ಬೆಂಗಳೂರು: ಅಕ್ರಮವಾಗಿ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ನೈಸ್ ಕಂಪನಿ ದೌರ್ಜನ್ಯ, ಭ್ರಷ್ಟಾಚಾರ ದ ವಿರುದ್ಧ ಹಾಗೂ ನೈಸ್ ಯೋಜನೆ ರದ್ದುಪಡಿಸಿ, ಭೂಮಿ ವಾಪಸ್ಸು ಪಡೆದು ಸಂತ್ರಸ್ಥ ರೈತರಿಗೆ ಹಿಂದಿರಿಗಿಸಲು ಮತ್ತು ರೈತರ ಭೂಮಿಯನ್ನು ಉಳಿಸಲು ಆಗ್ರಹಿಸಿ ಶಾಸಕರ ಭವನದಲ್ಲಿ ಬುಧವಾರ (ಸೆಪ್ಟೆಂಬರ್ 27) ನಡೆದ ನೈಸ್ ಸಂತ್ರಸ್ತ ರೈತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ್ಯ ರೈತರ ಸಂಘ ಜಂಟಿಯಾಗಿ ದುಂಡುಮೇಜಿನ ಸಭೆ ನಡಸಲಾಯಿತು.
ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ನೈಸ್ ಯೋಜನೆ ಹೆಸರಿನಲ್ಲಿ ಅಕ್ರಮವಾಗಿ ಕಬಳಿಸಿರುವ 11,000 ಸಾವಿರ ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ರೈತರಿಗೆ ಕೊಡಬೇಕು. ಇಲ್ಲವಾದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಸಿಂಗೂರು ಮಾದರಿ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನೈಸ್ ಭೂಮಿ ಕಳೆದುಕೊಂಡಿರುವ ರೈತರು ನಡೆಸುತ್ತಿರುವ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಹೋರಾಟ ಪಕ್ಷಾತೀತ, ರಾಜಕೀಯಕ್ಕೆ ಅತೀತವಾಗಿ ನಡೆಯಬೇಕು ಎಂದರು. ನೈಸ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ವಾಪಸ್ ಪಡೆಯಲು ಕಾನೂನಿನ ತೊಡಕಿಲ್ಲ. ಸರ್ಕಾರ ಇಡೀ ಯೋಜನೆಯನ್ನು ವಾಪಸ್ ಪಡೆಯುವುದಕ್ಕೆ ನ್ಯಾಯಾಲಯದ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ. ನೈಸ್ ಕಂಪನಿ ಸರಕಾರ ವಿರುದ್ಧ ಹಾಕಿದ್ದ ಎಲ್ಲ ನಿಂದನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆ ಕಂಪನಿ ಮಾಡಿರುವ ಅಕ್ರಮಗಳು ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಸದನ ಸಮಿತಿ ವರದಿ ಹಿನ್ನೆಲೆಯಲ್ಲಿ ಯೋಜನೆಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಅವರು ಒತ್ತಾಯ ಮಾಡಿದರು.
2006ರಲ್ಲಿಯೇ ನಾನು ನೈಸ್ ಯೋಜನೆಯನ್ನು ರದ್ದು ಮಾಡಿ ಸರ್ಕಾರದ ವಶಕ್ಕೆ ಪಡೆಯಲು ಹೊರಟಿದ್ದೆ. ಆಗ ಆಗಲಿಲ್ಲ, ಮತ್ತೆ ಸಿಎಂ ಆದಾಗಲೂ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಲು ಸದನದಲ್ಲಿ ವಿಧೇಯಕ ತರಲು ಹೊರಟೆ. ಎರಡು ಬಾರಿಯೂ ನಾನು ಯಶಸ್ವಿ ಆಗಲಿಲ್ಲ. ಮೈತ್ರಿ ಸರ್ಕಾರ ಇದ್ದ ಕಾರಣ ಆಗಲಿಲ್ಲ ಎಂದರು. 2018ರಲ್ಲಿ ಕಾಂಗ್ರೆಸ್‌ನವರು ನನ್ನನ್ನು ಮುಖ್ಯಮಂತ್ರಿ ಎಂದು ಇಟ್ಟುಕೊಂಡಿರಲಿಲ್ಲ. ಒಬ್ಬ ಗುಮಾಸ್ತನಂತೆ ನಡೆಸಿಕೊಂಡರು. ಹೀಗಾಗಿ ವಿಫಲವಾದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ನೈಸ್ ಕಂಪನಿಗೆ ರೂ.2 ಕೋಟಿ ಪರಿಹಾರ ಕೊಡಲು ದೇವೇಗೌಡರಿಗೆ ನ್ಯಾಯಾಲಯ ಆದೇಶ
ಟಿ.ಬಿ.ಜಯಚಂದ್ರ ನೇತೃತ್ವದ ಸದನ ಸಮಿತಿ ವರದಿಯನ್ನು ಉಲ್ಲೇಖ ಮಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು – ಮೈಸೂರು ನಡುವೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ನಿರ್ಮಾಣ ಮಾಡಿವೆ. ನೈಸ್ ಕಂಪನಿ ನಿರ್ಮಾಣ ಮಾಡಿರುವುದು ಪೆರಿಫೆರಲ್ ರಸ್ತೆ, ಲಿಂಕ್ ರಸ್ತೆ ಬಿಟ್ಟರೆ ಬೇರೆ ಮಾಡಿಲ್ಲ. ಹೀಗಾಗಿ ನಮಗೆ ಈ ಯೋಜನೆ ಬೇಕಿಲ್ಲ. ಯೋಜನೆಯನ್ನು ಕಾರ್ಯಗತ ಮಾಡದ ಮೇಲೆ ಆ ಕಂಪನಿಗೆ ಭೂಮಿ ಯಾಕೆ ಕೊಡಬೇಕು? ಭೂಮಿ ಇಟ್ಟುಕೊಂಡು ಆ ಕಂಪನಿ ರಿಯಲ್ ಎಸ್ಟೇಟ್ ದಂಧೆ ಮಾಡುತ್ತದೆ ಎಂದು ಕಿಡಿಕಾರಿದರು.
ನೈಸ್ ಕಾಮಗಾರಿಯಲ್ಲಿ ಎಲ್ಲ ರೀತಿ ಕಾನೂನು ಉಲ್ಲಂಘನೆಯಾಗಿದೆ. ಈ ಬಗ್ಗೆ ನಿಮ್ಮ ಮಾಜಿ ಕಾನೂನು ಸಚಿವರೆ ಕೊಟ್ಟಿರುವ ವರದಿ ಜಾರಿಗೆ ಮೀನಾಮೇಷ ಯಾಕೆ..? ಖಂಡಿತ ರೈತರ ಹೋರಾಟಕ್ಕೆ ಜಯ ದೊರಕಲಿದೆ. ಒಗ್ಗಟ್ಟಾಗಿ ಸಂಘಟಿಸಿದರೆ ಪಶ್ವಿಮ ಬಂಗಾಳದಲ್ಲಿ ಎರಡು ಸಾವಿರ ಎಕರೆ ವಾಪಾಸ್ ಆದಂತೆ ಇಲ್ಲೀಯೂ ರೈತರ ಭೂಮಿ ವಾಪಾಸ್ ಆಗುತ್ತೆ, ಇಲ್ಲವೇ ಪ್ರಸ್ತುತ ದರದಲ್ಲಿ ಪರಿಹಾರ ಸಿಗುತ್ತೆ. ಈ ಬಗ್ಗೆ ಸದನದ ಒಳಗೆ ಹೊರಗೆ ನಿಮ್ಮ ಪರ ಹೋರಾಟಕ್ಕೆ ನಾನು ಸಿದ್ದ’ ಎಂದು ಕುಮಾರಸ್ವಾಮಿ ರೈತರಿಗೆ ಭರವಸೆ ನೀಡಿದರು.
ಇದನ್ನೂ ಓದಿ: ಸೆ-27 ನೈಸ್ ಕಂಪನಿ ದೌರ್ಜನ್ಯ ಹಾಗೂ ಭ್ರಷ್ಟಾಚಾರ ವಿರೋಧಿಸಿ ದುಂಡು ಮೇಜಿನ ಸಭೆ
ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿಯ ವಿ.ನಾಗರಾಜ್, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಉಪಾಧ್ಯಕ್ಷ ಬಸವರಾಜು, ಕರ್ನಾಟಕ ಪ್ರಾಂತ್ಯ ಕೂಲಿಕಾರರ ಸಂಘದ ಅಧ್ಯಕ್ಷ ಪುಟ್ಟಮಾದು, ಜನವಾದಿ ಮಹಿಳಾ ಸಂಘಟನೆ ಪ್ರಧಾನ ಕಾರ್ಯದರ್ಶಿ ದೇವಿ, ನೈಸ್ ಸಂತ್ರಸ್ತ ಹೋರಾಟ ಸಮಿತಿ ಅಧ್ಯಕ್ಷ ವೆಂಕಟಾಚಲಯ್ಯ ಸೇರಿ ಅನೇಕ ಮುಖಂಡರು ಮಾತನಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಪ್ರಾಸ್ಥಾವಿಕವಾಗಿ ಮಾತನಾಡಿದರು, ಎಚ್. ಆರ್ ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರಾರು ರೈತರು ಭಾಗಿಯಾಗಿದ್ದಾರೆ.
ವಿಡಿಯೋ ನೋಡಿ: ಅಕ್ರಮವಾಗಿ ರೈತರ ಕೃಷಿ ಭೂಮಿ ವಶಪಡಿಸಿಕೊಳ್ಳುತ್ತಿರುವ ನೈಸ್ ಕಂಪನಿವಿರುದ್ಧ ಗುಡುಗಿದ ರೈತರು Janashakthi Media