ಪ್ರೊ. ಆರ್. ಅರುಣ ಕುಮಾರ್
ಲಾಕ್‌ಡೌನ್‌ನಿಂದಾಗಿ ಅರ್ಥವ್ಯವಸ್ಥೆಯು ಅನುಭವಿಸಿದ ಆಘಾತದ ದುಷ್ಪರಿಣಾಮದೊಂದಿಗೆ ಬೆಲೆಯೇರಿಕೆಗಳ ದುಷ್ಪರಿಣಾಮವನ್ನೂ ಜನಗಳುಲೆದುರಿಸಬೇಕಾಗಿದೆ. ವಾಸ್ತವವಾಗಿ ಈ ಬೆಲೆಯೇರಿಕೆಯ ಹೊರೆ ಸರಕಾರದ ಆದಿಕೃತ ಸೂಚ್ಯಾಂಕಗಳು ತೋರಿಸುವುದಕ್ಕಿಂತಲೂ ಹೆಚ್ಚಾಗಿದೆ. ಏಕೆಂದರೆ, ಹಣದುಬ್ಬರ ದರವು ಬೆಲೆ ಏರಿಕೆಯನ್ನು ನಿಖರವಾಗಿ ಅಳೆಯುತ್ತಿಲ್ಲ. ಲಾಕ್‌ಡೌನ್ ಜನಗಳ ಆದಾಯಗಳನ್ನು ಹಿಂಡಿರುವುದರಿಂದ ಅವರ ಜೀವನ ವೆಚ್ಚದ ಮಾದರಿಯೂ ಬದಲಾಗಿದೆ. ಇದಕ್ಕೆ ಅನುಗುಣವಾಗಿ ಬೆಲೆ ಸೂಚ್ಯಂಕದ ಏರಿಳಿಕೆಗಳನ್ನು ಲೆಕ್ಕಹಾಕುವ ವಿಧಾನವನ್ನು ಮಾರ್ಪಡಿಸುವ ಅಗತ್ಯವಿದೆ. ಶ್ರೀಮಂತರಲ್ಲದವರು ಎರಡು ರೀತಿಯ ಹೊಡೆತ ತಿಂದಿದ್ದಾರೆ – ತಮ್ಮ ಆದಾಯಗಳ ಇಳಿಕೆಯಿಂದಾದ ನಷ್ಟ ಮತ್ತು ಸರಕುಗಳ ಬೆಲೆ ಏರಿಕೆಯಿಂದಾಗಿ ಅನುಭವಿಸಿದ ಇನ್ನೂ ಹೆಚ್ಚಿನ ನಷ್ಟ. ಈ ವಿದ್ಯಮಾನವು ಒಟ್ಟು ಬೇಡಿಕೆಯನ್ನು ಮೊಟಕುಗೊಳಿಸುತ್ತದೆ.
ದಿನ-ನಿತ್ಯದ ಬಳಕೆಯ ವಸ್ತುಗಳ ಬೆಲೆಗಳು ಕಳೆದ ನಾಲ್ಕಾರು ತಿಂಗಳುಗಳಿಂದಲೂ ಸತತವಾಗಿ ಏರುತ್ತಿವೆ. ಬೆಲೆ ಏರಿಕೆಯ ಈ ವಿದ್ಯಮಾನವನ್ನು ತಾಂತ್ರಿಕ ಪರಿಭಾಷೆಯಲ್ಲಿ ಹಣದುಬ್ಬರ ಎನ್ನುತ್ತಾರೆ. ಬೆಲೆಗಳ ಏರಿಕೆಯ ಮಟ್ಟವನ್ನು ಎರಡು ಸ್ತರಗಳಲ್ಲಿ – ಸಗಟು ವ್ಯಾಪಾರದ ಮತ್ತು ಚಿಲ್ಲರೆ ವ್ಯಾಪಾರದ ಮಟ್ಟದಲ್ಲಿ – ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಸರಕು ಸರಂಜಾಮುಗಳ ಉತ್ಪಾದಕರು ಮಾರುವ ಬೆಲೆಗಳ ಏರಿಳಿಕೆಗಳನ್ನು ಪ್ರತಿವಾರವೂ ಪ್ರಕಟವಾಗುವ ಸಗಟು ಬೆಲೆ ಸೂಚ್ಯಂಕವು ತಿಳಿಸುತ್ತದೆ. ಈ ವಸ್ತುಗಳನ್ನು ಚಿಲ್ಲರೆಯಾಗಿ ಮಾರುವ ಬೆಲೆಗಳ ಏರಿಳಿಕೆಗಳನ್ನು ಪ್ರತಿ ತಿಂಗಳೂ ಪ್ರಕಟವಾಗುವ ಗ್ರಾಹಕ ಬೆಲೆ ಸೂಚ್ಯಂಕವು ತಿಳಿಸುತ್ತದೆ. ಸಗಟು ಬೆಲೆ ಸೂಚ್ಯಂಕವು ಆಗಸ್ಟ್ ತಿಂಗಳಲ್ಲಿ ಶೇ.11.39ರಷ್ಟು ಏರಿದೆ. ಎರಡಂಕಿಯಲ್ಲಿ ಏರಿಕೆಯಾಗುತ್ತಿರುವ ಈ ಹಣದುಬ್ಬರವು ಕಳೆದ ಐದು ತಿಂಗಳುಗಳಿಂದಲೂ ಸತತವಾಗಿ ಮುಂದುವರಿಯುತ್ತಿದೆ. ಆಹಾರ ವಸ್ತುಗಳ ಬೆಲೆಗಳು ಇಳಿಮುಖವಾಗಿದ್ದರೂ ಸಹ, ಸಗಟು ಬೆಲೆಗಳ ಸೂಚ್ಯಂಕದ ಏರಿಕೆಯು ಕಳವಳಕಾರಿಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕವು ಜೂನ್ ನಲ್ಲಿ 6% ಗಡಿಯನ್ನು ದಾಟಿದೆ. ಈ ಮಟ್ಟದ ಏರಿಕೆಯು ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರೀಕ್ಷೆಗಿಂತಲೂ ಹೆಚ್ಚು ಕಳವಳಕಾರಿಯಾಗಿದೆ. ಏಕೆಂದರೆ, ಒಟ್ಟು ಬೇಡಿಕೆಯು ಇಳಿಕೆಯಾಗಿರುವ, ನಿರುದ್ಯೋಗ ಹೆಚ್ಚುತ್ತಿರುವ, ಬಹು ದೊಡ್ಡ ಸಂಖ್ಯೆಯ ಜನರು ತಮ್ಮ ಆದಾಯವನ್ನು ಕಳೆದುಕೊಂಡಿರುವ ಮತ್ತು ಬಡತನ ಉಲ್ಬಣಗೊಂಡಿರುವ ಸಮಯದಲ್ಲಿ ಹಣದುಬ್ಬರ ಈ ರೀತಿಯಲ್ಲಿ ಏರುತ್ತಿದೆ. ಆದ್ದರಿಂದ, ಹಣದುಬ್ಬರವು ಈ ರೀತಿಯಲ್ಲಿ ಏರಲು ಕಾರಣವೇನು? ಮತ್ತು, ಈ ಅಧಿಕೃತ ಸೂಚ್ಯಂಕಗಳ ದತ್ತಾಂಶವು ನೈಜ ಚಿತ್ರವನ್ನು ತೋರಿಸುತ್ತಿದೆಯೇ?
ದತ್ತಾಂಶಗಳಿಗೆ ಸಂಬಂಧಿಸಿದ ಸಮಸ್ಯೆಗಳು
2020ರ ಏಪ್ರಿಲ್ ಮತ್ತು ಮೇ ಈ ಎರಡೂ ತಿಂಗಳುಗಳಲ್ಲಿ ಕೊರೊನಾ ಸಂಬಂಧವಾಗಿ ಹೇರಿದ ಒಂದು ಕಠಿಣ ಲಾಕ್‌ಡೌನ್‌ನಿಂದಾಗಿ ಸರಕು ಸಾಮಗ್ರಿಗಳ ಉತ್ಪಾದನೆಗೆ ಸಂಬಂಧಿಸಿದ ದತ್ತಾಂಶ ಮತ್ತು ಅವುಗಳ ಚಿಲ್ಲರೆ ಮಾರಾಟದ ಬೆಲೆಗಳ ದತ್ತಾಂಶವನ್ನು ಸಂಗ್ರಹಿಸಲು ಸಾಧ್ಯವಾಗಿರಲಿಲ್ಲ. 2020ರ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಈ ನಿರ್ಬಂಧಗಳನ್ನು ನಿಧಾನವಾಗಿ ಸಡಿಲಿಸಲಾಗಿತ್ತಾದರೂ, ವ್ಯಾಪಾರ-ವಹಿವಾಟುಗಳು ಎಂದಿನ ಮಟ್ಟಕ್ಕೆ ಹಿಂತಿರುಗಿರಲಿಲ್ಲ. ಆದ್ದರಿಂದ, 2021ರ ಏಪ್ರಿಲ್ ನಿಂದ ಜುಲೈ ತಿಂಗಳುಗಳ ಬೆಲೆಗಳ ದತ್ತಾಂಶವನ್ನು 2020ರ ಅದೇ ತಿಂಗಳುಗಳೊಂದಿಗೆ ಹೋಲಿಸಲಾಗದು. ಹಾಗಾಗಿ, 2021ರ ಏಪ್ರಿಲ್ ನಿಂದ ಜುಲೈ ತಿಂಗಳುಗಳ ಅಧಿಕೃತ ಹಣದುಬ್ಬರದ ಅಂಕಿ-ಅಂಶಗಳು ನೈಜ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ.
ಅದೇನೇ ಇರಲಿ, ಹಣದುಬ್ಬರವನ್ನು ಪ್ರತಿನಿಧಿಸುವ ಈ ಒಂದು ಏಕ ಸಂಖ್ಯೆಯು ವಿವಿಧ ಸರಕುಗಳು ಮತ್ತು ಸೇವೆಗಳನ್ನು ಒಟ್ಟುಗೂಡಿಸಿ ಲೆಕ್ಕ ಹಾಕಿ ತೆಗೆದ ಒಂದು ಪ್ರಾತಿನಿಧಿಕ ಸಂಖ್ಯೆಯಾಗಿರುತ್ತದೆ. ವಾಸ್ತವವಾಗಿ, ವಿವಿಧ ಪ್ರಕಾರದ ಬಳಕೆಯ ವಸ್ತುಗಳ ಬೆಲೆ ಏರಿಕೆಯು ಭಿನ್ನ ಭಿನ್ನವಾಗಿಯೇ ಇರುತ್ತದೆ. ಆದ್ದರಿಂದ, ಒಟ್ಟಾರೆಯಾಗಿ ಈ ಸರಕುಗಳು ಮತ್ತು ಸೇವೆಗಳಿಗೆ ಒಂದೊಂದಕ್ಕೂ ಪ್ರತ್ಯೇಕವಾಗಿ ಈ ಸೂಚ್ಯಂಕದಲ್ಲಿ ಇಂತಿಷ್ಟು ತೂಕ ಎಂದು ನಿಗದಿಪಡಿಸಿ ಅವೆಲ್ಲವನ್ನೂ ಒಟ್ಟುಗೂಡಿಸಿ ಲೆಕ್ಕ ಹಾಕುವ ಮೂಲಕ ಒಂದು ಸಂಖ್ಯೆಯನ್ನು ಪಡೆಯಲಾಗುತ್ತದೆ. ಸಗಟು ಸೂಚ್ಯಂಕವನ್ನು ಲೆಕ್ಕಹಾಕುವ ಉದ್ದೇಶಕ್ಕಾಗಿ, ವಿವಿಧ ಸರಕುಗಳ ಬೆಲೆಗಳನ್ನು ಅವುಗಳ ಉತ್ಪಾದನೆಯ ಸಮಯದಲ್ಲಿ ಪ್ರತಿಯೊಂದಕ್ಕೂ ನಿಗದಿಪಡಿಸಿದ ತೂಕಕ್ಕೆ ತಕ್ಕಂತೆ ಲೆಕ್ಕ ಹಾಕಲಾಗುತ್ತದೆ. ಆದರೆ, ಬಳಕೆದಾರ ಸೂಚ್ಯಂಕವನ್ನು ಲೆಕ್ಕಹಾಕುವ ಉದ್ದೇಶಕ್ಕಾಗಿ, ಕೆಲವು ನಿರ್ದಿಷ್ಟ ವಸ್ತುಗಳನ್ನೊಳಗೊಂಡ ಒಂದು ಬುಟ್ಟಿಯ ಬೆಲೆಯನ್ನು ಪರಿಗಣಿಸಲಾಗುತ್ತದೆ. ಆದರೆ, ಜನರ ಬಳಕೆಯ ಬುಟ್ಟಿಯ ವಸ್ತುಗಳು ಭಿನ್ನ ಭಿನ್ನವಾಗಿರುತ್ತವೆ. ಬಡವರ ಬಳಕೆಯ ಬುಟ್ಟಿಯು ಮಧ್ಯಮ ವರ್ಗದವರಿಗಿಂತ ಹೆಚ್ಚು ಭಿನ್ನವಾಗಿರುತ್ತದೆ. ಶ್ರೀಮಂತರ ಬಳಕೆಯ ಬುಟ್ಟಿಯು ಮಧ್ಯಮ ವರ್ಗಗಳು ಮತ್ತು ಬಡವರಿಗಿಂತ ಇನ್ನೂ ಹೆಚ್ಚು ಭಿನ್ನವಾಗಿರುತ್ತದೆ. ಆದ್ದರಿಂದ, ಈ ಪ್ರತಿಯೊಂದು ವರ್ಗದ ಸೂಚ್ಯಂಕವು ವಿಭಿನ್ನವಾಗಿರುತ್ತದೆ. ಹಾಗಾಗಿ, ಈ ಎಲ್ಲಾ ವರ್ಗಗಳ ಬುಟ್ಟಿಯ ಸಂಯೋಜಿತ ಸೂಚ್ಯಂಕದ ಒಂದು ಸರಾಸರಿಯನ್ನು ಲೆಕ್ಕ ಹಾಕುವ ಅಗತ್ಯವಿದೆ. ಆದ್ದರಿಂದ, ಒಂದು ಅರ್ಥದಲ್ಲಿ, ಪ್ರಸಕ್ತ ಸೂಚ್ಯಂಕವು ಈ ಯಾವುದೇ ವರ್ಗವನ್ನೂ ಪ್ರತಿನಿಧಿಸುವುದಿಲ್ಲ.
2020ರ ಲಾಕ್‌ಡೌನ್ ಸಮಯದಲ್ಲಿ ಮತ್ತು ಅದನ್ನು ಸಡಿಲಗೊಳಿಸಿದ (ಅನ್‌ಲಾಕ್) ಅವಧಿಯಲ್ಲಿ, ಜನರು ಬಹುತೇಕ ಕೆಲವೇ ಕೆಲವು ಅಗತ್ಯ ವಸ್ತುಗಳನ್ನು ಬಳಸಿದರು. ಈ ಅಂಶವನ್ನು ರಿಸರ್ವ್ ಬ್ಯಾಂಕಿನ ಅಂಕಿ ಅಂಶಗಳು ಪುಷ್ಠೀಕರಿಸುತ್ತವೆ. ಗ್ರಾಹಕರ ವಿಶ್ವಾಸ ಸೂಚ್ಯಂಕವು ಜನವರಿ 2020ರಲ್ಲಿ 105 ರಿಂದ ಜನವರಿ 2021ರ ವೇಳೆಗೆ 55.5ಕ್ಕೆ ತೀವ್ರವಾಗಿ ಕುಸಿದಿದೆ ಎಂದು ಆರ್‌ಬಿಐ ಅಂಕಿ ಅಂಶಗಳು ಹೇಳುತ್ತವೆ. ಅಂದರೆ, ಅರ್ಥವ್ಯವಸ್ಥೆಯು ಬೆಳೆಯುತ್ತಿದೆ ಎಂದು ಅಧಿಕೃತವಾಗಿ ಹೇಳುತ್ತಿದ್ದ ಅವಧಿಯಲ್ಲಿ, ಗ್ರಾಹಕರ ವಿಶ್ವಾಸವು ಚೇತರಿಸಿಕೊಂಡಿರಲಿಲ್ಲ. ಬದಲಿಗೆ, ಈ ಅವಧಿಯಲ್ಲಿ ಉದ್ಯೋಗಗಳು ನಾಶವಾಗುತ್ತಿದ್ದವು ಮತ್ತು ಆದಾಯಗಳು ಇಳಿಕೆಯಾಗುತ್ತಿದ್ದವು. ಒಂದು ವರದಿಯ ಪ್ರಕಾರ, ಈ ಅವಧಿಯಲ್ಲಿ 230 ಮಿಲಿಯನ್ ಜನರು ಬಡತನ ರೇಖೆಯ ಕೆಳಗೆ ತಳ್ಳಲ್ಪಟ್ಟರು. ಈ ಎಲ್ಲ ಅಂಶಗಳೂ, ವಿವಿಧ ವರ್ಗಗಳ ಜನರ ಬಳಕೆಯ ಬುಟ್ಟಿ (ಅಂದರೆ, ಅದು ಒಳಗೊಂಡ ವಸ್ತುಗಳು) ಬದಲಾಗಿದೆ ಎಂಬುದನ್ನು ಸೂಚಿಸುತ್ತವೆ. ಶ್ರೀಮಂತರ ಬಳಕೆಯ ಮಾದರಿಯಲ್ಲಿ ಬದಲಾವಣೆ ಅಲ್ಪವೇ ಇದ್ದರೂ ಸಹ, ಬಡವರು ಮತ್ತು ಮಧ್ಯಮ ವರ್ಗದವರು, ಅದರಲ್ಲೂ ವಿಶೇಷವಾಗಿ ಉದ್ಯೋಗ ಕಳೆದುಕೊಂಡವರು ಮತ್ತು ಆದಾಯದ ಕಡಿತಕ್ಕೊಳಗಾದವರು ತಮ್ಮ ಬಳಕೆಯನ್ನು ಬಹಳಷ್ಟು ಕಡಿತಗೊಳಿಸಿದರು. ಹೀಗಾಗಿ, ಗ್ರಾಹಕ ಬಳಕೆ ಸೂಚ್ಯಂಕವು ಒಳಗೊಂಡ ಹಲವು ವಸ್ತಗಳಿಗೆ ನಿಗದಿಪಡಿಸಿದ ತೂಕ ಸಂಬಂಧಗಳು ಬದಲಾದವು. ಹಾಗಾಗಿ, ಹಣದುಬ್ಬರವನ್ನು ಮರು ಲೆಕ್ಕ ಹಾಕುವ ಅಗತ್ಯವಿತ್ತು, ಆದರೆ ಅದನ್ನು ಮಾಡಲಿಲ್ಲ. ಕೋವಿಡ್-19 ಎರಡನೇ ಅಲೆಯ ಪರಿಣಾಮವಾಗಿ ಗ್ರಾಹಕರ ವಿಶ್ವಾಸವು ಜುಲೈ 2021 ರಲ್ಲಿ 48.6 ಕ್ಕೆ ಇಳಿದಿದೆ.
ಮೇಲಾಗಿ, ಈ ಬಳಕೆ ಬುಟ್ಟಿಯು ಒಳಗೊಂಡಿರುವ ಅಂಶಗಳಲ್ಲಿ ಸೇವೆಗಳ ಆಯಾಮವನ್ನು, ಹಣದುಬ್ಬರ ದತ್ತಾಂಶದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಪರಿಗಣಿಸಲಾಗಿದೆ. ಉತ್ಪಾದನೆಯಲ್ಲಿ ಜಿಡಿಪಿಯ ಸುಮಾರು 55% ಭಾಗ ಇರುವ ಸೇವೆಗಳು ಸಗಟು ಮಾರಾಟ ಬೆಲೆ ಸೂಚ್ಯಂಕದಲ್ಲಿ ಯಾವುದೇ ಪ್ರಾತಿನಿಧ್ಯವನ್ನು ಹೊಂದಿಲ್ಲ. ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಸೇವೆಗಳು ಸುಮಾರು 40% ಪ್ರಾತಿನಿದ್ಯ ಹೊಂದಿವೆ. ಸಾಂಕ್ರಾಮಿಕದ ಅವಧಿಯಲ್ಲಿ ಆರೋಗ್ಯ ಸಂಬಂಧವಾಗಿ ಜನರು ಲೆಕ್ಕವಿಲ್ಲದಷ್ಟು ಹಣ ಖರ್ಚುಮಾಡಿದ್ದಾರೆ. ಈ ಅಂಶವನ್ನು ಹಣದುಬ್ಬರದ ಲೆಕ್ಕಾಚಾರದಲ್ಲಿ ಪರಿಗಣಿಸಲಾಗಿದೆಯೇ? ಅದೇ ರೀತಿಯಲ್ಲಿ, ಸಾಂಕ್ರಾಮಿಕದ ಅವಧಿಯಲ್ಲಿ, ಮೊಬೈಲ್ ಫೋನ್‌ಗಳು, ಲ್ಯಾಪ್ ಟಾಪ್‌ಗಳು ಮತ್ತು ವೈ-ಫೈಗಳು ಒಂದು ಅನಿವಾರ್ಯ ಅಗತ್ಯವಾಗಿ ಶೈಕ್ಷಣಿಕ ಉದ್ದೇಶಗಳಿಗೆ ಬಳಕೆಯಾದುದರಿಂದ ಶಿಕ್ಷಣದ ಬಾಬ್ತು ಜನರು ಅಪಾರ ಹಣ ಖರ್ಚು ಮಾಡಿದ್ದಾರೆ. ಅನೇಕ ರೀತಿಯ ಇತರ ಸೇವೆಗಳನ್ನು ಈ ಅವಧಿಯಲ್ಲಿ ಬಳಸಿಕೊಳ್ಳಲಾಗಲಿಲ್ಲ. ಉದಾಹರಣೆಗೆ, ಮನೆಯ ಹೊರಗೆ ಊಟ-ತಿಂಡಿಗಾಗಿ ಮಾಡುವ ವೆಚ್ಚಗಳು ಮತ್ತು ಪ್ರವಾಸ-ಪ್ರಯಾಣದ ವೆಚ್ಚಗಳನ್ನು ಹಣದುಬ್ಬರದ ಲೆಕ್ಕಾಚಾರದಿಂದ ಹೊರಗಿಡಬೇಕಿತ್ತು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಪದೇ ಪದೇ ಹೇರಿದ ಲಾಕ್‌ಡೌನ್‌ಗಳ ಆಘಾತವು ದತ್ತಾಂಶ ಸಂಗ್ರಹಣೆಯನ್ನು ಕಷ್ಟಕರಗೊಳಿಸಿತು. ಆದ್ದರಿಂದ, ಗ್ರಾಹಕ ಬೆಲೆ ಸೂಚ್ಯಂಕವನ್ನು ಲೆಕ್ಕಹಾಕುವಾಗ ಬಳಕೆಯ ಬುಟ್ಟಿಯಲ್ಲಿ ಕಂಡು ಬಂದ ಬದಲಾವಣೆಗಳನ್ನು ಪರಿಗಣಿಸಬೇಕಿತ್ತು.
ಹಣದುಬ್ಬರವು ಗ್ರಾಹಕರ ಜೇಬುಗಳಿಗೆ ಕತ್ತರಿ ಹಾಕುತ್ತದೆ. ಹಣದುಬ್ಬರವು ಶೇ.10ರ ಪ್ರಮಾಣದಲ್ಲಿದ್ದಾಗ, ಒಬ್ಬ ವ್ಯಕ್ತಿಯು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಷ್ಟೇ ಪ್ರಮಾಣದ ಸರಕು-ಸೇವೆಗಳನ್ನು ಖರೀದಿಸಲು 10% ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ವ್ಯಕ್ತಿಯ ಆದಾಯವೂ 10% ನಷ್ಟು ಏರಿಕೆಯಾದರೆ ಮಾತ್ರ ಈ ಹಣದುಬ್ಬರದಿಂದ ತೊಂದರೆ ಇಲ್ಲ ಅಥವಾ ಅದು ಮುಖ್ಯವಾಗುವುದಿಲ್ಲ. ಆದರೆ, ವ್ಯಕ್ತಿಯ ಆದಾಯದ ಹೆಚ್ಚಳವು ಒಂದು ವೇಳೆ 10% ಗಿಂತ ಕಡಿಮೆ ಪ್ರಮಾಣದಲ್ಲಿದ್ದರೆ, ಅವನ ಬಜೆಟ್ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗಾಗಿ, ಮಧ್ಯಮ ವರ್ಗದವರ ಅಗತ್ಯ ವಸ್ತುಗಳ ಬಳಕೆ ಮತ್ತು ಅವರ ಉಳಿತಾಯ ಎರಡೂ ಕಡಿಮೆಯಾಗುತ್ತವೆ. ಆದರೆ, ಉಳಿತಾಯ ಮಾಡಲಾಗದ ಬಡವರು, ತಮ್ಮ ಅಗತ್ಯದ ಬಳಕೆಯನ್ನೂ ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ.
ಭಾರತದಲ್ಲಿ ಶೇ.94 ರಷ್ಟು ದುಡಿಯುವ ಜನರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಅವರ ಆದಾಯಗಳು ಕೆಳ ಮಟ್ಟದಲ್ಲಿರುವುದರಿಂದಾಗಿ ಅವರ ಉಳಿತಾಯವು ಶೂನ್ಯವೇ. ಅಸಂಘಟಿತ ವಲಯದ ವ್ಯಾಖ್ಯಾನವೇ, ಬೆಲೆಗಳು ಹೆಚ್ಚುತ್ತಿದ್ದರೂ ಸಹ ಅಲ್ಲಿ ದುಡಿಯುವವರು ಹೆಚ್ಚಿನ ಆದಾಯಕ್ಕಾಗಿ ಚೌಕಾಶಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿಸುತ್ತದೆ. ಆದ್ದರಿಂದ, ಅವರು ಹಣದುಬ್ಬರದ ಹೊಡೆತಕ್ಕೆ ಒಳಗಾಗುತ್ತಾರೆ. ಅದೂ ಅಲ್ಲದೆ, ಲಾಕ್‌ಡೌನ್‌ಗಳಿಂದಾಗಿ, ಅಸಂಘಟಿತ ಮತ್ತು ಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಅನೇಕರ ವೇತನಗಳು ಇಳಿದಿವೆ. ಇದು ಅವರ ಕುಟುಂಬದ ಬಜೆಟ್ ಮೇಲೆ ಪರಿಣಾಮ ಬೀರಿದೆ.
ಪರಿಣಾಮವಾಗಿ, ಅಗತ್ಯವಲ್ಲದ ವಸ್ತುಗಳಿಗಷ್ಟೇ ಅಲ್ಲ, ಅಗತ್ಯ ವಸ್ತುಗಳಿಗೂ ಸಹ ಬೇಡಿಕೆ ಇಳಿದಿದೆ. ಈ ಅಂಶವು, ಒಂದು ವಿಷವರ್ತುಲದ ರೀತಿಯಲ್ಲಿ, ಆರ್ಥಿಕ ಚೇತರಿಕೆಯನ್ನು ಮತ್ತು ಉದ್ಯೋಗ ಸೃಷ್ಟಿಯನ್ನು ನಿಧಾನಗೊಳಿಸಿದೆ. ಅಷ್ಟೇ ಅಲ್ಲದೆ, ಸರ್ಕಾರದ ಆದಾಯವೂ ಇಳಿದಿದೆ. ಅದರಿಂದಾಗಿ ಬಜೆಟ್ ಕೊರತೆ ಹೆಚ್ಚಿದೆ. ಹಾಗಾಗಿ, ಬಜೆಟ್‌ನಲ್ಲಿ ಮಾಡಿದ್ದ ಅಂದಾಜು ವೆಚ್ಚಗಳನ್ನು, ಅದರಲ್ಲೂ ವಿಶೇಷವಾಗಿ ಸಾಮಾಜಿಕ ವಲಯಕ್ಕೆ ಸಂಬಂಧಿಸಿ ನಿಗದಿಪಡಿಸಿದ್ದ ವೆಚ್ಚಗಳನ್ನು, ಕಡಿತಗೊಳಿಸುವ ಒತ್ತಡ ಸರ್ಕಾರದ ಮೇಲೆ ಬೀಳುತ್ತದೆ. ಈ ವಿದ್ಯಮಾನವು ಬಡತನವನ್ನು ಉಲ್ಬಣಗೊಳಿಸುತ್ತದೆ ಮತ್ತು ಬೇಡಿಕೆಯನ್ನು ಮತ್ತಷ್ಟು ತಗ್ಗಿಸುತ್ತದೆ. ಹೀಗಾಗಿ, ಬೇಡಿಕೆ ತಗ್ಗಿದ ಸಮಯದಲ್ಲಿ ಮತ್ತು ಅದರ ಜತೆಯಲ್ಲಿ ಆದಾಯಗಳೂ ಇಳಿಕೆಯಾದ ಸಮಯದಲ್ಲಿ, ಹಣದುಬ್ಬರವು ಅರ್ಥವ್ಯವಸ್ಥೆಯನ್ನು ನಿಧಾನಗೊಳಿಸುವ ಒಂದು ವಿಷವರ್ತುಲ ಉಂಟಾಗಲು ಕಾರಣವಾಗುತ್ತದೆ. ಇದು, ಬಡವರು ಮತ್ತು ನಿರುದ್ಯೋಗಿಗಳ ಜೀವನವನ್ನು ಹೆಚ್ಚು ಹೆಚ್ಚು ಯಾತನಾಮಯವಾಗಿಸುತ್ತದೆ.
ಹಣದುಬ್ಬರಕ್ಕೆ ಮೂಲವಾದ ಅಂಶಗಳು
ಸಂಪನ್ಮೂಲಗಳನ್ನು ಸಂಗ್ರಹಿಸುವ ಒಂದು ಸಾಧನವಾಗಿ ಸರ್ಕಾರವು ಇಂಧನದ (ಪೆಟ್ರೋಲಿಯಂ ಉತ್ಪನ್ನಗಳ) ಮೇಲಿನ ತೆರಿಗೆಗಳನ್ನು ಹೆಚ್ಚಿಸಿದೆ. ಎಲ್ಲಾ ರೀತಿಯ ಉತ್ಪಾದನೆಗಳಿಗೂ ಇಂಧನ-ಶಕ್ತಿಯನ್ನು ಬಳಸುವುದರಿಂದ, ಎಲ್ಲಾ ಸರಕುಗಳ ಮತ್ತು ಸೇವೆಗಳ ಬೆಲೆಗಳು ಏರುತ್ತವೆ ಮತ್ತು ಹಣದುಬ್ಬರ ಹೆಚ್ಚುವಲ್ಲಿ ಪರಿಣಮಿಸುತ್ತವೆ. ಮೇಲಾಗಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಗಳು ಪರೋಕ್ಷ ತೆರಿಗೆಗಳಾಗಿರುವ ಕಾರಣದಿಂದಾಗಿ, ಈ ತೆರಿಗೆಗಳ ಹೆಚ್ಚಳವು ಒಂದು ತಿರೋಗಾಮಿ ಕ್ರಮವಾಗಿದೆ. ಈ ಪರೋಕ್ಷ ತೆರಿಗೆಗಳಿಂದಾಗಿ ಬಡವರಿಗೆ ಅತಿ ಹೆಚ್ಚು ಪೆಟ್ಟು ಬೀಳುತ್ತದೆ. ಜೊತೆಗೆ, ಹಣದುಬ್ಬರವನ್ನು ನಿಯಂತ್ರಿಸುವ ಹೊಣೆ ಹೊತ್ತ ಆರ್‌ಬಿಐನ ಜವಾಬ್ದಾರಿಯನ್ನೂ ಕಷ್ಟಕರವಾಗಿಸುತ್ತದೆ.
ಲಾಕ್‌ಡೌನ್‌ಗಳು ಸರಕು-ಸೇವೆಗಳ ಪೂರೈಕೆಗೆ ಅಡ್ಡಿಯಾದವು ಮತ್ತು ಅವುಗಳ ಅಭಾವಕ್ಕೂ ಮತ್ತು ಬೆಲೆ ಏರಿಕೆಗೂ ಕಾರಣವಾದವು. ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ಬೆಲೆಗಳಂತೂ ಹೇಳತೀರದಷ್ಟು ಅಸಾಧಾರಣವಾಗಿ ಏರಿಕೆಯಾದವು. ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆಗಳೂ ಸಹ ಏರಿದವು. ನಗರ ಮಾರುಕಟ್ಟೆಗಳನ್ನು ತಲುಪಲು ಸಾಧ್ಯವಾಗದ ಕಾರಣ, ಹಣ್ಣು ಮತ್ತು ತರಕಾರಿ ಬೆಲೆಗಳು ಏರಿದವು. ಅವುಗಳ ಬೆಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಕುಸಿಯುತ್ತಿದ್ದಾಗ, ನಗರ ಪ್ರದೇಶಗಳಲ್ಲಿ ಅವು ಯದ್ವಾ-ತದ್ವಾ ಏರಿದವು. ಅಸಂಘಟಿತ ವಲಯದಿಂದ ಪೈಪೋಟಿ ಮಾರಾಟ ಎದುರಾಗದ ಸನ್ನಿವೇಶದಲ್ಲಿ ದೊಡ್ಡ ದೊಡ್ಡ ಉದ್ಯಮಗಳು ಬೆಲೆಗಳನ್ನು ಹೆಚ್ಚಿದವು. ತಮ್ಮ ಕೆಲಸಗಾರರಿಗೆ ಅತಿ ಕಡಿಮೆ ಸಂಭಾವನೆ ಕೊಡುತ್ತಿದ್ದುದರ ಹೊರತಾಗಿಯೂ, ಈ ದೊಡ್ಡ ದೊಡ್ಡ ಉದ್ದಿಮೆಗಳು ಮಾರಾಟದ ಬೆಲೆಗಳನ್ನು ಏರಿಸಿದವು. ಪರಿಣಾಮವಾಗಿ, ಕಾರ್ಪೊರೇಟ್ ವಲಯದ ಲಾಭವು ತೀವ್ರವಾಗಿ ಏರಿದೆ.
ಅಂತರರಾಷ್ಟ್ರೀಯ ವಿದ್ಯಮಾನಗಳು ಕೆಲವು ಸರಕುಗಳ ಬೆಲೆಗಳು ಏರುವಲ್ಲಿಯೂ ಪರಿಣಮಿಸಿವೆ. ಪ್ರಮುಖ ಅರ್ಥವ್ಯವಸ್ಥೆಗಳ ಪೈಕಿ ಹೆಚ್ಚಿನವು ಚೇತರಿಸಿಕೊಂಡಿವೆ. ಕಚ್ಚಾ ಸಾಮಗ್ರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ವಾಹನಗಳಿಗೆ ಬಳಸುವ ಇಲೆಕ್ಟ್ರಾನಿಕ್ ಚಿಪ್‌ನಂತಹ ಕೆಲವು ಸಾಮಗ್ರಿಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಲೋಹಗಳಂತಹ ಕೆಲವು ಸರಕುಗಳ ಬೆಲೆಗಳು ಏರಿವೆ. ಆದ್ದರಿಂದ, ಲಾಗುವಾಡುಗಳ ಬೆಲೆ ಹೆಚ್ಚಳವು ಬೆಲೆ ಏರಿಕೆಯ ಮೂಲವೆಂದು ಉದ್ದಿಮೆಗಳು ಹೇಳುತ್ತವೆ. ರೂಪಾಯಿ ದುರ್ಬಲಗೊಂಡಿರುವುದೂ ಸಹ ಹಣದುಬ್ಬರವನ್ನೂ ಹೆಚ್ಚಿಸಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಲಾಕ್‌ಡೌನ್‌ನಿಂದಾಗಿ ಅರ್ಥವ್ಯವಸ್ಥೆಯು ಅನುಭವಿಸಿದ ಒಂದು ಆಘಾತದ ನಂತರದ ಪ್ರಸ್ತುತ ಅಧಿಕೃತ ಹಣದುಬ್ಬರ ದರವು ಬೆಲೆ ಏರಿಕೆಯನ್ನು ನಿಖರವಾಗಿ ಅಳೆದಿಲ್ಲ. ಬೆಲೆ ಸೂಚ್ಯಂಕದ ಏರಿಳಿಕೆಗಳನ್ನು ಲೆಕ್ಕಹಾಕುವ ವಿಧಾನವನ್ನು ಮಾರ್ಪಡಿಸುವ ಅಗತ್ಯವಿದೆ. ಶ್ರೀಮಂತರಲ್ಲದವರು ಎರಡು ರೀತಿಯ ಹೊಡೆತ ತಿಂದಿದ್ದಾರೆ – ತಮ್ಮ ಆದಾಯಗಳ ಇಳಿಕೆಯಿಂದಾದ ನಷ್ಟ ಮತ್ತು ಸರಕುಗಳ ಬೆಲೆ ಏರಿಕೆಯಿಂದಾಗಿ ಅನುಭವಿಸಿದ ಇನ್ನೂ ಹೆಚ್ಚಿನ ನಷ್ಟ. ಈ ವಿದ್ಯಮಾನವು ಒಟ್ಟು ಬೇಡಿಕೆಯನ್ನು ಮೊಟಕುಗೊಳಿಸುತ್ತದೆ. ಇದು ಆರ್ಥಿಕ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.
ಅನು: ಕೆ.ಎಂ. ನಾಗರಾಜ್