ವೇದರಾಜ ಎನ್ ಕೆ
ಈ ವಾರ ಕೇಂದ್ರೀಯ ಸಂಪುಟ ಪುನರ‍್ರಚನೆಯೇ ದೇಶದ ವ್ಯಂಗ್ಯಚಿತ್ರಕಾರರಿಗೆ ಪುಷ್ಕಳ ಆಹಾರವಾದ ಸುದ್ದಿ.
2014ರಲ್ಲಿ ನರೇಂದ್ರ ಮೋದಿಯವರು ‘ಅಚ್ಛೇ ದಿನ್’ ಜತೆಗೆ ಕೊಟ್ಟ ಹಲವು ಆಕರ್ಷಕ ಘೋಷಣೆಗಳಲ್ಲಿ “ಕನಿಷ್ಟ ಸರಕಾರ, ಗರಿಷ್ಟ ಆಳ್ವಿಕೆ’ಯೂ ಒಂದು. ‘ಅಚ್ಛೇ ದಿನ್’ ಜುಮ್ಲಾ ಎಂದೆನಿಸಿ ತಮಾಷೆಯ ಪದವಾಗಿ ಬಿಟ್ಟ ಮೇಲೆ ಬಂದ ‘ನ್ಯೂಇಂಡಿಯಾ’ದಲ್ಲಿ ಕೇಂದ್ರ ಸಂಪುಟದ ಸಂಖ್ಯೆಯನ್ನು 54ರಿಂದ 78ಕ್ಕೇರಿಸಲಾಗಿದೆ.
(ಶೀರ್ಷಿಕೆಯ ವ್ಯಂಗ್ಯಚಿತ್ರ “ಕನಿಷ್ಟ ಸರಕಾರ, ಗರಿಷ್ಟ ಆಳ್ವಿಕೆ’, ಸುಭಾನಿ, ಡೆಕ್ಕನ್ ಕ್ರಾನಿಕಲ್).
ಹೊಸದಾಗಿ 43 ಸಂಸದರಿಗೆ ಮಂತ್ರಿಗಳಾಗುವ ಅವಕಾಶ ದಕ್ಕಿದೆ. ನಾಲ್ವರು ಹಿರಿಯ ಸಚಿವರು ಸೇರಿದಂತೆ 12 ಸಚಿವರನ್ನು ಕೈಬಿಡಲಾಗಿದೆ. ಇದು ‘ಗರಿಷ್ಟ ಆಳ್ವಿಕೆ’ ಯ ಸಂಕೇತವೋ ಅಥವ ವಿಫಲತೆಯೋ ಎಂದು ಬಹುಶಃ ‘ಭಕ್ತ’ ಜನಗಳಿಗೂ ಗೊಂದಲ ಉಂಟಾಗಬಹುದಾದ ಸನ್ನಿವೇಶ.
ಮಾನ್ಯ ಪ್ರಧಾನ ಮಂತ್ರಿಗಳು ತಮ್ಮ ಸಂಪುಟವನ್ನು ಹೆಚ್ಚು ದಕ್ಷಗೊಳಿಸಲು, ಹೆಚ್ಚು ಪ್ರಾತಿನಿಧಿಕಗೊಳಿಸಲು ಮತ್ತು ಕಾರ್ಯಕ್ಷಮತೆ, ಪ್ರತಿಭೆಗಳನ್ನು ತರಲು ಈ ಪುನರ‍್ರಚನೆ ಮಾಡಿದ್ದಾರೆ ಎಂದು ಬಂಟ-ಮಾಧ್ಯಮಗಳವರು ಹಾಡಿ ಹೊಗಳುತ್ತಿದ್ದಾರೆ; ಏಕೆಂದರೆ ಈ ಸಂಪುಟದಲ್ಲಿ 27 ಮಂದಿ ಒಬಿಸಿ, 12 ಪರಿಶಿಷ್ಟ ಜಾತಿಗಳವರು, 8 ಪರಿಶಿಷ್ಟ ಬುಡಕಟ್ಟುಗಳನ್ನು ಪ್ರತಿನಿಧಿಸುವವರು ಮತ್ತು 11 ಮಹಿಳೆಯರು ಹಾಗೂ 5 ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು. ಮಹಿಳೆಯರ ಸಂಖ್ಯೆ 4ರಿಂದ 11ಕ್ಕೇರಿದೆ. ಸಂಪುಟದ ಸರಾಸರಿ ವಯಸ್ಸು 61ರಿಂದ 58ಕ್ಕೆ ಇಳಿದಿದೆ.
***
ಆದರೆ ಹೀಗೆ ಹೇಳುವಾಗ ಪರೋಕ್ಷವಾಗಿ ಇದುವರೆಗೆ ಈ ಸರಕಾರದಲ್ಲಿ ದಕ್ಷತೆ, ಪ್ರತಿಭೆ, ಕಾರ್ಯಕ್ಷಮತೆ, ಸಮನಾದ ಪ್ರಾತಿನಿಧ್ಯ ಇರಲಿಲ್ಲ. ಅದರಿಂದಾಗಿ ‘ಗರಿಷ್ಟ ಆಳ್ವಿಕೆ’ ಸಾಧ್ಯವಾಗಿಲ್ಲೆಂದು ಹೇಳುತ್ತಿದ್ದಾರೆಯೇ ಎಂಬ ಸಂದೇಹ ಎದ್ದಿರುವುದು ವ್ಯಂಗ್ಯಚಿತ್ರಕಾರರಿಗೆ ಮಾತ್ರವಲ್ಲ.
“ನಾವು ಭಿನ್ನ ರೀತಿಯಲ್ಲಿ ಮಾಡಬಹುದಿತ್ತೇ?”
(ಸಂದೀಪ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ)
ಹೌದು, ಈ ಸರಕಾರಕ್ಕೆ ಟೆಫ್ಲಾನ್ ಕೋಟಿಂಗ್ ಕೊಡುವ ಕೆಲಸವನ್ನು ಬೇರೆ ರೀತಿಯಲ್ಲಿ ಮಾಡಬಹುದಿತ್ತೇ ಎಂದು ಬಹುಶಃ ಈ ಮಾಜಿ ಮಂತ್ರಿಗಳು ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ.
***
ಇವರಲ್ಲಿ ನಮ್ಮ ಮಾಜಿ ಮುಖ್ಯಮಂತ್ರಿಗಳನ್ನು ನಾವಂತೂ ಮರೆಯುವಂತಿಲ್ಲವಾದರೂ, ಎಲ್ಲರ ಗಮನ ಸೆಳೆದಿರುವುದು ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಕಾಲದ ಆರೋಗ್ಯಮಂತ್ರಿಗಳು ‘ಸಂಪುಟ ಪುನರ‍್ರಚನೆಯ ಮೊದಲು ‘ರಾಜೀನಾಮೆ’ ಕೊಟ್ಟದ್ದು. ಇದು ಎಪ್ರಿಲ್21 ರಿಂದ ಜೂನ್ 21 ರ ಎರಡು ತಿಂಗಳಲ್ಲೆ ಕೋವಿಡ್ ಸಾವುಗಳ ಸಂಖ್ಯೆ 1.8 ಲಕ್ಷದಿಂದ 3.9;ಲಕ್ಷಕ್ಕೆ ನೆಗೆದಿರುವುದರ ಪರಿಣಾಮವೇ? ಜೂನ್ 21ರಿಂದ ದೇಶದಲ್ಲೆಲ್ಲ ʻʻಥ್ಯಾಂಕ್ಯೂ ಮೋದೀಜೀʼʼ ಬ್ಯಾನರುಗಳು ರಾರಾಜಿಸುತ್ತಿರುವ ಹಿನ್ನೆಲೆಯಲ್ಲಿ, ಈ ‘ಪುನರ‍್ರಚನೆ’ಯ ಸಂದರ್ಭದಲ್ಲಿ ಇದು ಅಸಂಗತ ಪ್ರಶ್ನೆಯೇನಲ್ಲ.
“ಸಾರ್, ಸಿಕ್ಕಿತು!”
ವೈರಸ್ ದೃಷ್ಟಾರರೂ, ಕೋವಿಡ್ ಸಂಹಾರಕರೂ,
ಲಸಿಕೆ ಶೂರರೂ ಮತ್ತು ಕೋವಿಡ್ ತಲೆದಂಡವೂ
(ಸತೀಶ ಆಚಾರ್ಯ, ಫೇಸ್‍ಬುಕ್)
***
ಮಾಜಿ ಆರೋಗ್ಯ ಮಂತ್ರಿಗಳದ್ದು ಸರಿ, ಇತರ ಮಂತ್ರಿಗಳದ್ದೂ ಇದೇ ರೀತಿ ತಲೆದಂಡಗಳೇನು?
ಹಾಗಿದ್ದರೆ ಹಣಕಾಸು ಮಂತ್ರಿಗಳು? ನಿರುದ್ಯೋಗ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಗಗನಕ್ಕೇರುತ್ತಿದ್ದರೆ, ಜಿಡಿಪಿ ಪಾತಾಳಕ್ಕೆ ಇಳಿದಿದೆ.
ಹಣಕಾಸು ಮಂತ್ರಿಗಳು ಉಳಿದುಕೊಂಡಿರುವುದು ಮಾತ್ರವಲ್ಲ, ಅವರದ್ದೇ ಇಲಾಖೆಯಲ್ಲಿದ್ದ ಗೋಲಿ ಮಾರೋ ಖ್ಯಾತಿಯ ಸಹಯೋಗಿಗೆ ಈಗ ಬಡ್ತಿ ಸಿಕ್ಕಿರುವುದು ಕೂಡ ಸಂಬಂಧಿತ ಪ್ರಶ್ನೆಯೇ.
(ಪಿ.ಮಹಮ್ಮದ್, ವಾರ್ತಾಭಾರತಿ)
***
ಹೌದು, ಕೋವಿಡ್ ನಿರ್ವಹಣೆ, ಹೊಸ ಶಿಕ್ಷಣ ನೀತಿ, ಕಾರ್ಮಿಕ ಸಂಹಿತೆಗಳು, ಕೃಷಿ ಕಾನೂನುಗಳು-ತೀವ್ರ ಟೀಕೆಗೊಳಗಾಗಿರುವ ಎಲ್ಲವುಗಳೂ ಇದೇ ರೀತಿಯವುಗಳು ತಾನೇ ಎಂದು ಹಲವರು ಪ್ರಶ್ನೆಯೆತ್ತಿದ್ದಾರೆ.
“ಆ ಹಿಂದೆ ಕೂತಿರುವ ಐವರನ್ನು ಕೈಬಿಡಬೇಕು!”
“ಈ ಐವರನ್ನು ತೆಗೆದುಕೊಳ್ಳೋಣ!”
(ಅಲೋಕ್‍ನಿರಂತರ್, ಸಕಾಳ್ ಮಾಧ್ಯಮ)
ಎಲ್ಲವೂ ಪ್ರಧಾನ ಮಂತ್ರಿ ಕಚೇರಿ(ಪಿಎಂಒ)ದಿಂದ ಹೊಮ್ಮುವವುಗಳು ತಾನೇ? ಹಾಗಿದ್ದರೆ ಆರೋಗ್ಯ ಮಂತ್ರಿ, ಶಿಕ್ಷಣ ಮಂತ್ರಿ, ಕಾರ್ಮಿಕ ಮಂತ್ರಿಗಳಿಗೆ ಕೊಕ್ ಯಾಕೆ ಎಂಬುದು ಆನುಷಂಗಿಕ ಪ್ರಶ್ನೆಗಳು.
***
ಮಂತ್ರಿ ಪದವಿಗಿಂತ ರಾಜ್ಯಪಾಲರ ಹುದ್ದೆಯೇ ವಾಸಿ ಎಂದು ಬಹುಶಃ ದಿಲ್ಲಿಯ ನಾರ್ಥ್ ಬ್ಲಾಕ್, ಸೌತ್ ಬ್ಲಾಕ್ ನಿಂದ ಹೊರಬಿದ್ದು ಬೆಂಗಳೂರು ಸೇರಿದಂತೆ ರಾಜ್ಯ ರಾಜಧಾನಿಗಳಲ್ಲಿ ‘ರಾಜಭವನ’/’ರಾಜನಿವಾಸ’ ಪ್ರವೇಶಿಸುತ್ತಿರುವವರಿಗೆ ಅನಿಸಬಹುದೇನೋ!
“ನೀವು ರಾಜಕೀಯದಲ್ಲಿ ಸಕ್ರಿಯವಾಗಿ ಮುಂದುವರೆಯಬೇಕೆಂದರೆ,
ಮಂತ್ರಿ ಹುದ್ದೆಗಿಂತ ರಾಜ್ಯಪಾಲರ ಹುದ್ದೆಯನ್ನೇ ತಗೊಳ್ಳಿ”
(ಸುಭಾನಿ, ಡೆಕ್ಕನ್ ಕ್ರಾನಿಕಲ್)
ಆದರೆ ಈ ಅವಕಾಶವಾದರೂ ಇದೆಯೇ, ಮತ್ತು ಆಗ ಪಿಎಂಒ ನೆರಳಿನಿಂದ ಹೊರಬರಬಹುದೇ ಎಂಬ ಪ್ರಶ್ನೆಗಳೂ ಇಲ್ಲವೆಂದಲ್ಲ. ಪುದುಚೇರಿಯ ‘ರಾಜನಿವಾಸ’ದಿಂದ ಹೊರ ಹೋದವರನ್ನು ನೆನಪಿಸಿಕೊಳ್ಳಬಹುದೇನೋ! ಈ ಪುನರ‍್ರಚನೆಯ ಸ್ವಲ್ಪವೇ ಮೊದಲು ನಾಲ್ಕು ರಾಜ್ಯಪಾಲರ ರಾಜ್ಯ ಬದಲಾವಣೆಗಳೂ ನಡೆದಿವೆ.
***
ಈ ಸಂಪುಟದಲ್ಲಿ ಐವರು ಡಾಕ್ಟರುಗಳನ್ನು ಸೇರಿಸಿಕೊಳ್ಳಲಾಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಧಾನಿಗಳಿಗೆ ಧನ್ಯವಾದ ಸಲ್ಲಿಸುವ ಜಾಹೀರಾತುಗಳನ್ನು ಪ್ರಕಟಿಸಿದೆ. ಆದರೆ ಆರೋಗ್ಯ ಇಲಾಖೆಯನ್ನು ವಹಿಸಿಕೊಂಡಿರುವ ಹೊಸ ಮಂತ್ರಿಗಳು ಡಾಕ್ಟರಲ್ಲ, ಅಥವ ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲೂ ಕೆಲಸ ಮಾಡಿದವರಲ್ಲ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೆ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯನ್ನೂ ವಹಿಸಲಾಗಿದೆ!
ಹಾಗಿದ್ದರೆ ಈ ಬಹುಪ್ರಚಾರಿತ ಸಂಪುಟ ಪುನರ‍್ರಚನೆಯ ಉದ್ದೇಶವಾದರೂ ಏನು?
ಕೊರೊನಾ, ಲಸಿಕೆ, ಬೆಲೆಯೇರಿಕೆ, ಹಣದುಬ್ಬರ, ಪೆಟ್ರೋಲ್-ಎಲ್‍ಪಿಜಿ ಯಿಂದ ಗಮನ ಬೇರೆಡೆಗೆ ತಿರುಗಿಸಲು ಪಿಎಂಒದ ‘ಡ್ರೆಸ್ಸಿಂಗ್ ರೂಂ”ನಿಂದ ಹೊರಬಂದ ಐಡಿಯಾ?
(ಕಪ್ತಾನ್, ಫೇಸ್‍ಬುಕ್)
***
ಇವನ್ನೆಲ್ಲ , ಮಂತ್ರಿಗಳ ರಾಜೀನಾಮೆಗಳೊಂದಿಗೆ ಸೇರಿಸಿ ರಿಸೈಕ್ಲಿಂಗ್ ಮಾಡುವ ಪ್ರಯತ್ನ?
“ಮೋದಿ ರಿಸೈಕ್ಲಿಂಗ್ ಸ್ಥಾವರ”
“ಮೋದಿಯಿದ್ದರೆ ಸಾಧ್ಯವಿದೆ”
(ಇರ್ಫಾನ್, ನ್ಯೂಸ್‍ಕ್ಲಿಕ್)
ವಾಸ್ತವವಾಗಿ ಇದು ಒಬ್ಬ ʻʻಮಜ್ಬೂತ್’ (ಶಕ್ತಿಶಾಲಿ) ಪ್ರಧಾನ ಮಂತ್ರಿಯ ಸಂಪುಟಕ್ಕಿಂತ ಹೆಚ್ಚಾಗಿ ‘ಮಜ್ಬೂರ್’ (ಅಸಹಾಯ) ಪ್ರಧಾನಿಯ ಸಂಪುಟವಾಗಿ ಕಾಣುತ್ತದೆ ಎಂದಿದ್ದಾರೆ ಪ್ರಧಾನಿಗಳದ್ದೇ ಪದ-ಕಸರತ್ತನ್ನು ಬಳಸಿ ಪ್ರಖ್ಯಾತ ಪತ್ರಕರ್ತ ರವೀಶ್ ಕುಮಾರ್.
ಕೊರೊನಾ ಎರಡನೇ ಅಲೆಯಲ್ಲಿ ಬಹಿರಂಗಗೊಂಡ ವಿಫಲತೆ, ಬ್ರೆಝಿಲ್‍ನಲ್ಲಿ ‘ನಮ್ಮ’ ಕೊವ್ಯಾಕ್ಸಿನ್ ಹಗರಣ, ಟ್ವಿಟರ್ ನೊಡನೆ ವಾದವಿವಾದ, ಮುಂದುವರೆಯುತ್ತಿರುವ ದಿಲ್ಲಿಯ ರೈತರ ಲಗ್ಗೆ ಇತ್ಯಾದಿಗಳಿಂದ ಜಾಗತಿಕ ಇಮೇಜಿಗೆ ಧಕ್ಕೆಯಾಗಿದೆ, ಒಬ್ಬ ನಿರಂಕುಶವಾದೀ ನೇತಾರ ಎಂಬ ಇಮೇಜ್ ಬೆಳೆದಿದೆ ಮತ್ತು ಈಗ ಸ್ಟಾನ್ ಸ್ವಾಮಿ ಸಾವೂ ಸೇರಿಕೊಂಡಿದೆ. ಇವನ್ನೆಲ್ಲ ಸರಿಪಡಿಸುವ ಪ್ರಯತ್ನ ಇದು ಎನ್ನುತ್ತಾರೆ.
***
ಅಲ್ಲದೆ, ಇದು ಸಂಪುಟ ಪುನರ್ರಚನೆಗಿಂತ ಹೆಚ್ಚಾಗಿ ‘ರಾಜ್ಯಮಂತ್ರಿ ವಿಸ್ತರಣಾ ಪರಿಯೋಜನೆ” ಎಂದೂ ಅವರು ವರ್ಣಿಸಿದ್ದಾರೆ. 36 ಹೊಸ ಮಂತ್ರಿಗಳಲ್ಲಿ ‘ಸಂಪುಟ ದರ್ಜೆಯ ಮಂತ್ರಿಗಳಿಗಿಂತ ರಾಜ್ಯ ದರ್ಜೆಯ ಮಂತ್ರಿಗಳ ಸಂಖ್ಯೆಯೇ ಅಪಾರ. ‘ರಾಜೀನಾಮೆ’ ನೀಡಿದವರಲ್ಲಿಯೂ ಈ ದರ್ಜೆಯ ಮಂತ್ರಿಗಳದ್ದೇ ಹೆಚ್ಚು ಸಂಖ್ಯೆ ಎನ್ನಲಾಗಿದೆ. ‘ರಾಜ್ಯಮಂತ್ರಿ’ಯೆಂದರೆ ದಿಲ್ಲಿಯಲ್ಲಿ ಕೇಂದ್ರ ಸರಕಾರದ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಈ ಮಂತ್ರಿಗಳು ತಮ್ಮ ರಾಜ್ಯಗಳಲ್ಲಿಯೇ ಕೆಲಸ ಮಾಡಬೇಕು ಎಂದರ್ಥ? ಈ ಮೊದಲು ‘ರಾಜ್ಯಮಂತ್ರಿ’ಯಾಗಿದ್ದ ಪಶ್ಚಿಮ ಬಂಗಾಲದ ಒಬ್ಬರು ತಮ್ಮನ್ನು ರಾಜೀನಾಮೆ ಕೊಡುವಂತೆ ಕೇಳಲಾಯ್ತು ಎಂದು ಆರಂಭದಲ್ಲಿ ಹೇಳಿದರು, ನಂತರ “ಈ ಮೊದಲಿನಂತೆಯೇ” ತನ್ನ ಕ್ಷೇತ್ರದಲ್ಲಿಯೇ ಕೆಲಸ ಮುಂದುವರೆಸುವುದಾಗಿ ಅವರು ಹೇಳಿದರಂತೆ. ಇದು ಅಧಿಕಾರ ಸದ್ಯಕ್ಕೆ ಸಿಗದೇ ಹೋದ ರಾಜ್ಯದ ಕತೆಯಾದರೆ, ಸದ್ಯಕ್ಕೇ ಚುನಾವಣೆಗಳು ನಡೆಯಬೇಕಾದ ಉತ್ತರಪ್ರದೇಶ, ಗುಜರಾತ ಮತ್ತು ತ್ರಿಪುರಾಕ್ಕೆ ಹೆಚ್ಚಿನ ‘ಪ್ರಾತಿನಿಧ್ಯ’ ಈ ಕತೆಯ ಇನ್ನೊಂದು ಮಗ್ಗಲು.
“ನಾನು ನನ್ನ ಕರ್ತವ್ಯಗಳೇನಾದರೂ ಇದ್ದರೆ, ಅವನ್ನು……”
(ಸುಭಾನಿ, ಡೆಕ್ಕನ್ ಕ್ರಾನಿಕಲ್)
***
ಪ್ರಧಾನಿಗಳೇನೋ ಹೇಳಿದ್ದಾರೆ, ತಮ್ಮ ಸಂಪುಟದ ಮಂತ್ರಿಗಳೆಲ್ಲ ತಮ್ಮೆಲ್ಲ ಶಕ್ತಿ-ಸಾಮರ್ಥ್ಯಗಳನ್ನು ತಂತಮ್ಮ ಇಲಾಖೆಗಳ ಕೆಲಸಕ್ಕೆ ಕ್ರೋಡೀಕರಿಸಬೇಕು ಎಂದು. ಆದರೆ ಈಗಿನ ‘ಆತ್ಮನಿರ್ಭರ ಸನ್ನಿವೇಶದಲ್ಲಿ ಅದರ ಅಗತ್ಯವಿಲ್ಲವೇನೋ!
“ನಮ್ಮ ಪಾಡಿಗೆ ನಾವಿರುವಾಗ ಅದೆಲ್ಲಾ ಬೇಕಾಗಿಲ್ಲ”
(ಸಜತ್ ಕುಮಾರ್, ಡೆಕ್ಕನ್ ಕ್ರಾನಿಕಲ್)
***
ಆದರೆ ‘ಸಹಕಾರ’ ಮಂತ್ರಾಲಯವನ್ನು ಸೃಷ್ಸಿಸಿದಂತೆ , ಇನ್ನೂ ಕೆಲವು ಇಲಾಖೆಗಳನ್ನು ಸೃಷ್ಟಿಸಬಹುದಿತ್ತೇನೋ ಎಂದು ಜನಗಳೂ ನಿರೀಕ್ಷಿಸುತ್ತಿರಬಹುದೇ? ಲಸಿಕೆ ಅಭಿಯಾನ ಮತ್ತೆ ನಿಧಾನಗೊಳ್ಳುತ್ತಿರುವ ಸುದ್ದಿ ಬರುತ್ತಿರುವಾಗ ಇದು ಹೆಚ್ಚು ಅಗತ್ಯ ಎಂದನಿಸುತ್ತಿದೆಯೇ?
“ಈಗ ಪ್ರತ್ಯೇಕವಾಗಿ ಲಾಕ್‍ಡೌನ್ ಮಂತ್ರಿ, ಆಕ್ಷಿಜನ್ ಮಂತ್ರಿ,
ವ್ಯಾಕ್ಸೀನ್ ಮಂತ್ರಿ ಕೂಡ ಬೇಕಾಗಿದ್ದಾರೆ.”
(ಕೀರ್ತಿಶ್, ಬಿಬಿಸಿ ನ್ಯೂಸ್ ಹಿಂದಿ)
ಇದೀಗ 2021ರ ಸಂಪುಟ ಪುನರ್ರಚನೆ/ವಿಸ್ತರಣೆ ಅಥವ ‘ರಾಜ್ಯಮಂತ್ರಿ ವಿಸ್ತರಣಾ ಪರಿಯೋಜನೆ’ಯನ್ನು ದೇಶದ ವ್ಯಂಗ್ಯಚಿತ್ರಕಾರರು ನೋಡಿರುವ ಪರಿ!
ಮೊದಲು ನಂತರ
(ಸತೀಶ ಆಚಾರ್ಯ, ಫೇಸ್‍ಬುಕ್)
ಈ ಹೊಸ ಮಂತ್ರಿ ಮಂಡಲದಲ್ಲಿ ಹಿಂದುಳಿದ ವಿಭಾಗಗಳು, ಪರಿಶಿಷ್ಟ ವಿಭಾಗಗಳು, ಮಹಿಳೆಯರ ಪ್ರಮಾಣ ಹೆಚ್ಚಿರುವಂತೆ, ಕ್ರಿಮಿನಲ್ ಕೇಸುಗಳಿರುವವರ ಪ್ರಮಾಣವೂ 3ಶೇ.ದಷ್ಟು ಏರಿದೆಯಂತೆ. 78ರಲ್ಲಿ 33 ಮಂತ್ರಿಗಳ ಮೇಲೆ (42%) ಕ್ರಿಮಿನಲ್ ಕೇಸುಗಳಿವೆ, ಅವರಲ್ಲಿ 24 ಮಂತ್ರಿಗಳ ಮೇಲೆ ಕೊಲೆ, ಕೊಲೆ ಪ್ರಯತ್ನ, ದರೋಡೆಯಂತಹ ಗಂಭೀರ ಕೇಸುಗಳೂ ಇವೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಲೆಕ್ಕ ಹಾಕಿದೆ.
ಕೋಟ್ಯಾಧಿಪತಿಗಳ ಪ್ರಮಾಣ 90%, ನಾಲ್ವರು 50 ಕೋಟಿ ದಾಟಿದವರು; ಸರಾಸರಿ ಸಂಪತ್ತು 16.24 ಕೋಟಿ ರೂ.
ಇವೆಲ್ಲ ಈ ಮಂತ್ರಿಗಳು ಸಲ್ಲಿಸಿರುವ ಅಫಿಡವಿಟ್ ಗಳಿಂದ ಕಲೆ ಹಾಕಿದವುಗಳು. ಈಗಾಗಲೇ ಪಶ್ಚಿಮ ಬಂಗಾಲದಿಂದ ಆರಿಸಿ ಬಂದಿರುವ ಒಬ್ಬ ಮಂತ್ರಿಯ ಶೈಕ್ಷಣಿಕ ಅರ್ಹತೆಯ ಬಗ್ಗೆ ವಿವಾದ ಎದ್ದಿದೆ.
***