ನಿತೀಶ್‌ ಕುಮಾರ್‌ಗೆ ಯಾವಾಗಲೂ ಬಾಗಿಲು ತೆರೆದಿರುತ್ತದೆ | ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್

ಪಟ್ನಾ: ತಮ್ಮ ದೀರ್ಘಕಾಲದ ಪ್ರತಿಸ್ಪರ್ಧಿ ನಿತೀಶ್‌ ಕುಮಾರ್ ಅವರಿಗೆ ”ಯಾವಾಗಲೂ ಬಾಗಿಲು ತೆರೆದಿರುತ್ತದೆ” ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಶುಕ್ರವಾರ ಹೇಳಿದ್ದಾರೆ. ರಾಜ್ಯದಲ್ಲಿ ಆರ್‌ಜೆಡಿ ಪಕ್ಷದ ಜೊತೆಗಿನ ‘ಮಹಾಘಟಬಂಧನ್‌(ಮಹಾಮೈತ್ರಿಕೂಟ)’ ಮೈತ್ರಿಯನ್ನು ತೊರೆದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಜೆಪಿಯ ಎನ್‌ಡಿಎ ಮೈತ್ರಿಕೂಟದೊಂದಿಗೆ ಸೇರಿ ರಾಜ್ಯದ ಹೊಸ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು.

ತಮ್ಮ ಪಕ್ಷವು ಅಧಿಕಾರ ಕಳೆದುಕೊಂಡಾಗಿನಿಂದ ಮೌನಕ್ಕೆ ಜಾರಿದ್ದ ಹಿರಿಯ ರಾಜಕಾರಣಿ ಲಾಲು ಅವರು ಇದೀಗ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ದಿನದ ಹಿಂದೆಯಷ್ಟೆ ರಾಜ್ಯ ವಿಧಾನಸಭೆಯಲ್ಲಿ ನಡೆದ ಸಂಕ್ಷಿಪ್ತ ಮುಖಾಮುಖಿಯಲ್ಲಿ ಇಬ್ಬರೂ ಸಂತೋಷ ವಿನಿಮಯ ಮಾಡಿಕೊಂಡಿದ್ದರು. ಈ ವೇಳೆ ಅವರು ಸಂಕ್ಷಿಪ್ತವಾಗಿ ಸಂವಾದ ನಡೆಸಿದ್ದರ ಹೊರತಾಗಿಯೂ, ಅವರ ಭೇಟಿಯ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿತ್ತು. ಮೈತ್ರಿ ಮುರಿದ ನಂತರ ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿದೆ.ನಿತೀಶ್‌

ಇದನ್ನೂ ಓದಿ: ತಮಿಳುನಾಡು | ಲೋಕಸಭೆಯಲ್ಲಿ ಸಿಪಿಐ(ಎಂ) ಕ್ಷೇತ್ರದ ಮೇಲೆ ಕಣ್ಣಿಟ್ಟ ನಟ ಕಮಲ್ ಹಾಸನ್!

ಆರ್‌ಜೆಡಿಯೊಂದಿಗೆ ಎರಡನೇ ಬಾರಿಗೆ ಮುನಿಸಿಕೊಂಡಿರುವ ನಿತೀಶ್‌ ಕುಮಾರ್ ಅವರೊಂದಿಗೆ ಇನ್ನೂ ಹೊಂದಾಣಿಕೆಗೆ ತಯಾರಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಲಾಲು ಪ್ರಸಾದ್, “ಅವರು ಹಿಂತಿರುಗಿ ಬರಲಿ. ನಂತರ ನಾವು ನೋಡೋಣ” ಎಂದು ಹೇಳಿದ್ದಾರೆ. ಆರ್‌ಜೆಡಿಯೊಂದಿಗೆ ನಿತೀಶ್ ಕುಮಾರ್ ಅವರು ಮುನಿಸಿಕೊಂಡಿದ್ದ ಎರಡೂ ಸಂದರ್ಭದಲ್ಲಿ ಲಾಲು ಅವರ ಮಗ ತೇಜಸ್ವಿ ಯಾದವ್ ಅವರು ಉಪ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು.

ತಮ್ಮ ಮಾಜಿ ಮಿತ್ರನಿಗೆ ಇನ್ನೂ ಬಾಗಿಲು ತೆರೆದಿದೆಯೇ ಎಂದು ಮತ್ತಷ್ಟು ಒತ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಾಲು ಯಾದವ್, “ಅವರಿಗೆ ಯಾವಾಗಲೂ ಬಾಗಿಲು ತೆರೆದಿರುತ್ತವೆ” ಎಂದು ಉತ್ತರಿಸಿದ್ದಾರೆ. 1970 ರ ದಶಕದಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜಕೀಯಕ್ಕೆ ಕಾಲಿಟ್ಟ ನಿತೀಶ್ ಕುಮಾರ್ ಅವರನ್ನು ಅಂದಿನಿಂದಲೂ ಲಾಲು ಪ್ರಸಾದ್ ಅವರು ತಿಳಿದಿದ್ದಾರೆ.

ಇದನ್ನೂ ಓದಿ: ಉಪ್ಪು ಹುಳಿ ಖಾರ ಇಲ್ಲದ ಜನ ವಿರೋಧಿ ಬಜೆಟ್: ಸಿಎಂ ನಿಲುವು ಖಂಡಿಸಿ ಬಿಜೆಪಿ ಸಭಾತ್ಯಾಗ

ರಾಹುಲ್ ಗಾಂಧಿ ಪ್ರಧಾನಿಯಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಲಾಲು ಯಾದವ್ ಅವರು, “ಅವರಲ್ಲಿ ಯಾವುದೇ ಅಸಮರ್ಥತೆ ಇಲ್ಲ” ಎಂದು ಹೇಳಿದ್ದಾರೆ. ಇದೇ ವೇಳೆ, ಮುಂಬರುವ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲಿದ್ದೇವೆ ಎಂದು ಲಾಲು ಹೇಳಿದ್ದಾರೆ.

ಈ ಮಧ್ಯೆ, ತನ್ನ ತಂದೆಯ ಹೇಳಿಕೆಗೆ ವ್ಯತಿರಿಕ್ತವಾಗಿ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಶುಕ್ರವಾರ ಸಸಾರಾಮ್‌ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಾ ನಿತೀಶ್ ಕುಮಾರ್ ವಿರುದ್ಧ ಹೊಸದಾಗಿ ವಾಗ್ದಾಳಿ ನಡೆಸಿದ್ದಾರೆ.

“ನಮ್ಮ ಸಿಎಂ ಹೇಗಿದ್ದಾರೆಂದು ನಿಮಗೆಲ್ಲ ಚೆನ್ನಾಗಿ ಗೊತ್ತಿದೆ; ಯಾರ ಮಾತನ್ನೂ ಕೇಳಲು ಅವರು ಬಯಸುವುದಿಲ್ಲ. ನಾನು ಸಾಯುತ್ತೇನೆ ಹೊರತು ಬಿಜೆಪಿಗೆ ಸೇರುವುದಿಲ್ಲ ಎಂದು ಅವರು ಹೇಳುತ್ತಿದ್ದರು… ಹೀಗಾಗಿ ನಾವು ನಿತೀಶ್ ಜಿ ಜೊತೆ ಇರಲು ನಿರ್ಧರಿಸಿದ್ದೆವು. ನಾವು ಎಷ್ಟೇ ತ್ಯಾಗ ಮಾಡಬೇಕಿದ್ದರೂ ಸರಿ, 2024ರಲ್ಲಿ ಬಿಜೆಪಿಯನ್ನು ಸೋಲಿಸಲು ಬೇಕಾಗಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದೆವು” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಜನವರಿ 28 ರಂದು ಎಡ ಪಕ್ಷಗಳು, ಆರ್‌ಜೆಡಿ, ಕಾಂಗ್ರೆಸ್ ಜೊತೆಗಿನ ಬಿಹಾರದ ಮಹಾಘಟಬಂಧನ್‌ ಮೈತ್ರಿ ಕೂಟವನ್ನು ತೊರೆದ ನಿತೀಶ್‌ ಕುಮಾರ್ ಅವರು ಎನ್‌ಡಿಎ ಜೊತೆಗೆ ಸೇರಿ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಫೆಬ್ರವರಿ 12 ರಂದು 243 ಸದಸ್ಯ ಬಲದ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ವೇಳೆ ಒಟ್ಟು 129 ಶಾಸಕರು ಮತ ಚಲಾಯಿಸಿ ನಿತೀಶ್ ಅವರ ಸರ್ಕಾರಕ್ಕೆ ಬಲ ತುಂಬಿದ್ದಾರೆ.

ವಿಡಿಯೊ ನೋಡಿ:ಗಾಜಾ ಹತ್ಯಾಕಾಂಡ | ಇಸ್ರೇಲ್ ವಿರುದ್ಧ ಜನಾಕ್ರೋಶ – ಪ್ಯಾಲೆಸ್ಟೈನ್ ಪರ ಮಿಡಿದ ಜಗತ್ತು.

Donate Janashakthi Media

Leave a Reply

Your email address will not be published. Required fields are marked *