ಭಾರತದ ಸಂಪಾದಕರ ವೃತ್ತಿಸಂಘ(ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯ – ಇಜಿಐ) ಸೆಪ್ಟಂಬರ್ 10 ರಂದು ವೆಬ್ ಸುದ್ದಿಪತ್ರಿಕೆಗಳಾದ ‘ನ್ಯೂಸ್ ಕ್ಲಿಕ್’ ಮತ್ತು’ನ್ಯೂಸ್ ಲಾಂಡ್ರಿ’ಯ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ‘ಸರ್ವೆ’ ಎಂಬ ಹೆಸರಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಸ್ವತಂತ್ರ ಮಾಧ್ಯಮಗಳನ್ನು ಬೆದರಿಸುವ, ಅವುಗಳಿಗೆ ಕಿರುಕುಳ ಕೊಡುವ ಒಂದು ಅಪಾಯಕಾರೀ ಪ್ರವೃತ್ತಿ ಆರಂಭವಾಗಿದೆ. ಇದು ನಿಲ್ಲಬೇಕು, ಏಕೆಂದರೆ ಇದು ಸಂವಿಧಾನಿಕ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುತ್ತದೆ ಎಂದು ಅದು ಭೀತಿ ವ್ಯಕ್ತಪಡಿಸಿದೆ. ಇವೆರಡೂ ಪತ್ರಿಕೆಗಳು ಕೇಂದ್ರ ಸರಕಾರದ ಕಾರ್ಯಪ್ರಣಾಲಿಯ ಬಗ್ಗೆ ವಿಮರ್ಶಾತ್ಮಕವಾಗಿ ವರದಿ ಮಾಡುತ್ತಿರುವ ಮಾಧ್ಯಮಗಳು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಆದಿನ ಆದಾಯ ತೆರಿಗೆ ಅಧಿಕಾರಿಗಳ ತಂಡಗಳು ಈ ಪತ್ರಿಕೆಗಳ ಕಚೇರಿಗಳಿಗೆ ಹೋಗಿ ಅಲ್ಲಿ ಇದ್ದ ಎಲ್ಲ ಪತ್ರಕರ್ತರ, ಉದ್ಯೋಗಿಗಳ ಮೊಬೈಲುಗಳು, ಲ್ಯಾಪ್‌ಟಾಪ್‌ಗಳು ಇತ್ಯಾದಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ತೆಗೆದುಕೊಂಡರು, ಅವರನ್ನು ಕೆಲಸ ಮಾಡಲು ಬಿಡಲಿಲ್ಲ, ಅಲ್ಲಿರುವ ಯಾರೂ ಹೊರಗೆ ಯಾರನ್ನೂ ಸಂಪರ್ಕಿಸಬಾರದು ಎಂದೂ ತಾಕೀತು ಮಾಡಿದರು. ಇಡೀ ದಿನ ತನಿಖೆ ನಡೆಸಿದರು; ನ್ಯೂಸ್ ಲಾಂಡ್ರಿಯ ಸಹಸಂಸ್ಥಾಪಕ ಅಭಿನಂದನ್ ಸೆಖ್ರಿಯವರ ಲ್ಯಾಪ್‌ಟಾಪ್‌ಗಳು ಮುಂತಾದವುಗಳಲ್ಲಿ ಇದ್ದ ಮಾಹಿತಿಗಳು, ದತ್ತಾಂಶಗಳ ಪ್ರತಿಗಳನ್ನು ತಯಾರಿಸಿಕೊಂಡರು. ಆದರೆ ಇವುಗಳ ಪ್ರತಿಗಳನ್ನು ಅವರಿಗೆ ನೀಡಲಿಲ್ಲ. ಅವರು ತಮ್ಮ ವಕೀಲರನ್ನು ಸಂಪರ್ಕಿಸಲೂ ಬಿಡಲಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೇಳಿದಾಗ ಇವು ಆದಾಯ ತೆರಿಗೆ ದಾಳಿಗಳಲ್ಲ ‘ಸರ್ವೆ’ಗಳು ಎಂದು ಆದಾಯ ತೆರಿಗೆ ಇಲಾಖೆ ‘ಸ್ಪಷ್ಟೀಕರಣ’ ನೀಡಿರುವುದಾಗಿ ವರದಿಯಾಗಿದೆ. ಈ ಸರ್ವೆಗಳು ʻತೆರಿಗೆಗಳ್ಳತನದ ಆರೋಪಗಳ’ ತನಿಖೆಗಾಗಿ, ಲೆಕ್ಕ ಪುಸ್ತಕಗಳನ್ನು ಪರೀಕ್ಷಿಸುವ ಕೆಲಸ ಎಂದು ಅವರು ಹೇಳಿದ್ದಾರೆ. ಆದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 133ರಲ್ಲಿ ನಿರೂಪಿಸಿರುವ ‘ಸರ್ವೆ’ಯ ವ್ಯಾಪ್ತಿಗೆ ಇವೆಲ್ಲ ಬರುವುದಿಲ್ಲ, ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಉಲ್ಲಂಘನೆಯೂ ಆಗುತ್ತದೆ ಎಂದು ಗಿಲ್ಡ್ ಹೇಳಿದೆ. ಪತ್ರಕರ್ತರ ಬಳಿಯಿರುವ ದತ್ತಾಂಶಗಳನ್ನು ಈ ರೀತಿಯಾಗಿ ಬೇಕಾಬಿಟ್ಟಿಯಾಗಿ ವಶಪಡಿಸಿಕೊಳ್ಳುವುದು ಅತ್ಯಂತ ಕಳವಳಕಾರಿ, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮತ್ತು ಪತ್ರಿಕಾ ಸ್ವಾತಂತ್ರ್ಯದ ಹರಣವೂ ಆಗುತ್ತದೆ ಎಂದೂ ಸಂಪಾದಕರ ಗಿಲ್ಡ್ ಹೇಳಿದೆ.
ಈ ಎರಡು ಪತ್ರಿಕೆಗಳ ಕಚೇರಿಗಳ ಮೇಲೆ ಕೇಂದ್ರೀಯ ಏಜೆನ್ಸಿಗಳ ‘ಭೇಟಿ’ ಅಥವ ದಾಳಿ ಇದೇ ಮೊದಲಲ್ಲ. ನ್ಯೂಸ್ ಕ್ಲಿಕ್‌ನ ಕಚೇರಿ ಮತ್ತು ಅದರ ಸಂಸ್ಥಾಪಕರ ನಿವಾಸಗಳಿಗೆ ಕಳೆದ ಫೆಬ್ರುವರಿಯಲ್ಲಷ್ಟೇ ಜಾರಿ ನಿರ್ದೇಶನಾಲಯ(ಇ.ಡಿ.) ದಾಳಿ ಮಾಡಿತ್ತು. ಅದು ಹಲವು ಗಂಟೆಗಳ ಕಾಲ ನಡೆಯಿತು. ಜೂನ್ ತಿಂಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳ ತಂಡಗಳು ನ್ಯೂಸ್ ಲಾಂಡ್ರಿ ಮತ್ತು ನ್ಯೂಸ್ ಕ್ಲಿಕ್ ಕಚೇರಿಗಳಿಗೆ “ಭೇಟಿ” ನೀಡಿದ್ದವು.
ಇಂತಹ ಬೆದರಿಕೆಗಳಿಗೆ ತಾವು ಜಗ್ಗುವುದಿಲ, ಎಲ್ಲ ಕಾನೂನುಗಳನ್ನು ಗೌರವಯುತವಾಗಿ, ಪ್ರಾಮಾಣಿಕವಾಗಿ ಪಾಲಿಸುತ್ತಲೇ, ತಮ್ಮ ಕೆಲಸವನ್ನು ಮುಂದುವರೆಸುವುದಾಗಿ ಈ ಎರಡೂ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರುಗಳು ಪುನರುಚ್ಚರಿಸಿದ್ದಾರೆ. “ನಾವು ನಮ್ಮ ಕೆಲಸವನ್ನು ಮುಂದುವರೆಸುತ್ತೇವೆ, ಅಧಿಕಾರಸ್ಥರ ಮುಖಕ್ಕೆ ಸತ್ಯವನ್ನು ಹಿಡಿಯುತ್ತೇವೆ” ಎಂದು ನ್ಯೂಸ್ ಕ್ಲಿಕ್‌ನ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ಹೇಳಿದರೆ, ನ್ಯೂಸ್ ಲಾಂಡ್ರಿಯ ಅಭಿನಂದನ್ ಸೇಖ್ರಿ “ನಮ್ಮ ಸಾರ್ವಜನಿಕ ಹಿತಾಸಕ್ತಿಯ ಪತ್ರಕಾರಿತೆಯನ್ನು ಮುಂದುವರೆಸುತ್ತೇವೆ, ನಾವು ಆರಿಸಿಕೊಂಡ, ಪ್ರತಿಪಾದಿಸುತ್ತಿರುವ ಮಾದರಿಗಳ ಬಗ್ಗೆ ನಮಗೆ ಹೆಮ್ಮೆಯಿದೆ” ಎಂದು ಹೇಳಿದ್ದಾರೆ.
ಈ ಎರಡು ಪತ್ರಿಕೆಗಳ ಮೇಲೆ ಮಾತ್ರವಲ್ಲ, ಕಳೆದ ಜೂನ್‌ನಲ್ಲಿ ಹಿಂದಿಯ ಪ್ರಮುಖ ಪತ್ರಿಕೆ ‘ದೈನಿಕ್ ಭಾಸ್ಕರ್” ಮತ್ತು ಲಕ್ನೌನ ದೈನಿಕ ‘ಭಾರತ್ ಸಮಾಚಾರ್’ ಮೇಲೂ ಆದಾಯ ತೆರಿಗೆ ದಾಳಿಗಳು ನಡೆದವು ಎಂಬುದನ್ನೂ ಎಡಿಟರ್ಸ್ ಗಿಲ್ಡ್ ಗಮನಿಸಿದೆ. ಅವು ಸರಕಾರದ ಕೊವಿಡ್ ನಿರ್ವಹಣೆಯ ಬಗ್ಗೆ ಪ್ರಕಟಿಸಿದ ವರದಿಗಳ ಹಿನ್ನೆಲೆಯಲ್ಲಿ ನಡೆದಿದ್ದವು.
ಈ ಎಲ್ಲ ತನಿಖೆಗಳಲ್ಲಿ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಹಕ್ಕುಗಳನ್ನು ಬುಡಮೇಲು ಮಾಡದಂತೆ ಹೆಚ್ಚಿನ ಜಾಗರೂಕತೆ ಮತ್ತು ಸೂಕ್ಷ್ಮತೆಯಿಂದ ವರ್ತಿಸಬೇಕಾಗುತ್ತದೆ ಎಂದು ಆಗ್ರಹಿಸಿರುವ ಗಿಲ್ಡ್, ಇಂತಹ ತನಿಖೆಗಳನ್ನು ನಿರೂಪಿತ ನಿಯಮಗಳ ವ್ಯಾಪ್ತಿಯೊಳಗೇ ಮಾಡಬೇಕು, ಅವು ಸ್ವತಂತ್ರ ಮಾಧ್ಯಮಗಳನ್ನು ಬೆದರಿಸುವ, ಅವುಗಳಿಗೆ ಕಿರುಕುಳ ಕೊಡುವ ಮಟ್ಟಕ್ಕೆ ಇಳಿಯಬಾರದು ಎಂದು ಹೇಳಿದೆ.
ದಿಲ್ಲಿ ಪತ್ರಕರ್ತರ ಸಂಘದ ಖಂಡನೆ
ದಿಲ್ಲಿ ಪತ್ರಕರ್ತರ ಸಂಘ (ಡಿಯುಜೆ)ವೂ ಈ ಕುರಿತು ಒಂದು ಹೇಳಿಕೆಯನ್ನು ನೀಡಿ ಈ ಆನ್‌ಲೈನ್ ಮಾಧ್ಯಮಗಳನ್ನು ಬೆದರಿಸುವ, ತಲೆಬಾಗುವಂತೆ ಮಾಡುವ ನಾಚಿಕೆಗೇಡೀ ಪ್ರಯತ್ನಗಳಿವು ಎಂದು ಖಂಡಿಸಿದೆ.
ಈ ಮೊದಲು ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಗಳನ್ನು ಮತ್ತು ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಪ್ರಶಸ್ತಿ ವಿಜೇತ ಪತ್ರಕರ್ತೆ ರಾನಾ ಅಯ್ಯೂಬ್ ಮೇಲೆ ಕೊವಿಡ್ ಪರಿಹಾರಕ್ಕೆ ಧನಸಂಗ್ರಹ ನಡೆಸಿದ್ದಕ್ಕೆ ಎಫ್‌ಐಆರ್ ಹಾಕಿರುವುದು, ಈ ವಾರವೇ ತ್ರಿಪುರಾದಲ್ಲಿ ಬಿಜೆಪಿ ಕಾರ್ಯಕರ್ತರು ಸಿಪಿಐ(ಎಂ) ಕಚೇರಿಗಳ ಮೇಲೆ ಮಾತ್ರವಲ್ಲ, ಪಿಬಿ24, ಪ್ರತಿಬಾದಿ ಕಲಮ್, ಕಲಮೇರ್ ಶಕ್ತಿ, ಡೈಲಿ ದೇಶೇರ್ ಕಥಾ ಮತ್ತು ದುರಂತ್ ಟಿವಿ ಈ ಮಾಧ್ಮಮಗಳ ಮೇಲೆ ಹಿಂಸಾತ್ಮಕ ದಾಳಿಗಳನ್ನು ನಡೆಸಿರುವುದನ್ನು ಕೂಡ ಡಿಯುಜೆಯ ಅಧ್ಯಕ್ಷ ಎಸ್.ಕೆ.ಪಾಂಡೆ ಮತ್ತು ಪ್ರಧಾನ ಕಾರ್ಯದರ್ಶಿ ಸುಜಾತಾ ಮಧೋಕ್ ನೀಡಿರುವ ಹೇಳಿಕೆ ಖಂಡಿಸಿದೆ. ಈ . ಅಪಾಯಕಾರಿ ಪ್ರವೃತ್ತಿಯನ್ನು ಪ್ರದರ್ಶಿಸಿರುವ ಈ ದೊಂಬಿಕಾರರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವುದಲ್ಲದೆ, ಈ ಮಾಧ್ಯಮಗಳಿಗೆ ಆಗಿರುವ ಭೌತಿಕ ಹಾನಿಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.