ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7 ಮತ್ತು 2021-22 ರ ಆರ್ಥಿಕ ವರ್ಷದಲ್ಲಿ ಶೇಕಡಾ 8.7ಕ್ಕೆ ಹೋಲಿಸಿದರೆ, ಭಾರತದ ಆರ್ಥಿಕ ಸಮೀಕ್ಷೆ (2022-23) ಪ್ರಕಾರ ದೇಶದ ಆರ್ಥಿಕತೆಯು 2023-24 ರಲ್ಲಿ ಶೇಕಡಾ 6.5 ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿದೆ ಎಂದು ಸಚಿವರು ವರದಿ ಮಂಡಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 6.8 ಹಣದುಬ್ಬರ ಪ್ರಕ್ಷೇಪಣವು ಖಾಸಗಿ ಬಳಕೆಯನ್ನು ತಡೆಯುವಷ್ಟು ಹೆಚ್ಚಿಲ್ಲ ಅಥವಾ ಹೂಡಿಕೆಯನ್ನು ದುರ್ಬಲಗೊಳಿಸುವಷ್ಟು ಕಡಿಮೆಯಾಗಿಲ್ಲ ಎಂದು ಹಣಕಾಸು ಸಚಿವೆ ಆರ್ಥಿಕ ಸ್ಥಿತಿಗತಿಗಳ ಪರಿಸ್ಥಿತಿಗಳ ಬಗ್ಗೆ ತಿಳಿಸಿದರು.
ಇದನ್ನು ಓದಿ: ಸಂಸತ್ ಬಜೆಟ್ ಅಧಿವೇಶನ ಆರಂಭ; ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಿದ ಬಿಆರ್ಎಸ್, ಎಎಪಿ
ಕೋವಿಡ್ ಸಂಕಷ್ಟ ಮತ್ತು ಯೂರೋಪಿನ ಬಿಕ್ಕಟ್ಟಿನಿಂದಾಗಿ ಕುಸಿದಿದ್ದ ಆರ್ಥಿಕತೆಯು ಬಹುತೇಕ ಮತ್ತೆ ಹಳಿಗೆ ಮರಳಿದೆ. ಜಾಗತಿಕ ಆರ್ಥಿಕ, ರಾಜಕೀಯ ಬೆಳವಣಿಗೆಗಳನ್ನು ಅವಲಂಬಿಸಿ ಮುಂದಿನ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಶೇಕಡ 6-6.8 ವ್ಯಾಪ್ತಿಯಲ್ಲಿರುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ತಿಳಿಸಿದರು.
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ವರದಿಗಳ ಬಗ್ಗೆ ಉಲ್ಲೇಖಿಸಿದ ಹಣಕಾಸು ಸಚಿವರು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ ಭಾರತೀಯ ಆರ್ಥಿಕತೆಯಲ್ಲಿ ಸ್ವಲ್ಪಮಟ್ಟಿನ ಕುಸಿತವನ್ನು ಕಾಣಬಹುದು ಎಂದು ಐಎಂಎಫ್ ಇಂದು ಹೇಳಿದೆ. ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆಯನ್ನು ಶೇಕಡಾ 6.8 ರಿಂದ ಶೇಕಡಾ 6.1 ಕ್ಕೆ ಯೋಜಿಸಿದೆ.
ಇದನ್ನು ಓದಿ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ತೀವ್ರ ವಿರೋಧ
ಐಎಂಎಫ್ ವರ್ಲ್ಡ್ ಎಕನಾಮಿಕ್ ಔಟ್ಲುಕ್ನ ಜನವರಿ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಜಾಗತಿಕ ಬೆಳವಣಿಗೆಯು 2022 ರಲ್ಲಿ ಅಂದಾಜು 3.4 ಶೇಕಡಾದಿಂದ 2023 ರಲ್ಲಿ 2.9 ಶೇಕಡಾಕ್ಕೆ ಕುಸಿಯುತ್ತದೆ ಎನ್ನಲಾಗಿದೆ. ಮುಂದಿನ ವರ್ಷ ಅಂದರೆ, 2024 ರಲ್ಲಿ 3.1 ಶೇಕಡಾಕ್ಕೆ ಏರಿಕೆಯಾಗುತ್ತದೆ ಎಂದು ಹೇಳಲಾಗಿದೆ ಎಂದು ತಿಳಿಸಿದರು.
ಭಾರತವು ಪಿಪಿಪಿ(ಖರೀದಿ ಸಾಮರ್ಥ್ಯದ ಅನುರೂಪತೆ) ನಿಯಮಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ, ವಿನಿಮಯ ದರದ ವಿಷಯದಲ್ಲಿ ಐದನೇ ದೊಡ್ಡ ಆರ್ಥಿಕತೆಯಾಗಿದೆ. ಕೋವಿಡ್ ನಂತರದ ಭಾರತದ ಚೇತರಿಕೆಯು ಅತ್ಯಂತ ವೇಗವಾಗಿದ್ದು, ಮುಂದಿನ ಆರ್ಥಿಕ ಬೆಳವಣಿಗೆಯು ದೇಶೀಯ ಬೇಡಿಕೆಯ ಮೇಲೆ ಆಧಾರಿತವಾಗಿದೆ ಎಂದು ತಿಳಿಸಿದರು.
ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಸಿದ್ಧಪಡಿಸಿರುವ ಮತ್ತು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಅವರ ಮೇಲ್ವಿಚಾರಣೆಯಲ್ಲಿ ರಚನೆಗೊಂಡಿರುವ ಆರ್ಥಿಕ ಸಮೀಕ್ಷೆಯ ದಾಖಲೆಗಳನ್ನು ಇಂದು ಲೋಕಸಭೆಯಲ್ಲಿ ಹಣಕಾಸು ಸಚಿವೆ ಮಂಡಿಸಿದರು. ದೇಶದ ಆರ್ಥಿಕತೆಯ ಸ್ಥಿತಿ ಮತ್ತು ಪ್ರಸ್ತುತ ಹಣಕಾಸಿನ ವಿವಿಧ ಸೂಚಕಗಳ ಒಳನೋಟಗಳನ್ನು ಆರ್ಥಿಕ ಸಮೀಕ್ಷೆ ನೀಡುತ್ತದೆ.
ಇದನ್ನು ಓದಿ: “ಆರ್ಥಿಕ ಸಮೀಕ್ಷೆ” ವಾಸ್ತವತೆಯನ್ನು ಮರೆಮಾಚುವ ವಂಚಕ ಕಸರತ್ತು – ಸಿಪಿಐ(ಎಂ) ಕೇಂದ್ರ ಸಮಿತಿ ಟೀಕೆ
ನಾಳೆ(ಫೆ. 1ರಂದು) ಕೇಂದ್ರ ಸರ್ಕಾರದ ಬಜೆಟ್-2023-24 ಮಂಡನೆಯಾಗಲಿದೆ. ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವುದು ವಾಡಿಕೆಯಾಗಿದೆ. ಈ ಬಾರಿ ಬಜೆಟ್ ದಾಖಲೆಗಳು ಆಂಡ್ರಾಯ್ಡ್ ಮತ್ತು ಆಪಲ್ ಓಎಸ್ ಪ್ಲಾಟ್ಫಾರ್ಮ್ಗಳಲ್ಲಿ ‘ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್’ನಲ್ಲಿ ಲಭ್ಯವಿರುತ್ತವೆ.
2024ರ ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಮೋದಿ ಸರ್ಕಾರದ ಎರಡನೇ ಅವಧಿಯ ಪೂರ್ಣ ಬಜೆಟ್ ಮಂಡನೆ ನಾಳೆಯಾಗಲಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ