ಹಾಸನ: ಮಲೆನಾಡು ಭಾಗದಲ್ಲಿ ಒಂದೆಡೆ ಮಳೆ ಭಾರೀ ಪೆಟ್ಟು ನೀಡಿದ್ದರೆ, ಮತ್ತೊಂದೆಡೆ ಕಾಡಾನೆಯಿಂದ ಹಲವು ರೀತಿಯ ತೊಂದರೆ ಮುಂದುವರಿದಿದೆ. ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಸಕಲೇಶಪುರ ತಾಲೂಕಿನ ಬೈಕೆರೆ, ಸಾರ್ವೆಪೇಟೆ ಮೊದಲಾದ ಕಡೆ ಭತ್ತ, ಕಾಫಿ, ಬಾಳೆ, ಅಡಕೆ ಗಿಡಗಳನ್ನು ಆನೆ ಹಿಂಡು ತುಳಿದು ನಾಶ ಮಾಡಿವೆ. ಗಿಡ್ಡಪ್ಪ, ಚಂದ್ರೇಗೌಡ, ಮಲ್ಲೇಶ್ ಹಾಗೂ ಹಲವು ರೈತರ ಬೆಳೆದಿದ್ದ ಬೆಳೆ ಮಣ್ಣು ಪಾಲಾಗಿದೆ. ಈಗಲೂ 20 ಕ್ಕೂ ಹೆಚ್ಚು ಆನೆ ಹಿಂಡು ಗ್ರಾಮದ ಬಳಿಯೇ ಬೀಡು ಬಿಟ್ಟಿದ್ದು, ಮತ್ತಷ್ಟು ನಷ್ಟ ಹೆಚ್ಚಾಗುವ ಆತಂಕ ಎದುರಾಗಿದೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಇತ್ತ ಬೇಲೂರು ತಾಲೂಕಿನಲ್ಲೂ ಕಾಡಾನೆ ದಾಂಧಲೆ ಮಿತಿ ಮೀರಿದೆ. ತಾಲೂಕಿನ ಸುಲಗಳಲೆ ಗ್ರಾಮದ ಸುತ್ತಮುತ್ತ ಕಾಫಿ, ಮೆಣಸು, ತೆಂಗು ಸೇರಿದಂತೆ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. 50ಕ್ಕೂ ಹೆಚ್ಚು ಗಜಪಡೆ ಕಾಫಿ ತೋಟದ ನೀರಾವರಿ ಪೈಪ್‌ಗಳನ್ನು ತುಳಿದು ಛಿದ್ರಗೊಳಿಸಿವೆ. ಗ್ರಾಮದ ದೇವರಾಜ್, ಜಗದೀಶ್, ಕೆಂಚೇಗೌಡ, ರಾಮಚಂದ್ರ ಎಂಬುವವರ ಕಾಫಿ ಫಸಲು ಮುರಿದು ಬಿದ್ದಿದೆ.
ಸಿಬ್ಬಂದಿ ಕೂಡಿ ಹಾಕಿ ಆಕ್ರೋಶ: ನಂತರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸ್ಥಳೀಯರು ಕೂಡಿ ಹಾಕಿ ದೀಢೀರ್ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ನಾರ್ವೆಪೇಟೆ ಗ್ರಾಪಂ ಪಿಡಿಒ ಅವರನ್ನೂ ಕೊಠಡಿಯಲ್ಲಿ ಕೂಡಿ ಆಕ್ರೋಶ ಹೊರ ಹಾಕಿದರು. ನಿತ್ಯ ತೊಂದರೆ ಕೊಡುತ್ತಿರುವ ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಹಾಗೂ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಧರಣಿ ನಿರತರು ಆಗ್ರಹಿಸಿದರು. ಅಲ್ಲದೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ಇಷ್ಟೆಲ್ಲಾ ಸಮಸ್ಯೆಗೆ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷö್ಯವೇ ಕಾರಣ ಎಂದು ದೂರಿದ ಅವರು, ನಾವೆಲ್ಲರೂ ಕೈಯಲ್ಲಿ ಜೀವ ಹಿಡಿದು ಓಡಾಡಬೇಕಿದೆ. ಮಕ್ಕಳನ್ನು ಶಾಲೆಗೆ ಕಳಿಸುವಂತಿಲ್ಲ ಎಂದು ಅಳಲು ತೋಡಿಕೊಂಡರು.
ಧರಣಿಯಲ್ಲಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಗ್ರಾಪಂ ಸದಸ್ಯ ಚಿದಾನಂದ್, ಗ್ರಾಮದ ಸುತ್ತಮುತ್ತ 50 ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ, ನಮ್ಮ ಹಿರಿಯರ ಕಾಲದಿಂದಲೂ ನಾವು ಇಲ್ಲಿ ಬದುಕು ನಡೆಸುತ್ತಿದ್ದೇವೆ, ನಮ್ಮ ಭಾಗದಲ್ಲಿ ನೂರಾರು ಎಕರೆಯಲ್ಲಿ ಬೆಳೆದ ಬೆಳೆ ಎಲ್ಲವನ್ನೂ ಸಂಪೂರ್ಣ ಹಾಳು ಮಾಡುತ್ತಿವೆ. 40 ವರ್ಷದಿಂದ ಮಕ್ಕಳ ಹಾಗೆ ಕಾಫಿ ಗಿಡಗಳನ್ನ ಬೆಳೆಸಿದ್ದೆವು, ಇದೀಗ ಸಂಪೂರ್ಣ ನೆಲಸಮ ಆಗಿವೆ. ಅರಣ್ಯ ಇಲಾಖೆ ತಕ್ಕ ಪರಿಹಾರ ಕೊಡುತ್ತಿಲ್ಲ ಎಂದು ಸಿಟ್ಟು ಹೊರ ಹಾಕಿದರು.