ನಿರಂಜನ ಎಂದರೆ ಚಿರಸ್ಮರಣೆ, ಮೃತ್ಯಂಜಯ ಮಾತ್ರವಲ್ಲ; ಆಧುನಿಕ ಮನಸ್ಸಿನ ಪ್ರಯೋಗಶೀಲ ಸಾಹಿತಿ – ಪ್ರೊ. ರಾಜೇಂದ್ರ ಚೆನ್ನಿ.

ಬೆಂಗಳೂರು: ನಿರಂಜನ ಎಂದರೆ ‘ಚಿರಸ್ಮರಣೆ’, ‘ಮೃತ್ಯುಂಜಯ’ ಕಾದಂಬರಿಗಳು ಮಾತ್ರವಲ್ಲ. ಆಧುನಿಕ ಮನಸ್ಸಿನ ಪ್ರಯೋಗಶೀಲ ಸಾಹಿತಿ ಎಂದು ಸಾಹಿತಿ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಹೇಳಿದರು. ಚಿರಸ್ಮರಣೆ

ಸಾಹಿತ್ಯ ಕೃತಿಯೊಳಕ್ಕೆ ಓದುಗರನ್ನು ಕೈಹಿಡಿದು ಕರೆದುಕೊಂಡು ಹೋಗುತ್ತಾರೆ ಎನ್ನುವಷ್ಟು ಓದುಗ ಸ್ನೇಹಿ, ಆಪ್ತ ಬರಹ ಎಂಬ ಖ್ಯಾತಿಯ ಪ್ರಗತಿಪರ ಸಾಹಿತಿ, ‘ನಿರಂಜನ’ ಎಂದೇ ಹೆಸರಾದ ‘ಕುಳಕುಂದ ಶಿವರಾಯ’ರ ಜನ್ಮ ಶತಮಾನೋತ್ಸವದ ವರ್ಷಾಚರಣೆಯ ಸಮಾರೋಪವು ಇಂದು ಬೆಂಗಳೂರಿನಲ್ಲಿ ನಡೆಯಿತು. ‘ಕ್ರಿಯಾ ಮಾಧ್ಯಮ’, ‘ಜನ ಶಿಕ್ಷಣ ಟ್ರಸ್ಟ್’ ಜಂಟಿಯಾಗಿ ಈ ‘ನಿರಂಜನ ಶತಮಾನ ಸಮಾರೋಪ ಮತ್ತು ವಿಚಾರ ಸಂಕಿರಣ ಮತ್ತು ನಿರಂಜನ ಮರು ಓದು ಸರಣಿ ಬಿಡುಗಡೆ.’ ಸಮಾರಂಭವನ್ನು ಸಂಘಟಿಸಿದ್ದವು. ಚಿರಸ್ಮರಣೆ

ಕನ್ನಡ ಸಾಹಿತ್ಯದಲ್ಲಿ ಯಾಕೆ ನಿರಂಜನರನ್ನು ಮರೆಯಲಾಗಿದೆ ಎಂದರೆ ಇದು ಫ್ಯಾಸಿವಾದ ಮತ್ತು ಕೋಮುವಾದದ ಕಾಲ. ಈ ಕಾಲಘಟ್ಟದಲ್ಲಿ ನಿರಂಜನರ ಮರು ಓದು ಅಗತ್ಯ. ಕಥಾ ಸಾಹಿತ್ಯ, ಕಾದಂಬರಿ, ಅಂಕಣ ಬರಹಗಳಲ್ಲಿ ನಿರಂಜನರು ವೈವಿಧ್ಯಮಯ ಪ್ರಯೋಗಗಳನ್ನು ಮಾಡಿದರು. ಸು.2000 ಅಂಕಣ ಬರಹಗಳನ್ನು ಬರೆದರು. ಈಗ ಅವುಗಳ ಸಮರ್ಪಕ ಮೌಲ್ಯ ಮಾಪನ ಆಗಬೇಕಾಗಿದೆ. ಪತ್ರಿಕೋದ್ಯಮದಲ್ಲಿಯೂ ನಿರಂಜನ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಸಾಹಿತ್ಯವನ್ನು ಶತಮಾನೋತ್ಸವ ಸಂದಭದಲ್ಲಿ ಪುಸ್ತಕ ರೂಪದಲ್ಲಿ ತಲುಪಿಸುವುದು ಅಗತ್ಯ ಎಂದರು. ಬರಹಗಾರರ ಮೇಲಿನ ಸಾಮಾಜಿಕ ಜವಾಬ್ದಾರಿ ಬಗೆಗೆ ನಿರಂಜನರು ಸಾಕಷ್ಟು ಬರೆದಿದ್ದಾರೆ ಎಂದರು. ಚಿರಸ್ಮರಣೆ

ಇದನ್ನೂ ಓದಿ: ಆರ್‌ಎಸ್‌ಎಸ್ ಪಥಸಂಚಲನ: ಮತ್ತೊಂದು ಶಾಂತಿ ಸಭೆ ನಡೆಸಲು ಹೈಕೋರ್ಟ್‌ ಸೂಚನೆ

ಕುವೆಂಪು ಅವರು ‘ಮತಭ್ರಾಂತಿ’ ‘ಮತಿಭ್ರಾಂತಿ’ ಎಂದು ಯಾವುದನ್ನು ಕರೆದರೋ ಆ ಸಂಕುಚಿತ (ಉಗ್ರ) ರಾಷ್ಟ್ರೀ ಯತೆಯ ಕುರಿತು ನಿರಂಜನರು ’ಜನ ಜಾಗೃತಿ’ ಎಂದು ವ್ಯಂಗ್ಯವಾಗಿ ಹೇಳಿ ಅರಿವು ಮೂಡಿಸಿದರು. ‘ಮತಿ ಭ್ರಾಂತಿ’, ‘ಮತಭ್ರಾಂತಿ’, ಫ್ಯಾಸಿಸ್ಟ್ ವ್ಯವಸ್ಥೆಯಲ್ಲಿ ಜಂಟಿಯಾಗಿ ಕೆಲಸ ಮಾಡುತ್ತವೆ. ಖ್ಯಾತ ಚಿಂತಕ ಗ್ರಾಮ್ಷಿ ಹೇಳುವಂತೆ ೩೦ ರ ದಶಕದ ಇಟಲಿಯಲ್ಲಿನ ‘ಫ್ಯಾಸಿಸಂ’ನ ಅರ್ಥ ಮಾಡಿಕೊಳ್ಳಬೇಕಾದರೆ ಇಟಲಿಯ ಕೃಷಿಯನ್ನು ನೋಡಬೇಕು. ಅಲ್ಲಿನ ಉದ್ಯೋಗಿಗಳ ಮತ್ತು ಕಾರ್ಮಿಕರ ಚಳುವಳಿಯನ್ನು ನೋಡಬೇಕು. ಈ ತಿಳುವಳಿಕೆ ನಿರಂಜನರಿಗೂ ಇತ್ತು ಎಂದು ಚೆನ್ನಿ ಹೇಳಿದರು.

ನಿರಂಜನರನ್ನು ಕೇವಲ ಪ್ರಗತಿಶೀಲರ ಪ್ರತಿನಿಧಿಯಾಗಿ ನೋಡಬಾರದು. ಎಲ್ಲವನ್ನೂ ಪ್ರಗತಿಶೀಲದ ಚೌಕಟ್ಟಿನಲ್ಲಿ ನೋಡಬಾರದು. ನೋಡಿದರೆ ಪ್ರಗತಿಶೀಲವನ್ನು ಮೀರಿದ ಹಲವು ನಿರಂಜರ ಸೂಕ್ಷö್ಮತೆಗಳು ತಪ್ಪಿ ಹೋಗುತ್ತದೆ ಎಂದೂ ರಾಜೇಂದ್ರ ಚೆನ್ನಿ ಹೇಳಿದರು.

ಲೇಖಕರು ಸಾಮಾಜಿಕ ‘ಬದ್ಧತೆ’ ಇಟ್ಟುಕೊಳ್ಳುವುದು ಎಂದರೆ ಕಣ್ಣು ಪಟ್ಟಿ ಕಟ್ಟಿಕೊಳುವುದು, ಸೂಕ್ಷ್ಮತೆಯನ್ನು ಬಿಟ್ಟು ಕೊಡುವುದು, ಯಾವುದೋ ಸಿದ್ದಾಂತಕ್ಕೆ ಕಟ್ಟು ಬೀಳುವುದು ಎಂಬೆಲ್ಲಾ ಟೀಕೆಗಳಿವೆ. ಆದರೆ ನಿರಂಜನರು ಲೇಖಕನಾಗಿ ಜೀವನಕ್ಕೆ ‘ಬದ್ಧತೆ’ ಇದೆ ಎಂದು ಹೇಳಿದರು.

ಈ ಜೀವನದಲ್ಲಿ ಜಾತಿ, ಪುರುಷಾಧಿಪತ್ಯ, ಕೋಮುವಾದ ಎಲ್ಲವೂ ಇವೆ. ಮೇಲೆ ಮೇಲೆ ಉದಾರವಾದಿ, ಮಾನವೀಯತೆ ಇದ್ದರೆ ಸಾಲದು. ಇನ್ನೂ ಮುಂದೆ ಹೋಗಬೇಕೆಂದರೆ ಸಮಾಜ ರಚನೆಯ ಒಳಗೆ ಆಳವಾಗಿ ಬೇರೂರಿವಂತಹ ವಿಷಯಗಳನ್ನು ಗಮನಿಸಬೇಕು. ನಾನು ‘‘ಬದುಕು ಎಂದರೆ ಏನು ? ಅನ್ನುವುದನ್ನೂ ಸಹ ವಿಮರ್ಶೆ ಮಾಡುತ್ತೇನೆ’’ ಎಂಬುದು ನಿರಂಜನ ಅವರ ನಿಲುವು ಎಂದರು.

ಸಾಮಾಜಿಕ ಬದ್ಧತೆ ಕಾಪಾಡಿಕೊಳ್ಳುವುದು ವ್ಯಕ್ತಿಗತವಾಗಿ ಸಾಧ್ಯ ಆಗುವುದಿಲ್ಲ ಆದ್ದರಿಂದ ಒಂದು ಪಕ್ಷ, ಒಂದು ಸಂಘಟನೆ ಅಗತ್ಯ ಎಂಬುದು ನಿರಂಜನ ತಿಳುವಳಿಕೆಯಾಗಿತ್ತು. ಸಾಹಿತಿ ಒಂದು ಪಕ್ಷಕ್ಕೆ ಒಂದು ಸಿದ್ದಾಂತಕ್ಕೆ ಬದ್ಧತೆ ಉಳ್ಳವರಾಗಿದ್ದರೆ ಸೃಜನಶೀಲತೆ ಶುಷ್ಕವಾಗುತ್ತದೆ ಎಂಬ ವಾದಗಳಿದ್ದರೂ ನಿರಂಜನ ಒಂದು ಪಕ್ಷಕ್ಕೆ ಒಂದು ಸಿದ್ಧಾಂತಕ್ಕೆ ಬದ್ಧವಾಗಿ ಬರೆದರು ಎಂದು ಚೆನ್ನಿ ಹೇಳಿದರು.

‘ವಾಗ್ದೇವಿ’ – ಹೆಣ್ಣನ್ನು ಲೈಂಗಿಕವಾಗಿ ಶೋಷಣೆ ಮಾಡುವ ಸ್ವಾಮಿ ಮತ್ತು ಆ ಮಠದ ವಿರುದ್ಧದ ಕೃತಿ. ಇಂದಿರಾ ಬಾಯಿಯೂ ಸಹ ಸ್ತ್ರೀ ಸಂವೇದನೆಯುಳ್ಳ ಕೃತಿ. ‘ಪಾಲಿಗೆ ಬಂದದ್ದೆ ಪಂಚಾಮೃತ’ – ಕಾದಂಬರಿಯಲ್ಲಿ ಗಂಡ ಎನ್ನುವವನು, ಹೆಂಡತಿಯ ಅಸ್ತಿತ್ವವೇ ಇರಬಾರದು ಎಂಬ ಸಾಧಿಸುವ ಕ್ರೌರ್ಯವನ್ನು ನಿರೂಪಿಸಿದ್ದಾರೆ ಎಂದೂ ಚೆನ್ನಿ ಹೇಳಿದರು.

ಗಂಭೀರ ಸಾಹಿತ್ಯ ಜನಪ್ರಿಯ ಸಾಹಿತ್ಯ ಕಂದರ ಎಂಬ ಸೃಷ್ಟಿ ಕನ್ನಡದ್ದಲ್ಲ. ನಿರಂಜನರ ಮಾಧ್ಯಮ ಬರಹದ ಮೂಲಕ ಜನಪ್ರಿಯ ಮಾದರಿಯನ್ನು ಸಾಹಿತ್ಯದ ತಂತ್ರವಾಗಿ ಬಳಸಿ ಸಾಹಿತ್ಯವನ್ನು ಮೇಲೆತ್ತಿದರು. ನಿರಂಜನ ಜನಪ್ರಿಯ ತಂತ್ರಗಳನ್ನು ಗಂಭೀರವಾಗಿ ಬಳಸಿಕೊಳ್ಳುತ್ತಾರೆ. ನಿರಂಜನರ ಸ್ತ್ರೀ ಪಾತ್ರಗಳು ಯಾರೂ ನಿರೀಕ್ಷೆ ಮಾಡದಂತಹ ರೀತಿಯಲ್ಲಿ ಇರುತ್ತದೆ. ‘ಚಿರಸ್ಮರಣೆ’, ‘ಮೃತ್ಯುಂಜಯ’ ಕಾದಂಬರಿಗಳಲ್ಲಿ ಸಮಾಜದ ಬಗೆಗೆ ಕಲಿಯುವ ಶಿಕ್ಷಣಶಾಸ್ತç ಇದೆ. ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯವನ್ನು ಅವು ನಿರೂಪಿಸುತ್ತವೆ. ಅವು ಕಾಸರಗೋಡಿನ ಹಳ್ಳಿಯಲ್ಲಿ ಹುಟ್ಟಿ, ಅವತ್ತಿನ ಕಾಲದ ಜಾಗತಿಕ ಸಮಸ್ಯೆಯನ್ನು ಎತ್ತಿಕೊಳ್ಳುತ್ತವೆ ಎಂದು ಚೆನ್ನಿ ವಿವರಿಸಿದರು.

ನಿರಂಜನರ ಕಥನ ಸಾಹಿತ್ಯದಲ್ಲಿ ಮಹಿಳಾ ಪ್ರಶ್ನೆ ಕುರಿತು ಮಾತನಾಡಿದ ಬರಹಗಾರ್ತಿ ಎನ್. ಗಾಯಿತ್ರಿಯವರು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ, ಮಹಿಳೆಯ ಅಧೀನತೆ ವಾಸ್ತವತೆ ಬಗೆಗೆ ಮಾತನಾಡುತ್ತಿದ್ದೇವೆ. ಅದೀನತೆ ಹೇಗೆ ಕಾರಣ ಏನು ಎಂದು ಚರ್ಚೆ ಈಗ ನಡೆಯತ್ತಿದೆ. ಲಿಂಗ ರಾಜಕೀಯದ ಪ್ರಶ್ನೆ ಇಟ್ಟುಕೊಂಡು ನಿರಂಜನರು 150 ಕ್ಕೂ ಹೆಚ್ಚು ಕತೆ ಬರೆದಿದ್ದಾರೆ. ನಿರಂಜನರ ವಿಶೇಷ ಏನೆಂದರೆ ಕತೆಗೆ ಹಿನ್ನಲೆ, ಪ್ರೇರಣೆ ಏನು ಎಂದು ಕತೆಗೂ ಮುನ್ನುಡಿ ಬರೆದಿರುವುದು ಎಂದರು.

‘ಬನಶಂಕರಿ’ ಕಾದಂಬರಿಯಲ್ಲಿ 11 ವರ್ಷಕ್ಕೆ ವಿಧವೆಯಾದ, 30 ನೇ ವಯಸ್ಸಿನಲ್ಲಿ ಮಗು ಹಡೆದ ಹೆಣ್ಣಿನ ಕತೆ ಚಿತ್ರಣಗೊಂಡಿದೆ. 1954 ರಲ್ಲಿ ಬರೆದ ಬನಶಂಕರಿ ಅವರ ಬದುಕಿನ ಅನುಭವದ ಗಟ್ಟಿ ಸೆಲೆ ಆಗಿದೆ. ಪುರುಷ ಪ್ರಧಾನ ಸಮಾಜಿಕ ವ್ಯವಸ್ಥೆಯಲ್ಲಿ ಕ್ರೌರ್ಯ ಅಡಗಿದೆ. ಮದುವೆ ಎಂಬ ಸಂಸ್ಥೆಯಲ್ಲಿ ಇರುವ ಕ್ರೌರ್ಯವನ್ನು, ‘ಪಾಲಿಗೆ ಬಂದದ್ದೆ ಪಂಚಾಮೃತ’ ಕೃತಿಯಲ್ಲಿ ನಿರೂಪಿಸಲಾಗಿದೆ ಎಂದರು.

1950 ರ ದಶಕ ಮೊದಲ ಭಾಗದಲ್ಲಿ ದೇಶದಲ್ಲಿ ‘ಹಿಂದೂ ಕೋಡ್ ಬಿಲ್’ – ಬಂತು. ಅದು ಅಂಬೇಡ್ಕರರ ಕನಸಿನ ರೀತಿಯಲ್ಲಿ ಬರಲಿಲ್ಲವಾದರೂ ಒಂದು ಹಿಂದೂ ಧಾರ್ಮಿಕ ಕಾಯ್ದೆ ಬಂತು. ಆ ವ್ಯಾಪಕ ಚರ್ಚೆಯನ್ನು ನಿರಂಜನರ ಕಾದಂಬರಿಗಳಲ್ಲಿ ನೋಡಬಹುದು. ಈ ಕಾಯ್ದೆಯ ಹಲವಾರು ಅಂಶಗಳು ವಿಚಾರಗಳ ಕಲಿಕೆಯ ತಂತ್ರವಾಗಿ ಕಾದಂಬರಿಯಲ್ಲಿ ಬರುತ್ತದೆ.

ಮಾರ್ಕ್ಸ್-ಲೆನಿನ್ ತತ್ವಗಳಿಗೆ ಬದ್ಧತೆ ಬಿಟ್ಟುಕೊಡದೆ, ಸ್ತ್ರೀ ಕೇಂದ್ರಿತವಾಗಿ, ಆಕೆ ಒಟ್ಟು ಸಮಾಜದ ಭಾಗ ಎಂಬಂತೆ ನಿರಂಜನರು ಸಾಹಿತ್ಯ ರಚಿಸಿದ್ದಾರೆ ಎಂದು ಎನ್. ಗಾಯಿತ್ರಿ ಅವರು ಹೇಳಿದರು.

ಜ್ಞಾನ ಸಾಹಿತ್ಯಕ್ಕೆ ನಿರಂಜನರ ಕೊಡುಗೆ ವಿಷಯದ ಕುರಿತು ಮಾತನಾಡಿದ ಸಾಹಿತಿ ಪ್ರೊ. ಎಂ.ಜಿ. ಹೆಗಡೆಯವರು ಮಾತನಾಡಿ, ‘ಜ್ಞಾನ ಗಂಗೋತ್ರಿ’ – ‘ವಿಶ್ವ ಕಥಾಕೋಶ’ ಇವೆರಡು ನಿರಂಜನರು ನೇತೃತ್ವದಲ್ಲಿ ಸಂಪಾದಿಸಿದ ಮಹತ್ವದ ಕೃತಿಗಳು. ಇವು ತಂಡದ ಕೆಲಸ. ಲೇಖನ ಬರೆದವರ ತಂಡ, ಅನುವಾದ ಮಾಡಿದರವರ ತಂಡ, ಕರಡು ತಿದ್ದುವ ತಂಡ. ಎಲ್ಲರೂ ಸೇರಿ ಮಾಡಿದ ಸಾಮೂಹಿಕ ಕೆಲಸ. ಅದರೆ ಆ ತಂಡದಲ್ಲಿದ್ದ ಎಲ್ಲರೂ ನಿರಂಜನರ ತ್ಯಾಗದ ಬಗೆಗೆ ಬರೆದಿದ್ದಾರೆ.

ಈ ಕೃತಿಗಳನ್ನು ತರುವ ಪರಿಕಲ್ಪನೆ ಸ್ವತಃ ನಿರಂಜನರದ್ದು. ಅನಾರೋಗ್ಯದ ನಡುವೆಯೂ ನಿರಂಜನ ಅದಕ್ಕಾಗಿ ಶ್ರಮಿಸಿದರು ಎಂದು ಪ್ರೊ. ಎಂ.ಜಿ. ಹೆಗಡೆಯವರು ಹೇಳಿದರು. ಯಾವುದು ಜಗತ್ತನ್ನು ವ್ಯಾಪಿಸಿಕೊಳ್ಳದಿರುವುದು ಶಿಕ್ಷಣವೇ ಅಲ್ಲ. ವಿಜ್ಞಾನ, ಸಮಾಜ ವಿಜ್ಞಾನ ಎಲ್ಲವೂ ಮಹತ್ವದ್ದು. ಜ್ಞಾನ ಯಾವತ್ತೂ ಬದಲಾಗುತ್ತಿರುತ್ತದೆ. ನಮ್ಮ ಜ್ಞಾನವು ನಿರಂತರವಾಗಿ ಪರಿಷ್ಕರಣೆ ಆಗುತ್ತಿರಬೇಕು ಎಂಬುದು ನಿರಂಜನರ ಧೋರಣೆಯಾಗಿತ್ತು. ಮಹಿಳೆಯರ ಕತೆಗಳು ಕಡಿಮೆ ಎಂಬ ಕೊರತೆ ಇದ್ದಾಗಲೂ, ವಿಶ್ವ ಕಥಾಕೋಶ ಅದ್ಭುತವಾದದ್ದು. ‘ಹೆಜ್ಜೆ’ ಎನ್ನುವುದು ಮನುಷ್ಯನ ಉಗಮದಿಂದ ಚಂದ್ರನ ಮೇಲೆ ಕಾಲೂರಿದವರೆಗಿನ ಕಾದಂಬರಿ.

ನಿರಂಜರ ರಾಷ್ಟ್ರೀಯತೆಯ ಪರವಾಗಿಯೂ ಬರೆದಿದ್ದಾರೆ. ಕರ್ನಾಟಕದ ಏಕೀಕರಣ, ನಾಡು ನುಡಿಗಳನ್ನೂ ಮೀರಿದ ಮನುಷ್ಯನ ಸಂಕಟ, ನೋವು ಬಂಧನ ಹೋರಾಟ, ವಿಮೋಚನೆ ಎಲ್ಲವುಗಳ ಬಗೆಗೆ ಬರೆದಿದ್ದಾರೆ ಎಂದೂ ಹೆಗಡೆಯವರು ಹೇಳಿದರು. ಚಿರಸ್ಮರಣೆ

ಗೋಷ್ಠಿಯ ಆರಂಭದಲ್ಲಿ ‘ಸರಣಿ ಸಂಪಾದಕರ’ ಮಾತುಗಳನ್ನು ಆಡಿದ, ನಿರಂಜನರ ಪುತ್ರಿ ತೇಜಸ್ವಿನಿ ನಿರಂಜನ ಅವರು ನಿರಂಜನರ ಕುರಿತ ಕೃತಿಗಳನ್ನು ಪರಿಚಯಿಸಿದರು. ಆರಂಭದಲ್ಲಿ ಲೇಖಕರು ಮತ್ತು ಕ್ರಿಯಾ ಮಾಧ್ಯಮದ ಪ್ರಕಾಶಕರೂ ಆದ ಎನ್.ಕೆ. ವಸಂತ್ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು.

ಇದನ್ನೂ ನೋಡಿ: ನಿರಂಜನ ಶತಮಾನ ಸಮಾರೋಪ ವಿಚಾರ ಸಂಕಿರಣ | ನಾಲ್ಕು ಪುಸ್ತಕಗಳ ಬಿಡುಗಡೆ ಮತ್ತು ಪರಿಚಯ

Donate Janashakthi Media

Leave a Reply

Your email address will not be published. Required fields are marked *