ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಗೆ ಮುಖ್ಯಮಂತ್ರಿಯಾದ ಬಳಿಕ ಬಸವರಾಜ ಬೊಮ್ಮಾಯಿ ಮೊದಲ ಭೇಟಿ ಮಾಡುತ್ತಿದ್ದು, ಮುಖ್ಯಮಂತ್ರಿಗಳ ಭೇಟಿಗೆ ಸ್ವಾಗತ ಕೋರಿ ಹಾಕಲಾಗಿರುವ ಒಂದು ವಿಶಿಷ್ಟ ಬ್ಯಾನರ್ ಪ್ರದರ್ಶನಗೊಳ್ಳುತ್ತದೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಶೃಂಗೇರಿಗೆ ಭೇಟಿ ನೀಡಲಿದ್ದು, ಅವರನ್ನು ವಿಶೇಷವಾಗಿ ಸ್ವಾಗತಿಸಲು ಸ್ಥಳೀಯರ ಬ್ಯಾನರ್ ವೊಂದನ್ನು ಹಾಕಿದ್ದಾರೆ.
ಇದನ್ನು ಓದಿ: ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಶೃಂಗೇರಿ ಬಂದ್
“ದಯವಿಟ್ಟು ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು” ಎಂದು ಸಿಎಂ ಗೆ ಸೂಚಿಸುತ್ತಿರುವ ಬ್ಯಾನರ್ ಗಮನ ಸೆಳೆಯುತ್ತಿದೆ. ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ 15 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಪದೇ ಪದೇ ಮಾತು ತಪ್ಪುತ್ತಿದೆ. ಹೀಗಾಗಿ ಸಿಎಂ ಗೆ ಸ್ವಾಗತ ಕೋರಿ ನಿಧಾನವಾಗಿ ಚಲಿಸುವಂತೆ ಎಚ್ಚರಿಸುವ ಬ್ಯಾನರ್ ಹಾಕಿದ್ದಾರೆ.
ಶೃಂಗೇರಿಯಲ್ಲಿ ಆಸ್ಪತ್ರೆ ಬೇಕು ಎಂದು ನೂರು ಬೆಡ್ ಹೋರಾಟ ಸಮಿತಿಯ ಹೋರಾಟಗಾರರು ಮುಖ್ಯಮಂತ್ರಿಗೆ ಮನವಿ ಮಾಡಿದ್ದು, “ಶಂಗೇರಿ ಸುಸಜ್ಜಿತ ಆಸ್ಪತ್ರೆ ಮಂಜೂರಾರಿ ಕಡತವು 15 ವರ್ಷಗಳಿಂದ ಪ್ರಗತಿಯಲ್ಲಿದೆ. ತೀವ್ರ ಅನಾರೋಗ್ಯ ಸಂದರ್ಭದಲ್ಲಿ ಸುಮಾರು ನೂರು ಕಿ.ಮೀ ದೂರದ ಆಸ್ಪತ್ರೆಗೆ ತೆರೆಳಬೇಕಾದ ಕಾರಣ, ದಯವಿಟ್ಟು ತಮ್ಮ ಹಾಗೂ ನಮ್ಮ ಊರಿನವರ ಸುರಕ್ಷತೆಯ ದೃಷ್ಟಿಯಿಂದ ವಾಹನದಲ್ಲಿ ನಿಧಾನವಾಗಿ ಚಲಿಸಿ” ಎಂದು ಬರೆಯಲಾಗಿದೆ.