ಆಧಾರರಹಿತ ಆರೋಪಗಳ ಬಗ್ಗೆ ಪತ್ರಕರ್ತರ ಸಂಘಟನೆಗಳ ಖೇದ
ನವದೆಹಲಿ : ‘ ನ್ಯೂಸ್‌ಕ್ಲಿಕ್’ ವೆಬ್ ಸುದ್ದಿತಾಣ ಮತ್ತು ಅದರ ಸಂಸ್ಥಾಪಕರ ವಿರುದ್ಧ ‘ಗುರಿಯಿಟ್ಟು’ ಅಭಿಯಾನ ನಡೆಯುತ್ತಿದೆ ಎಂದು ವಿವಿಧ ಪತ್ರಕರ್ತರ ಸಂಘಟನೆಗಳು ಆಳವಾದ ಕಳವಳ’ ವ್ಯಕ್ತಪಡಿಸಿವೆ.
ಕೆಲವು ಸಂಸದ್ ಸದಸ್ಯರು ಸೇರಿದಂತೆ ಹಿರಿಯ ರಾಜಕೀಯ ವ್ಯಕ್ತಿಗಳು ಇತ್ತೀಚಿನ ಆರೋಪಗಳನ್ನು ಮಾಡಿದ್ದು, ನ್ಯೂಸ್ ಕ್ಲಿಕ್ ನೆರೆಯ ದೇಶಕ್ಕೆ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸೂಚಿಸುವುದು ‘ಅಕಾರಣ ಮತ್ತು ಖಂಡನೀಯ’ ಎಂದು ಒಂದು ಜಂಟಿ ಹೇಳಿಕೆಯಲ್ಲಿ ಅವು ತಿಳಿಸಿವೆ.
ಇತರ ಹಲವು ಮಾಧ್ಯಮಗಳಂತೆ ನ್ಯೂಸ್ ಕ್ಲಿಕ್ ಕೂಡ ಸರ್ಕಾರದ ಕ್ರಮವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುತ್ತದೆ. ಅಷ್ಟಕ್ಕೇ ಅದು ದೇಶಪ್ರೇಮವಿಲ್ಲದ್ದು ಅಥವಾ ಯಾವುದೇ ವಿದೇಶಿ ರಾಷ್ಟ್ರದ ಸಾಧನವಾಗುವುದಿಲ್ಲ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ಉಮಾಕಾಂತ್ ಲಖೇರಾ, ದೆಹಲಿ ಪತ್ರಕರ್ತರ ಒಕ್ಕೂಟದ ಅಧ್ಯಕ್ಷೆ ಸುಜಾತಾ ಮಧೋಕ್, ಭಾರತೀಯ ಮಹಿಳಾ ಪತ್ರಿಕಾ ದಳದ (ಐಡಬ್ಲ್ಯೂಪಿಸಿ) ಅಧ್ಯಕ್ಷೆ ಶೋಭನಾ ಜೈನ್ ಮತ್ತು ಪತ್ರಿಕಾ ಸಂಘದ ಅಧ್ಯಕ್ಷ ಸಿಕೆ ನಾಯಕ್ ಈ ಜಂಟಿ ಹೇಳಿಕೆಯಲ್ಲಿ ಹೇಳಿದ್ದಾರೆ.
ನ್ಯೂಸ್‌ಕ್ಲಿಕ್‌ಗೆ ನಿಧಿಯ ಮೂಲಗಳು ಪರಿಶೀಲನೆಯಲ್ಲಿದ್ದರೆ, ಅದೇ ಪಾರದರ್ಶಕತೆ ಸರಕಾರದ ಪರವಾಗಿರುವ ಇತರ ಹಲವಾರು ಪೋರ್ಟಲ್‌ಗಳು ಮತ್ತು ಅವರ ಬೆಂಬಲಿಗರು ಮತ್ತು ಸಹಾಯಕರಿಗೂ ಅನ್ವಯವಾಗಬೇಕು ಎಂದು ಅವರು ಹೇಳಿದ್ದಾರೆ. ಇಲ್ಲವಾದರೆ ಇದನ್ನು ‘ಬೇಟೆ’ ಎಂದೇ ಹೇಳಬೇಕಾಗುತ್ತದೆ
ಇದರಲ್ಲಿ ಸಮಗ್ರತೆ ಯುಳ್ಳ ಮತ್ತು ಸಾರವುಳ್ಳ ವ್ಯಕ್ತಿಗಳು ಲೇಖನಗಳನ್ನು ಬರೆಯುತ್ತಾರೆ. ಇತರ ದೇಶಗಳ ನೀತಿಗಳ ಬಗ್ಗೆ ವಿಮರ್ಶಾತ್ಮಕ ಮತ್ತು ಮೆಚ್ಚುಗೆ ವ್ಯಕ್ತಪಡಿಸುವ ಲೇಖನಗಳಿದ್ದರೆ, ಅದನ್ನು ಆ ದೇಶಗಳ ಪರವಾದ ವಕಾಲತ್ತು ಎಂದು ತಪ್ಪಾಗಿ ಗ್ರಹಿಸಲಾಗದು ಅಥವಾ ಅವಕ್ಕೆ ರಾಷ್ಟ್ರವಿರೋಧಿ ಅಥವಾ ದೇಶದ್ರೋಹಿ ಎಂದು ಹಣೆಪಟ್ಟಿ ಹಚ್ಚಲಾಗದು ಎಂದು ಹೇಳಿಕೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಾಧ್ಯಮ ಸಂಸ್ಥೆಗಳು ಭಾರತೀಯ ಕಾನೂನಿನ ಮಿತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಸರ್ಕಾರಿ ಸಂಸ್ಥೆಗಳು ಈ ಮಾನದಂಡಗಳಿಗೆ ಬದ್ಧವಾಗಿರುವುದು ಅಷ್ಟೇ ಮುಖ್ಯ. ಒಂದು ತುಡಿಯುವ ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಸಂಸ್ಥೆಗಳು, ಸರ್ಕಾರ ಅಥವಾ ಕಾರ್ಪೊರೇಟ್ ಒತ್ತಡಗಳಿಲ್ಲದೆ ಕಾರ್ಯನಿರ್ವಹಿಸುವ ಸ್ವಾತಂತ್ರ್ಯವನ್ನು ಹೊಂದಿರಬೇಕು. ಪ್ರಜಾಪ್ರಭುತ್ವದ ಜೀವಂತಿಕೆಯು ಸ್ವತಂತ್ರ ಮಾಧ್ಯಮಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಈ ಹಿರಿಯ ಪತ್ರಕರ್ತರು ಹೇಳಿದ್ದಾರೆ.