“ರೈತರಿಂದ ಯಾವುದೇ ಪೂರೈಕೆಗೆ ಅಡ್ಡಿಯಾಗಿಲ್ಲ. ರೈತರು ಯಾವುದೇ ಆಸ್ತಿಯನ್ನು ಹಾನಿಪಡಿಸಿಲ್ಲ. ರೈತರು ಅರ್ಥವ್ಯವಸ್ಥೆಗೆ ಯಾವುದೇ ನಷ್ಟ ಉಂಟುಮಾಡಿಲ್ಲ. ರೈತರಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಯಾಗಿಲ್ಲ. ಮುಳ್ಳುತಂತಿ ಬೇಲಿ, ಜಲಫಿರಂಗಿ, ಲಾಠಿ ಚಾರ್ಜ್ ಮತ್ತು ರಸ್ತೆಗಳನ್ನು ಅಗೆಯುವ ಮೂಲಕ ರಾಷ್ಟ್ರದ ರಾಜಧಾನಿಯನ್ನು ತಲುಪುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸದಂತೆ ರೈತರನ್ನು ಹಿಂಸಾತ್ಮಕವಾಗಿ ತಡೆದು ದೇಶದ ಜನತೆಗೆ ಮತ್ತು ರೈತರಿಗೆ ಅಪಾರ ಅನಾನುಕೂಲತೆಯನ್ನು ಉಂಟುಮಾಡಿರುವುದು ಕೇಂದ್ರ ಸರಕಾರವೇ” ಎಫ್‍ಐಆರ್
ಹೊಸದಿಲ್ಲಿ, ಅಕ್ಟೋಬರ್ 8: ದಿಲ್ಲಿ ಪೊಲಿಸ್‍ನ ವಿಶೇಷ ಕೋಷ್ಠ ಮಾಧ್ಯಮ ಸಂಸ್ಥೆ ನ್ಯೂಸ್‌ಕ್ಲಿಕ್ ಮತ್ತು ಹಲವಾರು ಪತ್ರಕರ್ತರ ವಿರುದ್ಧ ದಾಖಲಿಸಿರುವ ಎಫ್‍ಐಆರ್‌ನಲ್ಲಿ ದಿಲ್ಲಿಯಲ್ಲಿ ತನ್ನ ನೇತೃತ್ವದ ಐತಿಹಾಸಿಕ ರೈತ ಆಂದೋಲನದ ವಿರುದ್ಧ ಕೀಳುಮಟ್ಟದ ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿರುವುದು ಆಘಾತ ಉಂಟು ಮಾಡಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‍ಕೆಎಂ)ಹೇಳಿಕೆ ನೀಡಿದೆ. ಎಫ್‍ಐಆರ್
ಮೂರು ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತರ ಚಳುವಳಿ ಕೊನೆಗೂ ಕೇಂದ್ರ ಸರಕಾರ ಆ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿತು. ಈ ಚಳುವಳಿ ನಡೆದದ್ದು “ ಕಾನೂನುಬಾಹಿರ ವಿದೇಶಿ ನಿಧಿಗಳ ಮೂಲಕ ಭಾರತದಲ್ಲಿ ಸಮುದಾಯದ ಜೀವನಕ್ಕೆ ಅಗತ್ಯವಾದ ಪೂರೈಕೆ ಮತ್ತು ಸೇವೆಗಳನ್ನು ಅಸ್ತವ್ಯಸ್ತಗೊಳಿಸಲು, ಆಸ್ತಿ ಹಾನಿ ಮತ್ತು ನಾಶಕ್ಕೆ ಉತ್ತೇಜನೆ ನೀಡಲು, ಭಾರತೀಯ ಅರ್ಥವ್ಯವಸ್ಥೆಗೆ ದೊಡ್ಡ ನಷ್ಟವನ್ನು ಉಂಟುಮಾಡಲು ಮತ್ತು ಆಂತರಿಕ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸಲು” ಎಂಬ ಆರೋಪಗಳು ಹಸಿ ಸುಳ್ಳು ಮತ್ತು ಕಿಡಿಗೇಡಿತನದ್ದು ಎಂದು ಎಸ್‍ಕೆಎಂ ಅವನ್ನೆಲ್ಲ ತಿರಸ್ಕರಿಸಿದೆ. ಎಫ್‍ಐಆರ್
ಅಕ್ಟೋಬರ್8ರಂದು ನೀಡಿದ ಹೇಳಿಕೆಯಲ್ಲಿ, “ರೈತರಿಂದ ಯಾವುದೇ ಪೂರೈಕೆಗೆ ಅಡ್ಡಿಯಾಗಿಲ್ಲ. ರೈತರು ಯಾವುದೇ ಆಸ್ತಿಯನ್ನು ಹಾನಿಡಿಸಿಲ್ಲ. ರೈತರು ಅರ್ಥವ್ಯವಸ್ಥೆಗೆ ಯಾವುದೇ ನಷ್ಟ ಉಂಟುಮಾಡಿಲ್ಲ. ರೈತರಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಯಾಗಿಲ್ಲ. ಮುಳ್ಳುತಂತಿ ಬೇಲಿ, ಜಲಫಿರಂಗಿ, ಲಾಠಿ ಚಾರ್ಜ್ ಮತ್ತು ರಸ್ತೆಗಳನ್ನು ಅಗೆಯುವ ಮೂಲಕ ರಾಷ್ಟ್ರದ ರಾಜಧಾನಿಯನ್ನು ತಲುಪುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸದಂತೆ ರೈತರನ್ನು ಹಿಂಸಾತ್ಮಕವಾಗಿ ತಡೆದು ದೇಶದ ಜನತೆಗೆ ಮತ್ತು ರೈತರಿಗೆ ಅಪಾರ ಅನಾನುಕೂಲತೆಯನ್ನು ಉಂಟುಮಾಡಿರುವುದು ಕೇಂದ್ರ ಸರಕಾರವೇ” ಎಂದು ಎಸ್‌ಕೆಎಂ ಒತ್ತಿ ಹೇಳಿದೆ.
ಇದನ್ನೂ ಓದಿ:‘ನ್ಯೂಸ್‌ಕ್ಲಿಕ್’ ಪತ್ರಕರ್ತರ ನಿವಾಸಗಳ ಮೇಲೆ ದಿಲ್ಲಿ ಪೊಲಿಸ್ ದಾಳಿ:ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ
“ಈ ಜನವಿರೋಧಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಸತ್ಯವನ್ನು ಬರೆಯುವ ಮತ್ತು ಪ್ರಕಟಿಸುವ ಧೈರ್ಯ” ಹೊಂದಿರುವ ನ್ಯೂಸ್‌ಕ್ಲಿಕ್‌ನಂತಹ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಮತ್ತು ಹತ್ತಾರು ಪತ್ರಕರ್ತರೊಂದಿಗೆ ಸೌಹಾರ್ದ ವ್ಯಕ್ತಪಡಿಸುತ್ತ ಎಸ್‍ಕೆಎಂ ನ್ಯೂಸ್‌ಕ್ಲಿಕ್ ಎಫ್ಐಆರ್ ಮೂಲಕ ರೈತರ ಚಳವಳಿಯ ಮೇಲೆ ಸರ್ಕಾರದ ದಾಳಿಯ ಈ ನವೀಕರಣದ ವಿರುದ್ಧ ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆಗಳನ್ನು ಪ್ರಕಟಿಸಿದೆ.
“ಕೇಂದ್ರ ಸರಕಾರವೇ ಆರೋಪಿ”- ಏಕೆ?
ಬಿಜೆಪಿ ಸರ್ಕಾರದ ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ ಕಾನೂನುಗಳು ಮತ್ತು ನೀತಿಗಳ ವಿರುದ್ಧ ಎಸ್‌ಕೆಎಂ ನೇತೃತ್ವದಲ್ಲಿ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ರೈತರು, ರಾಷ್ಟ್ರದ ಅನ್ನದಾತರು ಭಾಗವಹಿಸಿದ್ದರು. ಮುಳ್ಳುತಂತಿ ಬೇಲಿ, ಜಲಫಿರಂಗಿ, ಲಾಠಿ ಚಾರ್ಜ್ ಮತ್ತು ರಸ್ತೆಗಳನ್ನು ಅಗೆಯುವ ಮೂಲಕ ರಾಷ್ಟ್ರದ ರಾಜಧಾನಿಯನ್ನು ತಲುಪುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸದಂತೆ ರೈತರನ್ನು ಹಿಂಸಾತ್ಮಕವಾಗಿ ತಡೆಯುವ ಮೂಲಕ, ದೇಶದ ಜನತೆಗೆ ಮತ್ತು ರೈತರಿಗೆ ಅಪಾರ ಅನಾನುಕೂಲತೆಯನ್ನು ಉಂಟುಮಾಡಿರುವುದು ಕೇಂದ್ರ ಸರಕಾರವೇ. ಅದರಿಂದಾಗಿ ಸುಡುವ ಬೇಸಿಗೆಯ ಬಿಸಿಲು, ಧಾರಾಕಾರ ಮಳೆ ಮತ್ತು ಕೊರೆಯುವ ಚಳಿಯಲ್ಲೇ ರೈತರು 13 ತಿಂಗಳುಗಳ ಕಾಲ ಪ್ರತಿಭಟನೆಯಲ್ಲಿ ಕುಳಿತುಕೊಳ್ಳಬೇಕಾಯಿತು.
ಲಖಿಂಪುರ ಖೇರಿಯಲ್ಲಿ ರೈತರನ್ನು ಚಲಿಸುವ ವಾಹನಗಳ ಅಡಿಯಲ್ಲಿ ಹೊಸಕಿ ಹಾಕಿ ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನನ್ನು ಸಾಯಿಸುವ ಮೂಲಕ “ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸಿರುವುದೂ ಈ ಕೇಂದ್ರ ಸರ್ಕಾರವೇ ಮತ್ತು ಬಿಜೆಪಿ-ಆರ್‌ಎಸ್‌ಎಸ್ ಕೂಟವೇ” ಎಂದೂ ಎಸ್‍ಕೆಎಂ ತನ್ನ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವರು ಮತ್ತು ಅವರ ಪುತ್ರನ ಕೈವಾಡ ಈ ದಾಳಿಯ ಹಿಂದಿದೆ. ಇದುವರೆಗೂ ಪ್ರಧಾನಿಯವರು ಕರ್ತವ್ಯಲೋಪ ಎಸಗಿದ ಸಚಿವರನ್ನು ತೆಗೆದು ಹಾಕಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮಾಡಿಲ್ಲ. ಮೋದಿ ಸರ್ಕಾರದ ದಬ್ಬಾಳಿಕೆಯನ್ನು ಎದುರಿಸಲು ಲಖೀಂಪುರ ಖೇರಿ ರೈತರು ಸೇರಿದಂತೆ 735 ರೈತರು ತಮ್ಮ ಪ್ರಾಣವನ್ನು ತ್ಯಾಗ ಮಾಡಬೇಕಾಯಿತು.
“ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿರುವುದೂ ಮತ್ತು ಆಹಾರ ಉತ್ಪಾದನೆ ಮತ್ತು ಪೂರೈಕೆ ಸರಪಳಿಗಳನ್ನು ಕೈವಶಪಡಿಸಿಕೊಳ್ಳಲು ಬಂಟ ಬಂಡವಾಳಶಾಹಿಗಳೊಂದಿಗೆ ಪಿತೂರಿ ನಡೆಸಿ ದೇಶದ ಜನರ ಆಹಾರ ಭದ್ರತೆ ಮತ್ತು ಅರ್ಥವ್ಯವಸ್ಥೆಯನ್ನು ನಾಶಪಡಿಸಿರುವುದು ಕೂಡಾ ಇದೇ ಸರಕಾರವೇ” ಎಂದೂ ಎಸ್‍ಕೆಎಂ ಪ್ರತ್ಯಾರೋಪ ಮಾಡಿದೆ.
“ಸುಳ್ಳಿನ ಪ್ರಮಾಣ ದಂಗುಬಡಿಸುವಂತದ್ದು”
“ಚೀನಾದಿಂದ ಹಣವನ್ನು ತನ್ನ ಪಿಎಂ ಕೇರ್ ಫಂಡ್‌ನಲ್ಲಿ ಪಡೆದಿರುವುದು ಪ್ರಧಾನಿ ಮೋದಿ ಮತ್ತು ತನ್ನ ಬಿಸಿನೆಸ್‍ನಲ್ಲಿ ಗೌತಮ್ ಅದಾನಿ”, ಆದರೂ ಅಗಾಧ ಸಂಕಷ್ಟಗಳನ್ನು ಎದುರಿಸಿದ ರೈತರ ತ್ಯಾಗ ಬಲಿದಾನದಿಂದ ಯಶಸ್ವಿಯಾದ ರೈತರ ಆಂದೋಲನವು ವಿದೇಶಿ ನಿಧಿಗಳಿಂದ ನಡೆದಿದೆ ಮತ್ತು ಭಯೋತ್ಪಾದನಾ ಕೃತ್ಯಗಳನ್ನು ನಡೆಸಿದೆ ಎಂದು ಆರೋಪಿಸುವ ಮೂಲಕ “ರೈತರ ತ್ಯಾಗವನ್ನು ಕೀಳಾಗಿಸಿರುವುದು ಈ ಸರ್ಕಾರದ ದುರಹಂಕಾರ, ಅಜ್ಞಾನ ಮತ್ತು ಜನವಿರೋಧಿ ಮನಸ್ಥಿತಿಯನ್ನು ಬಯಲಿಗೆ ತಂದಿದೆ” ಎಂದಿರುವ ಎಸ್‍ಕೆಎಂ ರೈತರ ಅಪಾರ ದೇಶಪ್ರೇಮದ ಐತಿಹಾಸಿಕ ಚಳುವಳಿಯ ಮಹತ್ವವನ್ನು ತಗ್ಗಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿದೆ ಎಂದು ಖಂಡಿಸಿದೆ.
ಇದನ್ನೂ ಓದಿ: ‘ನ್ಯೂಸ್‌ಕ್ಲಿಕ್’ ಪತ್ರಕರ್ತರ ನಿವಾಸಗಳ ಮೇಲೆ ದಿಲ್ಲಿ ಪೊಲಿಸ್ ದಾಳಿ:ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ
“ದಿಲ್ಲಿ ಪೊಲೀಸರು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವುದರಿಂದ, ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ರಂತಹ ರೈತ ವಿರೋಧಿ ನಾಯಕರ ಆದೇಶದಂತೆ ನಡೆಯುವದರಿಂದ ರೈತರ ಚಳವಳಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವುದರಲ್ಲಿ ಆಶ್ಚರ್ಯವೇನಿಲ್ಲ, ಆದರೂ ಸುಳ್ಳಿನ ಪ್ರಮಾಣ ದಂಗುಬಡಿಸುವಂತದ್ದು” ಎಂದು ಮುಂದುವರೆದು ಎಸ್‍ಕೆಎಂ ವರ್ಣಿಸಿದೆ.
ನವೆಂಬರ್ 2020 ಡಿಸೆಂಬರ್ 2021ರ ವರೆಗೆ ದೆಹಲಿಯ ಗಡಿಗಳಲ್ಲಿ ರೈತರ ದೃಢವಾದ, ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ಆಂದೋಲನವನ್ನು ಎದುರಿಸಲಾಗದೆ 3 ಕರಾಳ ಕೃಷಿ ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗಿ ಬಂದ “ಅವಮಾನದಿಂದ ಇನ್ನೂ ಒದ್ದಾಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು , ಈ ಆಂದೋಲನವನ್ನು ಕಳಂಕಿತಗೊಳಿಸಲು, ರೈತ ವಿರೋಧಿ ಕಥನವನ್ನು ಕಟ್ಟಲು, ಆ ಮೂಲಕ ರೈತರ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತದೆ” ಎಂಬುದರ ಅರಿವು ತನಗಿದೆ ಎಂದೂ ಎಸ್‍ಕೆಎಂ ಹೇಳಿದೆ.
ಈಗಾಗಲೇ ಇಂತಹ ಜನವಿರೋಧಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಸತ್ಯವನ್ನು ಬರೆಯುವ ಮತ್ತು ಪ್ರಕಟಿಸುವ ಧೈರ್ಯವಿರುವ ಹಲವಾರು ಪತ್ರಕರ್ತರ ಧ್ವನಿಯನ್ನು ಸರ್ಕಾರಿ ಯಂತ್ರ ಮತ್ತು ಅಧಿಕಾರದ ಅಕ್ರಮ ಪ್ರಯೋಗದ ಮೂಲಕ ಸುಳ್ಳು ಪ್ರಕರಣಗಳು ಮತ್ತು ಬಂಧನಗಳ ಮೂಲಕ ಅಡಗಿಸಲು ಮತ್ತು ನಿರ್ಬಂಧಿಸಲು ಪ್ರಯತ್ನಿಸಿರುವುದನ್ನು ಖಂಡಿಸಿ ಅವರಿಗೆ ಸೌಹಾರ್ದ ಬೆಂಬಲವನ್ನು ವ್ಯಕ್ತಪಡಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಅದನ್ನು ಈ ಎಫ್‍ಐಆರ್ ಹಿನ್ನೆಲೆಯಲ್ಲಿ ಪುನರುಚ್ಚರಿಸಿದೆ.
ನ್ಯೂಸ್‌ಕ್ಲಿಕ್ ಎಫ್‌ಐಆರ್‌ನಲ್ಲಿ ರೈತರ ಆಂದೋಲನದ ವಿರುದ್ಧ ಮಾಡಲಾದ ಸುಳ್ಳು ಮತ್ತು ಕಠೋರ ಆರೋಪಗಳನ್ನು ತಕ್ಷಣವೇ ಹಿಂಪಡೆಯಲು ಒತ್ತಾಯಿಸಿ ಪ್ರತಿ ರಾಜ್ಯ ರಾಜಧಾನಿ, ಜಿಲ್ಲಾ ಕೇಂದ್ರ, ತಹಸಿಲ್ ಕೇಂದ್ರಗಳು ಸಾಮೂಹಿಕ ಪ್ರತಿಭಟನಾ ಸಭೆಗಳನ್ನು ಕಾಣಲಿವೆ, ರೈತರ ಆಂದೋಲನದ ವಿರುದ್ಧದ ಎಲ್ಲಾ ಆರೋಪಗಳನ್ನು ತಕ್ಷಣವೇ ಹಿಂಪಡೆಯಲು ಎಸ್‍ಕೆಎಂ ನಾಯಕರ ನಿಯೋಗದಿಂದ ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವರು, ಕೇಂದ್ರ ಕೃಷಿ ಸಚಿವರು ಮತ್ತು ದಿಲ್ಲಿ ಪೊಲೀಸ್ ಆಯುಕ್ತರಿಗೆ ಆಗ್ರಹಗಳನ್ನು ಸಲ್ಲಿಸಲಾಗುವುದು, ಹಿಂತೆಗೆದುಕೊಳ್ಳದಿದ್ದರೆ, ಧರಣಿ ಪ್ರತಿಭಟನೆಗಳು ಮತ್ತು ಮತಪ್ರದರ್ಶನಗಳು ಎಲ್ಲಾ ಪ್ರಾಧಿಕಾರಗಳ ಕಚೇರಿಗಳ ಮುಂದೆ ನಡೆಯಲಿವೆ ಎಂದು ಅದು ಎಚ್ಚರಿಸಿದೆ.
ವಿಡಿಯೋ ನೋಡಿ:ಖಾಲಿ ಹುದ್ದೆಗಳಿಗೆ ನಿವೃತ್ತಿ ಹೊಂದಿದವರೇ ಮರು ನೇಮಕವಾದರೆ ಯುವಕರ ಗತಿ ಏನು? ಎಂ.ಎನ್ ವೇಣುಗೋಪಾಲ್ ಜೊತೆ ಮಾತುಕತೆ