ಕರ್ನಾಟಕ ರಾಜ್ಯದಲ್ಲಿ ಶಾಂತಿಯುತ – ನಿಷ್ಪಕ್ಷಪಾತ ಚುನಾವಣೆಗೆ ಕ್ರಮವಹಿಸಲು ಸಿಪಿಐ(ಎಂ) ಮನವಿ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯು ಸಮೀಪಿಸುತ್ತಿದ್ದು, ಶಾಂತಿಯುತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಕ್ರಮಕೈಗೊಳ್ಳಬೇಕು ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಧಿಕಾರ ದುರುಪಯೋಗ ಮಾಡದಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಭಾರತದ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಆಯೋಗದೊಂದಿಗಿನ ಸಭೆಯ ಬಗ್ಗೆ ವಿವರಣೆ ನೀಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ  ಯು.ಬಸವರಾಜ ಅವರು, ಕರ್ನಾಟಕದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಭಾರತೀಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಹಾಗೂ ರಾಜ್ಯದ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಸಿಪಿಐ(ಎಂ) ರಾಜ್ಯ ಸಮಿತಿ ಪರವಾಗಿ ಕೆ.ಮಹಾಂತೇಶ್ ಆಯೋಗದೊಂದಿಗೆ ನೆನ್ನೆ(ಮಾರ್ಚ್‌ 09) ನಡೆದ ಸಭೆಗೆ ಹಾಜರಾಗಿ ಪಕ್ಷದ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.

ಇದನ್ನು ಓದಿ: ನಿಗದಿತ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ; ಮೇ 10ರೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣ

ರಾಜ್ಯದಲ್ಲಿ  ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿರುವಂತೆ ಆಡಳಿತಾರೂಢ ಬಿಜೆಪಿ ಪಕ್ಷವು ಧಾರ್ಮಿಕ ಹಾಗೂ ಜಾತಿಯ ವಿಚಾರಗಳಲ್ಲಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಕಾರಣ, ಚುನಾವಣಾ ಆಯೋಗವು ಈ ಚುನಾವಣೆಯನ್ನು ಅತ್ಯಂತ ಸೂಕ್ಷ್ಮವೆಂದು ಪರಿಗಣಿಸಬೇಕು ಎಂದು ಅವರ ಗಮನಕ್ಕೆ ತರಲಾಗಿದೆ.

ಸಂಘಪರಿವಾರ ಶಕ್ತಿಗಳು ಈಗಾಗಲೇ ರಾಜ್ಯದಲ್ಲಿನ ಸೌಹಾರ್ದತೆಯ ಪ್ರತೀಕವಾಗಿರುವ ಹಬ್ಬ ಹರಿದಿನಗಳನ್ನು ಕೋಮುವಾದದ ಹೆಸರಿನಲ್ಲಿ ಉನ್ಮಾದಗೊಳಿಸಿ ಜನರ ಸೌಹಾರ್ದತೆಯನ್ನು ಹಾಳು ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿವೆ. ಎರಡನೆಯ ಅಂಶವೆಂದರೆ ಈ ಚುನಾವಣೆಯಲ್ಲಿ ಅತಿಯಾದ ಭ್ರಷ್ಟಾಚಾರದ ಹಣದ ಹರಿವು ಈಗಾಗಲೇ ಆರಂಭಗೊಂಡಿದೆ. ಅದಾಗಲೇ ಅಭ್ಯರ್ಥಿಯಾಗಬಯಸುವವರು, ಆಗಿರುವವರು, ಮನೆಮನೆಗೆ ಕುಕ್ಕರ್ ಹಾಗೂ ಬೆಲೆ ಬಾಳುವ ಸೀರೆಗಳನ್ನು ಹಂಚುವುದು, ಧರ್ಮಸ್ಥಳ, ಮಂತ್ರಾಲಯ, ಶ್ರೀ ಶೈಲ ಮುಂತಾದ ಪ್ರದೇಶಗಳಿಗೆ ಯಾತ್ರೆಗಳನ್ನು ಸಂಘಟಿಸಿ ಅದಕ್ಕಾಗಿ ಬಸ್ ಮತ್ತಿತರೆ ವ್ಯವಸ್ಥೆಗಳನ್ನು ಒದಗಿಸುವುದು, ಕ್ಷೇತ್ರವಾರು, ಪಂಚಾಯತುವಾರು ಸಾಮೂಹಿಕ ಬಾಡೂಟಗಳನ್ನು ಸಂಘಟಿಸುವುದು. ಸಮುದಾಯಗಳಿಗೆ, ದೇವಸ್ಥಾನಗಳಿಗೆ ಹಣವನ್ನು ವಿತರಿಸುವುದು! ಹುಟ್ಡುಹಬ್ಬದ ಹೆಸರಲ್ಲಿ ಬೃಹತ್ ಸಭೆಗಳು ಮತ್ತು ಭಾರೀ ಔತಣಕೂಟಗಳನ್ನು ಸಂಘಟಿಸುವುದು ನಡೆದಿದೆ ಎಂಬ ಅಂಶಗಳನ್ನು ಚುನಾವಣಾ ಆಯೋಗಕ್ಕೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ರಿಪುರ ವಿಧಾನಸಭೆ ಚುನಾವಣೆ: ಆಳುವ ಪಕ್ಷದಿಂದ ಭಯ ಹುಟ್ಟುಹಾಕುವ ಪ್ರಯತ್ನ – ಅಗತ್ಯ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಿಪಿಐ(ಎಂ)ಆಗ್ರಹ

ಇನ್ನು ಚುನಾವಣೆ ಘೋಷಣೆಯಾದ ಬಳಿಕ ಅದರ ಪಾತ್ರ ಇನ್ನೂ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಆಯೋಗವು ಈ ಬಗ್ಗೆ ತನ್ನ ಕಣ್ಗಾವಲನ್ನು ಕೇಂದ್ರೀಕರಿಸಬೇಕು. ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರು ಮತ್ತು ಇತರ ಸಚಿವರು ರಾಜ್ಯದ ‌ಮುಖ್ಯಮಂತ್ರಿಯಾದಿಯಾಗಿ  ಸರ್ಕಾರಿ ಯಂತ್ರವನ್ನು ಮತ್ತು ಆಡಳಿತಶಾಹಿಯನ್ನು ಈ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದ್ದು ಅದಕ್ಕೆ ಅಗತ್ಯ ಕಡಿವಾಣ ಹಾಕಬೇಕು ಎಂದು ಸಿಪಿಐ(ಎಂ) ಪಕ್ಷ ತಿಳಿಸಿದೆ.

ಕರ್ನಾಟಕದ ಸದ್ಯದ ಪರಿಸ್ಥಿತಿಯಲ್ಲಿ ಏಪ್ರಿಲ್ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲಿ ಒಂದೇ ಹಂತದಲ್ಲಿ ಎಲ್ಲ 224 ಕ್ಷೇತ್ರಗಳಿಗೂ ಚುನಾವಣೆ ನಡೆಸುವುದು ಸೂಕ್ತವಾಗಿದೆ. ಹಲವು ಹಂತದ ಚುನಾವಣೆಗೆ ಅವಕಾಶ ನೀಡಿದಲ್ಲಿ ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ಪಕ್ಷವು ತಮ್ಮ ಅಧಿಕಾರ ದುರುಪಯೋಗ ಹಾಗೂ ದುರ್ಬಳಕೆ ಮಾಡಿಕೊಳ್ಳುವ ಸಾದ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಮತ್ತು ಅದರ ಅಭ್ಯರ್ಥಿಗಳು ಸಾಕಷ್ಟು ಚುನಾವಣಾ ಅಕ್ರಮಗಳನ್ನು ಎಸಗಿರುವ ದೂರುಗಳು ಕರ್ನಾಟಕ ಹೈಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿರುವುದನ್ನು ಆಯೋಗದ ಗಮನಕ್ಕೆ ತಂದಿದ್ದೇವೆ ಎಂದು ಯು. ಬಸವರಾಜ ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಶಾಂತಿಯುತ ಹಾಗೂ‌ ನ್ಯಾಯ ಸಮ್ಮತವಾದ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಯುವಂತೆ‌ ಕ್ರಮವಹಿಸಬೇಕು ಎಂದು ಸಿಪಿಐ(ಎಂ) ಪಕ್ಷವು ಮನವಿ ಮಾಡಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *