ಬೆಂಗಳೂರು : ಬ್ರಿಟನ್ನ ಹೊಸ ರೂಪಾಂತರದ ವೈರಸ್ ಆತಂಕದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಜಾರಿ ಆಗಬೇಕಿದ್ದ ನೈಟ್ ಕರ್ಫ್ಯೂ ರದ್ದಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. 35 ಗಂಟೆಯಲ್ಲಿ ನೈಟ್ ಕರ್ಫ್ಯೂ ವಿಚಾರಕ್ಕೆ ನಾಲ್ಕು ಹೇಳಿಕೆಗಳನ್ನು ಸಿಎಂ ನೀಡಿರುವುದು ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿದೆ. ಕರ್ಫ್ಯೂ ವಿಚಾರಕ್ಕೆ ಸಿಎಂ ಒತ್ತಡಕ್ಕೆ ಸಲುಕಿದ್ರಾ? ಎನ್ನುವ ಪ್ರಶ್ನೆ ಮೂಡುತ್ತಿದೆ. ಸಾರ್ವಜನಿಕರ ಕೋಪದ ಜೊತೆಯಲ್ಲಿ ಅವರದ್ದೆ ಸಚಿವರ ಕೆಂಗಣ್ಣಿಗೆ ಯಡಿಯೂರಪ್ಪ ಈಗ ಗುರಿಯಾಗಿದ್ದಾರೆ.
ಕರ್ಫ್ಯೂ ಜಾರಿ ಮಾಡುವ ವಿಚಾರಕ್ಕೆ ಸರಕಾರದಲ್ಲಿ ಸಾಕಷ್ಟು ಗೊಂದಲ ಇತ್ತು. 35 ಗಂಟೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಾಲ್ಕು ವಿಭಿನ್ನ ಹೇಳಿಕೆ ನೀಡುವ ಮೂಲಕ ಅವರಿಗೆ ಯಾರಾದರೂ ಒತ್ತಡ ಹೇರಿದ್ದರಾ ಎನ್ನುವಂತಹ ಪ್ರಶ್ನೆ ಹುಟ್ಟಿಕೊಂಡಿದೆ. ಮೊದಲಿಗೆ ಕರ್ಫ್ಯೂ ಗೆ ನೋ ಎಂದಿದ್ದ ಸಿಎಂ ನಂತರ 23 ರಿಂದ ರಾತ್ರಿ 10 ರಿಂದ ಬೆಳಗಿನ ಜಾವ 6 ವರೆಗೆ ಕರ್ಫ್ಯೂ ಹೇರುವುದಾಗಿ ಹೇಳಿಕೆಯನ್ನು ನೀಡಿದ್ದರು. ಸರಕಾರದ ಈ ನಡೆಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ವರ್ಷಾಂತ್ಯದಲ್ಲಿ ಈ ರೀತಿ ಕರ್ಫ್ಯೂ ಜಾರಿ ಮಾಡುವುದರಿಂದ ಬಾರ್ ಅಂಡ್ ರೆಸ್ಟೋರೆಂಟ್, ಓಲಾ, ಉಬರ್ ಸೇರಿದಂತೆ ಖಾಸಗಿ ಸಾರಿಗೆ ಸಂಚಾರಕ್ಕೆ ತೊಂದರೆಯಾಗಲಿದೆ, ಉದ್ಯಮಗಳಿಗೆ ನಷ್ಟವಾಗಲಿದೆ ಎಂಬ ವಿರೋಧ ಎಲ್ಲೆಡೆ ವ್ಯಕ್ತವಾಗಿತ್ತು. ಈ ನೈಟ್ ಕರ್ಫ್ಯೂನಿಂದಾಗಿ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಸಮಯದ ಅಧಿಕ ವಹಿವಾಟಿಗೆ ಹೊಡೆತ ಬೀಳಲಿದೆ. ಈ ಹಿನ್ನಲೆ ಈ ಕರ್ಫ್ಯೂ ಅವಧಿಯನ್ನು ಒಂದೂವರೆ ಗಂಟೆಗಳ ಕಾಲ ತಡವಾಗಿ ಹೇರುವಂತೆ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ಹಲವರು ಬೇಡಿಕೆ ಇರಿಸಿದ್ದರು. ಈ ಬೇಡಿಕೆ ಮನಗಂಡ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿ ಇಂದು ರಾತ್ರಿ 11 ರಿಂದ ಕರ್ಫ್ಯೂ ಜಾರಿ ಮಾಡುವುದಾಗಿ ತೀರ್ಮಾನಿಸಿತ್ತು.
ಈಗ ಮತ್ತೆ ಕರ್ಫ್ಯೂ ಆದೇಶವನ್ನು ರಾಜ್ಯ ಸರಕಾರ ವಾಪಸ್ಸ ಪಡೆದಿದೆ. ಒಟ್ಟಾರೆ ಯಡಿಯೂರಪ್ಪ 35 ಗಂಟೆಯಲ್ಲಿ ನಾಲ್ಕು ಬಾರಿ ಹೇಳಿಕೆಯನ್ನು ಬದಲಾಯಿಸಿದ್ದಾರೆ. ಈ ಅಂಶವೇ ಯಡಿಯೂರಪ್ಪ ಮೇಲೆ ಒತ್ತಡ ಇತ್ತು ಎನ್ನುವದನ್ನು ತೋರಿಸುತ್ತದೆ. ಇಲ್ಲದೆ ಇದ್ದ ಗೊಂದಲವನ್ನು ಸೃಷ್ಟಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಯಡಿಯೂರಪ್ಪ ಸರಕಾರಕ್ಕೆ ತಲೆ ಕೆಟ್ಟಿದೆಯಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ಫ್ಯೂ ವಿಚಾರಕ್ಕೆ ಮುಖ್ಯಮಂತ್ರಿ ಮತ್ತು ವೈಧ್ಯಕೀಯ ಶಿಕ್ಷಣ ಸಚಿವ ಸುಧಾಕರ ನಡುವೆ ಒಮ್ಮತ ಇರಲಿಲ್ಲ ಎಂದು ಬಿಜೆಪಿ ವಲಯದಲ್ಲಿಯೇ ಮಾತುಗಳು ಕೇಳಿ ಬರುತ್ತಿವೆ. ಯಡಿಯೂರಪ್ಪ ಕರ್ಫ್ಯೂ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿದರೆ, ಸುಧಾಕರ ಜಾರಿಯಾಗಲಿದೆ ಎಂಬ ಗೊಂದಲದ ಹೇಳಿಕೆಗಳನ್ನು ನೀಡ್ತಾ ಇದ್ದದ್ದನ್ನು ನಾವು ಗಮನಿಸಿದ್ದೇವೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ವಿಚಾರವಾಗಿ ಉತ್ತರ ಕರ್ನಾಟಕ ಭಾಗದ ಕೆಲವು ಸಚಿವರು ಆಸಕ್ತಿ ಹೊಂದಿಲ್ಲ ಎಂದು ತಿಳಿದು ಬಂದಿದೆ.
ಉತ್ತರ ಕರ್ನಾಟಕದ ಸಚಿವರು ಮತ್ತು ಬಿಜೆಪಿಯ ಶಾಸಕರು ಕರ್ಫ್ಯೂ ನಿರ್ಧಾರಕ್ಕೆ ಆಂತರಿಕವಾಗಿ ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದು ರಾಜಧಾನಿ ಕೇಂದ್ರಿತ ತೀರ್ಮಾನವಾಗಿದ್ದು ಬೆಂಗಳೂರಿನ ಸಚಿವರ ಮಾತನ್ನೇ ಸಿಎಂ ಬಿ.ಎಸ್.ಯಡಿಯೂರಪ್ಪ ಕೇಳಿದಾಗ ಕೆಲವು ಸಲ ಹೀಗಾಗಿ ಬಿಡುತ್ತದೆ. ರಾಜ್ಯ ರಾಜಧಾನಿ ಕೇಂದ್ರಿತ ತೀರ್ಮಾನಗಳನ್ನು ತೆಗೆದುಕೊಂಡಾಗ ಹೀಗಾಗುತ್ತದೆ. ಹಾಗಾಗಿ, ಬೆಂಗಳೂರು ಕೇಂದ್ರಿತ ತೀರ್ಮಾನಗಳಲ್ಲಿ ನಾವು ಕೂಡ ಹೆಚ್ಚು ತಲೆ ಹಾಕಲು ಸಾಧ್ಯವಾಗಲ್ಲ ಎಂದು ಸಚಿವರು ಅಸಮಧಾನ ವ್ಯಕ್ತ ಪಡಿಸುತ್ತಿರುವ ಅಂಶವೂ ಕೂಡಾ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ.
ಬ್ರಿಟನ್ ನಲ್ಲಿ ಕಾಣಿಸಿಕೊಂಡಿರುವ ವೈರಾಣು ಅಪಾಯಕಾರಿಯಲ್ಲ. ರಾಜ್ಯ ಸರಕಾರ ರಾತ್ರಿ ಕರ್ಫ್ಯೂ ಹೇರಲು ನಿರ್ಧರಿಸಿದ್ದು ಸರಿಯಲ್ಲ. ವೈರಾಣು ಈಗ ಶಕ್ತಿಯನ್ನು ಕಳೆದುಕೊಂಡಿದೆ. ಇದನ್ನು ಎಲ್ಲೂ ಘೋಷಣೆ ಮಾಡುತ್ತಿಲ್ಲ. ಕೇವಲ ಹರಡುವಿಕೆಯನ್ನು ಮಾತ್ರ ಹರಿ ಬಿಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಇದಕ್ಕೆ ನಾವು ಹೆದರಬೇಕಿಲ್ಲ. ಮಾಸ್ಕ್ ಹಾಕುವ ಮೂಲಕ, ದೈಹಿಕ ಅಂತರ ಕಾಪಾಡುವ ಮೂಲಕ ಮುಂಜಾಗೃತ ಕ್ರಮ ವಹಿಸಿದರೆ ಸಾಕು ಎಂದು ಜನಪರ ವೈಧ್ಯರಾದ ಡಾ. ಅನಿಲ್ ಕುಮಾರ್ ರವರು ತಿಳಿಸಿದ್ದಾರೆ.
ಆಡಳಿತ ನಡೆಸುವ ಸರಕಾರ ಜಾಗೃತಿಯ ಮೂಲಕ ದೈರ್ಯ ನೀಡಬೇಕೆ ಹೊರೆತು ಭಯ ಹುಟ್ಟಿಸುವ ಕೆಲಸವನ್ನು ಮಾಡಬಾರದು. ಸರಕಾರದ ಈ ನಿರ್ಧಾರದಿಂದ ಈಗಾಗಲೇ ಸಾಕಷ್ಟು ನಷ್ಟವಾಗಿದೆ. ಕರ್ಫ್ಯೂವನ್ನು ಸಮರ್ಥನೆ ಮಾಡಿಕೊಳ್ಳಲು ಬಲವಾದ ಕಾರಣ ಇಲ್ಲದೆ ಇರುವುದರಿಂದ ಸರಕಾರ ಮುಖಭಂಗವನ್ನು ಅನುಭವಿಸಿದೆ. ರಾತ್ರಿ ಕರ್ಫ್ಯೂ ಹೇರಲು ಸರಕಾರದ ಮೇಲೆ ಸಾಕಷ್ಟು ಒತ್ತಡ ಹಾಕಿದ್ದ ದೃಶ್ಯ ಮಾಧ್ಯಮಗಳ ಸ್ಥಿತಿ ಈಗ ಇಂಗುತಿಂದ ಮಂಗನಂತಾಗಿದೆ. ಸರಕಾರ ಈ ರೀತಿ ಗೊಂದಲಕ್ಕೆ ಒಳಗಾಲು ಬಿಜೆಪಿಯಲ್ಲಿ ಕಿತ್ತಾಟವೆ ಮುಖ್ಯವಾಗಿದೆ. ಈಗಾಗಲೆ ಯಡಿಯೂರಪ್ಪನವರ ಮೇಲೆ ಒಲುವನ್ನು ಕಳೆದುಕೊಂಡಿರುವ ಆರ್.ಎಸ್.ಎಸ್. ಯಡಿಯೂರಪ್ಪನವರನ್ನು ಕೆಳಗಿಳಿಸಲು ಈ ಷಡ್ಯಂತ್ರವನ್ನು ಹೆಣದಿರಬಹುದು ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಕೊನೆಗೂ ನೈಟ್ ಕರ್ಫ್ಯೂಗೆ ಬ್ರೆಕ್ ಬಿದ್ದಿದ್ದು ಬಿಜೆಪಿ ತಿಕ್ಕಾಟ ಜನರಿಗೆ ಪೀಕಲಾಟ ಎಂಬ ಸ್ಥಿತಿ ನಿರ್ಮಾಣವಾಗಿದ್ದಂತು ನಿಜವಾಗಿದೆ.