ನವದೆಹಲಿ: ಸ್ವತಂತ್ರ ಮಾಧ್ಯಮ ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರ ವಿರುದ್ಧ ದೆಹಲಿ ಪೊಲೀಸರು ಅಕ್ಟೋಬರ್ 4ರಂದು ಯುಎಪಿಎ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಇದರ ವಿರುದ್ಧ ಸಲ್ಲಿಸಿದ ಅರ್ಜಿಯ ವಿಚಾರಣೆ ಸೋಮವಾರ ನಡೆಸಿದ ದೆಹಲಿ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಆರೋಪಿಗಳನ್ನು ಯಾಕೆ ಬಂಧಿಸಲಾಗುತ್ತಿದೆ ಎಂಬ ಕಾರಣಗಳ ಬಗ್ಗೆ ತಿಳಿಸಲಾಗಿಲ್ಲ. ಅಲ್ಲದೆ ಅವರು ಚೀನಾದಿಂದ ‘ಒಂದು ಪೈಸೆಯೂ ಪಡೆದಿಲ್ಲ’ ಎಂದು ವಾದಿಸಿದ್ದಾರೆ. ನ್ಯೂಸ್ ಕ್ಲಿಕ್
ದೆಹಲಿ ಪೊಲೀಸರ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆರೋಪಿಗಳನ್ನು ಯಾವ ಆಧಾರದಲ್ಲಿ ಬಂಧಿಸಲಾಗುತ್ತಿದೆ ಎಂಬ ಬಗ್ಗೆ ತಿಳಿಸಲಾಗಿದೆ. ಆರೋಪಗಳು ತುಂಬಾ ಗಂಭೀರವಾಗಿದ್ದು, 75 ಕೋಟಿ ರೂಪಾಯಿಗಳ ಹಣವನ್ನು ದೇಶದ ವಿರುದ್ಧ ಬಳಸಲಾಗಿರುವ ಪಿತೂರಿಯನ್ನು ಇದು ಒಳಗೊಂಡಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನ್ಯೂಸ್ ಕ್ಲಿಕ್ ಸಂಸ್ಥೆ ಮೇಲೆ ಆಗಿರುವ ಕಾನೂನು ಬಾಹಿರ ದಾಳಿಯನ್ನು ಖಂಡಿಸಿ ಪ್ರತಿಭಟನೆ
ಯಾವ ಆಧಾರದಲ್ಲಿ ಬಂಧಿಸಲಾಗಿದೆ ಎಂಬವುದಕ್ಕೆ ನೀಡಿರುವ ಕಾರಣಗಳು ಮತ್ತು ಒದಗಿಸಿದ ಕಾರಣಗಳು ಸಹ ವಿಭಿನ್ನವಾಗಿವೆ. ರಿಮಾಂಡ್ ಆದೇಶವನ್ನು ಅಂಗೀಕರಿಸುವ ಸಮಯದಲ್ಲಿ ಆರೋಪಿಗಳಿಗೆ ವಕೀಲರನ್ನು ಸಹ ಇಟ್ಟುಕೊಳ್ಳು ಅನುಮತಿಸಲಾಗಿಲ್ಲ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಎರಡೂ ಕಡೆಯ ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು ತೀರ್ಪನ್ನು ಕಾಯ್ದಿರಿಸಿದ್ದಾರೆ.
ಅಕ್ಟೋಬರ್ 4 ರಂದು ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿತ್ತು. ಬಂಧನಕ್ಕೆ ಮುನ್ನ ದೆಹಲಿ ಪೊಲೀಸರು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ 35ಕ್ಕೂ ಹೆಚ್ಚು ಪತ್ರಕರ್ತರನ್ನು ವಿಚಾರಣೆಗೊಳಪಡಿಸಿದ್ದರು. ಜೊತೆಗೆ ಅವರ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ವಶಪಡಿಸಿಕೊಂಡಿತ್ತು.
ಅಮೆರಿಕದ ಟೆಕ್ ಉದ್ಯಮಿ ಮೊಗಲ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ನ್ಯೂಸ್ ಕ್ಲಿಕ್ ಹಣ ಪಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು. ರಾಯ್ ಸಿಂಘಮ್ ಅವರು ಚೀನಾ ಪರವಾಗಿ ಪ್ರಚಾರ ಮಾಡುವ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಆರೋಪಿಸಿತ್ತು. ಇದರ ನಂತರ ನ್ಯೂಸ್‌ಕ್ಲಿಕ್ ವಿರುದ್ಧ ಆಗಸ್ಟ್‌ನಲ್ಲಿ ಯುಎಪಿಎ ಪ್ರಕರಣವನ್ನು ದಾಖಲಿಸಲಾಗಿತ್ತು.
ವಿಡಿಯೊ ನೋಡಿ: ಜೀವ ಜಗತ್ತಿನ ಓಟದಲ್ಲಿ ಗೆದ್ದ ಆಮೆಯೆಂಬ ಅದ್ಭುತ ಪ್ರಾಣಿ Janashakthi Media