ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನ್ಯೂಸ್‌ ಕ್ಲಿಕ್ ಸಂಸ್ಥಾಪಕ; ಸೋಮವಾರ ವಿಚಾರಣೆ

ನವದೆಹಲಿ: ಯುಎಪಿಎ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವುದನ್ನು ವಿರೋಧಿಸಿ ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್‌ ಕ್ಲಿಕ್  ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಆಲಿಸಿದ್ದು, ದೆಹಲಿ ಪೊಲೀಸರ ಪ್ರತಿಕ್ರಿಯೆ ಕೇಳಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಸೋಮವಾರ ಮತ್ತೆ ನಡೆಸಲಿದೆ.

ತಮ್ಮ ಬಂಧನ ಸೇರಿದಂತೆ ನ್ಯೂಸ್‌ ಕ್ಲಿಕ್ ಸುದ್ದಿ ಮಾಧ್ಯಮ ವಿರುದ್ಧದ ಯುಎಪಿಎ ಪ್ರಕರಣ ಹಾಗೂ ತಮ್ಮನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅವರು ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಿಕ್ಕಿಂ ಮೇಘಸ್ಪೋಟ : ಸರ್ಕಾರದ ಜೊತೆ ಕೈ ಜೋಡಿಸುವಂತೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ರಾಹುಲ್‌ಗಾಂಧಿ ಮನವಿ

ಎಫ್‌ಐಆರ್‌ನ ಪ್ರತಿಯನ್ನು ತನ್ನೊಂದಿಗೆ ಹಂಚಿಕೊಳ್ಳುವಂತೆ ಪಟಿಯಾಲ ಹೌಸ್ ಕೋರ್ಟ್ ಗುರುವಾರ ಪೊಲೀಸರಿಗೆ ಹೇಳಿದ್ದು, ಇದಾಗಿ ಒಂದು ದಿನದ ನಂತರ ಪ್ರಬೀರ್ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಅವರ ಮನವಿಯನ್ನು ಪೊಲೀಸರು ವಿರೋಧಿಸಿದ್ದರು.

ಪ್ರಬೀರ್ ಪುರ್ಕಾಯಸ್ಥ ಅವರ ಪರವಾಗಿ ಹೈಕೋರ್ಟ್‌ನಲ್ಲಿ ಶುಕ್ರವಾರ ಹಾಜರಾದ ವಕೀಲ ಕಪಿಲ್ ಸಿಬಲ್ ಅವರು,”ಪ್ರಬೀರ್ ಅವರನ್ನು ಯಾಕೆ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಅವರಿಗೆ ತಿಳಿಸಿಲ್ಲ” ಎಂದು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಪ್ರಬೀರ್‌ ಅವರ ವಕೀಲರ ವಾದವನ್ನು ಆಲಿಸದೆ, ಅವರ ಪ್ರತಿಕ್ರಿಯೆಯನ್ನು ಪರಿಗಣಿಸದೆ ರಿಮಾಂಡ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

“ನಮ್ಮ ನ್ಯಾಯಾಲಯಗಳಿಗೆ ಏನಾಗುತ್ತಿದೆ? ಬಂಧನಕ್ಕೆ ಯಾವುದೇ ಕಾರಣಗಳನ್ನು ನನಗೆ ನೀಡಲಾಗಿಲ್ಲ. ನಾನು ವಕೀಲರನ್ನು ಇಟ್ಟುಕೊಳ್ಳಲು ಅರ್ಹನಾಗಿದ್ದೇನೆ ಎಂದು ಹೈಕೋರ್ಟ್ ನಿಯಮಗಳು ಹೇಳುತ್ತವೆ. 24 ಗಂಟೆಗಳ ಅವಧಿ ಮುಗಿದಿದ್ದರೆ, ವಕೀಲರು ಹಾಜರಾಗಲು ತಾತ್ಕಾಲಿಕ ಬಂಧನ ಮಾಡಲಾಗುತ್ತದೆ ಎಂದು ನಿಯಮಗಳು ಹೇಳುತ್ತವೆ. ಅಂತಹ ಯಾವುದೇ ಆದೇಶವನ್ನು ಹೊರಡಿಸದೆ ಅವರನ್ನು ರಿಮಾಂಡ್ ಮಾಡಲಾಗಿದೆ” ಎಂದು ಪ್ರಬೀರ್ ಅವರು ವಕೀಲ ಕಪಿಲ್ ಸಿಬಲ್ ಅವರು ಹೇಳಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಇದನ್ನೂ ಓದಿ: ನ್ಯೂಸ್‌ ಕ್ಲಿಕ್ ಸಂಸ್ಥೆ ಮೇಲೆ ಆಗಿರುವ ಕಾನೂನು ಬಾಹಿರ ದಾಳಿಯನ್ನು ಖಂಡಿಸಿ ಪ್ರತಿಭಟನೆ

ಅದಾಗ್ಯೂ, ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ವಿರುದ್ಧ ಹೊರಿಸಲಾಗಿರುವ ಆರೋಪಗಳು ತಕ್ಷಣವೇ ಬಿಡುಗಡೆ ಮಾಡಬಹುದಾದಂತಹ ಸ್ವರೂಪವನ್ನು ಹೊಂದಿದೆ ಎಂದು ತೋರುತ್ತಿಲ್ಲ ಎಂದು ನ್ಯಾಯಾಲಯವು ಹೇಳಿದೆ. ತಮ್ಮ ಕಕ್ಷಿದಾರರು ದೈಹಿಕವಾಗಿ ದುರ್ಬಲರಾಗಿದ್ದಾರೆ ಎಂದು ಅಮಿತ್ ಚಕ್ರವರ್ತಿ ಅವರ ವಕೀಲರು ಹೈಕೋರ್ಟ್‌ಗೆ ಹೇಳಿದ್ದಾರೆ. ಇದರ ನಂತರ ನ್ಯಾಯಾಲಯವು ಅವರ ಆರೋಗ್ಯ ಸ್ಥಿತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚಿಸಿದೆ.

ಪೊಲೀಸರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರತಿಕ್ರಿಯೆ ಸಲ್ಲಿಸಲು ಸೋಮವಾರದವರೆಗೆ ಸಮಯ ಕೋರಿದ್ದಾರೆ. ಅಲ್ಲದೆ ಪ್ರಕರಣದ ಡೈರಿಗಳನ್ನು ನ್ಯಾಯಾಲಯದ ಮುಂದೆ ಇಡಲಾಗುವುದು ಎಂದು ಹೇಳಿದ್ದಾರೆ.

ಅಕ್ಟೋಬರ್ 4 ರಂದು ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿತ್ತು. ಬಂಧನಕ್ಕೆ ಮುನ್ನ ದೆಹಲಿ ಪೊಲೀಸರು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ 35ಕ್ಕೂ ಹೆಚ್ಚು ಪತ್ರಕರ್ತರನ್ನು ವಿಚಾರಣೆಗೊಳಪಡಿಸಿದ್ದರು. ಜೊತೆಗೆ ಅವರ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ವಶಪಡಿಸಿಕೊಂಡಿತ್ತು.

ಅಮೆರಿಕದ ಟೆಕ್ ಉದ್ಯಮಿ ಮೊಗಲ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ನ್ಯೂಸ್‌ ಕ್ಲಿಕ್ ಹಣ ಪಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ರಾಯ್ ಸಿಂಘಮ್ ಅವರು ಚೀನಾ ಪರವಾಗಿ ಪ್ರಚಾರ ಮಾಡುವ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಆರೋಪಿಸಿತ್ತು. ಇದರ ನಂತರ ನ್ಯೂಸ್‌ಕ್ಲಿಕ್ ವಿರುದ್ಧ ಆಗಸ್ಟ್‌ನಲ್ಲಿ ಯುಎಪಿಎ ಪ್ರಕರಣವನ್ನು ದಾಖಲಿಸಲಾಗಿತ್ತು.

ವಿಡಿಯೊ ನೋಡಿ: ಜೀವ ಜಗತ್ತಿನ ಓಟದಲ್ಲಿ ಗೆದ್ದಆಮೆಯೆಂಬ ಅದ್ಭುತ ಪ್ರಾಣಿ Janashakthi Media

Donate Janashakthi Media

Leave a Reply

Your email address will not be published. Required fields are marked *