ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕರ್ನಾಟಕ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ಕಾಂಗ್ರೆಸ್ ಬಹುಮತ ಸಾಧಿಸಲು ನಾನು ಶ್ರಮಿಸಿದ್ದು, ನಾನೇ ಮುಖ್ಯಮಂತ್ರಿಯಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದರು. ಇತ್ತ ಸಿದ್ದರಾಮಯ್ಯನವರು ಸಹ ಸಿಎಂ ನಾನೇ ಆಗಬೇಕೆಂದು ಪಟ್ಟು ಹಿಡದು ಕುಳಿತಿದ್ದರು. ಅದರಂತೆ ಇಬ್ಬರೂ ನಾಯಕರು ಕಾಂಗ್ರೆಸ್ ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರಿದ್ದರು. ಕೊನೆ ಗಳಿಗೆಯಲ್ಲಿ ಡಿ.ಕೆ ಶಿವಕುಮಾರ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿದ್ಧರಾಮಯ್ಯ ಎಲ್ಲಾ ಸಮುದಾಯಗಳ ನಾಯಕ ಹಾಗಾಗಿ ಅವರೇ ಸಿಎಂ ಆಗಲಿ ಎರಡು ವರ್ಷ ಕಳೆದ ಬಳಿಕ ನೋಡೋಣ ಎಂದು ಸಿದ್ಧರಾಮಯ್ಯನವರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಸಭೆ ಸೇರಿದ ಕಾಂಗ್ರೆಸ್ ವರಿಷ್ಠರು ಅಂತಿಮವಾಗಿ ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿ ಎಂದು ಆಯ್ಕೆ ಮಾಡಿದ್ದಾರೆಂದು ತಿಳಿದುಬಂದಿದೆ. ಇದೀಗ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.