ನವದೆಹಲಿ: ಇತ್ತೀಚಿಗಷ್ಟೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದ್ದ 9 ಮಂದಿ ನ್ಯಾಯಾಧೀಶರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಕರ್ನಾಟಕದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರೊಂದಿಗೆ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ, ವಿಕ್ರಮ್ ನಾಥ್, ಜಿತೇಂದ್ರ ಕುಮಾರ್ ಮಹೇಶ್ವರಿ, ಹಿಮಾ ಕೋಹ್ಲಿ, ಸಿ ಟಿ ರವಿಕುಮಾರ್, ಎಂ ಎಂ ಸುಂದ್ರೇಶ್, ಬೇಲಾ ತ್ರಿವೇದಿ ಮತ್ತು ಪಿ ಎಸ್ ನರಸಿಂಹ ಅವರಿಗೆ ಪ್ರಮಾಣವಚನ ಸ್ವೀಕರಿಸಿದರು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಪ್ರಮಾಣವಚನ ಬೋಧಿಸಿದರು.
ನ್ಯಾಯಾಲಯದ ಎಪ್ಪತ್ತು ವರ್ಷದ ಇತಿಹಾಸದಲ್ಲಿ ಒಂದೇ ದಿನ ಒಂಬತ್ತು ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದು ಇದೇ ಮೊದಲು ಎನ್ನಲಾಗಿದೆ.
ಇದನ್ನು ಓದಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಿ.ವಿ. ನಾಗರತ್ನ ಹೆಸರು ಶಿಫಾರಸು
ನೂತನವಾಗಿ ಒಂಭತ್ತು ಮಂದಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯಾಬಲ 33ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸುಪ್ರೀಂ ನ್ಯಾಯಾಲಯದಲ್ಲಿ ಒಂದು ಸ್ಥಾನ ಮಾತ್ರ ಖಾಲಿ ಇದೆ. ಸುಪ್ರೀಂಕೋರ್ಟ್‌ನಲ್ಲಿ 34 ನ್ಯಾಯಮೂರ್ತಿಗಳ ಸ್ಥಾನವನ್ನು ಹೊಂದಿದ್ದು, ಈ ಪೈಕಿ 33 ಸ್ಥಾನಗಳು ಭರ್ತಿಯಾಗಿದೆ.
ಸುಪ್ರೀಂ ಕೋರ್ಟಿನ ಕೊಲಿಜಿಯಂ 9 ಮಂದಿ ನ್ಯಾಯಾಧೀಶರ ನೇಮಕಾತಿ ಕುರಿತಂತೆ ಆಗಸ್ಟ್ 17 ರಂದು ಶಿಫಾರಸು ಮಾಡಿತ್ತು. ಆಗಸ್ಟ್ 26 ರಂದು ಕೇಂದ್ರ ಸರ್ಕಾರ ಇದಕ್ಕೆ ಅನುಮೋದನೆ ನೀಡಿತ್ತು. ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದರು.
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಅಭಯಶ್ರೀನಿವಾಸ ಓಕಾ, ನ್ಯಾಯಮೂರ್ತಿ ಬಿ.ವಿ.ನಾಗರತ್ನ, ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್, ಸಿಕ್ಕಿಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿತೇಂದ್ರಕುಮಾರ್ ಮಹೇಶ್ವರಿ, ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾಕೋಹ್ಲಿ, ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್, ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್, ಗುಜರಾತ್ ಹೈಕೋರ್ಟ್‌ನ ಬೇಲಾ ಎಂ. ತ್ರಿವೇದಿ ಮತ್ತು ಹಿರಿಯ ವಕೀಲ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಇವರುಗಳು ಸುಪ್ರೀಂ ನ್ಯಾಯಮೂರ್ತಿಗಳಾಗಿ ಪದನ್ನೋತಿ ಹೊಂದಿದರು.
ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ 2027ರ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 29ರವರೆಗೆ ನೇಮಕಗೊಳ್ಳುವ ಸಾಧ್ಯತೆ ಇದೆ. ಹೈಕೋರ್ಟ್ ನ್ಯಾಯಾಧೀಶರ ನಿವೃತ್ತ ವಯಸ್ಸು 62 ವರ್ಷವಿದ್ದರೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷವಾಗಿದೆ.
ಈ ಮೂಲಕ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಅಲ್ಪಾವಧಿ ಹುದ್ದೆಗೆ ಏರಿದ ಕೀರ್ತಿ ತಂದೆ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇ ಎಸ್ ವೆಂಕಟರಾಮಯ್ಯ ಹಾಗೂ ಮಗಳಿಬ್ಬರಿಗೂ ಸಿಗಲಿದ್ದು, ಒಂದು ಮಹತ್ವದ ದಾಖಲೆಯಾಗಲಿದೆ.
ಏಪ್ರಿಲ್ ತಿಂಗಳಿನಲ್ಲಿ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರು “ದೇಶದಲ್ಲಿ ಮಹಿಳೆಯೊಬ್ಬರು ಮುಖ್ಯ ನ್ಯಾಯಮೂರ್ತಿಯಾಗಬೇಕೆಂಬ ಆಸಕ್ತಿ ಇದೆ ಹಾಗೂ ಆ ಉದ್ದೇಶವನ್ನು ಉತ್ತಮವಾಗಿ ಕಾರ್ಯಗತಗೊಳಿಸುವ ಪ್ರಯತ್ನದಲ್ಲಿದ್ದೇವೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಉತ್ತಮ ಅಭ್ಯರ್ಥಿಗಳು ಸಿಗಬೇಕು ಎನ್ನುವ ಒಂದೇ ವಿಷಯ ನಮ್ಮ ಮುಂದಿದೆ” ಎಂದಿದ್ದರು.