ಉಡುಪಿ: ಪಡುಬಿದ್ರಿ ಸಮೀಪದ ನಂದಿಕೂರಿನಲ್ಲಿ ಬಳಿ 10 ಕಿ.ಮೀ. ವ್ಯಾಪ್ತಿಯಲ್ಲಿ ಪರಿಸರ ಹಾನಿಗೆ ಸಂಬಂಧಿಸಿದಂತೆ ಚೆನ್ನೈನ ರಾಷ್ಟ್ರೀಯ ಹಸಿರು ಪೀಠ ಉದ್ಯಮಿ ಗೌತಮ್ ಅದಾನಿ ಸಂಸ್ಥೆಗೆ ₹ 52 ಕೋಟಿ ದಂಡ ವಿಧಿಸಿದೆ.
ಗೌತಮ್ ಅದಾನಿ ಸಂಸ್ಥೆಯು ಪರಿಸರ ಹಾನಿ ಮತ್ತು ಸುತ್ತಲಿನ ಸ್ಥಳಗಳಲ್ಲಿ ಮಾಲಿನ್ಯ ಉಂಟುಮಾಡಿದ್ದು, ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಇಲ್ಲಿ 2005ರಿಂದ ಕಾರ್ಯಚರಿಸುತ್ತಿರುವ ಉಷ್ಣವಿದ್ಯುತ್ ಸ್ಥಾವರದಿಂದ ಪರಿಸರ ಹಾನಿ ಕುರಿತು ಹೋರಾಟ ನಡೆಸಿಕೊಂಡು ಬರುತ್ತಿರುವ ಬಾಲಕೃಷ್ಣ ಶೆಟ್ಟಿ ನೇತೃತ್ವದ ನಂದಕೂರು ಜನಜಾಗೃತಿ ಸಮಿತಿ ಅರ್ಜಿಯ ವಿಚಾರಣೆ ನಡೆಸಿದ ಚೆನ್ನೈನ ಹಸಿರು ನ್ಯಾಯಪೀಠ ಮಂಗಳವಾರ(ಮೇ 31) ಈ ತೀರ್ಪು ನೀಡಿದೆ.
ನ್ಯಾಯಮೂರ್ತಿ ಕೆ.ರಾಮಕೃಷ್ಣನ್ ಅವರೊಂದಿಗೆ ಇಬ್ಬರು ತಜ್ಞರನ್ನು ಒಳಗೊಂಡಿದ್ದ ದಕ್ಷಿಣ ವಲಯದ ಹಸಿರು ಪೀಠವು ಜನಜಾಗೃತಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು.
ಪರಿಹಾರದ ಶೇ 50 ರಷ್ಟು ಮೊತ್ತವನ್ನು ಪರಿಸರ ಮೂಲಸೌಕರ್ಯ ಸುಧಾರಣೆಗೆ ಬಳಸಬೇಕು. ಮುಖ್ಯವಾಗಿ ನೀರು ಪೂರೈಕೆ, ಚರಂಡಿ, ಎಸ್‌ಟಿಪಿ, ಘನತ್ಯಾಜ್ಯ ವಿಲೇವಾರಿ ನಿರ್ವಹಣೆ, ಆರೋಗ್ಯ ಸೌಲಭ್ಯ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಬೇಕು. ಮಧ್ಯಂತರ ಆದೇಶದ ಅನ್ವಯ ಯುಪಿಸಿಎಲ್ ಈಗಾಗಲೇ ₹5 ಕೋಟಿ ಠೇವಣಿ ಇರಿಸಿದೆ. ಉಳಿದ ಮೊತ್ತವನ್ನು ಮುಂದಿನ ಮೂರು ತಿಂಗಳಲ್ಲಿ ಪಾವತಿಸಬೇಕು ಎಂದು ಹಸಿರು ಪೀಠ ಸೂಚಿಸಿದೆ.
ಉಷ್ಣ ವಿದ್ಯುತ್ ಸ್ಥಾವರದ 10 ಕಿ.ಮೀ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ಯುಪಿಸಿಎಲ್ ಚಟುವಟಿಕೆಯಿಂದ ಆಗಿರುವ ಹಾನಿಯ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲು ನ್ಯಾಯಪೀಠ ಜಂಟಿ ಸಮಿತಿಯನ್ನೂ ನೇಮಿಸಿದೆ. ಅದರಲ್ಲಿ ಜಿಲ್ಲಾಧಿಕಾರಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ನಿರ್ದೇಶಕರು ಹಾಗೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ವಿಜ್ಞಾನಿಯೊಬ್ಬರು ಇರಲಿದ್ದಾರೆ.