ನ್ಯೂಸ್‌ಕ್ಲಿಕ್ ಪ್ರಕರಣ: ನೆವಿಲ್ಲೆ ರಾಯ್ ಸಿಂಘಮ್‌ಗೆ ಹೊಸ ಸಮನ್ಸ್ ಜಾರಿ ಮಾಡಿದ ಇಡಿ

ನವದೆಹಲಿ: ನ್ಯೂಸ್‌ಕ್ಲಿಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಶಾಂಘೈ ಮೂಲದ ಅಮೆರಿಕನ್, ಮಿಲಿಯನೇರ್ ನೆವಿಲ್ಲೆ ರಾಯ್ ಸಿಂಘಮ್‌ಗೆ ಹೊಸ ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಕೂಡ ಆರೋಪಿಯಾಗಿರುವ ವಿದೇಶಿ ಹಣದ ಉಲ್ಲಂಘನೆಗೆ ಸಂಬಂಧಿಸಿದಂತೆ ಸಿಂಘಮ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಸಿಂಘಮ್ ಅವರು ನ್ಯೂಸ್‌ಕ್ಲಿಕ್ ಮೂಲಕ ಭಾರತ ಸೇರಿದಂತೆ ಚೀನಾದ ಹಿತಾಸಕ್ತಿಗಳನ್ನು ಉತ್ತೇಜಿಸಲು ಚೀನಾ ಸರ್ಕಾರದ ಪ್ರಚಾರ ಅಂಗಕ್ಕೆ ಸಂಯೋಜಿತವಾದ ನಿಧಿಯ ಜಾಲವನ್ನು ನಡೆಸುತ್ತಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಆದರೆ ಅವರು ಈ ಅರೋಪವನ್ನು ನಿರಾಕರಿಸಿದ್ದಾರೆ. ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಹೊಸ ಸಮನ್ಸ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನ್ಯೂಸ್‍ಕ್ಲಿಕ್ ‘ಶೋಧ’: ಇ.ಡಿ., ಐಟಿ, ದಿಲ್ಲಿ ಪೊಲಿಸ್ ನಂತರ ಈಗ ಸಿಬಿಐ

“ಎಫ್‌ಸಿಆರ್‌ಎ ನಿಬಂಧನೆಗಳನ್ನು ಉಲ್ಲಂಘಿಸಿ ನಾಲ್ಕು ವಿದೇಶಿ ಸಂಸ್ಥೆಗಳ ಮೂಲಕ ಸಿಂಘಮ್ ಅವರ ಖಾಸಗಿ ಕಂಪನಿಯು ಸುಮಾರು 28.46 ಕೋಟಿ ರೂಪಾಯಿಗಳ ವಿವರಿಸಲಾಗದ ರಫ್ತು ರವಾನೆಯನ್ನು ಸ್ವೀಕರಿಸಿದೆ ಎಂದು ಆರೋಪಿಸಲಾಗಿದೆ… ನಿಧಿಯನ್ನು ಎಫ್‌ಡಿಐ ಎಂದು ತಪ್ಪಾಗಿ ನಿರೂಪಿಸುವ ಮೂಲಕ ಸುಮಾರು 9.59 ಕೋಟಿ ರೂಪಾಯಿಗಳ ವಿದೇಶಿ ನಿಧಿಯ ವಿವರಿಸಲಾಗದ ರಸೀದಿ ಇದೆ. ಖಾಸಗಿ ಕಂಪನಿಯ ನಿರ್ದೇಶಕರಾದ ಸಿಂಘಮ್ ಅವರು ತಮ್ಮ ನಿಕಟವರ್ತಿಗಳೊಂದಿಗೆ ಎಫ್‌ಸಿಆರ್‌ಎಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ” ಎಂದು ಸಿಬಿಐ ಈ ಹಿಂದೆ ಆರೋಪಿಸಿತ್ತು.

ಕಾಶ್ಮೀರವಿಲ್ಲದೆ ಭಾರತದ ನಕ್ಷೆಯನ್ನು ರಚಿಸುವ ಸಾಧ್ಯತೆಯನ್ನು ಅನ್ವೇಷಿಸುವ ಮತ್ತು ಅರುಣಾಚಲ ಪ್ರದೇಶವನ್ನು ವಿವಾದಿತ ಪ್ರದೇಶವೆಂದು ಬಿಂಬಿಸುವಂತಹ ಭಾರತ ವಿರೋಧಿ ಚಟುವಟಿಕೆಗಳ ಆರೋಪವೂ ಸಿಂಘಮ್ ಅವರ ಮೇಲೆ ಇದೆ.

“ಈ ಮೇಲಿನ ಉದ್ದೇಶವನ್ನು ಸಾಧಿಸಲು ಆರೋಪಿಗಳು ವಿದೇಶಿ ನಿಧಿಯ ಸೋಗಿನಲ್ಲಿ PPK NewsClick, GSPAN India, JJ Enterprises, Virtunet System ಹೆಸರಿನ ಕಂಪನಿಗಳಲ್ಲಿ 115 ಕೋಟಿ ರೂ.ಗೂ ಹೆಚ್ಚು ಹಣವನ್ನು ಪಡೆದಿದ್ದಾರೆ” ಎಂದು ದೆಹಲಿ ಪೊಲೀಸರು ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ:  “ದಿಲ್ಲಿ ಪೊಲಿಸ್‍ನ ನ್ಯೂಸ್‍ಕ್ಲಿಕ್  ಎಫ್‍ಐಆರ್ ಮಾನಹಾನಿಕರ ಆರೋಪಗಳು ಮತ್ತು ತಪ್ಪು ಸಂಗತಿಗಳಿಂದ ತುಂಬಿದೆ” – ನೆವಿಲ್‍ ರಾಯ್‍ ಸಿಂಘಂ

ನ್ಯೂಸ್‌ಕ್ಲಿಕ್ ಸಂಪಾದಕರಾದ ಪ್ರಬೀರ್ ಪುರ್ಕಾಯಸ್ಥ ಮತ್ತು ನ್ಯೂಸ್‌ಕ್ಲಿಕ್‌ನ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ಪೊಲೀಸರು ಅಕ್ಟೋಬರ್ 3 ರಂದು ವಶಕ್ಕೆ ಪಡೆದಿದ್ದರು. ಅವರ ಬಂಧನಕ್ಕೆ ಮುನ್ನ ಪೊಲೀಸರು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ 35ಕ್ಕೂ ಹೆಚ್ಚು ಪತ್ರಕರ್ತರನ್ನು ವಿಚಾರಣೆಗೊಳಪಡಿಸಿದ್ದರು. ಜೊತೆಗೆ ಅವರ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ವಶಪಡಿಸಿಕೊಂಡಿದ್ದರು.

ಅಮೆರಿಕದ ಟೆಕ್ ಉದ್ಯಮಿ ಆಗಿರುವ ಮೊಗಲ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ನ್ಯೂಸ್‌ ಕ್ಲಿಕ್ ಹಣ ಪಡೆದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಇತ್ತಿಚೆಗೆ ವರದಿ ಮಾಡಿತ್ತು. ರಾಯ್ ಸಿಂಘಮ್ ಅವರು ಚೀನಾ ಪರವಾಗಿ ಪ್ರಚಾರ ಮಾಡುವ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ತನ್ನ ವರದಿಯಲ್ಲಿ ಆರೋಪಿಸಿತ್ತು. ಇದರ ನಂತರ ನ್ಯೂಸ್‌ಕ್ಲಿಕ್ ವಿರುದ್ಧ ಆಗಸ್ಟ್‌ನಲ್ಲಿ ಯುಎಪಿಎ ಪ್ರಕರಣವನ್ನು ದಾಖಲಿಸಲಾಗಿತ್ತು.

ವಿಡಿಯೊ ನೋಡಿ: ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ

Donate Janashakthi Media

Leave a Reply

Your email address will not be published. Required fields are marked *