ನ್ಯೂಸ್‌ ಕ್ಲಿಕ್ | ಪೊಲೀಸ್ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್‌ ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರಿಗೆ ಪೊಲೀಸ್ ಬಂಧನವನ್ನು ಅನುಮೋದಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ. ಯುಎಪಿಎ ಪ್ರಕರಣದಲ್ಲಿ ರಿಮಾಂಡ್ ಅನ್ನು ಪ್ರಶ್ನಿಸಿ ಪುರಕಾಯಸ್ಥ ಮತ್ತು ಚಕ್ರವರ್ತಿ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ವಜಾಗೊಳಿಸಿದ್ದಾರೆ.

ಅರ್ಜಿ ವಿಚಾರಣೆಯ ಸಮಯದಲ್ಲಿ ಪುರ್ಕಾಯಸ್ಥ ಅವರ ವಕೀಲ ಕಪಿಲ್ ಸಿಬಲ್ ಅವರು ಬಂಧನಕ್ಕೆ ಆಧಾರವನ್ನು ಒದಗಿಸಿಲ್ಲ ಎಂದು ಪ್ರತಿಪಾದಿಸಿದ್ದರು ಮತ್ತು ನ್ಯೂಸ್‌ ಕ್ಲಿಕ್ ಮಾಧ್ಯಮವೂ ಚೀನಾದಿಂದ “ಒಂದು ಪೈಸೆಯೂ ಪಡೆದಿಲ್ಲ” ಎಂದು ಪ್ರತಿಪಾದಿಸಿದ್ದರು. ದೆಹಲಿ ಪೊಲೀಸರನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬಂಧನದ ಆಧಾರದ ಬಗ್ಗೆ ಇಬ್ಬರಿಗೆ “ಮಾಹಿತಿ” ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನ್ಯೂಸ್‍ಕ್ಲಿಕ್ ಎಫ್‍ಐಆರ್ ಮೂಲಕ ರೈತರ ಆಂದೋಲನದ ಮೇಲೆ ದುರುದ್ದೇಶಪೂರಿತ ಆರೋಪ: ಸಂಯುಕ್ತ ಕಿಸಾನ್‍ ಮೋರ್ಚಾ ಖಂಡನೆ- ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ

ಈ ವಾರದ ಆರಂಭದಲ್ಲಿ, ಸಿಬಿಐ ಕೂಡ ನ್ಯೂಸ್‌ಕ್ಲಿಕ್ ವಿರುದ್ಧ ವಿದೇಶಿ ಹಣದ ಉಲ್ಲಂಘನೆಯ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದೆ. ಆದರೆ ನ್ಯೂಸ್‌ಕ್ಲಿಕ್ ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಕಳೆದ ವಾರ ನಡೆದ ಪೊಲೀಸ್ ದಾಳಿಯನ್ನು “ನಿರ್ಭೀತ ಧ್ವನಿಗಳನ್ನು ನಿಗ್ರಹಿಸುವ ಪ್ರಯತ್ನ” ಎಂದು ಬಣ್ಣಿಸಿದೆ. ನ್ಯೂಸ್‌ ಕ್ಲಿಕ್ ದಾಳಿಯ ಹಿನ್ನೆಲೆ ಹದಿನಾರು ಪತ್ರಿಕಾ ಸಂಸ್ಥೆಯ ಗುಂಪುಗಳು, ಮಾಧ್ಯಮಗಳ ವಿರುದ್ಧ ತನಿಖಾ ಸಂಸ್ಥೆಗಳ ಹೆಚ್ಚುತ್ತಿರುವ ದಮನಕಾರಿ ಬಳಕೆ ನಿಲ್ಲಿಸಬೇಕೆಂದು  ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಪ್ರಬೀರ್ ಪುರ್ಕಾಯಸ್ಥ ಮತ್ತು ನ್ಯೂಸ್‌ಕ್ಲಿಕ್‌ನ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಅಕ್ಟೋಬರ್ 3 ರಂದು ವಶಕ್ಕೆ ಪಡೆದಿತ್ತು. ಅವರ ಬಂಧನಕ್ಕೆ ಮುನ್ನ ದೆಹಲಿ ಪೊಲೀಸರು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ 35ಕ್ಕೂ ಹೆಚ್ಚು ಪತ್ರಕರ್ತರನ್ನು ವಿಚಾರಣೆಗೊಳಪಡಿಸಿದ್ದರು. ಜೊತೆಗೆ ಅವರ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ವಶಪಡಿಸಿಕೊಂಡಿತ್ತು.

ಅಮೆರಿಕದ ಟೆಕ್ ಉದ್ಯಮಿ ಮೊಗಲ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ನ್ಯೂಸ್‌ ಕ್ಲಿಕ್ ಹಣ ಪಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ರಾಯ್ ಸಿಂಘಮ್ ಅವರು ಚೀನಾ ಪರವಾಗಿ ಪ್ರಚಾರ ಮಾಡುವ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಆರೋಪಿಸಿತ್ತು. ಇದರ ನಂತರ ನ್ಯೂಸ್‌ಕ್ಲಿಕ್ ವಿರುದ್ಧ ಆಗಸ್ಟ್‌ನಲ್ಲಿ ಯುಎಪಿಎ ಪ್ರಕರಣವನ್ನು ದಾಖಲಿಸಲಾಗಿತ್ತು.

ವಿಡಿಯೊ ನೋಡಿ:  ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ

Donate Janashakthi Media

Leave a Reply

Your email address will not be published. Required fields are marked *