ಮತ್ತು ಡಿಸಿಎಂ ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಸಮಾರಂಭ ಬಹಳ ಸರಳವಾಗಿ ನಡೆದಿದೆ.
ಇದನ್ನೂ ಓದಿ : ಬಿಹಾರ ಎನ್‌ಡಿಎ ಮೈತ್ರಿ ಪಥನ: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ಪ್ರಮಾಣ ವಚನ ಸ್ವೀಕಾರ ಬಳಿಕ ಮಾತನಾಡಿದ ಸಿಎಂ ನಿತೀಶ್ ಕುಮಾರ್, “ನಾನು 2020ರ ಫಲಿತಾಂಶದ ಬಳಿಕ ಮುಖ್ಯಮಂತ್ರಿಯಾಗಲು ಬಯಸಿರಲಿಲ್ಲ. ಆದರೆ ನನಗೆ ಒತ್ತಡ ಹೇರಲಾಗಿತ್ತು. ಬಳಿಕ ಏನಾಯ್ತು ಎಂದು ನೀವು ನೋಡಿದ್ದೀರಿ. ನಾನು ಎರಡು ತಿಂಗಳಿನಿಂದ ನಿಮ್ಮ ಬಳಿ ಮಾತನಾಡಿರಲಿಲ್ಲ” ಎಂದು ಹೇಳಿದ್ದಾರೆ. “ನಾವು 2015ರಲ್ಲಿ ಎಷ್ಟು ಸೀಟುಗಳಲ್ಲಿ ಗೆದ್ದಿದ್ದೆವು? ಬಳಿಕ ಅದೇ ಜನರೊಂದಿಗೆ ಚುನಾವಣೆ ಎದುರಿಸಿದ್ದೆವು (2020ರಲ್ಲಿ) ಆದರೆ, ನೋಡಿ ನಾವು ಎಷ್ಟಕ್ಕೆ ಕುಸಿದಿದ್ದೇವೆ” ಎಂದು ಪಕ್ಷಕ್ಕೆ ಉಂಟಾಗಿದ್ದ ಹಿನ್ನಡೆಯನ್ನು ವಿವರಿಸಿದ್ದಾರೆ. “ನಾನು ಪ್ರಧಾನಿ ಹುದ್ದೆಗೆ ಆಕಾಂಕ್ಷಿ ಅಲ್ಲ. ಆದರೆ ಪ್ರಶ್ನೆ ಏನೆಂದರೆ, 2014ರಲ್ಲಿ ಬಂದ ವ್ಯಕ್ತಿ 2024ರಲ್ಲಿ ಗೆಲ್ಲುತ್ತಾರೆಯೇ ಎನ್ನುವುದಾಗಿದೆ” ಎನ್ನುವ ಮೂಲಕ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಗೆಲುವು ಕಾಣಲಾರರು ಎಂದು ಪರೋಕ್ಷವಾಗಿ ಹೇಳಿದ್ದಾರೆ.