ಎನ್.ಎಫ್.ಡಿ.ಸಿ ಜೊತೆ ನಾಲ್ಕು ಫಿಲಂ ಸಂಸ್ಥೆಗಳ ವಿಲೀನ ಏಕೆ ?

ಮ.ಶ್ರಿ.ಮುರಳಿ ಕೃಷ್ಣ

ಡಿಸೆಂಬರ್31, 2022ರಂದು ನ್ಯಾಷನಲ್ಫಿಲ್ಮ್ಡೆವಲಪ್ಮೆಂಟ್ಕಾರ್ಪೊರೇಷನ್(ಎನ್ಎಫ್ಡಿಸಿ) ಜೊತೆ ನಾಲ್ಕು ಫಿಲ್ಮ್ಸಂಸ್ಥೆಗಳಾದ ಫಿಲ್ಮ್ಸ್ಡಿವಿಶನ್(ಎಫ್‌.ಡಿ), ನ್ಯಾಷನಲ್ಫಿಲ್ಮ್ಆರ್ಕೈವ್ಸ್ ಆಫ್ಇಂಡಿಯಾ(ಎನ್‌.ಎಫ್‌.ಎ.ಐ), ಚಿಲ್ಡ್ರನ್ಸ್ಫಿಲ್ಮ್ಸೊಸೈಟಿ ಆಫ್‌  ಇಂಡಿಯಾ(ಸಿ.ಎಫ್‌.ಎಸ್‌.ಐ) ಮತ್ತು ಡೈರೆಕ್ಟೋರೇಟ್ಆಫ್ಫಿಲ್ಮ್ಫೆಸ್ಟಿವಲ್ಸ್(ಡಿ.ಎಫ್‌.ಎಫ್)‌ ಜೊತೆ ವಿಲೀನಗೊಂಡವು. ಕೇಂದ್ರ ಸರ್ಕಾರದ ಈ ಕ್ರಮದ ಹಿಂದಿನ ಉದ್ದೇಶಗಳೇನು, ಇದಕ್ಕೆ ಚಲನಚಿತ್ರರಂಗದ ಭಾಗವಾಗಿರುವವರ ಪ್ರತಿಕ್ರಿಯೆಗಳೇನು? ಈ ನಾಲ್ಕು ಸಂಸ್ಥೆಗಳ ಉಗಮ, ಕಾರ್ಯಭಾರ ಇತ್ಯಾದಿ ವಿಷಯಗಳ ಬಗೆಗೆ ಈ ಬರಹದಲ್ಲಿ ಚರ್ಚಿಸಲಾಗಿದೆ.

ಕಲೆ, ಸಾಹಿತ್ಯ, ರಂಗಭೂಮಿ ಮುಂತಾದ ಸಾಂಸ್ಕೃತಿಕ ಘಟಕಗಳು ಯಾವಾಗ ಉದಯಿಸಿದವು ಎಂದು ನಿಖರವಾಗಿ ಗುರುತಿಸಲು ಸಾದ್ಯವಿಲ್ಲ. ಇವುಗಳಿಗೆ ಹೋಲಿಸಿದಾಗ ಸಿನಿಮಾ ಎಂದು ಜನ್ಮ ತಳೆಯಿತು ಎಂಬುದಕ್ಕೆ ಕರಾರುವಾಕ್ಕಾದ ದಾಖಲೆಗಳು ದೊರೆಯುತ್ತವೆ.  ಸಿನಿಮಾ ಅಸ್ತಿತ್ವಕ್ಕೆ ಬಂದು ಸುಮಾರು ಒಂದು ನೂರ ಇಪ್ಪತ್ತೇಳು ವರ್ಷಗಳಾಗಿವೆ.  ಮೊದಲಿನಿಂದಲೂ ತಂತ್ರಜ್ಞಾನದ ಜೊತೆ ತಳಕು ಹಾಕಿಕೊಂಡಿರುವ ಈ ಮಾಧ್ಯಮ ಬಹಳ ಶಕ್ತಿಶಾಲಿಯಾಗಿದೆ.  ಆಯಾ ಪ್ರದೇಶಗಳ, ಆಯಾ ಕಾಲಘಟ್ಟಗಳ ಆಗು-ಹೋಗುಗಳ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಆಯಾಮಗಳನ್ನು ಸಿನಿಮಾ ಮಾಧ್ಯಮ ಕಟ್ಟಿಕೊಡುವ ಬಗೆ ವಿಸ್ಮಯಕಾರಿಯಾದದ್ದು.  ಹೀಗಾಗಿ, ಎಲ್ಲ ದೇಶಗಳು ತಮ್ಮ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಸಿನಿಮಾರಂಗ ಕುರಿತಂತೆ ನೀತಿಗಳನ್ನು, ಆಡಳಿತ ಕ್ರಮಗಳನ್ನು ಜಾರಿ ಮಾಡುತ್ತ ಬಂದಿವೆ.  ಇತ್ತೀಚೆಗೆ ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ  ಒಂದು ಆಡಳಿತ ಕ್ರಮವನ್ನು ಜಾರಿ ಮಾಡಿತು.  ಅದರ ಬಗೆಗೆ ಈ ಬರಹದಲ್ಲಿ ಕೆಲವು ಮಾಹಿತಿಗಳನ್ನು ನೀಡಲಾಗಿದೆ.

ಡಿಸೆಂಬರ್‌ 31, 2022 ರಂದು ನ್ಯಾಷನಲ್‌ ಫಿಲ್ಮ್‌ ಡೆವಲಪ್ಮೆಂಟ್‌ ಕಾರ್ಪೊರೇಷನ್‌(ಎನ್‌ಎಫ್‌ಡಿಸಿ) ಜೊತೆ ನಾಲ್ಕು ಫಿಲ್ಮ್‌ ಸಂಸ್ಥೆಗಳಾದ ಫಿಲ್ಮ್ಸ್‌ ಡಿವಿಶನ್‌(ಎಫ್‌.ಡಿ), ನ್ಯಾಷನಲ್‌ ಫಿಲ್ಮ್‌ ಆರ್ಕೈವ್ಸ್ ಆಫ್‌ ಇಂಡಿಯಾ(ಎನ್‌.ಎಫ್‌.ಎ.ಐ), ಚಿಲ್ಡ್ರನ್ಸ್‌ ಫಿಲ್ಮ್‌ ಸೊಸೈಟಿ ಆಫ್‌ ಇಂಡಿಯಾ(ಸಿ.ಎಫ್‌.ಎಸ್‌.ಐ) ಮತ್ತು ಡೈರೆಕ್ಟೋರೇಟ್‌ ಆಫ್‌ ಫಿಲ್ಮ್‌ ಫೆಸ್ಟಿವಲ್ಸ್(ಡಿ.ಎಫ್‌.ಎಫ್)‌ ಜೊತೆ ವಿಲೀನಗೊಂಡವು. ಕೇಂದ್ರ ಸರ್ಕಾರದ ಈ ಕ್ರಮದ ಹಿಂದಿನ ಉದ್ದೇಶಗಳೇನು?, ಇದಕ್ಕೆ ಚಲನಚಿತ್ರರಂಗದ ಭಾಗವಾಗಿರುವವರ ಪ್ರತಿಕ್ರಿಯೆಗಳೇನು? ಈ ನಾಲ್ಕು ಸಂಸ್ಥೆಗಳ ಉಗಮ ಇತ್ಯಾದಿ ವಿಷಯಗಳ ಬಗೆಗೆ ಈ ಬರಹದಲ್ಲಿ ಚರ್ಚಿಸಲಾಗಿದೆ.

ಫಿಲ್ಮ್ಸ್‌ ಡಿವಿಶನ್‌(ಎಫ್.ಡಿ)ನನ್ನು 1948ರಲ್ಲಿ ಸ್ಥಾಪಿಸಲಾಯಿತು.  ಹವ್ಯಾಸಿ(ಫ್ರೀಲ್ಯಾನ್ಸ್‌)ಫಿಲ್ಮ್‌ ತಯಾರಿಕರಿಗೆ ಬೆಂಬಲವನ್ನು ನೀಡುವುದು. ಚಲನಚಿತ್ರಗಳು, ಅದರಲ್ಲು ಮುಖ್ಯವಾಗಿ ಸಾಕ್ಷ್ಯಚಿತ್ರಗಳಿಗೆ ಒಂದು ವೇದಿಕೆಯನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿತ್ತು.  1964ರಲ್ಲಿ ಅಸ್ತಿತ್ವಕ್ಕೆ ಬಂದ ನ್ಯಾಷನಲ್‌ ಫಿಲ್ಮ್‌ ಆರ್ಕೈವ್ಸ್ ಆಫ್‌ ಇಂಡಿಯಾ(ಎನ್‌.ಎಫ್‌.ಎ.ಐ)ಗೆ ನಮ್ಮ ದೇಶದ ಸಿನಿಮಾಗಳನ್ನು ಜತನ ಮಾಡುವುದು ಮತ್ತು ನ್ಯಾಷನಲ್‌ ಫಿಲ್ಮ್‌ ಹೆರಿಟೇಜ್‌ ಮಿಷನ್‌ನನ್ನು ಕಾರ್ಯಗತಗೊಳಿಸುವುದು ಈ ಸಂಸ್ಥೆಯ ಆಶಯವಾಗಿತ್ತು.  ಹೆಸರೇ ಸೂಚಿಸುವಂತೆ, ಚಿಲ್ಡ್ರನ್ಸ್‌ ಫಿಲ್ಮ್‌ ಸೊಸೈಟಿ ಆಫ್‌ ಇಂಡಿಯಾ(ಸಿ.ಎಫ್‌.ಎಸ್‌.ಐ – ಸ್ಥಾಪನೆ: 1955)ಮಕ್ಕಳು ಮತ್ತು ಕಿಶೋರ/ಕಿಶೋರಿಯರಿಗಾಗಿ ಫೀಚರ್‌ ಫಿಲಂಗಳು, ಅನಿಮೇಟಡ್‌ ಫಿಲಂಗಳು, ಶಾರ್ಟ್‌ ಫಿಲಂಗಳು ಮತ್ತು ಟಿವಿ ಸೀರಿಯಲ್‌ಗಳನ್ನು ತಯಾರಿಸುವ ಗುರಿಯನ್ನು ಹೊಂದಿತ್ತು. ಅಲ್ಲದೆ ಅದು ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿತ್ತು. 1973ರಲ್ಲಿ ಶುರುವಾಯಿತು ಡೈರೆಕ್ಟೋರೇಟ್‌ಆಫ್‌ ಫಿಲ್ಮ್‌ ಫೆಸ್ಟಿವಲ್ಸ್(ಡಿ.ಎಫ್‌.ಎಫ್) ಸಂಸ್ಥೆ. ಇದಕ್ಕೆ ಇಂಟರ್-ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ ಆಫ್‌ ಇಂಡಿಯಾವನ್ನು ಏರ್ಪಡಿಸುವ ಜೊತೆಗೆ ಅವುಗಳ ಭಾಗವಾದ ʼಇಂಡಿಯನ್‌ ಪೆನೋರಮʼಗೆ ಚಲನಚಿತ್ರಗಳನ್ನು ಆಯ್ಕೆ ಮಾಡಿ ಅವುಗಳನ್ನು ಮುಂದೆ ಸ್ಕ್ರೀನ್‌ ಮಾಡುವ ಜವಾಬ್ದಾರಿಯಿತ್ತು.  ಅಲ್ಲದೆ, ಅದು ಇನ್ನು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿತ್ತು.  1975ರಲ್ಲಿ ಜನ್ಮ ತಳೆದ ನ್ಯಾಷನಲ್‌ ಫಿಲ್ಮ್‌ ಡೆವಲಪ್ಮೆಂಟ್‌ ಕಾರ್ಪೊರೇಷನ್‌(ಎನ್‌ಎಫ್‌ಡಿಸಿ)ಗೆ ಸಿನಿಮಾಗಳನ್ನು ತಯಾರಿಸುವ, ವಿತರಿಸುವ ಮತ್ತು ಒತ್ತಾಸೆಯನ್ನು ನೀಡುವ ಉದ್ದೇಶಗಳಿದ್ದವು.  ಅದು ನಮ್ಮ ನಾಡಿನ ಕೆಲವು ಪ್ರಖ್ಯಾತ, ವಿಶ್ವಮಟ್ಟದಲ್ಲಿ ಗುರುತಿಸಲ್ಪಡುವ ನಿರ್ದೇಶಕರ  ಚಲನಚಿತ್ರಗಳನ್ನು ನಿರ್ಮಾಣ ಮಾಡಿದೆ.

ಕೇಂದ್ರ ಸರ್ಕಾರ ಮೇಲೆ ಪ್ರಸ್ತಾಪಿಸಿರುವ ನಾಲ್ಕು ಫಿಲ್ಮ್ ಸಂಸ್ಥೆಗಳ ಬಗೆಗೆ ಪರಿಶೀಲನೆಯನ್ನು ನಡೆಸಿ, ಒಂದು ವರದಿಯನ್ನು ನೀಡುವ ನಿಟ್ಟಿನಲ್ಲಿ ಬಿಮಲ್‌ ಜುಲ್ಕ ನೇತೃತ್ವದ ಒಂದು ಉನ್ನತ ಸಮಿತಿ(ಹೈ ಪವರ್ಡ್‌ ಕಮಿಟಿ)ಯನ್ನು ಸ್ಥಾಪಿಸಿತು. ಒಂದು ಸುದ್ದಿಮೂಲದ ಪ್ರಕಾರ ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಿರ್ದೇಶಕರಾಗಿರುವ ಟಿ.ಎಸ್‌.ನಾಗಾಭರಣ ಸಹ ಅದರ ಸದಸ್ಯರಾಗಿದ್ದರು. ಈ ಸಮಿತಿ ಇತರ ಕೆಲವು ಸೂಚನೆ, ಸಲಹೆಗಳ ಜೊತೆ ನಾಲ್ಕು ಫಿಲ್ಮ್‌ ಸಂಸ್ಥೆಗಳನ್ನು ಎನ್‌.ಎಫ್‌.ಡಿ.ಸಿ ಜೊತೆ ವಿಲೀನಗೊಳಿಸಬೇಕೆಂದು ಶಿಫಾರಸ್ಸನ್ನು ಮಾಡಿತು. ಇದು ಕೊಟ್ಟ ಕಾರಣಗಳು: ಅ) ಈ ನಾಲ್ಕು ಸಂಸ್ಥೆಗಳಲ್ಲಿ ಒಂದೇ ತೆರನಾದ ಕೆಲಸಗಳು ಜರಗುತ್ತಿವೆ.‌ ಹಾಗಾಗಿ ಡುಪ್ಲಿಕೇಶನ್ ಆಗುತ್ತಿದೆ. ಹೀಗಾಗದಿರಲು, ಅವುಗಳು ಒಂದು ಸಂಸ್ಥೆಯಡಿ ಜರುಗಿದರೇ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ ಮತ್ತು ಕ್ಷಮತೆಯೂ ಇರುತ್ತದೆ. ಆ) ಒಂದೇ ಸಂಸ್ಥೆಯಿದ್ದರೇ, ಸಂಪನ್ಮೂಲಗಳನ್ನು ಸಹ ಸೂಕ್ತ ರೀತಿಯಲ್ಲಿ ವಿನಿಯೋಗಿಸಬಹುದು. ಇವುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಡಿಸೆಂಬರ್‌ 2020ರಲ್ಲೇ ವಿಲೀನಕ್ಕೆ ಅಸ್ತು ಎಂದಿತ್ತು.  ಆದರೆ ಈ ಸಮಿತಿ, ಚಲನಚಿತ್ರೋದ್ಯಮದಲ್ಲಿರುವವರ ಮತ್ತು ನಾಲ್ಕು ಸಂಸ್ಥೆಗಳ ಉದ್ಯೋಗಿಗಳ ಪ್ರತಿನಿಧಿಗಳ ಜೊತೆ ಯಾವ ಸಮಾಲೋಚನೆಯನ್ನು ನಡೆಸದೇ ಏಕಪಕ್ಷೀಯವಾಗಿ ಶಿಫಾರಸ್ಸುಗಳನ್ನು ನೀಡಿದೆ ಎಂದು ಆಪಾದಿಸಿ ಸುಮಾರು 850 ಚಲನಚಿತ್ರೋದ್ಯಮಕ್ಕೆ ಸೇರಿದವರು, ಸಂಸ್ಕೃತಿ ಕ್ಷೇತ್ರದವರು ಹಾಗೂ ಸಾಮಾಜಿಕ ಕಾರ್ಯಕರ್ತರು (ಕೇಂದ್ರ ಸರ್ಕಾರದ)ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಪತ್ರವನ್ನು ಬರೆದರು. ಈ ನಿಟ್ಟಿನಲ್ಲಿ, ಸಮಿತಿಯ ವರದಿಯನ್ನು ಬಹಿರಂಗಗೊಳಿಸಬೇಕೆಂಬ ಆರ್‌.ಟಿ.ಐ ಅರ್ಜಿಗೂ ಸ್ಪಂದನ ದೊರಕಲಿಲ್ಲ ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಈ ನಾಲ್ಕೂ ಸಂಸ್ಥೆಗಳು ಅನೇಕ ವರ್ಷಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದು, ಅವು ವೈಶಿಷ್ಟ್ಯ ಮತ್ತು ಪರಿಣತಿಯನ್ನು ಪಡೆದುಕೊಂಡಿವೆ. ಅವುಗಳಿಗೆ ವೃತ್ತಿ ಪರ ಸಲಹಾ ಮಂಡಲಿಗಳಿದ್ದು, ಅವು ಮೇಲುಸ್ತುವಾರಿಯನ್ನು ನಡೆಸಿಕೊಂಡು ಬಂದಿವೆ. ಸರಿಯಾದ ದಾರಿಯಲ್ಲಿ ಸಾಗಲು ಸಹಕರಿಸಿವೆ. ಎನ್.ಎಫ್.ಡಿ.ಸಿಯ ಕಾರ್ಯವೈಖರಿ ಬಗೆಗೆ ಅನೇಕ ಅಸಮಾಧಾನಗಳಿವೆ. ಹೀಗಿರಬೇಕಾದರೇ, ಅದಕ್ಕೆ ಇನ್ನು ಹೆಚ್ಚಿನ ಮಟ್ಟದ ಆರ್ಥಿಕ ಶಕ್ತಿಯನ್ನು ತುಂಬಿ, ಅದಕ್ಕೆ ವಿಲೀನದ ಮೂಲಕ ಹೆಚ್ಚಿನ ಕೆಲಸಗಳನ್ನು ನಿಯೋಜಿಸುವುದು ಸರಿಯಾದ ಕ್ರಮವೇ?” ಎಂದು ತಮ್ಮ ಒಂದು ಲೇಖನದಲ್ಲಿ ನಮ್ಮ ದೇಶದ ಪರ್ಯಾಯ ಸಿನಿಮಾದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾದ ಅಡೂರ್‌ ಗೋಪಾಲಕೃಷ್ಣನ್‌ ಪ್ರಶ್ನಿಸಿದ್ದಾರೆ. ಹಾಗೆಯೇ, ನಸೀರುದ್ದೀನ್‌ ಶಾ, ಆನಂದ್‌ ಪಟವರ್ಧನ್‌, ಅನುರಾಗ್‌ ಕಶ್ಯಪ್‌, ನಂದಿತಾದಾಸ್‌, ಶಾಮಾಝೈದಿ ಮುಂತಾದ ಖ್ಯಾತನಾಮರು ಕೇಂದ್ರ ಸರ್ಕಾರದ ಈ ವಿಲೀನ ಕ್ರಮವನ್ನು ಖಂಡಿಸಿದ್ದಾರೆ.  ಆದರೆ ಪ್ರಸಿದ್ಧ ನಿರ್ದೇಶಕ ಶ್ಯಾಮ್‌ ಬೆನಗಲ್‌ “ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.  ಆದರೆ ಈ ವಿಲೀನ ಯಾವ ರೀತಿಯಲ್ಲಿ ಮುಂದುವರೆಯುತ್ತದೆ ಎಂದು ಗಮನಿಸಬೇಕು.  ಫಿಲ್ಮ್‌ ವ್ಯಾಪಾರ ಬದಲಾಗಿದೆ.  ಓಟಿಟಿ ಕಾಲದಲ್ಲಿ ನಾವಿದ್ದೇವೆ.  ಈ ವಿಲೀನ ಯಾವ ಪರಿಯ ಬದಲಾವಣೆಗಳನ್ನು ಉಂಟು ಮಾಡಬಹುದು ಎಂದು ಕಾತರದಿಂದ ನಿರೀಕ್ಷಿಸುತ್ತೇನೆ…”ಎಂದಿದ್ದಾರೆ!

ನ್ಯಾಷನಲ್‌ ಫಿಲ್ಮ್‌ ಆರ್ಕೈವ್ಸ್ ಆಫ್‌ ಇಂಡಿಯಾ(ಎನ್‌.ಎಫ್‌.ಎ.ಐ)ದ ಕೆಲಸಗಳುಮಹತ್ವಪೂರ್ಣವಾಗಿದ್ದವು.  ಅದು ಇಂಟರ್ –ನ್ಯಾಷನಲ್‌ ಫೆಡರೇಶನ್‌ ಆಫ್‌ ಫಿಲ್ಮ್‌ ಆರ್ಕೈವ್ಸ್‌ ನ ಪ್ರಮುಖ ಘಟಕ ಕೂಡ ಆಗಿತ್ತು. ಅನೇಕ ಸಹಸದಸ್ಯ ದೇಶಗಳಿಗೆ ನಮ್ಮ ಸಿನಿಮಾಗಳನ್ನು ರವಾನಿಸುತ್ತಿತ್ತು. ದೆಹಲಿ, ಕೋಲ್ಕತ್ತ, ಚೆನೈ, ಬೆಂಗಳೂರು ಮತ್ತು ತಿರುವನಂತಪುರದ ಪ್ರಾಂತೀಯ ಕಚೇರಿಗಳ ಮೂಲಕ ಅದು ಸಿನಿಮಾಕ್ಕೆ ಸಂಬಂಧಿಸಿದ ನೆನಪಿನ ಗುರುತುಗಳನ್ನು ಸಂಗ್ರಹಿಸುತ್ತಿತ್ತು.  ಅಲ್ಲದೆ ಅದು ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ವಿದ್ವಾಂಸರಿಗೆ ಅಧ್ಯಯನವನ್ನು ನಡೆಸಲು ಪೂರಕವಾದ ವ್ಯವಸ್ಥೆಯನ್ನು ಹೊಂದಿತ್ತು.  ಎನ್‌.ಎಫ್‌.ಡಿ.ಸಿ ಯಂತಹ ದೊಡ್ಡ ಸಂಸ್ಥೆಯಡಿ ಇಂತಹ ಕಾರ್ಯಗಳು ಸಾಂಗವಾಗಿ ಜರುಗಬಲ್ಲವೇ ಎಂದು ಕೆಲವರು ತಮ್ಮ ಆತಂಕವನ್ನು ಹೊರಗೆಡಹಿದ್ದಾರೆ. ಎನ್‌.ಎಫ್‌.ಎ.ಐ ಕೆಲಸಗಳು ಇತರ ನಾಲ್ಕು ಸಂಸ್ಥೆಗಳ ಕೆಲಸಕ್ಕಿಂತ ವಿಭಿನ್ನವಾದದ್ದು, ವಿಶಿಷ್ಟ ವಾದದ್ದು. ಇದೇ ರೀತಿ ಫಿಲ್ಮ್ಸ್‌ ಡಿವಿಶನ್‌(ಎಫ್‌.ಡಿ), ಚಿಲ್ಡ್ರನ್ಸ್‌ ಫಿಲ್ಮ್‌ ಸೊಸೈಟಿ ಆಫ್‌  ಇಂಡಿಯಾ(ಸಿ.ಎಫ್‌.ಎಸ್‌.ಐ) ಮತ್ತು ಡೈರೆಕ್ಟೋರೇಟ್‌ ಆಫ್‌ ಫಿಲ್ಮ್‌ ಫೆಸ್ಟಿವಲ್ಸ್(ಡಿ.ಎಫ್‌.ಎಫ್)‌ ಗಳ ಕೆಲಸಗಳು ಪ್ರತಿಯೊಂದು ವಿಭಿನ್ನ, ವಿಶಿಷ್ಟವಾದವು. ಅವುಗಳಲ್ಲಿ ಡುಪ್ಲಿಕೇಶನ್ ಆಗುತ್ತದೆ ಎಂದು ಖಂಡಿತ ಹೇಳುವಂತಿಲ್ಲ. ಕೆಲಸಗಳು ವಿಭಿನ್ನ, ವಿಶಿಷ್ಟವಾದ್ದರಿಂದ ಅವು ಹೊಂದಿರುವ ಸಿಬ್ಬಂದಿಯ ಕೌಶಲ್ಯ, ಪರಿಣತಿಗಳೂ ವಿಭಿನ್ನವಾದವು. ಹೀಗಾಗಿ ಇವುಗಳನ್ನು ವಿಲೀನಗೊಳಿಸಲು (ಮೇಲೆ ಹೇಳಲಾದ) ಸರಕಾರ ಕೊಟ್ಟಿರುವ ಎರಡು ಕಾರಣಗಳೂ  ಸಮರ್ಪಕ ಎನಿಸುವುದಿಲ್ಲ.

ಪ್ರಸ್ತುತ ಕೇಂದ್ರ ಸರ್ಕಾರ ಸಾರ್ವಜನಿಕ ಕ್ಷೇತ್ರದ ಘಟಕಗಳನ್ನು ದೊಡ್ಡ ಮಟ್ಟದಲ್ಲಿ ಖಾಸಗೀಕರಿಸಬೇಕೆಂಬ ಒಂದು ರೋಡ್‌ ಮ್ಯಾಪನ್ನು ಹೊಂದಿದೆ.  ಅದರಂತೆ ಅದು ಕಾರ್ಯನಿರತವೂ ಆಗಿದೆ.  ಈ ನಾಲ್ಕೂ ಸಂಸ್ಥೆಗಳಿಗೆ (ಭಾರೀ ಬೆಲೆಬಾಳುವ) ಭೂಮಿ ಮುಂತಾದ ಸಾಕಷ್ಟು ಸ್ಥಿರಾಸ್ತಿಗಳೂ ಇವೆ. ಮಾತ್ರವಲ್ಲ ಇವು ಖಾಸಗಿ ಕ್ಷೇತ್ರದ ತಿಮಿಂಗಲಗಳಿಗೆ ಆಪ್ಯಾಯಮಾನವಾಗಿರುತ್ತವೆ.  ಭೂಮಿಯ ಸ್ಥಿರಾಸ್ತಿಗಳಲ್ಲದೆ ಫಿಲ್ಮ್‌ ಆರ್ಕೈವ್ಸ್ ಸಂಸ್ಥೆ ಹೊಂದಿರುವ ಫಿಲಂಗಳ ಮೌಲ್ಯವೂ ಕಡಿಮೆಯದೇನಲ್ಲ. ಈ ನಾಲ್ಕು ಫಿಲಂ ಸಂಸ್ಥೆಗಳು ಸರಕಾರದ ನೇರ ಸ್ವಾಮ್ಯದಲ್ಲಿರುವಂಥವು. ನಾಲ್ಕು ಫಿಲಂ ಸಂಸ್ಥೆಗಳನ್ನು ಮೊದಲು ಎನ್.ಎಫ್.ಡಿ.ಸಿ ಜತೆ ವಿಲೀನಗೊಳಿಸುವುದು. ಎನ್.ಎಫ್.ಡಿ.ಸಿ ಸಾರ್ವಜನಿಕ ಉದ್ಯಮವಾದ್ದರಿಂದ ಅದನ್ನು ಮಾರುವುದು ಸುಲಭ. ಮುಂದಿನ ಹಂತದಲ್ಲಿ ಎನ್.ಎಫ್.ಡಿ.ಸಿ ಖಾಸಗೀಕರಣದ ಮೂಲಕ ಇಡೀ ಫಿಲಂ ವ್ಯವಸ್ಥೆಯನ್ನೇ ಖಾಸಗಿ ಕುಳಗಳಿಗೆ ಮಾರಾಟ ಮಾಡುವ ಸಂಭವವನ್ನು ತಳ್ಳಿಹಾಕುವಂತಿಲ್ಲ ಎಂದು ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವರು ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇದುವರೆಗೆಕನ್ನಡಸಿನಿಮಾರಂಗದಿಂದವಿಲೀನೀಕರಣಕ್ಕೆಯಾವಪ್ರತಿಕ್ರಿಯೆಯೂದೊಡ್ಡರೀತಿಯಲ್ಲಿಬಂದಿಲ್ಲ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *