ಬೆಂಗಳೂರು/ ಮಂಗಳೂರು: ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಶಿರಸಿ ಸೇರಿದಂತೆ 20 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ದಾಳಿ ನಡೆಸಿದೆ. ಅಲ್ಲದೆ, ದೇಶದ 10 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದೆ ಮತ್ತು ದಾಳಿಗೆ ಅಡ್ಡಿಪಡಿಸಿದ 100ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಇಂದು(ಸೆಪ್ಟಂಬರ್ 22) ನಸುಕಿನ ಜಾವ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ರಾಜ್ಯದ ಪೊಲೀಸರ ನೆರವಿನೊಂದಿಗೆ ಎನ್‌ಐಎ ದಾಳಿ ನಡೆಸಿದ್ದು, ಈ ಸ್ಥಳಗಳೆಲ್ಲಾ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಮತ್ತು ಸೋಷಿಯಲ್ ಡೆಮೆಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಪದಾಧಿಕಾರಿಗಳ ಮನೆಗಳಾಗಿದ್ದರೆ, 2 ಸ್ಥಳಗಳು ಪಿಎಫ್ಐ ಕಚೇರಿಗಳಾಗಿವೆ. ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹಲವೆಡೆಯೂ ದಾಳಿ ನಡೆದಿದೆ.
ದೇಶಾದ್ಯಂತ ದಾಳಿಯಲ್ಲಿ ಭಾಗಿಯಾಗಿರುವ ಎನ್‌ಐಎ, ಇಡಿ ಸಂಸ್ಥೆಯೊಂದಿಗೆ ಆಯಾಆಯಾ ರಾಜ್ಯಗಳ ಪೊಲೀಸರು ಜೊತೆಯಾಗಿದ್ದಾರೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕೊಪ್ಪಳ, ಕಾರವಾರ, ಕಲಬುರಗಿಯಲ್ಲಿ ದಾಳಿ ನಡೆದಿದ್ದು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶ 5, ಅಸ್ಸಾಂ 9, ದೆಹಲಿ, 3, ಕರ್ನಾಟಕ 20, ಕೇರಳ 22, ಮಧ್ಯಪ್ರದೇಶ 4, ಮಹಾರಾಷ್ಟ್ರ 20, ಪುದುಚ್ಚೇರಿ 3, ರಾಜಸ್ಥಾನ 2, ತಮಿಳುನಾಡು 10, ಉತ್ತರ ಪ್ರದೇಶದ 8 ಸೇರಿ ಒಟ್ಟು 106 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಉಗ್ರ ಚಟುವಟಿಕೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸಿವೆ. ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರನ್ನು ಮೂಲಭೂತವಾಗಿ ರೂಪಿಸುವ ವ್ಯಕ್ತಿಗಳ ವಸತಿ ಮತ್ತು ಅಧಿಕೃತ ಆವರಣದಲ್ಲಿ ಶೋಧ ನಡೆಸಲಾಗುತ್ತಿದೆ. ಮುಖ್ಯವಾಗಿ ಪಿಎಫ್‌ಐ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಮುಖಂಡರ ಮನೆಗಳ ಮೇಲೆ ದಾಳಿ ನಡೆದಿದೆ.
ಬೆಂಗಳೂರು
ಬೆಂಗಳೂರಿನಲ್ಲಿ ಇದುವರೆಗೆ 4 ಕಡೆ ದಾಳಿ ನಡೆದಿದೆ. ರಿಚ್ಮಂಡ್ ಟೌನ್ ನ ಅಪಾರ್ಟ್ ಮೆಂಟ್ ವೊಂದರ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಯುತ್ತಿದೆ. ಪಾದರಾಯನಪುರದಲ್ಲಿ ಪಿಎಫ್ಐ ರಾಜ್ಯ ಘಟಕದ ಕಾರ್ಯದರ್ಶಿ ಅಫ್ಸರ್ ಪಾಷಾ ನಿವಾಸದ ಮೇಲೆ, ಟ್ಯಾನರಿ ರಸ್ತೆಯಲ್ಲಿರುವ ಪಿಎಫ್ಐ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಪಾಷಾ ನಿವಾಸ, ರಿಚ್ಮಂಡ್ ಟೌನ್ನಲ್ಲಿರುವ ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್ ಮನೆ ಮೇಲೆಯೂ ಎನ್ಐಎ ದಾಳಿ ನಡೆದಿದೆ. ಬೆಂಗಳೂರಿನ ಮತ್ತೊಂದು ಸ್ಥಳದಲ್ಲಿಯೂ ದಾಳಿ ನಡೆದಿದೆ ಎನ್ನಲಾಗಿದ್ದು ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಮಂಗಳೂರು
ದಕ್ಷಿಣ ಕನ್ನಡದಲ್ಲಿ ಎಸ್ಡಿಐಪಿ ಜಿಲ್ಲಾ ಘಟಕದ ಅಧ್ಯಕ್ಷ ಅಬುಬಕರ್ ಕುಳಾಯಿ ಸೋದರ ಅಬ್ದುಲ್ ಖಾದರ್ ಕುಳಾಯಿ ಮನೆ ಮೇಲೆ ಎನ್ಐಎ ದಾಳಿ ನಡೆದಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಮತ್ತು ಎಸ್‌ಡಿಪಿಐ ಜಿಲ್ಲಾ ಕಚೇರಿಯ ಮೇಲೆಯೂ ಎನ್ಐಎ ದಾಳಿ ನಡೆದಿದೆ. ಕುಳಾಯಿ, ಕಾವೂರು, ಜೋಕಟ್ಟೆ, ಬಜಪೆಯ ಪಿಎಫ್ಐ ಮತ್ತು ಎಸ್‌ಡಿಪಿಐ ನಾಯಕರ ಮನೆಗಳ ದಾಳಿ ನಡೆದಿದ್ದು, ಎನ್‌ಐಎ ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ಎದುರಾಗಿದೆ. ದಾಳಿಯ ನಂತರ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ದಾಳಿ ನಡೆಯುವ ಸ್ಥಳದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಭದ್ರತೆ ಒದಗಿಸಿದೆ.
ಎನ್ಐಎ ದಾಳಿ ಖಂಡಿಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನೆಲ್ಲಿಕಾಯಿ ರಸ್ತೆಯಲ್ಲಿ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಪಿಎಫ್ಐ ಕಚೇರಿ ಮೇಲೆ ಇಂದು ನಸುಕಿನ 3.30ರ ವೇಳೆಯಲ್ಲಿ ದಾಳಿ ನಡೆಸಿದೆ. ಶಸ್ತ್ರಸಜ್ಜಿತ ಕೇಂದ್ರೀಯ ಪಡೆಗಳೊಂದಿಗೆ ಸ್ಥಳಕ್ಕೆ ಬಂದಿರುವ ಅಧಿಕಾರಿಗಳು ಕಚೇರಿ ಪ್ರವೇಶಿಸಿದರು.
ಮಂಗಳೂರಿನಲ್ಲಿ ಪ್ರತಿಭಟನೆ
ಎನ್‌ಐಎ ಹಾಗೂ ಇಡಿ ದಾಳಿ, ಶೋಧಕಾರ್ಯಚರಣೆ ಖಂಡಿಸಿ ಮಂಗಳೂರಿನಲ್ಲಿ ಪಿಎಫ್ಐ, ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅವರಲ್ಲಿ ಕೆಲವರನ್ನು ಬಂಧಿಸಲಾಗಿದೆ.
ಶಿರಸಿ
ಶಿರಸಿಯ ಎಸ್‌ಡಿಪಿಐ ಮುಖಂಡ ಅಬ್ದುಲ್ ಶುಕುರ್ ಹೊನ್ನಾವರ್ ಅವರ ಮನೆಯ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ, ಕೆಲವು ದಾಖಲೆಗಳೊಂದಿಗೆ ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ. ಒಂದು ಲ್ಯಾಪ್ಟಾಪ್, ಎರಡು ಮೊಬೈಲ್, ಒಂದು ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಲಾಗಿದೆ.
ಕೇರಳದಲ್ಲಿ ಎನ್ಐಎ ಮತ್ತು ಇಡಿ ಅಧಿಕಾರಿಗಳು ಪಿಎಫ್ಐ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರ ಕಚೇರಿ, ನಿವಾಸವಿರುವ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ದಾಳಿ ನಡೆಸಿದ್ದಾರೆ.
ಎನ್‌ಐಎ ಯೊಂದಿಗೆ ಜಾರಿ ನಿರ್ದೇಶನಾಲಯವು(ಇಡಿ) ದಾಳಿ ನಡೆಸಿದೆ ಎಂದು ವರದಿಯಾಗಿದೆ. ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ, 2020ರ ದೆಹಲಿ ಗಲಭೆ, ಹಥ್ರಾಸ್ನಲ್ಲಿ ಸಾಮೂಹಿಕ ಅತ್ಯಾಚಾರದ ಸಂಚು ರೂಪಿಸಿದ್ದ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿರುವ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.
2006ರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಚನೆಯಾಗಿದೆ. ದೆಹಲಿಯಲ್ಲಿ ಸಂಘಟನೆ ಪ್ರಧಾನ ಕಚೇರಿ ಹೊಂದಿದೆ.