ನಿಮ್ಮ ವೈಫಲ್ಯವನ್ನು ಎತ್ತಿ ಹಿಡಿದಿದ್ದಕ್ಕೆ ಕೋರ್ಟ್‌ ಅನ್ನು ದೂಷಿಸಬೇಡಿ

ಬೆಂಗಳೂರು: ಕೋವಿಡ್‌ ಲಸಿಕೆಯ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ ಆದೇಶದ ವಿರುದ್ಧ ಕಟುವಾಗಿ ದೂಷಣೆ ಮಾಡಿದ್ದ ಬಿಜೆಪಿ ನಾಯಕರುಗಳಾದ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹಾಗೂ ಶಾಸಕ ಸಿ ಟಿ ರವಿ ಉಡಾಫೆಯ ಮಾತುಗಳನ್ನು ಖಂಡಿಸಿರುವ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಎಸ್‌ ಆರ್‌ ಪಾಟೀಲ್‌ ಅವರು ಬಿಜೆಪಿಯವರದು ಉಡಾಫೆಯ ಮಾತುಗಳು ಎಂದು ಹೇಳಿದ್ದಾರೆ.

ಇದನ್ನು ಓದಿ: ಲಸಿಕೆಗಳೆ ಲಭ್ಯವಿಲ್ಲ 2ನೇ ಡೋಸ್ ಹೇಗೆ ನೀಡುತ್ತೀರಿ, ಏನಿದು ನಿಮ್ಮ ಲಸಿಕೆ ಅಭಿಯಾನ?’: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಈ ಬಗ್ಗೆ ಟ್ವೀಟ್‌ ಮಾಡಿರುವ ಎಸ್‌ ಆರ್‌ ಪಾಟೀಲ್‌ ಅವರು ಹೈಕೋರ್ಟ್ 2ನೇ ಡೋಸ್‌ಗೆ ಕಾಯುತ್ತಿರುವವರಿಗೆ ಯಾವಾಗ ವ್ಯಾಕ್ಸಿನ್ ಕೊಡುತ್ತೀರಿ? ಎಂದು ಕೇಳಿದರೆ ಸದಾನಂದಗೌಡರು ವ್ಯಾಕ್ಸಿನ್ ಉತ್ಪಾದನೆಯಾಗದಿದ್ರೆ ನಾವೇನು ನೇಣು ಹಾಕಿಕೊಳ್ಳಬೇಕಾ.? ಎನ್ನುತ್ತಾರೆ. ಸದಾನಂದಗೌಡರೇ ಇಂಥಾ ಉಡಾಫೆ ಮಾತು ಬೇಡ, ಸಚಿವರಾಗಿ ವ್ಯಾಕ್ಸಿನ್ ಉತ್ಪಾದನೆ ಹೆಚ್ಚಿಸುವುದು ನಿಮ್ಮ ಕರ್ತವ್ಯ. ನಿಮಗೆ ಅದು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಬನ್ನಿ. ವ್ಯಾಕ್ಸಿನ್ ಅಭಾವದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಇದು ಜನರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ. ಅದನ್ನು ಬಿಟ್ಟು ಉಡಾಫೆಯ ಮಾತುಗಳನ್ನು ಆಡಬೇಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂದುವರೆದು ಕರ್ನಾಟಕ ಹೈಕೋರ್ಟ್ ಆದೇಶ ಮಾಡದೇ ಇದ್ದಿದ್ದರೆ ನಮ್ಮ ರಾಜ್ಯಕ್ಕೆ ಸಿಗಬೇಕಾದ ಆಕ್ಸಿಜನ್ ಸಹ ಸಿಗುತ್ತಿರಲಿಲ್ಲ. ನಿಮ್ಮ ಸರ್ಕಾರ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಸುಪ್ರೀಂಕೋರ್ಟ್ ಗೆ ಹೋಯಿತು. ವ್ಯಾಕ್ಸಿನ್ ಕೊರತೆಯೂ ಕೋರ್ಟ್ ನಿಂದಲೇ ಬಗೆಹರಿಯಲಿದೆ. ಜನರಿಗೆ ನಿಮ್ಮ ಸರ್ಕಾರದ ಮೇಲೆ ನಂಬಿಕೆಯೇ ಇಲ್ಲವಾಗಿದೆ ಎಂದು ಎಸ್‌ ಆರ್‌ ಪಾಟೀಲ್‌ ಅವರು ಟ್ವೀಟ್‌ ಮಾಡಿದ್ದಾರೆ.

ಇದನ್ನು ಓದಿ: ಕೇಂದ್ರದಿಂದ ಆಗುತ್ತಿರುವ ಅನ್ಯಾಯವನ್ನು ಕನ್ನಡಿಗರು ಪ್ರಶ್ನೆ ಮಾಡಬೇಕು: ಕುಮಾರಸ್ವಾಮಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನ್ಯಾಯಾಧೀಶರು ‘ಸರ್ವಜ್ಞ’ ಅಲ್ಲ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆ ಅತ್ಯಂತ ಖಂಡನೀಯ. ನ್ಯಾಯಾಧೀಶರು ನಮ್ಮ ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯುವಾಗ ಅವರ ಮೇಲೆ ಆಕಾಂಕ್ಷೆಗಳನ್ನು ಹಾಕಲು ಪ್ರಯತ್ನಿಸುವುದು, ಈ ಸಾಂಕ್ರಾಮಿಕ ಸಮಯದಲ್ಲಿ ನಮ್ಮ ದೇಶವು ಇಂತಹ ವಿನಾಶಕ್ಕೆ ಸಾಕ್ಷಿಯಾಗಲು ಒಂದು ಕಾರಣವಾಗಿದೆ ಎಂದಿದ್ದಾರೆ.

ಕಾಂಗ್ರೆಸ್‌ ಪಕ್ಷವು ಬಿಜೆಪಿ ಸರಕಾರಕ್ಕೆ ಪ್ರತಿಯೊಂದು ವಿಷಯದಲ್ಲೂ ಹೈಕೋರ್ಟ್‌ ಮಾನಿಟರ್‌ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಹೇಳಿದ್ದು ಸದಾನಂದಗೌಡ ಹಾಗೂ ಸಿ ಟಿ ರವಿ ಹೇಳಿಯನ್ನು ಖಂಡಿಸಿದೆ.

ಕಾಂಗ್ರೆಸ್‌ ಪಕ್ಷವು ಕುಣಿಲಾರದವನು ನೆಲನೇ ಡೊಂಕು ಎಂದಂತೆ ಜನಪರ ಚಿಂತನೆ ಇಲ್ಲದ ಅಸಮರ್ಥ ಬಿಜೆಪಿ ಸರ್ಕಾರಕ್ಕೆ ಪ್ರತಿಯೊಂದು ವಿಷಯದಲ್ಲೂ ಹೈಕೋರ್ಟ್ ಮಾನಿಟರ್ ಮಾಡಬೇಕಾದ ಸ್ಥಿತಿ ಬಂದಿದ್ದು ದುರ್ದೈವ. ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದೆ, ರಾಜ್ಯದಲ್ಲಿ ಹೈಕೋರ್ಟ್ ಚಾಟಿ ಬೀಸುತ್ತಿದೆ. ಕರೋನಾ ಹೊತ್ತಲ್ಲಿ ಬಿಜೆಪಿಯ ನೀಚತನ ಅನಾವರಣಗೊಳ್ಳುತ್ತಿದೆ ಎಂದು ತಿಳಿಸಿದೆ.

ಅಲ್ಲದೆ, ಬಿಜೆಪಿ ಪಕ್ಷವು ತಮ್ಮ ಅಯೋಗ್ಯತನ ಮರೆಮಾಚಲು ಎಷ್ಟೆಲ್ಲ ಹರಸಾಹಸಪಡುತ್ತಿದ್ದಾರೆ. ಜನರ ಪರವಾಗಿ ಮಾತನಾಡುತ್ತಿದ್ದ ವಿರೋಧಪಕ್ಷದ ನಾಯಕರ ಬಗ್ಗೆ ಮುಗಿಬಿಳುತ್ತಿದ್ದವರು ಈಗ ನ್ಯಾಯಾಧೀಶರ ವಿರುದ್ಧವೇ ಮಾತಾಡುತ್ತಿದ್ದಾರೆ. ವಿನಾಶ ಕಾಲೇ ವಿಪರೀತ ಬುದ್ದಿ! ಎಂದು ಟ್ವೀಟ್‌ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *