ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ತಿಂಗಳಾಂತ್ಯದವರೆಗೆ ವಿಸ್ತರಣೆ

ಬೆಂಗಳೂರು: ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗದೆ ವ್ಯಾಪಿಸುತ್ತಿರುವ ಕರೊನಾ ಸೋಂಕಿನ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸಭೆ ನಡೆಸಿದ್ದು, ಒಂದಷ್ಟು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಸಭೆ ನಡೆಸಿದ ಸಿಎಂ ಬೊಮ್ಮಾಯಿ, ಬೂಸ್ಟರ್ ಡೋಸ್ ಅಭಿಯಾನಕ್ಕೆ ವೇಗ ಕೊಡಲು ಸೂಚನೆ ನೀಡಿದರು. ಸೋಂಕಿತರಾಗಿ ಹೋಮ್​ ಐಸೋಲೇಷನ್​​ನಲ್ಲಿ ಇರುವವರ ಮೇಲೆ ಹೆಚ್ಚಿನ ನಿಗಾ ಇಡಲು ತಿಳಿಸಿರುವ ಅವರು, ಸೋಂಕು ಕಡಿಮೆ ಆಗುವವರೆಗೂ ಐಸೋಲೇಷನ್​ನಲ್ಲೇ ಇರಿಸುವಂತೆ ತಿಳಿಸಿದರು.

ಕೋವಿಡ್​ ಸ್ಥಿತಿಗತಿ ಕುರಿತು ಸಿಎಂ ಇಂದು ನಡೆಸಿದ ಸಭೆಯ ಮುಖ್ಯಾಂಶಗಳು

ಕೋವಿಡ್ ಮುಂಜಾಗ್ರತೆ ಕ್ರಮವಾಗಿ ಜಾರಿಗೊಳಿಸುವ ಮಾರ್ಗಸೂಚಿಗಳು ಈ ತಿಂಗಳ ಅಂತ್ಯದವರೆಗೂ ವಿಸ್ತರಣೆ.

ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ವಾರ್ಡ್, ಐಸಿಯುಗಳನ್ನು ಮೀಸಲಿರಿಸಲು ಸೂಚನೆ.

ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲು ನಿರ್ಧಾರ.

ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಎಲ್ಲ ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಮಕ್ಕಳ ಸಾಮಾನ್ಯ ಆರೋಗ್ಯ ತಪಾಸಣೆ ಮಾಡುವಂತೆ ಸೂಚನೆ.

ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ವಿಧಿಸಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ.

ಮೂರನೇ ಅಲೆಯಲ್ಲಿ ಹೋಮ್ ಐಸೋಲೇಷನ್​ನಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ನಿಯಮಿತವಾಗಿ ಮಾಡುವಂತೆ ಹಾಗೂ ಸೂಕ್ತ ಔಷಧಗಳ ಕಿಟ್ ಒದಗಿಸುವಂತೆ ಸೂಚನೆ.

ಪರೀಕ್ಷಾ ವರದಿ ಬಂದ ಕೂಡಲೇ ಸೋಂಕಿತರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಆಸ್ಪತ್ರೆಗೆ ದಾಖಲಿಸುವ ಅಗತ್ಯವಿದೆಯೇ ಇಲ್ಲವೇ ಎಂದು ನಿರ್ಧರಿಸುವ ಟ್ರಯಾಜಿಂಗ್ ವ್ಯವಸ್ಥೆ ಬಲಪಡಿಸುವಂತೆ ಸೂಚನೆ.

ಹೋಮ್ ಐಸೊಲೇಷನ್ ಮತ್ತು ಟ್ರಯಾಜಿಂಗ್ ಪ್ರಕ್ರಿಯೆಯಲ್ಲಿ ಹೌಸ್ ಸರ್ಜನ್ ವೈದ್ಯರು ಹಾಗೂ ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ನಿರ್ಧಾರ.

ಬೆಂಗಳೂರಿನಲ್ಲಿ ಕೂಡಲೇ 27 ಕೋವಿಡ್ ಕೇರ್ ಸೆಂಟರುಗಳನ್ನು ಪ್ರಾರಂಭಿಸಲು ಸೂಚನೆ.
ಮುಂಬರುವ ಸಂಕ್ರಾಂತಿ, ವೈಕುಂಠ ಏಕಾದಶಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಕಂದಾಯ ಮತ್ತು ಮುಜರಾಯಿ ಇಲಾಖೆಗೆ ನಿರ್ದೇಶನ.

ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದು 9 ತಿಂಗಳು ಪೂರೈಸಿದ ಮುಂಚೂಣಿಯ ಕಾರ್ಯಕರ್ತರಿಗೆ ಮೂರನೇ ಡೋಸ್ ಆದ್ಯತೆಯ ಮೇರೆಗೆ ನೀಡಲು ಸೂಚನೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 1.3 ಲಕ್ಷ ವರೆಗೆ ಹೆಚ್ಚಿಸಲು ನಿರ್ದೇಶನ.
ಯಾವುದೇ ರೀತಿಯ ಸಾರ್ವಜನಿಕ ಸಮಾವೇಶಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ.

ಮಾರುಕಟ್ಟೆ ಪ್ರದೇಶದಲ್ಲಿ ಜನದಟ್ಟಣೆ ಕಡಿಮೆಗೊಳಿಸಲು ವಸ್ತುಸ್ಥಿತಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ. ಬೆಂಗಳೂರು ಸೇರಿ ನಗರ ಪ್ರದೇಶಗಳಲ್ಲಿ ಮಾರುಕಟ್ಟೆಗಳ ವಿಕೇಂದ್ರೀಕರಣಕ್ಕೆ ಚಿಂತನೆ.

ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ನಿಭಾಯಿಸುವ ಸಿದ್ಧತೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಲು ನಿರ್ದೇಶನ.

ಶಾಲಾ ಮಕ್ಕಳಲ್ಲಿ ಕೋವಿಡ್ ಹೆಚ್ಚುತ್ತಿರುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಪ್ರಕರಣಗಳ ಸಂಖ್ಯೆ ಮೇರೆಗೆ ಬಿಇಒ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ವರದಿ ಆಧರಿಸಿ, ಶಾಲೆಗಳನ್ನು ಮುಚ್ಚುವ ಕುರಿತು ತೀರ್ಮಾನ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಬಿ.ಸಿ. ನಾಗೇಶ್, ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಮತ್ತು ಇತರ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *