ನಿರುದ್ಯೋಗ ಭತ್ಯೆ ನೀಡಲು ಆಗ್ರಹಿಸಿ ಪ್ರಾಂತ ರೈತ ಸಂಘದಿಂದ ಧರಣಿ ಸತ್ಯಾಗ್ರಹ

ಗಜೇಂದ್ರಗಡ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಕೆಪಿಆರ್‌ಎಸ್‌) ತಾಲೂಕು ಸಮಿತಿ ಹಾಗೂ ಸೂಡಿ ಗ್ರಾಮ ಘಟಕಗಳ ನೇತೃತ್ವದಲ್ಲಿ ಸೂಡಿ ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರು ನಿರುದ್ಯೋಗ ಭತ್ಯೆ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಯಿತು.

ಈ ವೇಳೆ ತಾಲೂಕ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ ಕೂಲಿಕಾರರು ಸೇರಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನಮೂನೆ-೬ರ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ ಗ್ರಾಮ ಪಂಚಾಯತಿ ಕಾರ್ಯಲಯದ ಅಧಿಕಾರಿಗಳಿಗೆ ಮೌಖಿಕವಾಗಿ ಹಲವಾರು ಬಾರಿ ಭೇಟಿಯಾಗಿ ಕೆಲಸ ನೀಡಲು ಮನವಿ ಮಾಡಲಾಗಿದ್ದು, ಅಧಿಕಾರಿಗಳು ಇಂದು-ನಾಳೆ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಕೂಲಿಕಾರರಿಗೆ ಕೆಲಸ ನೀಡುವಂತೆ ಈ ಹಿಂದೆಯೇ ಅರ್ಜಿ ಸಲ್ಲಿಸಲಾಗಿದೆ. ಇದೀಗ ಅರ್ಜಿ ಸಲ್ಲಿಸಿ  ೨೮ ದಿನಗಳು ಕಳೆದರೂ ಕೆಲಸ ನೀಡಲು ಅಧಿಕಾರಿಗಳು ಹಿಂದೆಂಟು ಹಾಕುತ್ತಿರುವುದರಿಂದ ಕೂಲಿಕಾರರಿಗೆ ನಿರುದ್ಯೋಗ ಭತ್ಯೆಯನ್ನಾದರೂ ನೀಡಬೇಕು ಎಂದರು.

ಕಾಯ್ದೆಯ ಅನ್ವಯ ೧೫ ದಿನಗಳ ನಂತರ ಕೆಲಸ ನೀಡದೇ ಇದ್ದರೆ ನಿರುದ್ಯೋಗ ಭತ್ಯೆ ಕೂಲಿಕಾರರು ಪಡೆಯಬಹುದು ಆದ್ದರಿಂದ ನಮ್ಮ ಸಂಘದ ನೇತೃತ್ವದಲ್ಲಿ ೯೮ ಜಾಬ್ ಕಾರ್ಡಗಳಿದ್ದು ೨೭೦ ಜನ ಕೂಲಿಕಾರರಿದ್ದಾರೆ. ಈಗಾಗಲೇ ನಮೂನೆ-೬ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ನಿರುದ್ಯೋಗ ಭತ್ಯೆ ಹಾಗೂ ಮುಂದೆ ನಿರಂತರ ಕೂಲಿ ಕೆಲಸ ಕೊಡಿಸಲು ಮುಂದಾಗಬೇಕು. ಒಂದು ವೇಳೆ ಕೂಲಿ ಕೆಲಸ ಹಾಗೂ ನಿರುದ್ಯೋಗ ಭತ್ಯೆ ಕೊಡಿಸುವಲ್ಲಿ ವಿಳಂಬವಾದಲ್ಲಿ ನಾವು ಜಿಲ್ಲಾಧಿಕಾರಿ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಪ್ರತಿಭಟನಾ ಧರಣಿ ಸ್ಥಳಕ್ಕೆ ಗಜೇಂದ್ರಗಡ ತಹಶಿಲ್ದಾರ ರಜನಿಕಾಂತ ಕೆಂಗೇರಿ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ಕೂಲಿಕಾರರ ಸಮಸ್ಯೆ ಆಲಿಸಿ ನಿರುದ್ಯೋಗ ಭತ್ಯೆ ಹಾಗೂ ನಿರಂತರ ಕೂಲಿ ಕೆಲಸ ಕೊಡಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಕ್ಷಣ ಸೂಚಿಸಿ ಕ್ರಮ ಜರಗಿಸಲಾಗುವುದು ಎಂದರು. ಬಳಿಕ ಧರಣಿಯನ್ನು ಹಿಂದಕ್ಕೆ ಪಡೆದರು.

ಪ್ರತಿಭಟನೆಯಲ್ಲಿ ಸೂಡಿ ಘಟಕದ ಕಾರ್ಯದರ್ಶಿ ಶರಣಮ್ಮ ಲೆಕ್ಕಿಗಿಡದ, ಸೂಡಿ ಘಟಕದ ಅಧ್ಯಕ್ಷೆ ಯಮನವ್ವ ಬಂಕದಮನಿ, ಮುಖಂಡರಾದ ಉಮಾ ಬಡಿಗೇರ, ಶಶಿಕಲಾ ಅಂಗಡಿ, ರವಿ ಗುಳೇದಗುಡ್ಡ, ಮಮತಾಜ ಬೇಗಂ ಸೇರಿದಂತೆ ನೂರಾರು ಕೂಲಿಕಾರ ಮಹಿಳೆಯರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *