ದುರಂತದ ನಡುವೆ ಮಾನವತೆ ಮೆರೆದ ಚೇತನ ನಿಕೋಲಸ್ ವಿಂಟನ್

ಮೂಲ : ನ್ಯೂಯಾರ್ಕ್‌ ಟೈಮ್ಸ್‌ ಜುಲೈ 1 2015
ಸಂಗ್ರಹಾನುವಾದ : ನಾ ದಿವಾಕರ

ಹಡಗಿನಲ್ಲಿದ್ದ 250 ಮಕ್ಕಳಲ್ಲಿ ಯಾರೂ ಮತ್ತೆ ಕಾಣಿಸಲಿಲ್ಲ. ಎಲ್ಲರೂ ಯಾತನಾ ಶಿಬಿರಗಳಲ್ಲಿ ಬಲಿಯಾದರು ಎಂದು ನಂಬಲಾಗಿತ್ತು. ರಕ್ಷಿಸಲ್ಪಟ್ಟ ಬಹುತೇಕ ಎಲ್ಲಾ ಮಕ್ಕಳು ಯುದ್ಧದ ಅಂತ್ಯದ ವೇಳೆಗೆ ಅನಾಥರಾಗಿದ್ದರು. ಅವರ ಪೋಷಕರು ಆಶ್‌ವಿಟ್ಜ್‌ , ಬರ್ಗೆನ್-ಬೆಲ್ಸೆನ್ ಅಥವಾ ಥೆರೆಸಿಯೆನ್‌ ನಾಡಿನಲ್ಲಿ ಕೊಲ್ಲಲ್ಪಟ್ಟರು. ಯುದ್ಧದ ನಂತರ ಅನೇಕರು ಬ್ರಿಟನ್ನಲ್ಲಿ ಉಳಿದರು ಇತರರು ಜೆಕೊಸ್ಲೊವಾಕಿಯಾಕ್ಕೆ ಮರಳಿದರು ಅಥವಾ ಇಸ್ರೇಲ್, ಆಸ್ಟ್ರೇಲಿಯಾ ಅಥವಾ ಅಮೆರಿಕಕ್ಕೆ ವಲಸೆ ಹೋದರು. ಬದುಕುಳಿದವರು 80ರ ಆಸುಪಾಸಿನಲ್ಲಿದ್ದು ಈಗಲೂ ತಮ್ಮನ್ನು ವಿಂಟನ್ ಮಕ್ಕಳು ಎಂದು ಕರೆದುಕೊಳ್ಳುತ್ತಾರೆ.

ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಜೆಕೋಸ್ಲೋವೇಕಿಯಾದ 669 ಮಕ್ಕಳನ್ನು ಹಿಟ್ಲರನ ನಾಝಿಗಳಿಂದ ರಕ್ಷಿಸಿದ ಮಹಾನ್‌ ಚೇತನ

ಎರಡನೇ ಮಹಾಯುದ್ಧದ ಮುನ್ನಾ ದಿನದಂದು ಜೆಕೊಸ್ಲೊವಾಕಿಯಾದಿಂದ 669 ಯಹೂದಿ ಮಕ್ಕಳನ್ನು ರಕ್ಷಿಸಿ ಪಲಾಯನ ಮಾಡುವಲ್ಲಿ ತಾವು ನಿರ್ವಹಿಸಿದ ಪಾತ್ರದ ಬಗ್ಗೆ ಅರ್ಧ ಶತಮಾನದವರೆಗೆ ಏನನ್ನೂ ಹೇಳದೆ ಮೌನವಾಗಿದ್ದ  ಬ್ರಿಟನ್ ಪ್ರಜೆ ನಿಕೋಲಸ್ ವಿಂಟನ್ ಜುಲೈ 1 2015ರಂದು ಇಂಗ್ಲೆಂಡಿನ ಮೇಡನ್‌ಹೇಡ್ ತಮ್ಮ 106ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು. ಮೇಡನ್‌ಹೇಡ್‌ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿದ್ದ ವಿಂಟನ್‌ ನಿಕೋಲಾಸ್‌ ತಮ್ಮ ಸಾಹಸಗಾಥೆಯನ್ನು ಬಹಿರಂಗಪಡಿಸದೆ, ಬಹುತೇಕ 50 ವರ್ಷಗಳ ಕಾಲ ಒಡಲಲ್ಲೇ ಇಟ್ಟುಕೊಂಡಿದ್ದರು. ವಿಂಟನ್ ಅವರ ಪತ್ನಿ 1988 ರಲ್ಲಿ ತಮ್ಮ ಮನೆಯ ಅಟ್ಟಣಿಗೆಯಲ್ಲಿ ಧೂಳು ಹಿಡಿದಿದ್ದ ಹಳೆಯ Scrap book ( ಸುದ್ದಿ-ಮಾಹಿತಿ ತುಣುಕುಗಳನ್ನು ಅಂಟಿಸಿದ ಪುಸ್ತಕ) ಕಂಡುಕೊಂಡ ನಂತರವೇ  ಹತ್ಯಾಕಾಂಡದಿಂದ ವಿಮೋಚನೆಯ ಕಥೆಯನ್ನು ವಿವರಿಸುವ ಹೆಸರುಗಳು, ಚಿತ್ರಗಳು ಮತ್ತು ದಾಖಲೆಗಳೆಲ್ಲವೂ ಲಭ್ಯವಾಗಿದ್ದವು.  ಆನಂತರವಷ್ಟೇ ವಿಂಟನ್‌ ಅವರು ನಾಝಿ ಶಿಬಿರಗಳಿಂದ ಮಕ್ಕಳ ಬಿಡುಗಡೆಯಲ್ಲಿ ಅವರ ಮಹತ್ತರ ಪಾತ್ರದ ಬಗ್ಗೆ ಮಾತನಾಡಲಾರಂಭಿಸಿದ್ದರು. ನಾಝಿ ಸೆರೆಮನೆಗಳ ಯಾತನಾ ಶಿಬಿರಗಳಲ್ಲಿ ಬಲಿಯಾಗಬೇಕಿದ್ದ ಹೊರಟಿದ್ದ ನೂರಾರು ಎಳೆಯ ಜೀವಗಳನ್ನು ಉಳಿಸಲು ವಿಂಟನ್‌ ಹೆತ್ತ ಪೋಷಕರಂತೆ ಹೋರಾಡಿ ಶ್ರಮವಹಿಸಿದ್ದು ಇತಿಹಾಸದ ಒಂದು ದಂತಕತೆ.

ವಿಂಟನ್‌ ನಿಕೋಲಸ್‌ ಅವರ ಸಾಹಸಗಾಥೆ ಮತ್ತು ಮಾನವೀಯ ಶ್ರಮವನ್ನು ಹಲವಾರು ಪುಸ್ತಕಗಳು ಮತ್ತು ಚಲನಚಿತ್ರಗಳಲ್ಲಿ ಗೌರವಪೂರ್ವಕವಾಗಿ ನೆನೆಯುವುದೇ ಅಲ್ಲದೆ, ಅತ್ಯಂತ ಗೌರವಯುತವಾಗಿ ಕಾಣಲಾಗಿದ್ದರೂ ವಿಂಟನ್ ಅವರು ಸ್ವತಃ ಒಬ್ಬ ನೇತಾರರಾಗಿ ಬಿಂಬಿಸಿಕೊಳ್ಳಲು ಇಚ್ಚಿಸಿರಲಿಲ್ಲ. ಪೋಲೆಂಡ್ ಮತ್ತು ಜೆಕೊಸ್ಲೊವಾಕಿಯಾದಲ್ಲಿನ ತನ್ನ ದಂತಕವಚ ಮತ್ತು ಶಸ್ತ್ರಾಸ್ತ್ರ ಕಾರ್ಖಾನೆಗಳಲ್ಲಿ 1,200 ಯಹೂದಿಗಳನ್ನು ನೇಮಿಸಿಕೊಳ್ಳುವ ಮೂಲಕ ಅವರನ್ನು ರಕ್ಷಿಸಿದ ಜರ್ಮನ್ ಜನಾಂಗೀಯ ಷಿಂಡ್ಲರ್ ಮತ್ತು ನಾಜಿ ಆಕ್ರಮಿತ ಹಂಗೇರಿಯಲ್ಲಿ ಸಾವಿರಾರು ಯಹೂದಿಗಳನ್ನು ಉಳಿಸಲು ಅಕ್ರಮ ಪಾಸ್‌ಪೋರ್ಟ್‌ಗಳು ಮತ್ತು ಅಡಗುತಾಣಗಳನ್ನು ಬಳಸಿದ ಸ್ವೀಡನ್‌ನ ಉದ್ಯಮಿ ಮತ್ತು ರಾಜತಾಂತ್ರಿಕ ವಾಲನ್‌ಬರ್ಗ್‌ ಅವರೊಂದಿಗೆ ವಿಂಟನ್‌ ನಿಕೊಕೋಲಾಸ್‌ ಅವರನ್ನು ಹೋಲಿಸಲಾಗುತ್ತದೆ.

‌ನಾಝಿ ದಾಳಿಯ ಭಯಾನಕ ಸನ್ನಿವೇಶ

2003ರಲ್ಲಿ ಬ್ರಿಟನ್‌ನ‌ ರಾಣಿ ಎಲಿಜಬೆತ್‌ -2 ಅವರಿಂದ ನೈಟ್‌ ಹುದ್ದೆಯನ್ನು ಪಡೆದು ಸರ್‌ ವಿಂಟನ್ ನಿಕೋಲಸ್ಎಂದು ಕರೆಯಲ್ಪಡುತ್ತಿದ್ದ ವಿಂಟನ್‌ ನಿಕೋಲಸ್ 1938ರಲ್ಲಿ ಲಂಡನ್ನ ಸ್ಟಾಕ್ ಬ್ರೋಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ವಿಜರ್‌ಲೆಂಡಿನಲ್ಲಿ ಸ್ಕೀಯಿಂಗ್‌ ಮಾಡಲೆಂದು ಪಡೆದಿದ್ದ ರಜೆಯನ್ನು ರದ್ದುಗೊಳಿಸಿ ಜರ್ಮನಿಯಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟ ಚೆಕೊಸ್ಲೊವಾಕಿಯಾದ ಪಶ್ಚಿಮ ಪ್ರದೇಶವಾದ ಸುಡೆಟೆನ್ ಲ್ಯಾಂಡ್ ನಲ್ಲಿ ನಿರಾಶ್ರಿತರಿಗೆ ಸಹಾಯ ಮಾಡುತ್ತಿದ್ದ ಸ್ನೇಹಿತನ ಆಜ್ಞೆಯ ಮೇರೆಗೆ ಪ್ರಾಗ್‌ಗೆ ಪ್ರಯಾಣ ಬೆಳೆಸಿದ್ದರು.  ಸುಡೇಟನ್‌ಲ್ಯಾಂಡ್‌ನಲ್ಲಿ ವಿಂಟನ್ ಭಯಾನಕ ಪರಿಸ್ಥಿತಿಗಳಲ್ಲಿ ವಾಸಿಸುವ ನಿರಾಶ್ರಿತರ ದೊಡ್ಡ ಶಿಬಿರಗಳನ್ನು ಗಮನಿಸಿದರು. ಕ್ರಿಸ್ಟಲ್‌ನಾಚ್‌ನಲ್ಲಿ ನಡೆದ ಭೀಕರ ಹತ್ಯಾಕಾಂಡಗಳು, “ನೈಟ್ ಆಫ್ ಬ್ರೋಕನ್ ಗ್ಲಾಸ್” ಸಂಘಟನೆಯು ಜರ್ಮನಿ ಮತ್ತು ಆಸ್ಟ್ರಿಯಾದಲ್ಲಿನ ಯಹೂದಿ ಅಂಗಡಿಗಳ ಮೇಲೆ ಮನೆಗಳ ಮೇಲೆ ಮತ್ತು ಆರಾಧನಾ ಮಂದಿರಗಳ ಮೇಲೆ ನಡೆಸಿದ್ದ ಮಾರಣಾಂತಿಕ ದಾಳಿಯ ಪರಿಣಾಮ ಯುದ್ಧ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.  ಪಶ್ಚಿಮದಲ್ಲಿ ಯಹೂದಿ ವಲಸೆಯ ವಿರುದ್ಧದ ನಿರ್ಬಂಧಗಳ ಹಿನ್ನೆಲೆಯಲ್ಲಿ ಭರವಸೆ ಕಳೆದುಕೊಂಡಿದ್ದ ಮಕ್ಕಳಿಗೆ ತಪ್ಪಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ಬ್ರಿಟನ್ ಇದಕ್ಕೆ ಅಪವಾದವಾಗಿತ್ತು. 1938 ರ ಕೊನೆಯಲ್ಲಿ ಇದು ಕಿಂಡರ್‌ ಟ್ರಾನ್ಸ್‌ಪೋರ್ಟ್‌ (ಮಕ್ಕಳ ಸಾಗಾಣಿಕೆ) ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ತಮ್ಮದೇ ಕುಟುಂಬವನ್ನು ಹೊಂದಿರುವ 17 ವರ್ಷದವರೆಗಿನ ಅನಾಥ ಯಹೂದಿ ಮಕ್ಕಳಿಗೆ ಪ್ರವೇಶ ನೀಡಲು ಪ್ರಾರಂಭಿಸಿತು. ಅಂತಿಮವಾಗಿ ವಾಪಸ್‌ ಹೋಗಲು ಬೇಕಾಗುವ ಟಿಕೆಟ್‌ನ ವೆಚ್ಚ 50-ಪೌಂಡ್‌ಗಳ ವಾರಂಟಿಯನ್ನು ನೀಡಲಾಯಿತು. ಬ್ರಿಟನ್ನಿನ ನಿರಾಶ್ರಿತರ ಮಕ್ಕಳ ಆಂದೋಲನವು ಜರ್ಮನಿ ಮತ್ತು ಆಸ್ಟ್ರಿಯಾಕ್ಕೆ ಪ್ರತಿನಿಧಿಗಳನ್ನು ಕಳುಹಿಸಿತು ಮತ್ತು ಯುದ್ಧ ಪ್ರಾರಂಭವಾಗುವ ಮೊದಲು 10,000 ಯಹೂದಿ ಮಕ್ಕಳನ್ನು ಉಳಿಸಲಾಯಿತು.

ಆದರೆ ಚೆಕೊಸ್ಲೊವಾಕಿಯಾದಲ್ಲಿ ಇದಕ್ಕೆ ಹೋಲಿಸಬಹುದಾದ ಯಾವುದೇ ಸಾಮೂಹಿಕ-ರಕ್ಷಣಾ ಪ್ರಯತ್ನಗಳು ಇರಲಿಲ್ಲ. ಮಿಸ್ಟರ್ ವಿಂಟನ್ ನಿಕೋಲಸ್ ಇಂತಹ ಒಂದು ಪ್ರಯತ್ನಕ್ಕೆ ಕೈಹಾಕಿದ್ದರು. ನಿಕೋಲಸ್ ಅವರು ರೂಪಿಸಿದ ಕಾರ್ಯಾಚರಣೆಯಲ್ಲಿ ಹಲವು ಅಪಾಯಗಳು, ಅಡೆತಡೆಗಳೂ ಇದ್ದವು.   ಲಂಚಗುಳಿತನ, ವಂಚನೆ, ಫೋರ್ಜರಿ ,  ಗೆಸ್ಟಾಪೊದೊಂದಿಗೆ ರಹಸ್ಯ ಸಂಪರ್ಕಗಳು, ಒಂಬತ್ತು ರೈಲು-ರಸ್ತೆ ರೈಲುಗಳು, ಅಪಾರ ಪ್ರಮಾಣದ ಕಾಗದ ಪತ್ರಗಳು ಹಾಗೂ ಸಾಕಷ್ಟು ಹಣಕಾಸು ವೆಚ್ಚವನ್ನೂ ಒಳಗೊಂಡಿತ್ತು. ನಾಝಿ ಏಜೆಂಟರು ವಿಂಟನ್‌ ಅವರನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಅವರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರಲು ಹತಾಶರಾಗಿ ಭಯಭೀತರಾಗಿದ್ದ  ಪೋಷಕರನ್ನು ತಾವು ತಂಗಿದ್ದ ಪ್ರಾಗ್‌ನ ಹೋಟೆಲ್ ಕೋಣೆಯಲ್ಲಿ ಸಂಧಿಸಿದರು. ಆದರೂ ಅವರನ್ನು ವಿದೇಶದಲ್ಲಿ ಅಪರಿಚಿತರಿಗೆ ಒಪ್ಪಿಸುವುದು ಕಾರ್ಯಯೋಜನೆಯಾಗಿತ್ತು.

ಅವರ ಸಂಖ್ಯೆ ಹೆಚ್ಚಾದಂತೆ ಕಚೇರಿ ಮಳಿಗೆಯೊಂದನ್ನು ತೆರೆಯಲಾಯಿತು. ಮಳಿಗೆಯ ಮುಂದಿನ ಜನರ ಉದ್ದನೆಯ ಸಾಲುಗಳು ಗೆಸ್ಟಾಪೊ ಗಮನಸೆಳೆದಿದ್ದವು. ಈ ಅಪಾಯಕಾರಿ ಸನ್ನಿವೇಶವನ್ನು ಪರಿಹರಿಸಲು ಲಂಚ ನೀಡಬೇಕಾಯಿತು. ವಿಂಟನ್‌ ನಿಕೋಲಸ್ 5,000 ಮಕ್ಕಳ ಹೆಸರುಗಳು ಮತ್ತು ವಿವರಗಳನ್ನು ಹೊಂದಿದ್ದರೂ ಸಹ  ಅಂತಿಮವಾಗಿ 900 ಕ್ಕೂ ಹೆಚ್ಚು ಮಕ್ಕಳನ್ನು ನೋಂದಾಯಿಸಿದರು. 1939 ರ ಆರಂಭದಲ್ಲಿ, ಅವರು ಟ್ರೆವರ್ ಚಾಡ್‌ವಿಕ್‌ ಮತ್ತು ಬಿಲ್ ಬರಾಝೆಟಿ ಎಂಬ ಇಬ್ಬರು ಸ್ನೇಹಿತರಿಗೆ ಪ್ರಾಗ್‌ನ ಉಸ್ತುವಾರಿ ವಹಿಸಿ, ಮಕ್ಕಳಿಗಾಗಿ ತಂಗುದಾಣಗಳನ್ನು ಹುಡುಕಲು, ಹಣವನ್ನು ಸಂಗ್ರಹಿಸಲು ಮತ್ತು ಸಾರಿಗೆ ವ್ಯವಸ್ಥೆ ಮಾಡಲು ಲಂಡನ್‌ಗೆ ಮರಳಿದರು. ಲಂಡನ್‌ನಲ್ಲಿ ವಿಂಟನ್‌ ನಿಕೋಲಸ್‌ ಹಾಗೂ ಅವರ ತಾಯಿ ಸೇರಿದಂತೆ ಕೆಲವು ಸ್ವಯಂಸೇವಕರು ತಮ್ಮನ್ನು ಚೆಕೊಸ್ಲೊವಾಕಿಯಾದಿಂದ ಬಂದ ನಿರಾಶ್ರಿತರ ಬ್ರಿಟಿಷ್ ಸಮಿತಿಯ ಮಕ್ಕಳ ವಿಭಾಗ ಎಂದು ಗುರುತಿಸಿಕೊಂಡರು ತದನಂತರ ನಿರಾಶ್ರಿತ ಮಕ್ಕಳ ಚಳವಳಿಯಿಂದ ಸಹಾಯವನ್ನು ಪಡೆದು ಮಕ್ಕಳ ಫೋಟೋಗಳನ್ನು ಮುದ್ರಿಸಿದರು ಮತ್ತು ಪತ್ರಿಕೆ ಜಾಹೀರಾತುಗಳಲ್ಲಿ ಮತ್ತು ಚರ್ಚ್ ಮತ್ತು ಆರಾಧನಾ ಮಂದಿರಗಳ ಸುದ್ದಿಪತ್ರಿಕೆಗಳ ಮೂಲಕ ಹಣಕಾಸು ಹಾಗೂ ಮಕ್ಕಳಿಗೆ ಆಶ್ರಯ ನೀಡುವ ತಂಗುದಾಣಗಳಿಗಾಗಿ  ಮನವಿ ಮಾಡಿದರು.

ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು

ನೂರಾರು ಕುಟುಂಬಗಳು ಮಕ್ಕಳನ್ನು ಕರೆದೊಯ್ಯಲು ಸ್ವಯಂಪ್ರೇರಿತರಾಗಿ ಮುಂದೆ ಬಂದವು. ದಾನಿಗಳಿಂದ ಅಪಾರ ಹಣವೂ ಹರಿದುಬಂದಿತ್ತು. ಆದರೆ ಸಂಗ್ರಹಿಸಿದ ಮೊತ್ತದಿಂದ ಎಲ್ಲಾ ವೆಚ್ಚಗಳನ್ನು ಭರಿಸಲು ಸಾಧ್ಯವಾಗಲಿಲ್ಲವಾದರೂ ವಿಂಟನ್‌ ಸ್ವತಃ ತಾವೇ ಉಳಿದ ವೆಚ್ಚವನ್ನು ಭರಿಸಿದ್ದರು. ಪ್ರವೇಶ ವೀಸಾಗಳಿಗಾಗಿ ಅವರು ಗೃಹ ಕಚೇರಿಗೆ ಮನವಿ ಮಾಡಿದ್ದರೂ  ಪ್ರತಿಕ್ರಿಯೆ ನಿಧಾನವಾಗಿತ್ತು ಮತ್ತು ಸಮಯ ಕಡಿಮೆ ಇತ್ತು. ಇದು ಯುದ್ಧ ಪ್ರಾರಂಭವಾಗುವ ಕೆಲವು ತಿಂಗಳುಗಳ ಮೊದಲು ನಡೆದ ಬೆಳವಣಿಗೆಗಳಾಗಿದ್ದು ತಾವು ಗೃಹ ಕಚೇರಿ ಪ್ರವೇಶ ಪರವಾನಗಿಗಳನ್ನು ನಕಲಿ ಮಾಡಿದ್ದೆವು ಎಂದು ವಿಂಟನ್‌ ನೆನಪಿಸಿಕೊಳ್ಳುತ್ತಾರೆ.

ಅತ್ತ ಪ್ರಾಗ್‌ನಲ್ಲಿ ಚಾಡ್‌ವಿಕ್ ಅವರು ಸದ್ದಿಲ್ಲದೆ ಗೆಸ್ಟಾಪೊದ ಮುಖ್ಯಸ್ಥ ಕಾರ್ಲ್ ಬೊಮೆಲ್‌ಬರ್ಗ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಬೋಮೆಲ್‌ಬರ್ಗ್‌ ಮೂಲತಃ Kriminalrat ಎಂದು ಗುರುತಿಸಲಾಗುತ್ತಿದ್ದ ಇನ್ಸ್‌ಪೆಕ್ಟರ್‌ ಹುದ್ದೆಯಲ್ಲಿದ್ದರು. ಅವರನ್ನು Criminal-Rat ಎಂದೂ ಮೂದಲಿಸಲಾಗುತ್ತಿತ್ತು.  ಅವರ ಮೂಲಕವೇ ನಕಲಿ ಸಾರಿಗೆ ದಾಖಲೆಗಳನ್ನು ಮತ್ತು ಲಂಚದ ಹಣವನ್ನು  ಪ್ರಮುಖ ನಾಜಿಗಳಿಗೆ ಹಾಗೂ ಝೆಕೋಸ್ಲೋವೇಕಿಯಾದ ರೈಲ್ವೆ ಅಧಿಕಾರಿಗಳಿಗೆ ರವಾನಿಸಲು ವ್ಯವಸ್ಥೆ ಮಾಡಿದರು. ಈ ರೀತಿ ಲಂಚ ರೂಪದ ಹಣವನ್ನು ನೀಡದೆ ಹೋದರೆ  ರೈಲುಗಳನ್ನು ನಿಲ್ಲಿಸಿ ಮಕ್ಕಳನ್ನು ವಶಪಡಿಸಿಕೊಳ್ಳುವುದಾಗಿ ಆ ಅಧಿಕಾರಿಗಳು ಬೆದರಿಕೆ ಹಾಗಿದ್ದರು. ಗೆಸ್ಟಾಪೊ ಮುಖ್ಯಸ್ಥರು ಸಾರಿಗೆ ದಾಖಲೆಗಳನ್ನು ಅನುಮೋದಿಸುವಲ್ಲಿ ಹಾಗೂ ರೈಲು ಮಾರ್ಗಗಳನ್ನು ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಚಾಡ್‌ವಿಕ್ ನೆನಪಿಸಿಕೊಳ್ಳುತ್ತಾರೆ.

ಪ್ರತ್ಯೇಕಿಸುವ ಕಬ್ಬಿಣದ ಸರಳುಗಳು

ಲಂಡನ್‌ನಿಂದ ವಿಂಟನ್‌ ನಿಕೋಲಸ್ ವಿಂಟನ್ ಹೆಚ್ಚಿನ ಹಣವನ್ನು ಹೊಂದಿಸಿ ಕಳುಹಿಸಿದ್ದರು.  ಬಂಧನಕ್ಕೊಳಗಾಗಿ ಗುಂಡಿಕ್ಕಿ ಕೊಲ್ಲಲ್ಪಟ್ಟವರ ಪೋಷಕರ ಮಕ್ಕಳ ಹಾಗೂ ತಲೆಮರೆಸಿಕೊಂಡಿರುವ ಮಕ್ಕಳ ವೆಚ್ಚಗಳನ್ನು ಭರಿಸಲು ಈ ಹಣ ವಿನಿಯೋಗವಾಗಿತ್ತು. ಅನೇಕ ಜೆಕ್‌ ಕುಟುಂಬಗಳು  ತಮ್ಮ ಮಕ್ಕಳು ತಪ್ಪಿಸಿಕೊಳ್ಳುವ ಸಲುವಾಗಿ ಆಸ್ತಿಗಳನ್ನು ಮಾರಾಟ ಮಾಡಿದ್ದವು. ಪತ್ರವ್ಯವಹಾರಗಳು ಹೇರಳವಾಗಿದ್ದುದೇ ಅಲ್ಲದೆ ವಿಳಂಬವೂ ತೀವ್ರವಾಗಿತ್ತು. ಆದರೆ ಮಾರ್ಚ್ 14- 1939 ರಂದು ಎಲ್ಲವೂ ಒಟ್ಟಿಗೆ ಸಂಭವಿಸಿತ್ತು. ಹಿಟ್ಲರ್ ಜೆಕ್ ಪ್ರಾಂತ್ಯಗಳಾದ ಬೊಹೆಮಿಯಾ ಮತ್ತು ಮೊರಾವಿಯಾವನ್ನು ಜರ್ಮನ್ “ಸಂರಕ್ಷಿತ ಪ್ರದೇಶ” ಎಂದು ವಿಭಜಿಸುವ ಕೆಲವೇ ಗಂಟೆಗಳ ಮೊದಲು, 20 ಮಕ್ಕಳ ಮೊದಲ ಬ್ಯಾಚ್‌  ರೈಲಿನಲ್ಲಿ ಪ್ರಾಗ್‌ನಿಂದ ಹೊರಟಿದ್ದವು. ನಿರ್ಗಮನದ ಕೊನೆಯ ಕ್ಷಣಗಳಲ್ಲಿ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿದ್ದುದು,  ತಮ್ಮನ್ನು ದೂರ ಕಳುಹಿಸದಂತೆ ಮನವಿ ಮಾಡುತ್ತಿದ್ದುದು ಮತ್ತು ಪೋಷಕರು ಅನ್ಯ ಮಾರ್ಗವಿಲ್ಲದೆ ತಮ್ಮ ಮಕ್ಕಳನ್ನು ಕಳುಹಿಸಿಕೊಡುವ ಹೃದಯ ವಿದ್ರಾವಕ ಘಟನೆಗಳನ್ನು ಬದುಕುಳಿದವರು ಹೇಳಿದ್ದುದನ್ನು ವಿಂಟನ್‌ ತಮ್ಮ Scrap book ನಲ್ಲಿ ದಾಖಲಿಸುತ್ತಾರೆ.

ಆನಂತರ ವಿಂಟನ್ ನಿಕೋಲಸ್‌ ಮತ್ತು ಅವರ ಸಹೋದ್ಯೋಗಿಗಳು ಉಳಿದ ಮಕ್ಕಳನ್ನು ಹೊರಗೆ ಕಳುಹಿಸಲು ಇನ್ನೂ ಎಂಟು ರೈಲುಗಳನ್ನು ವ್ಯವಸ್ಥೆ ಮಾಡಿದರು. ಥರ್ಡ್ ರೀಚ್ ದಾಟಿ ನ್ಯೂರೆಂಬರ್ಗ್ ಮತ್ತು ಕಲೋನ್ ಮೂಲಕ ಹಾಲೆಂಡ್‌ನ ಹುಕ್ ಪ್ರಾಂತ್ಯಕ್ಕೆ  ಅಲ್ಲಿಂದ ಮುಂದುವರೆದು ನಾರ್ತ್‌ ಸೀ ಮಾರ್ಗವಾಗಿ ದೋಣಿಯ ಮೂಲಕ ಹಾರ್ವಿಚ್ ಮತ್ತು  ಎಸೆಕ್ಸ್‌ಗೆ ಮತ್ತು ಬ್ರಿಟಿಷ್ ರೈಲಿನ ಮೂಲಕ ಲಂಡನ್ನ ಲಿವರ್ ಪೂಲ್ ಸ್ಟ್ರೀಟ್ ನಿಲ್ದಾಣಕ್ಕೆ ಮಕ್ಕಳು ತಲುಪಿದರು. ಅಲ್ಲಿ ವಿಂಟನ್‌ ನಿಕೋಲಾಸ್‌  ಮತ್ತು ಆತಿಥೇಯ ಕುಟುಂಬಗಳು ಮಕ್ಕಳನ್ನು ಭೇಟಿಯಾಗಿದ್ದವು. ಪ್ರತಿಯೊಬ್ಬ ನಿರಾಶ್ರಿತರು ಒಂದು ಸಣ್ಣ ಚೀಲವನ್ನು ಹೊಂದಿದ್ದು ಮತ್ತು ತಮ್ಮ ಹೆಸರಿನ ಟ್ಯಾಗ್ ಧರಿಸಿದ್ದರು.

ಆದರೆ ಎಂಟು ರೈಲುಗಳ ಪೈಕಿ ಕೇವಲ ಏಳು ಮಾತ್ರ ಹಾದುಹೋಗಲು ಸಾಧ್ಯವಾಯಿತು  ಕೊನೆಯ ರೈಲು ಆಗಸ್ಟ್ ಆರಂಭದಲ್ಲಿ ಹಾದು ಹೋಗಿತ್ತು. ಒಟ್ಟು ರಕ್ಷಿಸಲ್ಪಟ್ಟವರ ಸಂಖ್ಯೆ 669 ಕ್ಕೆ ತಲುಪಿತ್ತು. 1939ರ ಸೆಪ್ಟಂಬರ್ 1ರಂದು ಕೊನೆಯ ರೈಲಿನಲ್ಲಿ ಸುಮಾರು 250 ಮಕ್ಕಳು ಪ್ರಯಾಣಿಸುತ್ತಿದ್ದರು. ಆದರೆ ಆ ದಿನದಂದೇ ಹಿಟ್ಲರ್ ಪೋಲೆಂಡ್ ದೇಶವನ್ನು ಆಕ್ರಮಿಸಿದ್ದ.  ಜರ್ಮನಿಯ ನಿಯಂತ್ರಣದಲ್ಲಿರುವ ಎಲ್ಲಾ ಗಡಿಗಳನ್ನು ಮುಚ್ಚಲಾಯಿತು ಮತ್ತು ವಿಂಟನ್ ನಿಕೋಲಸ್ ಅವರ ರಕ್ಷಣಾ ಪ್ರಯತ್ನಗಳು ಕೊನೆಗೊಂಡಿದ್ದವು. “ ಹಿಟ್ಲರ್‌ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ, ರೈಲು ಕಣ್ಮರೆಯಾಯಿತು” ಎಂದು ಅವರು Scrap Bookನಲ್ಲಿ  ದಾಖಲಿಸುತ್ತಾರೆ. ಹಡಗಿನಲ್ಲಿದ್ದ 250 ಮಕ್ಕಳಲ್ಲಿ ಯಾರೂ ಮತ್ತೆ ಕಾಣಿಸಲಿಲ್ಲ. ಎಲ್ಲರೂ ಯಾತನಾ ಶಿಬಿರಗಳಲ್ಲಿ ಬಲಿಯಾದರು ಎಂದು ನಂಬಲಾಗಿತ್ತು. ರಕ್ಷಿಸಲ್ಪಟ್ಟ ಬಹುತೇಕ ಎಲ್ಲಾ ಮಕ್ಕಳು ಯುದ್ಧದ ಅಂತ್ಯದ ವೇಳೆಗೆ ಅನಾಥರಾಗಿದ್ದರು. ಅವರ ಪೋಷಕರು ಆಶ್‌ವಿಟ್ಜ್‌ , ಬರ್ಗೆನ್-ಬೆಲ್ಸೆನ್ ಅಥವಾ ಥೆರೆಸಿಯೆನ್‌ ನಾಡಿನಲ್ಲಿ ಕೊಲ್ಲಲ್ಪಟ್ಟರು. ಯುದ್ಧದ ನಂತರ ಅನೇಕರು ಬ್ರಿಟನ್ನಲ್ಲಿ ಉಳಿದರು ಇತರರು ಜೆಕೊಸ್ಲೊವಾಕಿಯಾಕ್ಕೆ ಮರಳಿದರು ಅಥವಾ ಇಸ್ರೇಲ್, ಆಸ್ಟ್ರೇಲಿಯಾ ಅಥವಾ ಅಮೆರಿಕಕ್ಕೆ ವಲಸೆ ಹೋದರು. ಬದುಕುಳಿದವರು 80ರ ಆಸುಪಾಸಿನಲ್ಲಿದ್ದು ಈಗಲೂ ತಮ್ಮನ್ನು ವಿಂಟನ್ ಮಕ್ಕಳು ಎಂದು ಕರೆದುಕೊಳ್ಳುತ್ತಾರೆ.

ವಿಂಟನ್‌ ನಿಕೋಲಸ್‌ ಜೀವನಗಾಥೆ

ವಿಂಟನ್ ನಿಕೋಲಸ್‌ ಮೇ 19, 1909 ರಂದು ಲಂಡನ್ನಲ್ಲಿ ನಿಕೋಲಸ್ ಜಾರ್ಜ್ ವರ್ತೈಮ್‌ ದಂಪತಿಗಳಿಗೆ ಜನಿಸಿದರು. ಅವರ ಪೋಷಕರು ಜರ್ಮನ್-ಯಹೂದಿ ಮೂಲದವರಾಗಿದ್ದರು ಆದರೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು ಮತ್ತು ಕುಟುಂಬದ ಹೆಸರನ್ನು ವಿಂಟನ್ ಎಂದು ಬದಲಾಯಿಸಿದರು. ಅವರ ತಂದೆ ವ್ಯಾಪಾರಿ ಬ್ಯಾಂಕರ್ ಆಗಿದ್ದರು, ಮತ್ತು ನಿಕೋಲಸ್ ಮತ್ತು ಅವರ ಒಡಹುಟ್ಟಿದವರಾದ ಬಾಬಿ ಮತ್ತು ಷಾರ್ಲೆಟ್ ಲಂಡನ್ನಿನ ವೆಸ್ಟ್ ಹ್ಯಾಂಪ್‌ಸ್ಟೆಡ್‌ನಲ್ಲಿ 20 ಕೋಣೆಗಳ ಬಂಗಲೆಯಲ್ಲಿ ಬೆಳೆದರು. ಅವರು ಮತ್ತು ಬಾಬಿ ನುರಿತ ಫೆನ್ಸರ್‌ಗಳಾಗಿದ್ದರು. ತಮ್ಮ ಜೀವನದ ಕೊನೆಯಲ್ಲಿ ನಿಕೋಲಸ್‌ ಸ್ವತಃ ಫೆನ್ಸಿಂಗ್‌ ಕ್ರೀಡೆಯ ವಿಂಟನ್ ಕಪ್ ಸ್ಥಾಪಿಸಿದರು ಇಂದಿಗೂ ಇದು ಕ್ರೀಡಾ ವಲಯದಲ್ಲಿ ಪ್ರಮುಖ ಬ್ರಿಟಿಷ್ ಸ್ಪರ್ಧೆಯಾಗಿದೆ. ಬಂಕಿಂಗ್‌ಹ್ಯಾಮ್‌ನ ಸ್ಟೋವ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ನಿಕೋಲಸ್ ಲಂಡನ್‌ನ‌ ಅಂತರರಾಷ್ಟ್ರೀಯ ಬ್ಯಾಂಕಿಂಗ್‌ನಲ್ಲಿ ತರಬೇತಿ ಪಡೆದ ನಂತರ ಹ್ಯಾಂಬರ್ಗ್‌ನ ಬೆಹ್ರೆನ್ಸ್ ಬ್ಯಾಂಕ್, ಬರ್ಲಿನ್‌ನ ವಾಸೆರ್ಮನ್ ಬ್ಯಾಂಕ್ ಮತ್ತು ಪ್ಯಾರಿಸ್‌ನ ಬ್ಯಾಂಕ್ ನ್ಯಾಷನಲ್ ಡಿ ಕ್ರೆಡಿಟ್‌ನಲ್ಲಿ ನೌಕರಿ ಮಾಡಿದ್ದರು. ವಿಂಟನ್‌ ೧೯೩೧ ರಲ್ಲಿ ಲಂಡನ್‌ಗೆ ಹಿಂದಿರುಗಿದಾಗ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು ಮತ್ತು ಸ್ಟಾಕ್ ಬ್ರೋಕರ್ ಆಗಿ ಕಾರ್ಯನಿರ್ವಹಿಸಿದ್ದರು.

ಅವರು ಯುದ್ಧದಲ್ಲಿ ರಾಯಲ್ ಏರ್ ಫೋರ್ಸ್ ಅಧಿಕಾರಿಯಾಗಿದ್ದರು ಮತ್ತು ನಂತರ ನಿರಾಶ್ರಿತರ ಸಂಸ್ಥೆಗಳು ಮತ್ತು ವಯಸ್ಸಾದವರಿಗೆ ಸಹಾಯ ಮಾಡುವ ದತ್ತಿ ಸಂಸ್ಥೆಯಾದ ಅಬ್ಬೆಫೀಲ್ಡ್ ಸೊಸೈಟಿಗಾಗಿ ಕೆಲಸ ಮಾಡಿದರು. ಅವರು ಒಂದು ನಿಧಿ ಸಂಗ್ರಹ ಅಭಿಯಾನದಲ್ಲಿ ಒಂದು ಮಿಲಿಯನ್‌ ಪೌಂಡ್‌ಗಿಂತ ಹೆಚ್ಚು ಹಣವನ್ನು ಸಂಗ್ರಹಿಸಿದರು. 1983 ರಲ್ಲಿ ಅವರ ದತ್ತಿ ಕಾರ್ಯಗಳಿಗಾಗಿ ಅವರನ್ನು ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್‌ನ ಸದಸ್ಯರನ್ನಾಗಿ ಮಾಡಲಾಯಿತು. ಆದರೆ 50 ವರ್ಷಗಳ ಕಾಲ ಅವರು ತಾವು ಕೈಗೊಂಡ ಮಕ್ಕಳ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಏನನ್ನೂ ಹೇಳಿರಲಿಲ್ಲ, 1948 ರಲ್ಲಿ ಅವರು ಮದುವೆಯಾದ ನಂತರವೂ ಸಹ ಪತ್ನಿ ಗ್ರೆಟ್ ಗೆಲ್ ಸ್ಟ್ರಪ್ ಅವರಿಗೂ ಯಾವುದೇ ವಿಷಯ ತಿಳಿಸಿರಲಿಲ್ಲ. ಅವರಿಗೆ ನಿಕೋಲಸ್, ಬಾರ್ಬರಾ ಮತ್ತು ರಾಬಿನ್ ಎಂಬ ಮೂವರು ಮಕ್ಕಳಿದ್ದರು. ರಾಬಿನ್ 1962 ರಲ್ಲಿ 7 ನೇ ವಯಸ್ಸಿನಲ್ಲಿ ನಿಧನರಾದರು. ವಿಂಟನ್ ಅವರ ಪತ್ನಿ 1999 ರಲ್ಲಿ ನಿಧನರಾದರು. ಅವರ ಸಾವಿನ ಸಮಯದಲ್ಲಿ ಅವರ ಮಗಳು ಬಾರ್ಬರಾ ಮತ್ತು ಇಬ್ಬರು ಮೊಮ್ಮಕ್ಕಳು ಅವರ ಪಕ್ಕದಲ್ಲಿದ್ದರು ಎಂದು ರೋಟರಿ ಕ್ಲಬ್ ಆಫ್ ಮೇಡನ್‌ಹೆಡ್ ಹೇಳಿದೆಯಾದರೂ  ಅವರ ಬದುಕುಳಿದವರ ಬಗ್ಗೆ ಸಂಪೂರ್ಣ ಮಾಹಿತಿ ತಕ್ಷಣ ಲಭ್ಯವಿಲ್ಲ.

ಹೆಸರುಗಳು, ಚಿತ್ರಗಳು, ಕುಟುಂಬಗಳಿಂದ ಬಂದ ಪತ್ರಗಳು, ಪ್ರಯಾಣದ ದಾಖಲೆಗಳು ಮತ್ತು ಅವರ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸುವ ಟಿಪ್ಪಣಿಗಳಿಂದ ತುಂಬಿದ್ದ ಅವರ ದೀರ್ಘಕಾಲದ ಗುಪ್ತ Scrap book ಕಂಡುಕೊಂಡ ನಂತರ ಅವರ ಪತ್ನಿ ನಡೆದ ಘಟನೆಗಳ ವಿವರ ಕೇಳಿದ್ದರೂ ಹೆಚ್ಚಿನ ಮಾಹಿತಿ ನೀಡದ ವಿಂಟನ್‌ ನಿಕೋಲಸ್‌ ಆ ಕಡತಗಳಿಗೆ  ಯಾವುದೇ ಮೌಲ್ಯವಿಲ್ಲ ಎಂದು ಭಾವಿಸಿದುದೇ ಅಲ್ಲದೆ ಅವುಗಳನ್ನು ನಿರ್ಲಕ್ಷಿಸಲು ಹೇಳಿದ್ದರು. ಆದರೆ ಆ ಕಡತಗಳನ್ನು ಎಸೆಯಲು ನಿರಾಕರಿಸಿದ ಪತ್ನಿ ಸಂರಕ್ಷಿಸಿದ್ದರು.  “ಸಂಭವಿಸಿದ ಆ ಘಟನೆಗಳು ಯಾರಿಗಾದರೂ ಆಸಕ್ತಿದಾಯಕವಾಗಿರುತ್ತವೆ ಎಂಬ ಆಲೋಚನೆಯೇ ನನಗಿರಲಿಲ್ಲ” ಎಂದು ಹೇಳುತ್ತಿದ್ದ ವಿಂಟನ್‌ ಒಲ್ಲದ ಮನಸ್ಸಿನಿಂದ ಅವುಗಳನ್ನು ಶೋಧಿಸಲು ಪತ್ನಿಗೆ ಅನುಮತಿ ನೀಡಿದ್ದರು. Scrap book  ಪುಸ್ತಕವನ್ನು ಇತಿಹಾಸಕಾರರಿಗೆ ನೀಡಿದ ವಿಂಟನ್‌ ಅವರ ಪತ್ನಿಯ ಪ್ರಯತ್ನದಿಂದ ಪತ್ರಿಕೆಯಲ್ಲಿ ಈ ಕುರಿತ ಲೇಖನವೊಂದು ಪ್ರಕಟವಾಗಿತ್ತು. ನಂತರ ಬಿಬಿಸಿ ದೂರದರ್ಶನ ಕಾರ್ಯಕ್ರಮವು ಅವರ ರಕ್ಷಣೆಯ ಸಾಹಸಗಾಥೆಯನ್ನು ಪ್ರಸಾರ ಮಾಡುವ ಮೂಲಕ ವಿಶ್ವದಾದ್ಯಂತ ಪ್ರಚಾರ ಮಾಡಿತ್ತು.

ಇದನ್ನೂ ಓದಿ:ಕೋಟ್ಯಧೀಶರಿಗೆ ನೀಡುವ ಉಚಿತ ಸವಲತ್ತುಗಳು

ಜೆಕ್ ಗಣರಾಜ್ಯದ ಅತ್ಯುನ್ನತ ಪ್ರಶಸ್ತಿ, ಪ್ರಾಗ್‌ನ ಗೌರವ ಪೌರತ್ವ, ಅಮೆರಿಕದ ಕಾಂಗ್ರೆಸ್ ಗೌರವ ನಿರ್ಣಯ, ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್, ಬ್ರಿಟನ್‌  ಪ್ರಧಾನಿ ಟೋನಿ ಬ್ಲೇರ್, ಇಸ್ರೇಲ್‌ ಮಾಜಿ ಅಧ್ಯಕ್ಷ ಎಜರ್ ವೀಜ್ಮನ್ ಮತ್ತು ವಿಶ್ವದಾದ್ಯಂತದ ಜನರಿಂದ ಪ್ರಶಂಸಾ ಪತ್ರಗಳನ್ನು ಪಡೆದಿದ್ದ ವಿಂಟನ್‌ ಅವರಿಗೆ  ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವಂತೆ ಜೆಕ್ ಗಣರಾಜ್ಯದಿಂದ ನಾಮನಿರ್ದೇಶನ ಮಾಡಲಾಗಿತ್ತು.  ಅವರ Scrap book  ಇಸ್ರೇಲ್‌ನ ಹತ್ಯಾಕಾಂಡ ಸ್ಮಾರಕವಾದ ಯಾದ್ ವಾಶೆಮ್‌ಗೆ ತಲುಪಿತ್ತು. ರಸ್ತೆಗಳು ಮತ್ತು ಶಾಲೆಗಳಿಗೆ ಅವರ ಹೆಸರನ್ನು ಇಡಲಾಯಿತು. ಪ್ರಾಗ್‌ ಮತ್ತು ಲಂಡನ್ ನಲ್ಲಿ ಪ್ರತಿಮೆಗಳು ತಲೆಯೆತ್ತಿದವು. ಲೇಖಕಿ ಗಿಸ್ಸಿಂಗ್‌ ಹಾಗೂ ಮ್ಯೂರಿಯಲ್‌ ಇಮ್ಯಾನ್ಯುಯೆಲ್‌ ಅವರ Nicholas Winton and the Rescued Generation: Save One Life, Save the World (2001) ಪುಸ್ತಕದಲ್ಲಿ ಹೇಳುವಂತೆ ವಿಂಟನ್‌ ಅವರ ಖ್ಯಾತಿಯನ್ನು ಖುದ್ದು ನಂಬುತ್ತಿರಲಿಲ್ಲ. ಆಸ್ಕರ್ ಷಿಂಡ್ಲರ್ ಮತ್ತು ರೌಲ್ ವಾಲೆನ್‌ಬರ್ಗ್‌ ಅವರಿಗೆ ಹೋಲಿಸಿವುದನ್ನು ವಿಂಟನ್ ನಿಕೋಲಸ್‌ ಒಪ್ಪುತ್ತಲೇ ಇರಲಿಲ್ಲ ಎಂದು ಈ ಲೇಖಕರು ಹೇಳುತ್ತಾರೆ. ಆದಾಗ್ಯೂ”ಮಾನವ ಜನಾಂಗಕ್ಕೆ ಅವರ ಕೊಡುಗೆ ಅಪಾರ ಎಂದು ಲೇಖಕರು ಪ್ರತಿಪಾದಿಸುತ್ತಾರೆ.

ಸ್ಲೋವಾಕ್ ನಿರ್ದೇಶಕ ಮ್ಯಾಟೆಜ್ ಮಿನಾಕ್ ಅವರ ಮೂರು ಚಲನಚಿತ್ರಗಳಲ್ಲಿ ಈ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಅನ್ವೇಷಿಸಲಾಗಿದೆ: ಕಾಲ್ಪನಿಕ “ಆಲ್ ಮೈ ಲವ್ಡ್ ಒನ್ಸ್” (1999); “ದಿ ಪವರ್ ಆಫ್ ಗುಡ್: ನಿಕೋಲಸ್ ವಿಂಟನ್” (2002) ಎಂಬ ಸಾಕ್ಷ್ಯಚಿತ್ರ; ಮತ್ತು “ನಿಕಿಸ್ ಫ್ಯಾಮಿಲಿ” (2011), ಮತ್ತು ಮಿಸ್ಟರ್ ಮಿನಾಕ್ ಅವರ ಪುಸ್ತಕ, “ನಿಕೋಲಸ್ ವಿಂಟನ್ಸ್ ಲಾಟರಿ ಆಫ್ ಲೈಫ್” (2007) ಈ ಸಾಹಸಗಾಥೆಯನ್ನು ದಾಖಲಿಸಿರುವ ಮೂಲಗಳು. ಸೆಪ್ಟೆಂಬರ್ 1, 2009 ರಂದು ಯುದ್ಧ ಪ್ರಾರಂಭವಾದ 70 ವರ್ಷಗಳ ನಂತರ 1930ರ ದಶಕದ ಲೋಕೋಮೋಟಿವ್ ಮತ್ತು ಗಾಡಿಗಳನ್ನು ಹೊಂದಿರುವ ವಿಶೇಷ ರೈಲು 1939ರ ಅಪಾಯಕಾರಿ ಪ್ರಯಾಣಗಳನ್ನು ಮರುಸೃಷ್ಟಿಸಲು ಪ್ರಾಗ್‌ನಿಂದ ಹೊರಟಿತು. ಹಡಗಿನಲ್ಲಿ ಕೆಲವು ವಿಂಟನ್ ನಿಕೋಲಸ್‌ ಅವರ ಮೂಲ ಸಂತತಿ ಮತ್ತು ಅವರ ಅನೇಕ ವಂಶಸ್ಥರು ಇದ್ದರು. ಅವರ ಸಂಖ್ಯೆ ಈಗ 6,000 ಮೀರಿದೆ. ವಿಂಟನ್‌ ನಿಕೋಲಸ್‌ ತಮ್ಮ 106ನೆಯ ವಯಸ್ಸಿನಲ್ಲಿ ಜುಲೈ 1 , 2015ರಂದು ಕೊನೆಯುಸಿರೆಳೆದರು.

ವಿಂಟನ್‌ ನಮ್ಮ ನಡುವೆ ಇಲ್ಲವಾದರೂ 669 ಅಮೂಲ್ಯ ಜೀವಗಳನ್ನು ಉಳಿಸಿದ ಅವರ ಸಾಹಸಗಾಥೆ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯಲಿದೆ.

 

ಅಡಿ ಟಿಪ್ಪಣಿ

ಜೆಕೊಸ್ಲೋವೇಕಿಯಾದ ಶಾಲಾ  ಮಕ್ಕಳು ವಿಂಟನ್‌ ಅವರ 103ನೆಯ ವಯಸ್ಸಿನಲ್ಲಿ ಅವರಿಗೆ ನೊಬೆಲ್‌ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡುವಂತೆ ಒತ್ತಾಯಿಸಿ 1 ಲಕ್ಷ 70 ಸಾವಿರ ಜನರ ಸಹಿ ಸಂಗ್ರಹ ಮಾಡಿ ಜೆಕೊಸ್ಲೋವೇಕಿಯಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.  ಆದರೆ ವಿಂಟನ್‌ ಅವರಿಗೆ ನೊಬೆಲ್‌ ಒದಗಿಬರಲಿಲ್ಲ. ವಿಂಟನ್‌ ನಿಕೋಲಸ್‌ ಕಾಪಾಡಿದ ಮಕ್ಕಳ ಪೈಕಿ ಕೆಲವು ಪ್ರಮುಖ  ಪ್ರತಿಷ್ಠಿತರ ಹೆಸರುಗಳು ಇಲ್ಲಿವೆ :

ಲೆಸ್ಲೀ ಬರೂಚ್‌ ಬ್ರೆಂಟ್‌ (1925-2019) ಇಮ್ಯುನಾಲಜಿಸ್ಟ್‌

ಆಲ್ಫ್‌ ಡಬ್ಸ್-ಬೇರನ್‌ ಡಬ್ಸ್‌ (1932) ಬ್ರಿಟನ್ನಿನ ಲೇಬರ್‌ ಪಕ್ಷದ ಮಾಜಿ ಸಂಸದ

ಹೀನೀ ಹಾಲ್ಬರ್‌ಸ್ಟಾಮ್‌ ( 1926-2014) ಗಣಿತಜ್ಞ

ರೆನಾಟಾ ಲ್ಯಾಕ್ಷೋವಾ ( 1931-2020) ಶಿಶುವೈದ್ಯಕೀಯ ತಳಿವಿಜ್ಞಾನಿ

ಇಸಿ ಮೆಟ್ಜ್‌ಸ್ಟೀನ್‌ ( 1928-2012) ಆಧುನಿಕ ವಾಸ್ತುಶಿಲ್ಪ ತಜ್ಞರು

ಗೆರ್ಡಾ ಮೇಯೆರ್‌ ( 1927-2021) ಕವಿ

ಕೇರೆಲ್‌ ರೀಝ್‌ (1926-2002) ಸಿನೆಮಾ ನಿರ್ಮಾಪಕರು

ಜೋ ಷ್ಲೀಸಿಂಗರ್‌ (1928-2019) ಕೆನಡಾದ ಟಿವಿ ಪತ್ರಕರ್ತರು-ಲೇಖಕರು

ಯಿಷೋಕ್‌ ಟುವಿಯಾವೀಸ್‌ (1926-2022) ಜೆರುಸೆಲಮ್‌ನ Edah HaChareidisನ ಮುಖ್ಯಸ್ಥರು

ವೆರಾ ಗಿಸ್ಸಿಂಗ್‌ ( 1928-2022) ಲೇಖಕರು-ಅನುವಾದಕರು.

-೦-೦-೦-೦-

Donate Janashakthi Media

Leave a Reply

Your email address will not be published. Required fields are marked *