ಅನ್ಯಜಾತಿ ಹುಡುಗನೊಂದಿಗೆ ವಿವಾಹ: ನವಜೋಡಿಯ ಹತ್ಯೆ

ಚೆನ್ನೈ: ಹೊಸದಾಗಿ ಜೀವನ ನಡೆಸಬೇಕಾಗಿದ್ದ ನವಜೋಡಿಯನ್ನು ನವವಧು ಸಹೋದರ ಮತ್ತು ಪೋಷಕರು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ.

ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಪೋಷಕರ ಒಪ್ಪಿಗೆ ಇಲ್ಲದೆ ಮದುವೆಯಾದ ನವಜೋಡಿ ಶರಣ್ಯ ಮತ್ತು ಮೋಹನ್ ಎಂಬುವವರನ್ನು ಯುವತಿಯ ಪೋಷಕರು ಮನೆಗೆ ಕರೆಸಿ ಹತ್ಯೆ ಮಾಡಿದ ಪ್ರಕರಣ ಕುಂಭಕೋಣಂನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನವವಧುವಿನ ಸಹೋದರ ಮತ್ತು ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಶರಣ್ಯಾ ಕುಂಭಕೋಣಂ ಸಮೀಪದ ತುಳುಕ್ಕವೇಲಿ ಗ್ರಾಮದ ನಿವಾಸಿಯಾಗಿದ್ದು, ನರ್ಸಿಂಗ್‌ ಪದವಿ ಪಡೆದ ಬಳಿಕ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ತಿರುವಣ್ಣಾಮಲೈ ಸಮೀಪದ ಪೊನ್ನೂರಿನ ಮೋಹನ್‌ 6 ತಿಂಗಳ ಹಿಂದೆ ಶರಣ್ಯಾ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದರು. ನಂತರದ ದಿನಗಳಲ್ಲಿ ಇವರ ಪರಿಚಯ ಪ್ರೀತಿಗೆ ತಿರುಗಿತ್ತು.

ಶರಣ್ಯಾ ಪ್ರೀತಿಯ ವಿಚಾರ ಮನೆಯವರಿಗೂ ತಿಳಿದ ಮೇಲೆ ಅಣ್ಣ ಶಕ್ತಿವೇಲು ತಂಗಿಗೆ ಬುದ್ದಿ ಹೇಳಿ, ಸೋದರ ಮಾವ ರಂಜಿತ್‌ನನ್ನು ಮದುವೆಯಾಗುವಂತೆ ಹೇಳಿದ್ದರು. ಇದರಿಂದ ಗಾಬರಿಗೊಂಡ ಶರಣ್ಯಾ ಚೆನ್ನೈನಲ್ಲಿ ಮೋಹನ್‌ನನ್ನು ಪ್ರೇಮ ವಿವಾಹವಾದರು. ನಂತರ ಪೋಷಕರಿಗೆ ದೂರವಾಣಿ ಮೂಲಕ ಮದುವೆಯಾಗಿರುವ ವಿಚಾರ ತಿಳಿಸಿದ್ದರು.

ಮದುವೆಯಾಗಿ 5 ದಿನಗಳ ಬಳಿಕ ತಂಗಿಗೆ ಫೋನ್‌ ಮಾಡಿದ್ದ ಶಕ್ತಿವೇಲು, ನಿಮ್ಮ ಮದುವೆನಮಗೆ ಒಪ್ಪಿಗೆ ಇದೆ, ಭಾವನ ಜೊತೆಯಲ್ಲಿ ಮನೆಗೆ ಬರುವಂತೆ ಹೇಳಿದ್ದನು. ಅಣ್ಣನ ಮಾತು ಕೇಳಿ ಮನೆಗೆ ಹೋಗಿದ್ದವರು. ಊಟ ಮಾಡಿದ ಬಳಿಕ ಚೆನ್ನೈಗೆ ಹೋಗಲು ತಯಾರಿ ಮಾಡಿಕೊಳ್ಳುತ್ತಿರುವಾಗ ಶಕ್ತಿವೇಲು ಚೂಪಾದ ಆಯುಧದಿಂದ  ಶರಣ್ಯಾ ಹಾಗೂ ಮೋಹನ್‌ ಕತ್ತು ಸೀಳಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದ ಶರಣ್ಯಾ ಮತ್ತು ಮೋಹನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂತರ ಶಕ್ತಿವೇಲು ಸ್ಥಳೀಯ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ತಂಗಿ ಭಾವನನ್ನು ಹತ್ಯೆ ಮಾಡುವ ಸಲುವಾಗಿ ಶಕ್ತಿವೇಲು ಸಂಚು ರೂಪಿಸಿ ಅವರನ್ನು ಮನೆಗೆ ಕರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶರಣ್ಯಾ ಎಸ್‌ಸಿ ಸಮುದಾಯಕ್ಕೆ ಸೇರಿದ್ದರೆ, ಮೋಹನ್ ಮುದಲಿಯಾರ್ (ಬಿಸಿ) ಸಮುದಾಯದವರು. ಬೇರೆ ಸಮುದಾಯದವರನ್ನು ಶರಣ್ಯಾ ಮದುವೆಯಾಗಿದ್ದು ಸಮಾಜದಲ್ಲಿ ನಮ್ಮ ಕುಟುಂಬದ ಮರ್ಯಾದೆ ಹೋಯಿತು ಎಂಬ ಕಾರಣಕ್ಕೆ ಈ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಂಜಾವೂರು ಎಸ್ಪಿ ಜಿ.ರವಳಿ ಪ್ರಿಯಾ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ತನಿಖೆ ಮುಂದುವರಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಕ್ತಿವೇಲ್ ಮತ್ತು ರಂಜಿತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವರನ್ನು ಬಂಧಿಸಿದ್ದಾರೆ. ದಂಪತಿಯನ್ನು ಕೊಲ್ಲಲು ಬಳಸಿದ ಕುಡಗೋಲು ಮತ್ತು ಇತರ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *