ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್‌ ಸೇವೆ ಪುನರ್‌ ಆರಂಭ: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ಕಾರ್ಮಿಕ ಇಲಾಖೆ ಚಿಂತನೆ

ಬೆಂಗಳೂರು: ಕಟ್ಟಡಗಳನ್ನು ನಿರ್ಮಾಣ ಮಾಡುವ ಕಾರ್ಮಿಕರಿಗಾಗಿ ಕೋವಿಡ್ 1 ಮತ್ತು 2ನೇ ಅಲೆ ವೇಳೆ ಸಹಾಯಧನ, ಆಹಾರ ಕಿಟ್, ಲಸಿಕೆ, ವಲಸೆ ಕಾರ್ಮಿಕರು ತಮ್ಮೂರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿದ್ದ ಕಾರ್ಮಿಕ ಇಲಾಖೆಯು ಇದೀಗ ನಿರ್ಮಾಣ ವಿಭಾಗದಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರು ಕೆಲಸದ ಪ್ರದೇಶಗಳಿಗೆ ತೆರಳಲು ಅನುವಾಗುವಂತೆ ಉಚಿತ ಸಾರಿಗೆ ಸೇವೆ ಒದಗಿಸಲು ಮುಂದಾಗಿದೆ.

ಕಾರ್ಮಿಕ ಇಲಾಖೆಯ ಕಲ್ಯಾಣ ಮಂಡಳಿಯು ಕಟ್ಟಡ ಕಾರ್ಮಿಕರಿಗೆ ನೀಡಲಾಗುವ ಈ ಸೌಲಭ್ಯವು ಈ ಹಿಂದೆ ಆರಂಭದಲ್ಲಿ ಬೆಂಗಳೂರು ನಗರದ ಬಿಎಂಟಿಸಿ ಬಸ್‌ ಸಂಚಾರ ವ್ಯಾಪ್ತಿಯಲ್ಲಿದ್ದವು, ನಂತರ ಮೈಸೂರು ಜಿಲ್ಲೆಗೆ ಮಾತ್ರ ವಿಸ್ತರಣೆಗೊಂಡಿದ್ದವು. ಈಗ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ಸಾರಿಗೆ ಇಲಾಖೆ ಜತೆ ಹಲವಾರು ಸುತ್ತಿನ ಮಾತುಕತೆ ನಡೆಸಿ ಇಡೀ ರಾಜ್ಯಕ್ಕೆ ವಿಸ್ತರಿಸಲು ಮುಂದಾಗಿದ್ದಾರೆ.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರು ಈ ಯೋಜನೆ ಲಾಭ ಪಡೆಯಬಹುದಾಗಿದೆ ಎಂದು ಇಲಾಖೆ ತಿಳಿಸಿದೆ. ಈಗಾಗಲೇ ಬೆಂಗಳೂರು ಮಹಾನಗರದಲ್ಲಿ ಪುನರ್‌ ಆರಂಭವಾಗಿರುವ ಉಚಿತ ಸಾರಿಗೆ ಸೇವೆಯನ್ನು ರಾಜ್ಯದಾದ್ಯಂತ ವಿಸ್ತರಣೆಯಾಗಲಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈಗಾಗಲೇ ಈ ಯೋಜನೆಯನ್ನು ಜಾರಿಗೊಳಿಸಿದೆ. ದಿನ ನಿತ್ಯ ಕೂಲಿಗಾಗಿ ತೆರಳುವ ಕಟ್ಟಡ ಕಾರ್ಮಿಕರಿಗೆ ಈ ಯೋಜನೆ ಲಾಭಕಾರಿಯಾಗಿದ್ದು, ಪ್ರತಿ ನಿತ್ಯ ಅವರು ಕೆಲಸ ನಿರ್ವಹಣೆಗೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಲು ಕನಿಷ್ಠ 150 ರಿಂದ 200 ರೂ. ವ್ಯಯಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಅವರು ಪಡೆಯುವ ಕೂಲಿ ಮೊತ್ತದ ಬಹುಭಾಗವನ್ನು ಸಾರಿಗೆಗೆ ವ್ಯಯಿಸುತ್ತಿದ್ದರು. ಕಟ್ಟಡ ಕಾರ್ಮಿಕರ ಅನುಕೂಲಕ್ಕಾಗಿ ಉಚಿತ ಸಾರಿಗೆ ವ್ಯವಸ್ಥೆ ಆರಂಭವಾಗಿದೆ.

ಅಸಾಧ್ಯವೆಂದ ಸಾರಿಗೆ ಸಂಸ್ಥೆಗಳು

ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಬಸ್ ಸೇವೆ ಜಾರಿಗೆ ಕಾರ್ಮಿಕ ಇಲಾಖೆ ಮುಂದಾಗಿದೆ. ಈ ಸಂದರ್ಭದಲ್ಲಿ ಮಂಡಳಿಯು ಶೇ.80ರಷ್ಟನ್ನು ಭರಿಸುವ ಭರವಸೆ ನೀಡಿತ್ತಲ್ಲದೆ, ಇನ್ನುಳಿದ ಶೇ.20ರಷ್ಟನ್ನು ರಿಯಾಯ್ತಿ ನೀಡುವುದು ಅಥವಾ ಸಾರಿಗೆ ಇಲಾಖೆಯೇ ಭರಿಸುವ ಪ್ರಸ್ತಾವನೆಯನ್ನು ಇರಿಸಿತ್ತು.

ಆರಂಭಿಕ ಹಂತದಲ್ಲಿ ಈ ಪ್ರಸ್ತಾವನೆಗೆ ಮೌಖಿಕ ಸಮ್ಮತಿ ಸೂಚಿಸಿದ್ದ ಸಾರಿಗೆ ಇಲಾಖೆ ಇದೀಗ ತನ್ನ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಶೇ.20 ರಿಯಾಯ್ತಿ ಅಥವಾ ತಾನು ಭರಿಸುವುದು ಅಸಾಧ್ಯ ಎಂದು ತಿಳಿಸಿದೆ. ಹೀಗಾಗಿ ಶ್ರಮಿಕ ವರ್ಗದ ಏಳಿಗೆಯ ಉದ್ದೇಶದ ಯೋಜನೆಯ ಅನುಷ್ಠಾನಕ್ಕೆ ಕಾರ್ಮಿಕ ಸಚಿವರು, ಶೇ.100ರಷ್ಟು ಮೊತ್ತವನ್ನು ಪಾವತಿಸಿಯಾದರೂ ರಾಜ್ಯದಾದ್ಯಂತ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ ಶೀಘ್ರವೇ ರಾಜ್ಯದಾದ್ಯಂತ ಶ್ರಮಿಕ ವರ್ಗಕ್ಕೆ ಉಚಿತ ಬಸ್ ಪಾಸ್ ನೀಡುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬರಲಿದೆ.

ಬಿಎಂಟಿಸಿ ಉಚಿತ ಪಾಸ್ ಪಡೆಯುವುದು ಹೇಗೆ?
ಅರ್ಹತೆ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ನೊಂದಾಯಿಸಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ ಮಾತ್ರ ಈ ಯೋಜನೆ ಇರಲಿದೆ.
ಮಂಡಳಿ ಗುರುತಿನ ಚೀಟಿ
ಎರಡು ಸ್ಟಾಂಪ್ ಅಳತೆಯ ಭಾವಚಿತ್ರ
ಆಧಾರ್ ಕಾರ್ಡ್ ಪ್ರತಿ

ಇವುಗಳನ್ನು ಸಲ್ಲಿಸಬೇಕು.

ಬಿಎಂಟಿಸಿ ವ್ಯಾಪ್ತಿಯ ಕಾರ್ಮಿಕರು ಈ ಕೆಳಗಿನ ಸ್ಥಳಗಳಿಗೆ ಭೇಟಿ ನೀಡಿ

ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ವೈಟ್‍ಫೀಲ್ಡ್ ಟಿಟಿಎಂಸಿ, ಯಶವಂತಪುರ, ಬನಶಂಕರಿ, ವಿಜಯನಗರ, ಶಾಂತಿನಗರ, ದೊಮ್ಮಲೂರು, ಕೋರಮಂಗಲ ಬಿಎಂಟಿಸಿ ಘಟಕಗಳು, ಕೆಂಗೇರಿ ಟಿಟಿಎಂಸಿ, ಯಲಹಂಕ ಹಳೆಯ ಬಸ್ ನಿಲ್ದಾಣ, ಹೊಸಕೋಟೆ ಬಸ್ ನಿಲ್ದಾಣ, ಸುಮನಹಳ್ಳಿ ಡಿಪೋ, ಕೆ.ಆರ್.ಪುರ, ಹೆಚ್‍ಎಸ್‍ಆರ್ ಲೇಔಟ್, ಹೆಬ್ಬಾಳ ಬಿಎಂಟಿಸಿ ಘಟಕಗಳು, ನಾಗಮಂಗಲ ಡಿಪೋ, ಬಾಗಲಗುಂಟೆಯಲ್ಲಿ ಕಾರ್ಮಿಕ ಇಲಾಖೆ, ಡೈರಿ ಸರ್ಕಲ್ ಬಳಿಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿಗಳನ್ನು ದಾಖಲೆಗಳನ್ನು ಸಲ್ಲಿಸಿ ಪಾಸ್‍ಗಳನ್ನು ಪಡೆದುಕೊಳ್ಳಬಹುದು.

Donate Janashakthi Media

2 thoughts on “ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್‌ ಸೇವೆ ಪುನರ್‌ ಆರಂಭ: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ಕಾರ್ಮಿಕ ಇಲಾಖೆ ಚಿಂತನೆ

  1. ಜನಶಕ್ತಿ ಮೀಡಿಯಾದಲ್ಲಿ ಕಾರ್ಮಿಕರಿಗೆ ಸಂಬಂಧಿಸಿದಂತೆಪ್ರಕಕಾರ್ಮಿಸಂಘದ ನಾಯಕರನ್ನು ಸಂಪರ್ಕಿಸಿ, ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಂಘದ ಅಭಿಪ್ರಾಯಗಳನ್ನೂ ಪಡೆದು ಪ್ರಕಟಿಸುವುದು ಉತ್ತಮ.
    -ಸಿದ್ದಯ್ಯ ಸಿ –

    1. ಜನಶಕ್ತಿ ಮೀಡಿಯಾದಲ್ಲಿ ಇತರೆ ಸುದ್ದಿ ಮಾಧ್ಯಮಗಳಂತೆ ಬಂದ ಸುದ್ದಿಯನ್ನು ಹಾಗೆಯೇ ಪ್ರಕಟಿಸುವುದು ಸರಿಯಲ್ಲ. ಕಾರ್ಮಿಕರಿಗೆ ಸಂಬಂಧಿಸಿದ ಯಾವುದೇ ಯೋಜನೆಗಳಿಗೆ ಸಂಭಂದಿಸಿದ ಸುದ್ದಿಗಳ ಕುರಿತು ಸಂಬಂಧಪಟ್ಟ ಕಾರ್ಮಿಕ ಸಂಘದ ನಾಯಕರನ್ನು ಸಂಪರ್ಕಿಸಿ, ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಂಘದ ಅಭಿಪ್ರಾಯಗಳನ್ನೂ ಪಡೆದು ಪ್ರಕಟಿಸುವುದು ಉತ್ತಮ.

Leave a Reply

Your email address will not be published. Required fields are marked *