ನ್ಯೂಸ್‌ಕ್ಲಿಕ್ ಚೀನಾ ಮೂಲದಿಂದ ಅನುದಾನ ಪಡೆದು ಅವರ ಪರವಾಗಿ ಪ್ರೊಪಗಾಂಡ ಮಾಡುತ್ತಿದೆ ಎಂದು ಅಮೆರಿಕಾ ಮೂಲದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು
ದೆಹಲಿ: ಒಕ್ಕೂಟ ಸರ್ಕಾರ ಮತ್ತು ಮಾಧ್ಯಮಗಳು ಸ್ವತಂತ್ರ ಸುದ್ದಿ ಸಂಸ್ಥೆ ನ್ಯೂಸ್‌ಕ್ಲಿಕ್ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಸಂಸ್ಥೆಯು ಸೋಮವಾರ ಪ್ರತಿಕ್ರಿಯೆ ನೀಡಿದ್ದು, ಎಲ್ಲಾ ಆರೋಪಗಳು ಆಧಾರರಹಿತವಾಗಿದೆ ಎಂದು ಹೇಳಿದೆ. “ನಮ್ಮ ಸಂಸ್ಥೆ ಸ್ವತಂತ್ರ ಸುದ್ದಿ ಸಂಸ್ಥೆಯಾಗಿದ್ದು, ಚೀನಾದ ಕಮ್ಯುನಿಸ್ಟ್ ಪಕ್ಷದ ಅಥವಾ ಇತರ ಯಾವುದೆ ಹಿತಾಸಕ್ತಿಗಳ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂಬ ವರದಿ ಸುಳ್ಳಿನಿಂದ ಕೂಡಿದೆ” ಎಂದು ನ್ಯೂಸ್‌ಕ್ಲಿಕ್‌ನ ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರು ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ಮತ್ತು ವೆಬ್‌ಸೈಟ್‌ನಲ್ಲಿ ಸ್ಪಷ್ಟನೆ ಪ್ರಕಟಿಸಿರುವ ನ್ಯೂಸ್ ಕ್ಲಿಕ್, “ಕಳೆದ 12 ಗಂಟೆಗಳಲ್ಲಿ, ನ್ಯೂಸ್‌ಕ್ಲಿಕ್ ವಿರುದ್ಧ ಹಲವಾರು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಆರೋಪಗಳನ್ನು ಹೊರಿಸಲಾಗಿದೆ. ಇವೆಲ್ಲವೂ ಪ್ರಸ್ತುತ ದೇಶದ ನ್ಯಾಯಾಲಯಗಳ ಮುಂದೆ ಸಬ್ ಜುಡಿಸ್ ಆಗಿರುವ ವಿಷಯಗಳಿಗೆ ಸಂಬಂಧಿಸಿದೆ. ನಾವು ಕಾನೂನು ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಗೌರವಿಸುತ್ತೇವೆ ಮತ್ತು ಮಾಧ್ಯಮಗಳ ಕಟಕಟೆಯಲ್ಲಿ ನಿಲ್ಲುವುದಿಲ್ಲ” ಎಂದು ಹೇಳಿದೆ.
“ನ್ಯೂಸ್‌ಕ್ಲಿಕ್ ಒಂದು ಸ್ವತಂತ್ರ ಸುದ್ದಿ ಸಂಸ್ಥೆಯಾಗಿದ್ದು, ಚೀನಾದ ಕಮ್ಯುನಿಸ್ಟ್ ಪಕ್ಷ ಅಥವಾ ಇತರ ಯಾವುದೆ ಹಿತಾಸಕ್ತಿಗಳ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತೇವೆ ಎಂಬ ಪ್ರತಿಪಾದನೆ ಸುಳ್ಳಾಗಿದೆ. ನಾವು ದೇಶದ ನ್ಯಾಯಾಲಯಗಳಲ್ಲಿ ನಮ್ಮ ನಂಬಿಕೆಯನ್ನು ಪುನರುಚ್ಚರಿಸುತ್ತಿದ್ದೇವೆ. ನಾವು ಭಾರತೀಯ ಕಾನೂನಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರಂತೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸವಿದೆ” ಎಂದು ನ್ಯೂಸ್ ಕ್ಲಿಕ್ ಹೇಳಿದೆ.
ಇದನ್ನೂ ಓದಿ: ‘ಬಂಟ ಬಂಡವಾಳಶಾಹಿ’ಯನ್ನೂ ಮೀರಿದ, ಕಾರ್ಪೊರೇಟ್ – ಹಿಂದುತ್ವ ಮೈತ್ರಿಕೂಟ
“ಕೆಲವು ರಾಜಕೀಯ ವ್ಯಕ್ತಿಗಳು ಮತ್ತು ಮಾಧ್ಯಮದ ವಿಭಾಗಗಳು ನಮ್ಮ ವಿರುದ್ಧ ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿವೆ. ವಾಸ್ತವವಾಗಿ ಇವಕ್ಕೆ ಕಾನೂನಿನ ಆಧಾರವಿಲ್ಲ. ಪ್ರಮುಖವಾಗಿ, ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದ್ದು, ಕಂಪನಿಯ ವಿವಿಧ ಅಧಿಕಾರಿಗಳಿಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ನೀಡಿದೆ” ಎಂದು ನ್ಯೂಸ್ ಕ್ಲಿಕ್ ಹೇಳಿದೆ.
“ಅಷ್ಟೆ ಅಲ್ಲದೆ, ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ವಿಶೇಷ ಕಾಯಿದೆಗಳು) ನ್ಯಾಯಾಲಯ ಸಂಸ್ಥೆಯ ವಿರುದ್ಧ ಆದಾಯ ತೆರಿಗೆ ಅಧಿಕಾರಿಗಳು ಸಲ್ಲಿಸಿದ ದೂರನ್ನು ವಜಾಗೊಳಿಸಿ, ಅದು ಅರ್ಹವಲ್ಲ ಎಂದು ಕಂಡುಕೊಂಡಿದೆ” ಎಂದು ಪ್ರಧಾನ ಸಂಪಾದಕರಾದ ಪ್ರಬೀರ್ ಪುರ್ಕಾಯಸ್ಥ ಹೇಳಿದ್ದಾರೆ.
ನ್ಯೂಸ್ ಕ್ಲಿಕ್ ಚೀನಾ ಮೂಲದಿಂದ ಅನುದಾನ ಪಡೆದು ಅವರ ಪರವಾಗಿ ಪ್ರೊಪಗಾಂಡ ಮಾಡುತ್ತಿದೆ ಎಂದು ಅಮೆರಿಕಾ ಮೂಲದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಈ ವರದಿಯನ್ನು ಉಲ್ಲೇಖಿಸಿದ್ದ ಕೇಂದ್ರ ಸಚಿವ ಅನುರಾಗ್ ಠಾಕೂರ್, ”ಸಂಸ್ಥೆಯು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಕಾರ್ಯಸೂಚಿಯನ್ನು ಹರಡುತ್ತಿದೆ. 2021 ರಲ್ಲಿ ಜಾರಿ ನಿರ್ದೇಶನಾಲಯವು ನ್ಯೂಸ್ ಕ್ಲಿಕ್ ವಿರುದ್ಧ ದಾಳಿ ನಡೆಸಿದಾಗ ನ್ಯೂಸ್ ಕ್ಲಿಕ್ ಪರವಾಗಿ ಮಾತನಾಡಿದ್ದ ಕಾಂಗ್ರೆಸ್ ಕೂಡಾ ನ್ಯೂಸ್‌ಕ್ಲಿಕ್‌ನೊಂದಿಗೆ ಕೈಜೋಡಿಸಿದೆ” ಎಂದು ಆರೋಪಿಸಿದ್ದರು.
ವಿಡಿಯೊ ನೋಡಿ: ಕೊಬ್ಬರಿಗೆ ಕನಿಷ್ಠ ಬೆಂಬಲ ಘೋಷಣೆ – ಸಂಸದರ ಕಚೇರಿ ಮುಂಭಾಗ ತೆಂಗು ಬೆಳೆಗಾರರ ಪ್ರತಿಭಟನೆ Janashakthi Media