ನೀನೊಬ್ಬ ಮನುಷ್ಯ, ಆಜ್ಞೆಯನ್ನು ಪಾಲಿಸುವ ಯಂತ್ರವಲ್ಲ

ಕಿರಣ್‌ ಗಾಜನೂರು

ಐಕ್ ಮನ್ ಎಂಬ ಕಮಾಂಡರ್‌ ಅಡಾಲ್ಫ್  ಹಿಟ್ಲರ್ ಸೈನ್ಯದಲ್ಲಿದ್ದ ಒಬ್ಬ ಪೊಲೀಸ್‌ ಅಧಿಕಾರಿ..!

ಹಿಟ್ಲರ್ ಆದೇಶದ ಅನ್ವಯ ಲಕ್ಷಾಂತರ ಯೆಹೂದಿಗಳ ಕೊಲೆಗೆ ಬೇಕಾದ ಸಿದ್ಧತೆಗಳನ್ನು ಮಾಡುವ ಜವಾಬ್ದಾರಿ ನಿರ್ವಹಿಸಿದವ.

ಹಿಟ್ಲರ್ ಮರಣದ ನಂತರ ಆತ ದೇಶಬಿಟ್ಟು ಓಡಿಹೋಗಿರುತ್ತಾನೆ, 1960ರಲ್ಲಿ ಇಸ್ರೇಲಿನ ಮೋಸ್ಸಾದ್ ಆತನನ್ನು  ಪತ್ತೆಹಚ್ಚಿ ಅಪಹರಿಸಿ ಇಸ್ರೇಲಿಗೆ   ಕರೆತರುತ್ತದೆ. ಅಲ್ಲಿ ಎರಡು ವರ್ಷಗಳ ಕಾಲ ಆತನ ವಿಚಾರಣೆ ನಡೆದು1962ರಲ್ಲಿ  ಮರಣದಂಡನೆ ವಿಧಿಸಲಾಗುತ್ತದೆ.

ಈತನ ವಿಚಾರಣೆಯನ್ನು ವರದಿ ಮಾಡಿದ್ದು ಖ್ಯಾತ ರಾಜಕೀಯ ವಿದ್ವಾಂಸೆ ಹನಾ ಆರೆಂಡ್ತ್ ಐಕ್ ಮನ್ ಹೇಳಿದ “ಒಬ್ಬ ಮಿಲಿಟರಿ ಅಧಿಕಾರಿಯಾಗಿ ನಾನು ನನಗೆ ವಹಿಸಿದ ಕೆಲಸವನ್ನಷ್ಟೆ ಮಾಡಿದೆ ಲಕ್ಷಾಂತರ ಜನರನ್ನು ಕೊಂದ ನನ್ನ ಕೃತ್ಯ ನನಗೆ ತಪ್ಪು ಅನ್ನಿಸಿಲ್ಲʼʼ ಎಂದು ನಿರುದ್ವಿಗ್ನ/ನಿರ್ಲಿಪ್ತತೆಯಿಂದ ಮಾತನಾಡಿದ್ದನ್ನು ಕಂಡು ಆಶ್ಚರ್ಯಗೊಳ್ಳುತ್ತಾಳೆ…!

ಲಕ್ಷಾಂತರ ಜನರ ಕಗ್ಗೊಲೆಯ ನಂತರವೂ ಮನುಷ್ಯ ಮಾತ್ರರಿಗೆ ಈ ಯಾಂತ್ರಿಕ ನಿರ್ಲಿಪ್ತತೆ ಹೇಗೆ ಸಾಧ್ಯ? ಎಂಬ ಪ್ರಶ್ನೆಯನ್ನು ಆಧರಿಸಿ ಹನಾ ಆರೆಂಡ್ತ್ ಧರ್ಮಗಳ ಹೆಸರಿನಲ್ಲಿ ಮನುಷ್ಯರ ಹತ್ಯಾಕಾಂಡ ನಡೆಸಿದ ಕೊಲೆಪಾತಕ ಮನಸ್ಥಿತಿಯ ಕುರಿತು ಅಧ್ಯಯನ ಮಾಡಿ ‘Banality of Evil’ ಎಂಬ ಪ್ರಖ್ಯಾತ ಪ್ರಬಂಧ ಬರೆಯುತ್ತಾರೆ…!

ನೀನು ನಿನ್ನ ಕರ್ತವ್ಯವನ್ನು ಎಷ್ಟೆ ನಿರ್ಲಿಪ್ತತೆಯಿಂದ ನಿರ್ವಹಿಸಿದ್ದರೂ ನೀನೊಂದು ಆಜ್ಞೆಯನ್ನು ಪಾಲಿಸುವ ಯಂತ್ರವಲ್ಲ ಬದಲಾಗಿ ಒಬ್ಬ ಮನುಷ್ಯ ಎಂಬುದು ನಿನಗೆ ನೆನಪಿರಬೇಕಿತ್ತು…! ನೀವು ಹಾಗೆ ಯೋಚಿಸಲಾರೆ ಎಂದಾದರೇ ನೀನು ಮೂಲತಃ ಮನುಷ್ಯನಾಗಿರುವುದಕ್ಕೆ ಸಾಧ್ಯವೇ ಇಲ್ಲ ಎಂಬ ವಾದವನ್ನು ಐಕ್ ಮನ್ ಕುರಿತಂತೆ ಹನ್ನಾ ಮಂಡಿಸುತ್ತಾಳೆ…!

ಬದಲಾದ ಕಾಲದಲ್ಲಿ ಮತ್ತೆ ನಾವು ಹಳೆಯ ರಾಜಕೀಯ ವ್ಯವಸ್ಥೆಯ ಕಡೆ ಚಲಿಸುತ್ತಿದ್ದೇವೆಯಾ….? ನಮ್ಮ  “ಆಡಳಿತ ವ್ಯವಸ್ಥೆಯಲ್ಲಿ ಮತ್ತೆ ಐಕ್ ಮನ್ ಮನಸ್ಥಿತಿ ತುಂಬಿಸಲಾಗುತ್ತಿದೆಯೇ ಎಂಬ ಸಂದೇಹ ಕಾಡಲಾರಂಭಿಸಿದೆ…!

ಜೀಪ್ ಹತ್ತಿಸಿ ರೈತರನ್ನು ಕೊಲ್ಲು, ಧರ್ಮ‌ಗ್ರಂಥ ಮುಟ್ಟಿದ ಕಾರಣಕ್ಕೆ ದಲಿತನನ್ನು ಕೊಚ್ಚು, ಎರಡು ಧರ್ಮಿಯರು ಒಟ್ಟಿಗೆ ಇದ್ದರೆ ಬಡಿ ಅವು ಯಾವುವು ತಪ್ಪಲ್ಲ ಎಂಬ ಧೋರಣೆಗಳು ಐಕ್-ಮನ್ ಮನಸ್ಥಿತಿಗಳೇ…? ಗಾಂಧಿಯನ್ನು ಕೊಂದ ಗೊಡ್ಸೆ ಸಹ “ನಾನು ಯಾಕೆ ಗಾಂಧಿಯನ್ನು ಕೊಂದೆ” ಎಂಬ ವಾದ ಮಂಡಿಸುವ ಮೂಲಕ ತಾನು ಮಾಡಿದ ಕೊಲೆಗೆ ನೈತಿಕ(?) ಸಮರ್ಥನೆಯನ್ನು ಧರ್ಮದ ಹೆಸರಿನಲ್ಲಿ ನೀಡುವ ವಿಫಲ ಯತ್ನ ಮಾಡಿದ್ದೂ ಐಕ್-ಮನ್ ಮಾನಸಿಕತೆಯೇ…!

ಮನುಷ್ಯನ ಈ ಮಾದರಿಯ ಕ್ರೌರ್ಯವನ್ನು ರಾಗಾತೀತವಾಗಿ ನಿಯಂತ್ರಿಸಬೇಕಾದ ಪೊಲೀಸ್ ವ್ಯವಸ್ಥೆಯ ಕೆಲವು ಮಂದಿ, ನಾಗರಿಕ ಸಮಾಜದ ಒಂದು ವರ್ಗ ತಲುಪುತ್ತಿರುವ ಸ್ಥಿತಿ ಯಾಕೋ ಭಯವನ್ನು ಇಮ್ಮುಡಿಗೊಳಿಸುತ್ತಿದೆ…!

Donate Janashakthi Media

Leave a Reply

Your email address will not be published. Required fields are marked *