ಬೆಂಗಳೂರು: ನಗರದ ನಾಗವಾರ ಬಳಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಕಾಮಗಾರಿಯ ಪಿಲ್ಲರ್ ಕಬ್ಬಿಣದ ರಾಡುಗಳು ಕುಸಿದುಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಹಾಗೂ ಮಗು ಮೃತಪಟ್ಟಿರುವ ಘಟನೆ ನಡೆದಿದೆ.
ಇಂದು(ಜನವರಿ 10) ಬೆಳಿಗ್ಗೆ 10:30 ರ ಸುಮಾರಿಗೆ ಘಟನೆ ನಡೆದಿದ್ದು, ಮೃತರನ್ನು ತೇಜಸ್ವಿನಿ (35) ಹಾಗೂ ವಿಹಾನ್ (2 ವರ್ಷ 6 ತಿಂಗಳು) ಎಂದು ಗುರುತಿಸಲಾಗಿದೆ. ನಾಗವಾರ ರಿಂಗ್ ರಸ್ತೆಯ ಎಚ್‍ಬಿಆರ್ ಲೇಔಟ್ ಬಳಿ ಮೆಟ್ರೋ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪಿಲ್ಲರ್ ಗೆ ನಿಲ್ಲಿಸಲಾಗಿದ್ದ ಕಬ್ಬಿಣದ ರಾಡ್‌ಗಳು ಏಕಾಏಕಿ ರಸ್ತೆಗೆ ಉರುಳಿ ಬಿದ್ದಿದೆ.
ಇದನ್ನು ಓದಿ: ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ನಿಧನ
ಅದೇ ವೇಳೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಮಗು ಮೇಲೆ ಬಿದ್ದಿದೆ. ಪರಿಣಾಮ ತಾಯಿ ಹಾಗೂ ಮಗುವಿಗೆ ಗಂಭೀರವಾದ ಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ತಂದೆ ಪ್ರಾಣಾಪಾಯದಿಂದ ಪರಾಗಿದ್ದಾರೆ.
ಧಾರವಾಡ ಮೂಲದ ಸಿವಿಲ್ ಇಂಜಿನಿಯರ್ ಲೋಹಿತ್ ಕುಮಾರ್ ಮತ್ತು ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಮೋಟೋರೋಲಾ ಕಂಪನಿಯಲ್ಲಿ ವೃತ್ತಿ ಹೊಂದಿದ್ದ ತೇಜಸ್ವಿನಿ ನಾಗವಾರದಲ್ಲಿ ನೆಲೆಸಿದ್ದರು. ಲೋಹಿತ್ ಅವರು ನಾಗವಾರದಿಂದ ಮಾನ್ಯತಾ ಟೆಕ್ ಪಾರ್ಕ್ ಬಳಿ ಪತ್ನಿಯನ್ನು ಬಿಡಲು ತೆರಳುತ್ತಿದ್ದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ