ಬಾಪೂ ನಡೆದ ಬಟ್ಟೆಯಲಿ
ನಾಥೂನ ಪ್ರೇತಗಳು
ದೆವ್ವಂಗುಣಿತ ನಡೆಸಿ
ನೀರು ಹರಿವ ಹಾದಿಯಲ್ಲಿ
ನೆತ್ತರು ಹರಿಸಿವೆ;
ಈಗ ಗಾಂಧಿ ನಡೆದ ಬಟ್ಟೆ
ರಕ್ತಸಿಕ್ತವಾಗಿ
ಹಾಡೇ ಹಗಲೇ
ಈ ನೆಲದ
ಒಂಟಿ ಹೆಣ್ಣು ಮಗಳ ನಾಲಿಗೆ
ಸೀಳಿ ಮಾತಿನ ಕೊಲೆ,
ನಿರ್ಭೀತಿಯ ಕನಸಿನ ದೇಶದಲ್ಲೀಗ
ಪುರುಶೋತ್ತಮನ ಆ ಬಟ್ಟೆಯಲಿ
ಮರ್ಯಾದಸ್ಥರು ನಿರ್ಭಯರು ಮಾನಿಶರು
ಹೆಜ್ಜೆಯಿಡಲು ಬೆಚ್ಚುತಿಹರು!
ಪ್ರೇತಗಳ ದುರುಳತನ ಮರುಳತನದ
ನೆತ್ತರ ದಾಹ ಹಿಂಗದಾಗಿದೆ,
ಗಾಂಧಿಯ ಬಿಳಿಬಟ್ಟೆ ಮಲಿನವಾಗಿದೆ;
ಚರಕಕ್ಕೆ ಗೆದ್ದಲು ಹತ್ತಿದೆ!
ಈಗ ಈ ಬಟ್ಟೆಯನು
ಶುದ್ಧಗೊಳಿಸಲು ಅದೆಶ್ಟು
ನದಿಗಳು ಕಡಲುಗಳನು ಬರಿದಾಗಿಸಬೇಕೋ?
ಅದೆಶ್ಟು ಮಡಿವಾಳ ಮಾಚಯ್ಯರು
ಹುಟ್ಟಿ ಬರಬೇಕೋ?
-ರಂಗನಾಥ ಕಂಟನಕುಂಟೆ