ವಿಧಾನಸಭೆ ಚುನಾವಣೆ ನಡೆಯುವಾಗ ಪ್ರತಿ ಬಾರಿ ಮಾಧ್ಯಮಗಳು ಮತ್ತು ಜನತೆಯ ನಡುವೆ ಬಿಹಾರದ ದುಸ್ಥಿತಿ ಬದಲಿಸಲು ‘ಬದಲಾವ್’ (ಬದಲಾವಣೆ) ಬೇಕು ಅಂತ ಚರ್ಚೆ ಆಗುತ್ತದೆ. ಈ ಬಾರಿಯೂ ಪ್ರಚಲಿತ ಜೋಕಿನಂತೆ ಜನತೆ ನಿತೀಶ್ ಅವರನ್ನು ಮತ್ತೆ (10ನೇ ಬಾರಿ) ಮುಖ್ಯಮಂತ್ರಿ ಮಾಡಿ ಅವರಿಗೆ ಬೇಕಾದ ‘ಬದಲಾವ್’ ಮಾಡಿಕೊಳ್ಳಲಿ ಅಂತ ಬಿಟ್ಟಿದ್ದಾರೆ. ಬಿಹಾರದಲ್ಲಿ ಯಾಕೆ ‘ಬದಲಾವ್’ ಆಗಲಿಲ್ಲ ಎಂಬುದರ ವಿಶ್ಲೇಷಣೆ. ನಿತೀಶ್
-ವಸಂತರಾಜ ಎನ್.ಕೆ.
ಬಿಹಾರದ ವಿಧಾನಸಭಾ ಚುನಾವಣೆಗಳಲ್ಲಿ ಎನ್.ಡಿ.ಎ ಕೂಟ ಭಾರೀ ವಿಜಯ ಸಾಧಿಸಿದೆ. ಮಹಾಘಟಬಂಧನ ಕೂಟ ಪರಾಜಯ ಹೊಂದಿದೆ. ಎನ್.ಡಿ.ಎ ಕೂಟದ ವಿಜಯ ಅನಿರೀಕ್ಷಿತವೇನಲ್ಲ. ಆದರೆ 200 ಸೀಟು ದಾಟುವ ಭಾರಿ ವಿಜಯ ಅನಿರೀಕ್ಷಿತವೇ ಆಗಿತ್ತು. ಇದಕ್ಕೆ ಕಾರಣಗಳನ್ನು ವಿಶ್ಲೇಷಿಸುವುದು ಅಗತ್ಯ. ನಿತೀಶ್
ಚುನಾವಣಾ ಫಲಿತಾಂಶಗಳ ಅಂಕೆಸಂಖ್ಯೆಗಳ ವಿವರಗಳನ್ನು (ವಿವರಗಳಿಗೆ ಈ ಲೇಖನ ನೋಡಿ) ಪರಿಶೀಲಿಸಿದರೆ, ಮಹಾಘಟಬಂಧನ ತನ್ನ ಮತಪ್ರಮಾಣವನ್ನು ಹೆಚ್ಚು ಕಡಿಮೆ ಅದೇ ಮಟ್ಟದಲ್ಲಿ ಕಾಯ್ದುಕೊಂಡಿದ್ದರೂ, ಎನ್.ಡಿ.ಎ ಕೂಟದ ಭಾರೀ ವಿಜಯ ಸಾಧ್ಯವಾಗಿರುವುದು ಮೂರು ಅಂಶಗಳಿಂದ – ಒಂದು ಎಲ್.ಜೆ.ಪಿ(ಆರ್.ವಿ) ಮತ್ತು ಆರ್.ಎಲ್.ಎಂ ಎನ್.ಡಿ.ಎ ಕೂಟಕ್ಕೆ ಸೇರಿದ್ದು; ಎರಡನೆಯದು ಎರಡು ಕೂಟಗಳ ಆಚೆಗಿನ ಸಣ್ಣ ಪಕ್ಷಗಳ ಮತ್ತು ಪಕ್ಷೆತರರ ಮತಪ್ರಮಾಣದ (ಅದು 25% ನಿಂದ 15% ಗೆ ಕುಸಿದಿದೆ) ದೊಡ್ಡ ಭಾಗವನ್ನು ಪಡೆದದ್ದು; ಮೂರನೆಯದು ಹಲವು ಕ್ಷೇತ್ರಗಳಲ್ಲಿ ಜನ ಸುರಾಜ್ ಪಕ್ಷ, ಎ.ಐ.ಎಂ.ಐ.ಎಂ ಗಳ ಸ್ಪರ್ಧೆ ಆಡಳಿತ-ವಿರೋಧಿ ಮತಗಳನ್ನು ಒಡೆದದ್ದು. ಈ ವಿವರಗಳನ್ನು ನೋಡಿದರೆ ಕೂಟದ (ರಚನೆಯಲ್ಲಾದ ಬದಲಾವಣೆಗಳಿಂದ) ಮತ ಪ್ರಮಾಣದ ಅಂತರದಲ್ಲಿ ತೀವ್ರ ಬದಲಾವಣೆಗಳಾಗಿದ್ದರೂ, ಪಕ್ಷಗಳ ಮತಗಳಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾರೀ ವಿಜಯಕ್ಕೆ ಕಾರಣ ಮತ್ತು ಪರಿಣಾಮಗಳನ್ನು ವಿಶ್ಲೇಷಿಸಬೇಕು. ನಿತೀಶ್
ಜಾತಿ ಸಮೀಕರಣ, ನೆಲೆ ಮತ್ತು ಬೆಂಬಲ
ಬಿಹಾರದ (ಯಾಕೆ ಭಾರತದ ಯಾವುದೇ ರಾಜ್ಯದ) ಚುನಾವಣೆಗಳಲ್ಲಿ ಸಂಕೀರ್ಣವಾದ ಜಾತಿ ಸಮೀಕರಣ ಇತರೆಲ್ಲ ಅಂಶಗಳಿಗಿಂತ ದೊಡ್ಡ ಪಾತ್ರ ವಹಿಸುತ್ತದೆ ಎಂಬುದು ಕಟು ವಾಸ್ತವ. ಹಿಂದುಳಿದ ದಮನಿತ ಜಾತಿಗಳ ಪ್ರಾತಿನಿಧ್ಯವು ಪ್ರಧಾನ ಅಂಶವಾಗಿರುವ ‘ಸಾಮಾಜಿಕ ನ್ಯಾಯ’ದ ಅಥವಾ ‘ಮಂಡಲ ರಾಜಕೀಯ’ ಮತ್ತು ಅದನ್ನು ಎತ್ತಿ ಹಿಡಿದ ನಾಯಕ ಕರ್ಪೂರಿ ಠಾಕೂರ್ ತವರೂರಾದ ಬಿಹಾರದಲ್ಲಿ ಇದು ಹೆಚ್ಚು ನಿಜ. ಎರಡು ಕೂಟಗಳು ವ್ಯಾಪಕ ಜಾತಿ ಸಮೀಕರಣಕ್ಕೆ ಪ್ರಯತ್ನಿಸಿವೆ.
ಆರ್,ಜೆ,ಡಿ ಮೂಲದಲ್ಲಿ ಎಲ್ಲ ಒಬಿಸಿ ಗಳ ಪಕ್ಷವಾಗಿದ್ದರೂ ಬರಬರುತ್ತಾ ಮುಸ್ಲಿಂ-ಯಾದವ್ ಪಕ್ಷವಾಗಿ ಕಾಣಲ್ಪಡುತ್ತಿದೆ. ಇತ್ತೀಚೆಗೆ ಯಾದವೇತರ ಒಬಿಸಿ ಮತ್ತು ಇಬಿಸಿ ಗಳಿಗೆ ಪ್ರಾತಿನಿಧ್ಯ ನೆಲೆ ವಿಸ್ತರಿಸುವ ಪ್ರಯತ್ನ ಮಾಡಿತ್ತು. ಕಾಂಗ್ರೆಸ್ ಉಚ್ಛ ಜಾತಿಗಳ, ಮುಸ್ಲಿಮರ ಮತ್ತು ದಲಿತರ ಒಂದು ವಿಭಾಗದಲ್ಲಿ ಅಷ್ಟೆನೂ ಗಟ್ಟಿಯಲ್ಲದ ಸ್ವಲ್ಪ ನೆಲೆ ಹೊಂದಿದೆ. ಎಡ ಪಕ್ಷಗಳು ಬಲವಾದ ನೆಲೆ ಹೊಂದಿರುವ ಕ್ಷೇತ್ರಗಳಲ್ಲಿ ಜಾತಿ ಮೀರಿದ ವರ್ಗದ ನೆಲೆ ಹೊಂದಿವೆ. ವಿಐಪಿ ನಿಶಾದ ಮತ್ತಿತರ ಒಬಿಸಿಗಳಲ್ಲಿ ನೆಲೆ ಹೊಂದಿದೆ. ಹೊಸ ಪಕ್ಷಗಳಾಧ ಐಐಪಿ, ಜೆಜೆಡಿ ಕೆಲವು ಸಣ್ಣ ಒಬಿಸಿ, ಇಬಿಸಿ ಜಾತಿಗಳಲ್ಲಿ ನೆಲೆ ಹೊಂದಿವೆ. ಹೀಗೆ ಮಹಾಘಟಬಂಧನ ತನ್ನ ನೆಲೆಯ ಜಾತಿ ಸಮೀಕರಣವನ್ನು ವ್ಯಾಪಕಗೊಳಿಸಲು ಪ್ರಯತ್ನಿಸಿದ್ದರೂ ಸೀಮಿತವಾಗಿದೆ. ಸೀಟು ಹಂಚಿಕೆಯಲ್ಲಿ ಸಹ ಅದು ಪ್ರತಿಬಿಂಬಿತವಾಗಿತ್ತು. ನಿತೀಶ್
ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ: ಹಿಂದೂ ಜಾಗರಣಾ ವೇದಿಕೆ ಮುಖಂಡ ಬಂಧನ
ಸಾಂಪ್ರದಾಯಿಕವಾಗಿ ಬಿಜೆಪಿ (ಬ್ರಾಹ್ಮಣರು, ಭೂಮಿಹಾರ್, ರಾಜಪುತ, ಕಾಯಸ್ಥ, ಬನಿಯ ಮುಂತಾದ) ಉಚ್ಛ ಜಾತಿಗಳಲ್ಲಿ ಭದ್ರ ನೆಲೆ ಹೊಂದಿದೆ. ಜೆಡಿಯು ಕುರ್ಮಿ ಮುಂತಾದ ಯಾದವೇತರ ಒಬಿಸಿ ಮತ್ತು ಇಬಿಸಿ (ಅತಿ ಹಿಂದುಳಿದ ಜಾತಿಗಳು) ಗಳಲ್ಲಿ ಗಟ್ಟಿ ನೆಲೆ ಹೊಂದಿದೆ, ಎಲ್,ಜೆ.ಪಿ(ಆರ್.ವಿ) ಪಾಸ್ವಾನ್ ಮುಂತಾದ ದಲಿತರಲ್ಲಿ, ಎಚ್.ಎ.ಎಮ್ ಮಾಂಝಿ ಮುಂತಾದ ಮಹಾದಲಿತರಲ್ಲಿ, ಆರ್.ಎಲ್.ಎಂ ಖುಶ್ವಾಹ ಮುಂತಾದ ಯಾದವೇತರ ಒಬಿಸಿ ಗಳಲ್ಲಿ ನೆಲೆ ಮತ್ತು ಬೆಂಬಲ ಹೊಂದಿವೆ. ಹೀಗೆ ಎನ್.ಡಿ.ಎ ಕೂಟದ ಜಾತಿ ಸಮೀಕರಣ ಮಹಾಘಟಬಂಧನಕ್ಕಿಂತ ಮೂಲತಃ ಹೆಚ್ಚು ವ್ಯಾಪಕವಾಗಿದೆ. ನಿತೀಶ್
ಹಲವು ಜಾತಿಗಳ ನೆಲೆ ಹೊಂದಿರುವ ಹಲವು ಪಕ್ಷಗಳ ಕೂಟದ ಒಂದು ಪಕ್ಷದ ಅಭ್ಯರ್ಥಿಗೆ ಕೂಟದ ಎಲ್ಲ ಪಕ್ಷ/ಜಾತಿಗಳ ಮತಗಳನ್ನು ಹಾಕಿಸುವುದು ಅಷ್ಟೇನೂ ಸುಲಭದ ಮಾತಲ್ಲ. ಕೂಟದ ಅಭ್ಯರ್ಥಿಗೆ ಎಲ್ಲ ಪಕ್ಷಗಳ ಕಾರ್ಯಕರ್ತರು ಸಮಾನವಾಗಿ ಕೆಲಸ ಮಾಡುವುದು, ಪ್ರಚಾರ ಮಾಡಬಲ್ಲ ನಾಯಕರು, ಪ್ರಚಾರ ಸಾಮಗ್ರಿಗಳು ಇತರ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಹಾಗೂ ಒಟ್ಟಾರೆಯಾಗಿ ಕೂಟದ ನೆಲೆ, ಸಂಪನ್ಮೂಲ, ಮತಬೆಂಬಲ, ಪ್ರಭಾವ ಗಳನ್ನು ಗರಿಷ್ಟ ಪ್ರಮಾಣದಲ್ಲಿ ಕ್ರೋಢೀಕರಿಸುವುದು ಅಗತ್ಯವಾಗುತ್ತದೆ. ಇದರಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಪಡೆ, ವಿಪುಲ ಸಂಪನ್ಮೂಲಗಳಿಂದಾಗಿ ಎನ್.ಡಿ.ಎ ಗೆ ಮೇಲಗೈ ಇದೆ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಅಧಿಕಾರದಲ್ಲಿರುವುದು ಇನ್ನಷ್ಟು ಮೇಲುಗೈ ಕೊಡುತ್ತದೆ. ನಿತೀಶ್
ಮಹಾಘಟಬಂಧನ ಕೂಟದಲ್ಲಿ ಆರ್,ಜೆ,ಡಿ ಗೆ ಮಾತ್ರ ಕಾರ್ಯಕರ್ತರ, ಸಂಪನ್ಮೂಲಗಳ, ನಾಯಕರ ಲಭ್ಯತೆಯಿದೆ. ಕಾಂಗ್ರೆಸ್ ಗೆ ಕಾರ್ಯಕರ್ತರು ಇಲ್ಲವೆನ್ನುವಷ್ಟು ಕೊರತೆಯಿದೆ. ಎಡಪಕ್ಷಗಳಿಗೆ ಸಂಪನ್ಮೂಲದ ಕೊರತೆಯಿದೆ. ಉಳಿದ ಸಣ್ಣ ಪಕ್ಷಗಳಿಗೆ ಎಲ್ಲದರ ಕೊರತೆಯಿದೆ. ಇಡೀ ಕೂಟವಾಗಿ ಮಹಾಘಟಬಂಧನ ಎನ್.ಡಿ.ಎ ಕೂಟದ ಸಂಪನ್ಮೂಲಗಳಿಗೆ ಸರಿಗಟ್ಟುವುದು ಕಷ್ಟ. ಒಂದು ಪಕ್ಷದ ಮತಬೆಂಬಲವನ್ನು ಕೂಟದ ಇನ್ನೊಂದು ಪಕ್ಷದ ಅಭ್ಯರ್ಥಿಗೆ ವರ್ಗಾಯಿಸುವುದರಲ್ಲೂ ಸವಾಲುಗಳಿವೆ. ಹೀಗೆ ವ್ಯಾಪಕ ಜಾತಿ ಸಮೀಕರಣ ಎನ್.ಡಿ.ಎ ಗೆ ಮೇಲುಗೈ ಕೊಟ್ಟಿದೆ. ಮಹಾಘಟಬಂಧನ ಕೂಟ ಜಾತಿ ಸಮೀಕರಣವನ್ನು ವ್ಯಾಪಕಗೊಳಿಸುವ ಪ್ರಯತ್ನ ಮಾಡಿತಾದರೂ ಅದು ಗಟ್ಟಿಯಾಗಿಯೂ ಇರಲಿಲ್ಲ, ಸಕಾಲಿಕವಾಗಿಯೂ ಇರಲಿಲ್ಲ. ನಿತೀಶ್
ಇದರರ್ಥ ಒಂದು ಜಾತಿಯ ಜನ ಒಂದೇ ಪಕ್ಷಕ್ಕೆ ಮತ ಕೊಡುತ್ತಾರಂತಲೂ ಅಲ್ಲ ಅಥವಾ ಸೈದ್ಧಾಂತಿಕ ಮತ್ತು ರಾಜಕೀಯ ವಿಷಯಗಳು, ಪ್ರಣಾಳಿಕೆ/ಭರವಸೆಗಳು ಮತದಾನದ ಮೇಲೆ ಪ್ರಭಾವ ಬೀರುವುದಿಲ್ಲ ಅಂತಲೂ ಅಲ್ಲ. ಇದು ಆಯಾ ರಾಜಕೀಯ ಪಕ್ಷ ಚುನಾವಣೆಗಳ ನಡುವೆ (ಅಥವಾ ಸತತವಾಗಿ) ಜಾತಿಯನ್ನು ಮೀರುವ ಯಾವ ಸೈದ್ಧಾಂತಿಕ ಮತ್ತು ರಾಜಕೀಯ ವಿಷಯಗಳ ಸುತ್ತ ಜನರ ಬಳಿ ಹೋಗುತ್ತದೆ, ಅವರನ್ನು ಅಣಿ ನೆರೆಸುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಹೆಚ್ಚಿನ ಪಕ್ಷಗಳು ಇದನ್ನು ಮಾಡದಿರುವುದರಿಂದ ಜಾತಿ ಪ್ರಮುಖವಾಗುತ್ತದೆ. ಆದರೆ ಜಾತಿ (ಅದರಲ್ಲೂ ಹಿಂದುಳಿದ ದಮನಿತ ಜಾತಿಯ ಜನತೆಯ) ತಾರತಮ್ಯ, ದಮನಗಳು ಸಹ ರಾಜಕೀಯ ವಿಷಯಗಳೇ. ನಿತೀಶ್
ಜೀವಿಕಾ ಯೋಜನೆಯ ಪಾತ್ರ
ಜಾತಿಯನ್ನು ಮೀರುವ ಹಲವು ಸೈದ್ಧಾಂತಿಕ ಮತ್ತು ರಾಜಕೀಯ ವಿಷಯಗಳನ್ನು ಕೆಲವು ಪಕ್ಷಗಳು ಎತ್ತುತ್ತವೆ. ವಿವಿಧ ದುಡಿಯುವ ವರ್ಗ (ಕಾರ್ಮಿಕ, ರೈತ, ಕೃಷಿ ಕೂಲಿಕಾರ ಇತ್ಯಾದಿ), ಮಹಿಳಾ, ಯುವಜನ ಹೀಗೆ ಹಲವು ಜನವಿಭಾಗಗಳ ಮೇಲೆ ಆಧಾರಿತ ಅಥವಾ ಮತಧರ್ಮ, ಭಾಷೆ, ಪ್ರದೇಶ ಇತ್ಯಾದಿ ಆಧಾರಿತ ರಾಜಕೀಯ ಅಣಿ ನೆರೆಸುವಿಕೆಯನ್ನು ಮಾಡಬಹುದು. ಬಿಜೆಪಿ ಹಿಂದೂ ಬಹುಸಂಖ್ಯಾತ ಕೋಮುವಾದದ ಜತೆಗೆ ಜಾತಿ ಸಮೀಕರಣದ ರಾಜಕಾರಣವನ್ನು ಜೋಡಿಸುತ್ತದೆ. ಎಡಪಕ್ಷಗಳು ವರ್ಗ ಆಧಾರಿತ ರಾಜಕೀಯ-ಆರ್ಥಿಕ ಅಣಿನೆರೆಸುವಿಕೆಗೆ ಪ್ರಯತ್ನಿಸುತ್ತದೆ. ಜೆಡಿಯು ಮಹಿಳಾ ಜನವಿಭಾಗವನ್ನು ತನ್ನ ನೆಲೆಯಾಗಿ ಮಾಡಿಕೊಂಡಿದೆ. ಆರ್.ಜೆ.ಡಿ ನಿರುದ್ಯೋಗ, ವಲಸೆಇತ್ಯಾದಿ ವಿಷಯಗಳ ಮೂಲಕಯುವಜನವಿಭಾಗವನ್ನು ಅಣಿ ನೆರೆಸಲು ಪ್ರಯತ್ನಿಸಿದೆ. ಜನ ಸುರಾಜ್ ಪಕ್ಷ ಸಹ ಇಂತಹುದೇ ಪ್ರಯತ್ನ ಮಾಡಿತು. ನಿತೀಶ್

ಜೀವಿಕಾಯೋಜನೆಯಡಿಗ್ರಾಮೀಣಮಹಿಳಾಸಬಲೀಕರಣಮತ್ತುಜೀವನೋಪಾಯಕ್ಕೆಸಾಲ ಕೊಡುವ ರಾಜ್ಯ ಸರಕಾರದ ಯೋಜನೆಯ ಭಾಗವಾಗಿ ಹೊಸ ‘ಮುಖ್ಯಮಂತ್ರಿ ಮಹಿಳಾ ರೋಜಗಾರ್ ಯೋಜನಾ’ ವನ್ನು ಎನ್.ಡಿ.ಎ ರಾಜ್ಯಸರಕಾರ ಚುನಾವಣೆಯಘೋಷಣೆಯಕೆಲವೇದಿನಗಳಮೊದಲು ಘೋಷಿಸಿತು. ಈ ಯೋಜನೆಯ ಭಾಗವಾಗಿ ಈ ಸಾಲದ ರೂ 10 ಸಾವಿರಮೊದಲ ಕಂತನ್ನು ಅನುದಾನವಾಗಿ75 ಸಾವಿರ ಕುಟುಂಬಗಳಿಗೆ ಚುನಾವಣೆಯ ಕೆಲವೇ ದಿನಗಳ ಮೊದಲು ತಲುಪಿತು. ಇದು ಮಹಿಳೆಯರ ಮತವನ್ನು ನಿರ್ಣಾಯಕವಾಗಿ ವರ್ಗಾಯಿಸುವ ಮೂಲಕ ಎನ್.ಡಿ.ಎ ವಿಜಯದಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂಬುದು ನಿಸ್ಸಂಶಯ. ಈ ಯೋಜನೆಯನ್ನು ಘೋಷಿಸಿದ ನಂತರವೇ ಚುನಾವಣಾ ಕಮಿಶನ್ ಚುನಾವಣಾ ವೇಳಾಪಟ್ಟಿ ಘೋಷಿಸಿದ್ದು ಚುನಾವಣಾ ಕಮಿಶನ್ ಬಿಜೆಪಿಯ ಅವಶ್ಯಕತೆ,ಅನುಕೂಲಗಳಿಗೆ ನಡೆಯುವುದಕ್ಕೆ ಹೊಸ ಉದಾಹರಣೆ’.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಅದರ ಜಾರಿ (ಚುನಾವಣೆಯ ಕೆಲದಿನಗಳ ಮೊದಲು ರೂ 10 ಸಾವಿರ ಕೊಡುವುದು)ಸಾರ್ವಜನಿಕ ನಿಧಿ ಬಳಸಿ ಮತದಾರರಿಗೆ ಲಂಚ ಕೊಟ್ಟಂತೆ – ಎಂದು ವಿರೋಧ ಪಕ್ಷಗಳು ಆಪಾದಿಸಿ ದೂರಿದವು. ಚುನಾವಣಾ ಕಮಿಶನ್ ಅದನ್ನು ತಡೆಯಲು ನಿರಾಕರಿಸಿತು. ಅದರಈ ನಡೆ ನೈತಿಕವಾಗಿ, ಸಂವಿಧಾನಾತ್ಮಕವಾಗಿ ಮತ್ತು ಎಲ್ಲ ಪಕ್ಷಗಳಿಗೆ ಪೈಪೋಟಿಗೆ ಸಮಾನ ಅವಕಾಶ ಕೊಡುವ ಅದರ ಕರ್ತವ್ಯಕ್ಕೆ ವ್ಯತಿರಿಕ್ತವಾದದ್ದು. ಏಕೆಂದರೆ ಹಿಂದೆ ಚುನಾವಣಾ ಕಮಿಶನ್ ಹಲವು ರಾಜ್ಯಗಳಲ್ಲಿ (ಉದಾ: ರಾಜಸ್ತಾನದಲ್ಲಿ 2023ರಲ್ಲಿ ಹಿಂದೆ ತಮಿಳುನಾಡಿನಲ್ಲಿ) ಹೊಸ ಯೋಜನೆಗಳ ಜಾರಿಗೆ ತಡೆ ಮತ್ತು ಕೆಲವೊಮ್ಮೆ ಹಳೆಯ ಯೋಜನೆಗಳಿಗೂ ತಾತ್ಕಾಲಿಕ ತಡೆ ಕೊಟ್ಟಿದ್ದವು. ಇವುಗಳಲ್ಲಿ ಹೆಚ್ಚಿನವು ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಎಂದು ನೆನಪಿಸಿಕೊಳ್ಳಬೇಕು. ನಿತೀಶ್
ಇತ್ತೀಚಿನವರೆಗೂ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು, ವಿರೋಧ ಪಕ್ಷಗಳ ರಾಜ್ಯ ಸರಕಾರಗಳ ಕಲ್ಯಾಣ ಯೋಜನೆಗಳನ್ನು (ಉದಾ: ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು) ‘ರೇವಡಿ’ (ಬಿಟ್ಟಿ) ಎಂದು ಅಪಹಾಸ್ಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಯೋಜನೆ ಬಿಜೆಪಿಯ ರಾಜಕೀಯ ಅಪ್ರಮಾಣಿಕತೆಯ ಪ್ರತೀಕ. ಜೀವಿಕಾ ಯೋಜನೆ ಸಾಲದ ರೂಪದಲ್ಲಿ ಈಗಾಗಲೇ ಜಾರಿಯಲ್ಲಿದ್ದರೂ, ಅದು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಇದೇ ಅವಧಿಯಲ್ಲಿ ಮೈಕ್ರೋ ಫೈನಾನ್ಸ್ ಸಾಲಗಳ ಪ್ರಮಾಣ 5 ಪಟ್ಟಾಗಿದೆ ಎಂಬುದೇ ಇದಕ್ಕೆ ಪುರಾವೆ. ಹಾಗಾಗಿ ಇದು ಪ್ರಾಮಾಣಿಕ ಯೋಜನೆಯೂ ಅಲ್ಲ. ಬರಿಯ ಚುನಾವಣಾ ಭ್ಷಷ್ಟಾಚಾರವೇ ಎನ್ನಬೇಕಾಗುತ್ತದೆ.
ಈ ಚುನಾವಣೆಯಲ್ಲಿ ಮಹಿಳಾ ಮತದಾನದ ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಉತ್ತಮ ರಾಜಕೀಯ ಬೆಳವಣಿಗೆಯಾದರೂ, ಈ ಯೋಜನೆಯ ಪರಿಣಾಮ ಅದರ ಮೇಲಾಗಿದೆಯೆಂಬುದು ಸಹ ಸ್ಪಷ್ಟ.
‘ಸರ್’ ಮತ್ತಿತರ ಅನುಮಾನಾಸ್ಪದ ಕ್ರಮಗಳು
ಬಿಹಾರದಲ್ಲಿ ತರಾತುರಿಯಲ್ಲಿ ಕೈಗೊಂಡ ವಿಶೇಷ ತೀವ್ರ ಪರಿಷ್ಕರಣೆ’ (ಎಸ್.ಐ.ಆರ್-ಸರ್); ಮಹಾರಾಷ್ಟ್ರ, ಹರಿಯಾಣ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ‘ಮತಗಳ್ಳತನ’ ಎಂದು ಕರೆಯಲಾದ ಚುನಾವಣಾ ಕಮಿಶನ್ ನ ಹಲವು ಕ್ರಮಗಳುಮತ್ತು ಅದಕ್ಕೆ ಯಾವ ವಿಶ್ವಾಸಾರ್ಹ ಸ್ಪಷ್ಟೀಕರಣ ಕೊಡದಿರುವುದು –ಕಮಿಶನ್ ನ ‘ಚುನಾವಣಾ ಕಣದ ಒಬ್ಬ ಪ್ರಾಮಾಣಿಕ ಅಂಪೈರ್’ ಪಾತ್ರದ ವಿಶ್ವಾಸಾರ್ಹತೆಯನ್ನು ತೀವ್ರವಾಗಿ ಕುಂದಿಸಿದೆ.

‘ಸರ್’ ಕಾರ್ಯಾಚರಣೆ ಒಟ್ಟು 60ಕ್ಕೂ ಹೆಚ್ಚು ಲಕ್ಷ (ಅಂದರೆ ಮತದಾರರ ಸುಮಾರು 10%) ಮತದಾರರನ್ನು ಪಟ್ಟಿಯಿಂದ ತೆಗೆದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮತದಾರರನ್ನು ಪಟ್ಟಿಯಿಂದ ಹೊರಗೆ ಹಾಕಿರುವುದಕ್ಕೆ ಯಾವುದೇ ಸ್ಪಷ್ಟನೆಯನ್ನು ಕಮಿಶನ್ ಕೊಟ್ಟಿಲ್ಲ. 3.7 ಲಕ್ಷ ಮತದಾರರನ್ನು ಸೇರಿಸಿದೆ. ಪಟ್ಟಿಯಿಂದ ತೆಗೆದ ಮತದಾರರಿಗೆ ಅದನ್ನು ಪ್ರಶ್ನಿಸಲು ಬದಲಿಸಲು ಅವಕಾಶವಿರಲಿಲ್ಲ. ಸೇರಿಸಿದ ಮತದಾರರ ಪಟ್ಟಿಯನ್ನು ಕೊಡಲಾಗಿಲ್ಲ. ‘ಸರ್’ ಕಾರ್ಯಾಚರಣೆಯ ಸಂವಿಧಾನಾತ್ಮಕತೆಯನ್ನೇ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ.
ಈ ನಡುವೆ ಸಂಸತ್ ಸದಸ್ಯರು ಸೇರಿದಂತೆ ದೆಹಲಿ, ಹರಿಯಾಣ ಇತ್ಯಾದಿ ನೆರೆರಾಜ್ಯಗಳಲ್ಲಿ ದೀರ್ಘಕಾಲದಿಂದ ನೆಲೆಸಿರುವ ಸುಮಾರು 10 ನಾಯಕರು ಬಿಹಾರದಲ್ಲಿ (ಮತ್ತು ಇತ್ಥಿಚೆಗೆ ತಮ್ಮ ರಾಜ್ಯಗಳಲ್ಲಿ ಸಹ) ಮತದಾನ ಮಾಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಪ್ರಶ್ನೆಗಳಿಗೆ ಕಮಿಶನ್ ಉತ್ತರಿಸಿಲ್ಲ. ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣಾ ಕಾರ್ಯಕ್ರಮಕ್ಕೆ ಬಂದಿದ್ದು, ಅವರು ತಮ್ಮನ್ನು ಮತದಾರರ ಪಟ್ಟಿಗೆ ಸೇರಿಸಿಕೊಂಡಿರುವ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಲಾಗಿದೆ.
ಚುನಾವಣಾ ಕಮಿಶನ್ ನ ‘ಸರ್’ ಮತ್ತಿತರ ಅನುಮಾನಾಸ್ಪದ ಕ್ರಮಗಳು ಎನ್.ಡಿ.ಎ ವಿಜಯಕ್ಕೆ ಕಾರಣ ಎಂಬುದಕ್ಕೆ ಗಟ್ಟಿ ಪುರಾವೆ ಇಲ್ಲದಿದ್ದರೂ, ಅವು ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದೂ ಹೇಳುವ ಪರಿಸ್ಥಿತಿಯಿಲ್ಲ. ಈ ಮೇಲಿನ ನಿರ್ದಿಷ್ಟ ಅಂಕೆಸಂಖ್ಯೆಗಳು, ಅಂಶಗಳು ಕಮಿಶನ್ ನ ಎಲ್ಲ ನಡೆಗಳ ಬಗ್ಗೆ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ. ಈ ಕ್ರಮಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿರುವ ಎಲ್ಲ ಸಾಧ್ಯತೆಗಳಿವೆ.
ಚುನಾವಣಾ ವಿಷಯಗಳು, ಪ್ರಚಾರ
ಚುನಾವಣೆಯಲ್ಲಿ ಯಾವ ವಿಷಯವನ್ನು ಎತ್ತಲಾಗುತ್ತದೆ ಎಂಬುದರ ಮೇಲೂ ಫಲಿತಾಂಶ ಅವಲಂಬಿಸಿರುತ್ತದೆ. ಮಹಾಘಟಬಂಧನ ಬಿಹಾರದ ದುಸ್ಥಿತಿಯನ್ನು ಪರಿಹರಿಸಲು 20 ವರ್ಷಗಳ ನಿತೀಶ್ ಕುಮಾರ್ ನಾಯಕತ್ವದ ಸರಕಾರದ ಆಡಳಿತದ ವೈಫಲ್ಯವನ್ನು ಚುನಾವಣಾ ವಿಷಯವಾಗಿ ಕೇಂದ್ರದಲ್ಲಿಟ್ಟುಕೊಂಡು ಪ್ರಚಾರ ನಡೆಸಿತು. ಡಬ್ಬಲ್ ಇಂಜಿನ್ ಸರಕಾರವಿದ್ದರೂ ವಿಶೇಷ ಪ್ಯಾಕೇಜ್ ಗಳ ಬಗ್ಗೆ ಕೊಚ್ಚಿಕೊಂಡರೂ ನಿರುದ್ಯೋಗ ಮತ್ತು ಭಾರೀ ವಲಸೆಯನ್ನು ನಿವಾರಿಸುವಲ್ಲಿ ವೈಫಲ್ಯವನ್ನು ಅದು ಬಯಲು ಮಾಡಿತು. ಈ ಅವಧಿಯಲ್ಲಿ ಕಟ್ಟಿದ ಹಲವು ಸೇತುವೆಗಳು ಕುಸಿದು ಬಿದ್ದದ್ದರ ಹಿಂದೆ ಇದ್ದ ಭ್ರಷ್ಟಾಚಾರವನ್ನು ಎತ್ತಿ ತೋರಿಸಿತು. ಚುನಾವಣಾ ಮೊದಲು ‘ಸರ್’ ಮತ್ತು ಇತರ ರಾಜ್ಯಗಳಲ್ಲಿ ‘ಮತಗಳ್ಳತನ’ ಕೇಂದ್ರೀಕರಿಸಿ ‘ಮತಾಧಿಕಾರ ಜಾಥಾ’ ನಡೆಸಿತು. ಸಾಕಷ್ಟು ಬೇಗನೇ ಪ್ರಣಾಳಿಕೆ ಬಿಡುಗಡೆ ಮಾಡಿ ಪ್ರತಿ ಕುಟುಂಬಕ್ಕೆ ಒಂದು ಸರಕಾರಿ ಉದ್ಯೋಗ, ‘ಜೀವಿಕಾ ದೀದಿ’ಗಳ ಉದ್ಯೋಗ ಖಾಯಮಾತಿ ಇತ್ಯಾದಿ ಕಲ್ಯಾಣ ಯೋಜನೆಗಳ ಭರವಸೆ ನೀಡಿತು.

ಎನ್.ಡಿ.ಎ ತನ್ನ ಪ್ರಚಾರದಲ್ಲಿ ‘ಡಬ್ಬಲ್ ಇಂಜಿನ್’ ಮತ್ತು ಆರ್.ಜೆ.ಡಿ ಯ ‘ಜಂಗಲ್ ರಾಜ್’ ಬೆದರಿಕೆಯನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡಿತು. ಯಥಾ ಪ್ರಕಾರ ಹೆದ್ದಾರಿ ಮುಂತಾದ ಕೆಲವು ಹೊಸ ಮೂಲಸೌಕರ್ಯ ಯೋಜನೆಗಳ ಜಾರಿ ಮತ್ತು ಹೊಸವುಗಳ ಶಂಕು ಸ್ಥಾಪನೆ ಮತ್ತು ಹೊಸ ಯೋಜನೆಗಳ ಘೋಷಣೆಯನ್ನು ‘ಅಭಿವೃದ್ಧಿ’ ಎಂದು ತೋರಿಸಲಾಯಿತು. ‘ಡಬ್ಬಲ್ ಇಂಜಿನ್’ ಸರಕಾರ ಇಲ್ಲದಿದ್ದರೆ (ಅಂದರೆ ಮಹಾಘಟಬಂಧನ ಅಧಿಕಾರಕ್ಕೆ ಬಂದರೆ) ಬಿಹಾರಕ್ಕೆ ಏನೂ ಅನುದಾನ ಸಿಗುವುದಿಲ್ಲವೆಂದು ಪರೋಕ್ಷವಾಗಿ ಬೆದರಿಸಲಾಯಿತು. ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳನ್ನು ಆರ್ಥಿಕವಾಗಿ ಕತ್ತು ಹಿಸುಕುತ್ತಿರುವ ಸನ್ನಿವೇಶದಲ್ಲಿ ಇದು ಬರಿಯ ಬೆದರಿಕೆಯಲ್ಲ, ವಾಸ್ತವವೇ. ನಿತೀಶ್
ಲಾಲೂ ಪ್ರಸಾದ್ ಯಾದವ್ ಅವರ ಆಡಳಿತ ಅವಧಿಯನ್ನು ‘ಜಂಗಲ್ ರಾಜ್’ ಎಂದು ಕರೆದು ಅದು ಅಪರಾಧಗಳು ವ್ಯಾಪಕವಾಗಿದ್ದ, ಕಾನೂನು-ಸುವ್ಯವಸ್ಥೆ ಮುರಿದು ಬಿದ್ದ, ಯಾರೂ ಸುರಕ್ಷಿತವಾಗಿರದ ಅವಧಿಯಾಗಿತ್ತು. ಮಹಾಘಟಬಂಧನ ಅಧಿಕಾರಕ್ಕೆ ಬಂದರೆ ಮತ್ತೆ‘ಜಂಗಲ್ ರಾಜ್’ ಬರುತ್ತದೆ ಎಂದು ಬೆದರಿಸಲಾಯಿತು. ಇವುಗಳ ಜತೆ ಬಿಜೆಪಿ ಯ ‘ಟ್ರಂಪ್ ಕಾರ್ಡ’ ಆದ ‘ಮುಸ್ಲಿಂ ದ್ವೇಷ’ ಮತ್ತು ಭೀತಿಯನ್ನು ಯಥೇಚ್ಛವಾಗಿ ಬಳಸಲಾಯಿತು. ‘ಸರ್’ ನ್ನು ಅದು ‘ಬಾಂಗ್ಲಾದೇಶಿ ನುಸುಳುಕೋರ’ ರನ್ನು ಮತಪಟ್ಟಿಯಿಂದ ತೆಗೆಯಲು ಎಂದು ಸಮರ್ಥಿಸಲಾಯಿತು. ಎಲ್ಲ ಮುಸ್ಲಿಮರನ್ನು ‘ಬಾಂಗ್ಲಾದೇಶಿ ನುಸುಳುಕೋರ’ರ ಜತೆ ಸಮೀಕರಿಸಲಾಯಿತು. ಎರಡನೇ ಸುತ್ತಿನ ಮತದಾನದ ಹಿಂದಿನ ದೆಹಲಿಯ ಭಯೋತ್ಪಾದಕ ದಾಳಿಯನ್ನು ಖಂಡಿತವಾಗಿ ದ್ವೇಷಪ್ರಚಾರಕ್ಕೆ ಬಳಸಲಾಗಿರುತ್ತದೆ. ಹೀಗೆ ಒಟ್ಟಾರೆಯಾಗಿ ಎನ್.ಡಿ.ಎ ನಕಾರಾತ್ಮಕ ಪ್ರಚಾರವನ್ನೇ ನಡೆಸಿತು. ಪ್ರಣಾಳಿಕೆಯ ಬಗ್ಗೆ ಎನ್.ಡಿ.ಎ ಯಥಾಪ್ರಕಾರ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಮಹಾಘಟಬಂಧನದ ಪ್ರಣಾಳಿಕೆಯನ್ನು ‘ಅವಾಸ್ತವ’ ಎಂದು ಟೀಕಿಸಲು ಮರೆಯಲಿಲ್ಲ. ನಿತೀಶ್
ಸಹಜವಾಗಿಯೇ ಹಣ, ಕಾರ್ಯಕರ್ತರ, ನಾಯಕರ ಮತ್ತು ಇತರ ಸಂಪನ್ಮೂಲಗಳ ಕೊರತೆಯಿಂದಾಗಿ ಪ್ರಚಾರದ ವ್ಯಾಪಕತೆ ಮತ್ತು ಪರಿಣಾಮಕಾರಿತನದಲ್ಲಿ ಎನ್.ಡಿ.ಎ ಮೇಲುಗೈ ಸಾಧಿಸಿತು. ಇವೆಲ್ಲ ಇದ್ದಾಗ್ಯೂ ಮಹಾಘಟಬಂಧನದ ಒಟ್ಟು ಪ್ರಚಾರದಲ್ಲಿ ಕೂಟದ ಸಾಮಾನ್ಯ ಸಂದೇಶವನ್ನು ಒಕ್ಕೊರಲಲ್ಲಿ ದಾಟಿಸುವುದರಲ್ಲಿ ತೀವ್ರ ಕೊರತೆಗಳಿದ್ದವು. ಉದಾಹರಣೆಗೆ ಆರ್,ಜೆ.ಡಿ ನಿರುದ್ಯೋಗ, ವಲಸೆ ಸಮಸ್ಯೆಗಳ ಮೇಲೆ ಮತ್ತು ಯುವಜನತೆಯ ಮೇಲೆ ಒತ್ತು ಕೊಟ್ಟಿತು. ಕಾಂಗ್ರೆಸ್ ಪ್ರಜಾಸತ್ತ್ತೆಯ ಮತ್ತು ‘ಮತಾಧಿಕಾರ’ದ ಮೇಲೆ ದಾಳಿಯನ್ನು ಪ್ರಮುಖ ವಿಷಯವಾಗಿಸಿತು. ನಿತೀಶ್
ಎಡಪಕ್ಷಗಳು ನವ-ಉದಾರವಾದಿ ನೀತಿಗಳು ಮತ್ತು ಅದಕ್ಕೆ ಬದಲಿ ನೀತಿಗಳ ಮೇಲೆ ಒತ್ತು ನೀಡಿದವು. ಇವು ಎಲ್ಲವೂ ಪ್ರಮುಖವೇ ಆಗಿದ್ದು, ಇವೆಲ್ಲವನ್ನು ಜೋಡಿಸಿ ವಿಶ್ವಾಸಾರ್ಹ ಬದಲಿ ಇದೆ ಎಂದು ಜನರಲ್ಲಿ ಭರವಸೆ ಮೂಡಿಸುವಲ್ಲಿ ಮಹಾಘಟಬಂಧನ ವಿಫಲವಾಯಿತು. ಮಾತ್ರವಲ್ಲ ಎನ್.ಡಿ.ಎ ಯ ಅಪಪ್ರಚಾರದ ದಾಳಿಗೆ ಉತ್ತರಿಸುವುದರಲ್ಲಿ ವೈಫಲ್ಯ ಸಹ ಅದಕ್ಕೆ ಮುಳುವಾಯಿತು. ಪ್ರಮುಖವಾಗಿ ‘ಜಂಗಲ್ ರಾಜ್’ ಟೀಕೆಯನ್ನು ಎದುರಿಸುವುದರಲ್ಲಿ ವಿಫಲವಾಯಿತು. ಒಟ್ಟಾರೆಯಾಗಿ ಕೂಟದ ಪ್ರಚಾರದ ಮತ್ತು ಎನ್,ಡಿ.ಎ ಅಪಪ್ರಚಾರದ ವಿರುದ್ಧಪರಿಣಾಮಕಾರಿ ಕಾರ್ಯವ್ಯೂಹವನ್ನು ರೂಪಿಸಿ ಜಾರಿ ಆಡುವಲ್ಲಿ ವಿಫಲವಾಯಿತು. ರಾಜ್ಯ, ಪ್ರದೇಶ, ಕ್ಷೇತ್ರ, ಗ್ರಾಮ/ವಾರ್ಡ್, ಮತಗಟ್ಟೆಯವರೆಗೆ ಚುನಾವಣೆಯ ಮೈಕ್ರೋ ಯೋಜನೆ ರೂಪಿಸಿ ನಿರ್ವಹಣೆಯಲ್ಲಿ ಎನ್.ಡಿ.ಎ ಯ ಚಾಕಚಕ್ಯತೆಯ ಹತ್ತಿರಕ್ಕೂ ಬರಲು ಸಾಧ್ಯವಾಗಲಿಲ್ಲ. ನಿತೀಶ್

ಮಾಧ್ಯಮಗಳ ಎನ್.ಡಿ.ಎ ಪರ ಪಾತ್ರ
ಪ್ರಚಾರದ ವಿಷಯ ಬಂದಾಗ ಮಾಧ್ಯಮಗಳ ಪಾತ್ರ ಮುಖ್ಯವಾಗುತ್ತದೆ. ಹೆಚ್ಚು ಕಡಿಮೆ ಇಡೀ ‘ಮುಖ್ಯವಾಹಿನಿ’ ಮತ್ತು ಸಾಮಾಜಿಕ ಮಾಧ್ಯಮಗಳ ದೊಡ್ಡ ವಿಭಾಗ ಮಹಾಘಟಬಂಧನವನ್ನು ಟೀಕಿಸುವುದರಲ್ಲಿ, ಎನ್.ಡಿ.ಎ ಪ್ರಚಾರವನ್ನು ಮಾಡುವುದರಲ್ಲಿ ತೊಡಗಿದ್ದವು. ಉದಾಹರಣೆಗೆ ನಿತೀಶ್ ಕುಮಾರ್ ‘ಸುಶಾಸನ ಬಾಬು’ ಎಂದೂ, ಆರ್.ಜೆ.ಡಿ ಆಡಳಿತವನ್ನು ‘ಜಂಗಲ್ ರಾಜ್’ ಎಂದು ಪ್ರಚಾರ ಮಾಡುವುದರಲ್ಲಿ ಈ ಮಾಧ್ಯಮಗಳು ಎನ್.ಡಿ.ಎ ಗಿಂತಲೂ ಮುಂದಿದ್ದವು. ಸಮೀಕ್ಷೆಗಳು, ವರದಿಗಳು ಸಹ ಎನ್.ಡಿ.ಎ ಯತ್ತ ಏಕಮುಖಿಯಾಗಿದ್ದವು. ಜನತೆಯ ಪರವಾದ ಚುನಾವಣಾ ವಿಷಯಗಳನ್ನು ಎತ್ತುವ, ಸರಕಾರದ ಸಾಧನೆ ವೈಫಲ್ಯಗಳನ್ನು ವಿಶ್ಲೇಷಿಸುವ, ಎರಡೂ ಕೂಟಗಳ ಪ್ರಣಾಳಿಕೆ, ನಿಲುವುಗಳನ್ನು ಪ್ರಶ್ನಿಸುವ ಸ್ವತಂತ್ರ ಕಾವಲುನಾಯಿ ಪಾತ್ರದ ಗೋಜಿಗೆ ಮಾಧ್ಯಮಗಳು ಹೋಗಲಿಲ್ಲ.
ಉದಾಹರಣೆಗೆ ‘ಸುಶಾಸನ ಬಾಬು’ ವಿನ 20 ವರ್ಷಗಳ ಆಡಳಿತದ ನಂತರವೂ, ರಾಜ್ಯದ ಮತ್ತು ಮಾನವ ಅಭಿವೃದ್ಧಿಯ ಯಾವ ಸೂಚಕಗಳನ್ನು ತೆಗೆದುಕೊಂಡರೂ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಬಿಹಾರ ಕೊನೆಯದು ಅಥವಾ ಕೆಳಗಿನಿಂದ 1/2ನೇ ಸ್ಥಾನದಲ್ಲಿದೆ.ಏಕೆ?ಬೇರೆ ರಾಜ್ಯಗಳಿಗೆ ಇಷ್ಟು ಪ್ರಮಾಣದ ವಲಸೆ ಏಕಾಗುತ್ತದೆ? ರಾಷ್ಟ್ರೀಯ ಅಪರಾಧಗಳ ಅಂಕಿಅಂಶ ತೆಗೆದುಕೊಂಡರೂ ಕಳೆದ 20 ವರ್ಷಗಳಲ್ಲಿ ಕೊಲೆ, ಅತ್ಯಾಚಾರ, ಕಿಡ್ನ್ಯಾಪ್ ಗಳ ಸಂಖ್ಯೆ ಹೆಚ್ಚಾಗಿದೆ. ಇದು ‘ಜಂಗಲ್ ರಾಜ್’ ಅಲ್ಲವೇ? ಇಂತಹ ಪ್ರಶ್ನೆಗಳನ್ನು ಮಾಧ್ಯಮಗಳು ಕೇಳಲಿಲ್ಲ. ಬದಲಿಗೆ ಮಹಾಘಟಬಂಧನದ ಮೇಲೆ ಬೇಟೆನಾಯಿಗಳಂತೆ ಎರಗಿದ್ದವು.
ಇವಲ್ಲದೆ ನವ-ಉದಾರವಾದಿ ನೀತಿಗಳು ಜನತೆಯ ಜೀವನ ಪರಿಸ್ಥಿತಿಯನ್ನು ದುರ್ಭರವಾಗಿಸಿದ್ದು, ಈ ನೀತಿಗಳಿಗೆ ಬದಲಿನೀತಿಗಳು ಸಾಧ್ಯ ಎಂಬ ಭರವಸೆಯೇ ಜನತೆಯಲ್ಲಿ ಹೋಗಿಬಿಟ್ಟಿದೆ. ಒಂದು ಪ್ರಜಾಸತ್ತೆಯಲ್ಲಿ ಸರಕಾರದ ಕರ್ತವ್ಯಗಳು ಮತ್ತು ಜವಾಬ್ದಾರಿಗಳು, ಜನತೆಯ ಹಕ್ಕುಗಳ ಕುರಿತು ನಿರೀಕ್ಷೆಗಳು ಕನಿಷ್ಟವಾಗಿ ಬಿಟ್ಟಿವೆ. ಜನತೆಯಲ್ಲಿ ಸಾರ್ವತ್ರಿಕ ಒಳಿತಿನ ದೂರಗಾಮಿ ಯೋಜನೆಗಳ ಬದಲು, ವೈಯಕ್ತಿಕ ಲಾಭ ತರುವ ತಕ್ಷಣದ ಬದಲಿಗೆ ಮಾರು ಹೋಗುವುದು ಸಾಮಾನ್ಯವಾಗಿದೆ.
ಹೀಗಾಗಿ ಬಿಹಾರದಲ್ಲಿ ಈ ಬಾರಿಯೂ ‘ಬದಲಾವ’ ಸಾಧ್ಯವಾಗಲಿಲ್ಲ.
ಇದನ್ನೂ ನೋಡಿ: ನಿರಂಜನ ಜನಮುಖಿ ಬರಹಗಾರ: ಮುಕುಂದರಾಜ್ Janashakthi Media
