ಬೆಂಗಳೂರು: ಕಾನೂನು ಬಾಹಿರವಾಗಿ ವಜಾಗೊಳಿಸಿರುವ ಆಡಳಿತ ಮಂಡಳಿಯ ಕ್ರಮ ವಿರೋಧಿಸಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯುರೋ ಸೈನ್ಸಸ್(ನಿಮ್ಹಾನ್ಸ್) ಆಸ್ಪತ್ರೆಯ ಗುತ್ತಿಗೆ ಸಹಾಯಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಇಂದಿಗೆ 60ನೆ ದಿನಕ್ಕೆ ಕಾಲಿಟ್ಟಿದೆ.
ನಗರದ ನಿಮ್ಹಾನ್ಸ್ ಆಸ್ಪತ್ರೆಯ ಆವರಣದಲ್ಲಿ ನಿಮ್ಹಾನ್ಸ್ ಪ್ರಗತಿಪರ ವರ್ಕರ್ಸ್ ಯೂನಿಯನ್(ಎಐಸಿಸಿಟಿಯು) ನೇತೃತ್ವದಲ್ಲಿ ಸತತ 58 ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದು, ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಂಡು, ತಮ್ಮ ಬೇಡಿಕೆ ಈಡೇರಿಸಲು ಮುಂದಾಗಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.
ಈ ಕುರಿತು ಜನಶಕ್ತಿ ಮೀಡಿಯಾ ಜೊತೆ ಎಐಸಿಸಿಟಿಯು ರಾಜ್ಯ ಮುಖಂಡರಾದ ಮೈತ್ರೆಯಿ ಕೃಷ್ಣನ್ ಮಾತನಾಡಿ, ರಾತ್ರಿ ಕರ್ಫ್ಯೂ ಘೋಷಣೆಯಾಗಿದ್ದರೂ ನಿಮ್ಹಾನ್ಸ್ ತನ್ನ ಕಾರ್ಮಿಕರ ಕೆಲಸದ ಅವಧಿಯನ್ನು ಮಧ್ಯಾಹ್ನ 1.30 ರಿಂದ 7.30 ರ ಬದಲಿಗೆ ಮಧ್ಯಾಹ್ನ 2- 9 ಗಂಟೆಗೆ ಬದಲಾಯಿಸಿತ್ತು. ನೌಕರರು ಕೆಲಸದ ಅವಧಿಯನ್ನು ರಾತ್ರಿ 9ಕ್ಕೆ ಬದಲಾಗಿ 8ಕ್ಕೆ ಕೊನೆಗೊಳಿಸುವಂತೆ ನೌಕರರು ಮನವಿ ಮಾಡಿದ್ದರು. ಏಕೆಂದರೆ ಬಿಎಂಟಿಸಿ ಬಸ್ಸುಗಳು 8ಕ್ಕೆ ಸಂಚಾರ ನಿಲ್ಲಿಸುತ್ತಿದ್ದವು. ಆದರೆ ನಿಮ್ಹಾನ್ಸ್ ಮಂಡಳಿ ನೌಕರರ ಅಹವಾಲಿಗೆ ಸ್ಪಂದಿಸುವುದಕ್ಕೆ ಬದಲಾಗಿ ಅಷ್ಟೂ ಮಂದಿ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ 19 ಸಹಾಯಕರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾಗೊಳಿಸಲಾಗಿದೆ. ಆ ಕಾರ್ಮಿಕರಲ್ಲಿ 15 ಜನ ಮಹಿಳೆಯರಾಗಿದ್ದಾರೆ ಎಂದು ಹೇಳಿದರು.
ಕೋವಿಡ್ ಸಂಬಂಧ ರಾಜ್ಯ ಸರಕಾರ ಜಾರಿಗೊಳಿಸಿದ್ದ ರಾತ್ರಿ ಕರ್ಫ್ಯೂ ಹಿನ್ನೆಲೆ ಯಾರೂ ಪ್ರಯಾಣಿಸದಂತೆ ನಿಮ್ಹಾನ್ಸ್ ಆಡಳಿತ ಮಂಡಳಿ ಆದೇಶಿಸಿತ್ತು. ಇದಾದ ಬಳಿಕ, ಕಾರ್ಮಿಕರು ರಾತ್ರಿ 9.30 ಗಂಟೆವರೆಗೂ ಕೆಲಸ ಮಾಡಬೇಕೆಂದು ಹೇಳಿದರು. ಇದಕ್ಕೆ ಸಮ್ಮತಿ ಸೂಚಿಸಿದ ಹಲವು ನೌಕರರು, ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಕೋರಿದ್ದರು. ಆದರೆ, ಈ ಬೇಡಿಕೆ ತಿರಸ್ಕರಿಸಿದ ನಿಮ್ಹಾನ್ಸ್ ಆಡಳಿತ ಮಂಡಳಿ ಜು.9ರಂದು ಏಕಾಏಕಿ ಉದ್ಯೋಗದಿಂದ ನೌಕರರನ್ನು ವಜಾಗೊಳಿಸಿದೆ ಎಂದು ಮೈತ್ರೆಯಿ ಆರೋಪಿಸಿದರು.
ಮಹಿಳಾ ಕಾರ್ಮಿಕರು ಸಂಜೆ 7 ಗಂಟೆಯ ನಂತರದ ಪಾಳಿಯಲ್ಲೂ ಕೆಲಸ ಮಾಡಬಹುದೆಂದು ರಾಜ್ಯ ಸರಕಾರ ಆದೇಶಿಸಿದೆ. ಒಂದು ವೇಳೆ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರು ಕೆಲಸ ಮಾಡಬೇಕೆಂದರೆ ಆಡಳಿತ ಮಂಡಳಿ ಸಾರಿಗೆ ವ್ಯವಸ್ಥೆಯನ್ನು ರೂಪಿಸಬೇಕು ಮತ್ತು ಸಾರಿಗೆಯಲ್ಲಿ ಸಿಸಿಟಿವಿ ಕ್ಯಾಮರಾ ಇರಬೇಕು, ಹಾಗೂ ಇತರೆ ರಕ್ಷಣೆಗಳನ್ನು ಒದಗಿಸಿದರೆ ಮಾತ್ರ ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ. ಆದರೆ, ನಿಮ್ಹಾನ್ಸ್ ಆಡಳಿತ ಮಂಡಳಿ ಇದರ ವಿರುದ್ಧವಾಗಿ ನಡೆದುಕೊಂಡು ಕಾರ್ಮಿಕರಿಗೆ ಅನ್ಯಾಯವೆಸಗಿದೆ ಎಂದು ದೂರಿದರು.