ನೂತನ ಸಿಎಂಗೆ ಶುಭಾಶಯದೊಂದಿಗೆ ಕೆಲವು ಸಲಹೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಭಾಶಯ ಸಲ್ಲಿಸಿದ್ದಾರೆ. ಇದರೊಂದಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ʻಜವಾಬ್ದಾರಿಯುತ ವಿರೋಧಪಕ್ಷವಾಗಿ ನಿಮಗೆ ರಚನಾತ್ಮಕ ಸಹಕಾರದ ಭರವಸೆಯನ್ನು ನೀಡಬಯಸುತ್ತೇನೆ. ಇದೇ ರೀತಿಯ ಸಹಕಾರ ನಿಮ್ಮ ಪಕ್ಷದಿಂದಲೂ ಸಿಗಲಿ ಎಂದು ಹಾರೈಸುತ್ತೇನೆʼ ಎಂದಿದ್ದಾರೆ.

ಮುಂದುವರೆದು, ಬಿಜೆಪಿಯು ಕಳೆದ 2 ವರ್ಷಗಳಿಂದ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಬಿ.ಎಸ್.ಯಡಿಯೂರಪ್ಪ ಅವರು, ತಮ್ಮ ಅಧಿಕಾರದಾಸೆಯಿಂದ ಅಥವಾ ಅರಿವಿನ ಕೊರತೆಯಿಂದಲೋ, ಭಯದಿಂದಲೋ ಯಾವಾಗಲೂ ಇದರ ವಿರುದ್ಧ ಮಾತಾಡಿಲ್ಲ. ಬೊಮ್ಮಾಯಿ ಅವರು ಕರ್ನಾಟಕಕ್ಕಾಗಿ ಹೋರಾಡುವ ಧೈರ್ಯ ತೋರಿಸುತ್ತೀರಿ ಎಂದು ನಂಬಿದ್ದೇನೆ” ಎಂದಿದ್ದಾರೆ.

ಇದನ್ನು ಓದಿ: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ

‘ಬರ ಪರಿಹಾರ, ರಾಜ್ಯದ ಜಿಎಸ್‌ಟಿ ಪಾಲು, ತೆರಿಗೆ ಹಂಚಿಕೆ, ಕೋವಿಡ್‌ ನಿಯಂತ್ರಣದ ಕ್ರಮಗಳು ಹೀಗೆ ಹಲವು ಸಂದರ್ಭಗಳಲ್ಲಿ ಕೇಂದ್ರವು ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನೂತನ ಮುಖ್ಯಮಂತ್ರಿಯಾದ ನೀವು ಈ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ರಾಜ್ಯಕ್ಕೆ ನ್ಯಾಯ ಆಗದಂತೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದ್ದಾರೆ.

‘ರಾಜ್ಯಕ್ಕೆ ಅನ್ಯಾಯವಾದ ಸಂದರ್ಭಗಳಲ್ಲಿ ಸರ್ವಪಕ್ಷಗಳ ಸಭೆ ಮತ್ತು ನಿಯೋಗದ ಮೂಲಕ ನ್ಯಾಯ ಪಡೆಯುವ ಪ್ರಯತ್ನದ ಪರಂಪರೆಯೊಂದು ನಮ್ಮಲ್ಲಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಬುನಾದಿಯಾದ ಈ ರೀತಿಯ ಮುಕ್ತ ಚರ್ಚೆ-ಸಂವಾದಗಳೇ ನಿಂತು ಬಿಟ್ಟಿವೆ. ನೀವು ಇದಕ್ಕೆ ಮರುಚಾಲನೆ ನೀಡುವಿರೆಂಬ ನಿರೀಕ್ಷೆ ನನ್ನದು’ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಮಹತ್ವ ಯೋಜನೆಗಳನ್ನು ಪ್ರಕಟಿಸಿದ ನೂತನ ಸಿಎಂ: ವಿವಿಧ ವರ್ಗಗಳಿಗೆ ಆದ್ಯತೆ

‘ಮುಖ್ಯಮಂತ್ರಿ ಸ್ಥಾನ ಅಥವಾ ಪ್ರಧಾನಿ ಸ್ಥಾನ ಪಕ್ಷಕ್ಕೆ ಸೀಮಿತವಾದುದಲ್ಲ. ಅದು ಇಡೀ ದೇಶದ ಜನತೆಗೆ ಸಂಬಂಧಿಸಿದ್ದಾಗಿದೆ. ವಿರೋಧ ಪಕ್ಷವಾಗಿ ನಮ್ಮ ನಡುವಿನ ಸೈದ್ಧಾಂತಿಕ ಸಂಘರ್ಷ ಜಾರಿಯಲ್ಲಿದ್ದರೂ ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ನಾವೆಲ್ಲ ಒಂದು ತಂಡವಾಗಿ ಕೆಲಸ ಮಾಡಬೇಕೆಂದು ನಿಮಗಿಂತ ವಯಸ್ಸು ಮತ್ತು ಅನುಭವದಲ್ಲಿ ಹಿರಿಯನಾದ ನನ್ನ ಸಲಹೆ’ ಆಗಿದೆ ಎಂದಿದ್ದಾರೆ.

‘ಸಾರ್ವಜನಿಕ ವಿಷಯಕ್ಕೆ ಸಂಬಂಧಿಸಿ, ಹಿಂದಿನ ಮುಖ್ಯಮಂತ್ರಿಗೆ ಹಲವು ಪತ್ರಗಳನ್ನು ಬರೆದರೂ ಅದಕ್ಕೆ ಪ್ರತಿಕ್ರಿಯಿಸುವ ಕನಿಷ್ಠ ಸೌಜನ್ಯವನ್ನೂ ಅವರು ತೋರಿಸಿಲ್ಲ. ಪಾರದರ್ಶಕತೆ ಪ್ರಜಾಪ್ರಭುತ್ವದ ಆತ್ಮವಾಗಿದೆ. ನಿಮ್ಮ ಅವಧಿಯಲ್ಲಿಯಾದರೂ ಮಾಹಿತಿಯ ವಿನಿಮಯ ಸುಗಮವಾಗಿ ನಡೆಯುವಂತೆ ಮಾಡುವಿರೆಂದು ನಂಬಿದ್ದೇನೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಿಮಗೆ ರಚನಾತ್ಮಕ ಸಹಕಾರದ ಭರವಸೆ ನೀಡುತ್ತೇನೆ. ಇದೇ ರೀತಿಯ ಸಹಕಾರ ನಿಮ್ಮ ಪಕ್ಷದಿಂದಲೂ ನಿಮಗೆ ಸಿಗಲಿ ಎಂದು ಹಾರೈಸುತ್ತೇನೆ’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *