– ಗಿರಿಧರ ಕಾರ್ಕಳ
ಕಳೆದ ವಾರ ಬಿಡುಗಡೆಯಾದ ಪತ್ರಕರ್ತ, ನವೀನ್ ಸೂರಿಂಜೆಯವರ ‘ನೇತ್ರಾವತಿಯಲ್ಲಿ ನೆತ್ತರು’ ಪುಸ್ತಕವನ್ನು ಒಂದೇ ಗುಟುಕಿಗೆ ಓದಿ ಮುಗಿಸಿದೆ. ಓದಿ ಅದೆಷ್ಟು ತಲ್ಲಣಗೊಂಡೆ ಅಂದರೆ, ನನ್ನೂರು ನನ್ನ ಜನ ಎಂದು ಎಲ್ಲರೆದುರು ಹೆಮ್ಮೆಯಿಂದ ಬೀಗುತ್ತಿದ್ದ ನನ್ನ ಮನಸ್ಸು ತೀವ್ರ ಆಕ್ರೋಶ ಆಘಾತಕ್ಕೊಳಗಾಗಿತ್ತು.
ಸೂರಿಂಜೆ ಬರೆದ 180 ಪುಟಗಳ ಪುಸ್ತಕದ ಪ್ರತೀ ಪುಟವೂ,ನುಚ್ಚುನೂರಾದ ಕರಾವಳಿಯ ಸಾಮರಸ್ಯದ ಬದುಕು, ಸೌಹಾರ್ದತೆ, ಧರ್ಮದ ಅಮಲೇರಿಸಿಕೊಂಡ ಹಿಂದುತ್ವದ ಅಮಾನುಷ ಅಮಾನವೀಯ ಮುಖಗಳಿಗೆ ಕನ್ನಡಿ ಹಿಡಿಯುತ್ತದೆ. ನಿಜ,ಕರಾವಳಿ ಯಾವತ್ತೋ ಹಿಂದುತ್ವದ, ಕೋಮುವಾದದ ಪ್ರಯೋಗಶಾಲೆಯಾಗಿ ಬದಲಾಗಿದೆಯೆಂದು ಗೊತ್ತಿತ್ತು. ನನಗೂ ಬಾಲ್ಯದಲ್ಲಿ ಆರೆಸ್ಸೆಸ್ಸಿನ ನಂಟು ಇದ್ದದ್ದರಿಂದ ಅವರ ಹುಸಿ ದೇಶಭಕ್ತಿಯ, ಹಿಂದುತ್ವದ ಹಿಕ್ಮತ್ತುಗಳು ಆಗಿನಿಂದಲೂ ಪರಿಚಿತವೇ. ಅವೆಲ್ಲ 80ರ ದಶಕದ ಹಿಂದಿನ ಕತೆಗಳಾಗಿದ್ದರಿಂದ- ಆಗಿನ್ನೂ ಸಂಘ ಪರಿವಾರದ ಕೋಮುದ್ವೇಷ ತಾತ್ವಿಕ ರೂಪದಲ್ಲಷ್ಟೇ ಇತ್ತು.ಯಾವಾಗ ಬಾಬ್ರಿ ಮಸೀದಿಯ ಗೋಡೆಗಳು ಉರುಳಿದವೋ ಆ ಕ್ಷಣದಿಂದ ಈ ದೇಶದ ಹಿಂದೂ -ಮುಸ್ಲಿಮರ ನಡುವೆ ಅಸಹನೆಯ ಗೋಡೆಗಳೆದ್ದವು.ಅದರ ಭಾಗವಾಗಿಯೇ ಕರ್ನಾಟಕದಲ್ಲಿ ಕೋಮು ವಿಷ ಬೀಜ ಬಿತ್ತನೆಗೆ ತಕ್ಕ ನೆಲ ಹದಗೊಂಡು ಸಿದ್ಧವಾದ್ದು ಕರಾವಳಿಯಲ್ಲಿಯೇ.!!
ಹೀಗಾಗಿ,ಕರಾವಳಿಯು ಹಿಂದುತ್ವವಾದಿಗಳ ಆಡುಂಬೋಲವಾದ್ದು ನನಗೆ ಅಷ್ಟೇನು ಆಶ್ಚರ್ಯ ಅನಿಸಿರಲಿಲ್ಲ. ಸೂರಿಂಜೆಯವರ ಪುಸ್ತಕ ಓದಿದ ನಂತರ ಆಶ್ಚರ್ಯದ ಜೊತೆಗೆ ಆಘಾತ ಆಗಿದ್ದು,ಕರಾವಳಿಯ ಪೋಲಿಸ್ ಪಡೆ,ಪ್ರಭುತ್ವ,ಉನ್ನತಾಧಿಕಾರಿ ವಲಯ ಮತ್ತು ಗಣ್ಯಾತಿಗಣ್ಯರು ಕೂಡ ಹಿಂದುತ್ವದ ಕಟುಕ ಪಡೆಗೆ ಶರಣಾದ್ದು. ಅದರಲ್ಲೂ SEZ ನಂತಹ ಕಾರ್ಪೋರೇಟ್ ಸಂಸ್ಥೆಗಳು ರೈತರನ್ನು ಬಗ್ಗುಬಡಿದು ಭೂಮಿ ಸ್ವಾಧೀನಕ್ಕೆ ಹಿಂದೂ ಸಂಘಟನೆಗಳ ಗೂಂಡಾಗಳನ್ನು ಬಳಸುವಂತಹ ಅನೈತಿಕ ಮಾರ್ಗ ಹಿಡಿದಿರುವುದನ್ನು ಓದಿದಾಗ,ಕೋಮುವಾದದ ವಿಷದ ಬೇರುಗಳು ಕರಾವಳಿಯಲ್ಲಿ ಎಷ್ಟು ಆಳಕ್ಕೆ ಹಬ್ಬಿರಬಹುದೆಂದು ಊಹಿಸಬಹುದು. ಇನ್ನು, ಕರಾವಳಿಯ ಪೋಲಿಸ್ ವ್ಯವಸ್ಥೆಯ ಕೋಮುದ್ವೇಷದ ಕರಾಳ ಮುಖಗಳ ವಿವರಗಳು,ಲಜ್ಜೆಗೆಟ್ಟ ಧರ್ಮ, ರಾಜಕಾರಣ ಮತ್ತು ಪೋಲಿಸ್ ವ್ಯವಸ್ಥೆಯ ಅಪವಿತ್ರ ಮೈತ್ರಿ, ಅನೈತಿಕ ಸಂಬಂಧಗಳಿಗೆ ಸಾಕ್ಷಿ ಹೇಳುತ್ತವೆ.
ಕೇವಲ ಮುಸ್ಲಿಂ ಅನ್ನುವ ಒಂದೇ ಕಾರಣಕ್ಕೆ ಮುಗ್ಧ ನಿರಪರಾಧಿ ಮಕ್ಕಳು,ಯುವಕರು ಮುದುಕರ ಮೇಲಿನ ದೈಹಿಕ ಹಿಂಸೆ ಅಮಾನುಷ ಹಲ್ಲೆ, ಹತ್ಯೆಗೈದ ಪೋಲಿಸರ ಕ್ರೌರ್ಯ,ಪೋಲಿಸರ ಕಣ್ಣಳತೆಯಲ್ಲೇ ಖೈದಿಗಳ ಹತ್ಯೆಯ ವಿವರ ಓದುವಾಗ ಎದೆ ಝಲ್ಲೆನ್ನುತ್ತದೆ. ಹಿಂದು-ಮುಸ್ಲಿಂ ಖೈದಿಗಳಿಗಾಗಿ ಪ್ರತ್ಯೇಕ ಜೈಲು ವ್ಯವಸ್ಥೆ ಅಚ್ಚರಿ ಮೂಡಿಸಿದರೆ, ಹಿಂದೂ ಸಂಘಟನೆಗಳ ಜೊತೆಸೇರಿ ಪಬ್,ಹೋಂ ಸ್ಟೇಗಳ ಮೇಲಿನ ಪೂರ್ವ ನಿಯೋಜಿತ ದಾಳಿಯ ವಿವರಗಳನ್ನು ಓದುವಾಗ ಕರಾವಳಿಯಲ್ಲಿ ಪೋಲೀಸ್ ವ್ಯವಸ್ಥೆಯೇ ಪೂರ್ತಿ ಕೇಸರಿಕರಣಗೊಂಡಿದೆಯೇ ಎಂದು ದಿಗಿಲಾಗುತ್ತದೆ. ಸೂರಿಂಜೆಯಂತಹ ಕೆಲವು ದಿಟ್ಟ ಪತ್ರಕರ್ತರಿಂದಾಗಿ ಈ ಘಟನೆಗಳೆಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ಧಿಯಾದ್ದರಿಂದ ಸ್ವಲ್ಪಮಟ್ಟಿಗಾದರೂ ಪೋಲಿಸ್ ಕ್ರೌರ್ಯಕ್ಕೆ ಕಡಿವಾಣ ಬೀಳುವಂತಾಯಿತೆನ್ನುವುದು ಸಮಾಧಾನದ ಸಂಗತಿ.
ಈ ಪುಸ್ತಕದುದ್ದಕ್ಕೂ ಸೂರಿಂಜೆಯವರ ಸಂವೇದನಾಶೀಲ ನ್ಯಾಯಪರ ಮಾನವೀಯ ವ್ಯಕ್ತಿತ್ವ,ಪತ್ರಿಕಾ ಧರ್ಮದ ಬದ್ಧತೆಯನ್ನು ಕಾಣಬಹುದಾದರೂ,ಅದು ಹರಳುಗಟ್ಟಿ ಕಾಣಿಸುವುದು ಮಾರ್ನಿಂಗ್ ಮಿಸ್ಟ್ ದಾಳಿ ಪ್ರಕರಣದಲ್ಲಿ.ದಾಳಿಯ ಮಿಂಚಿನ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡಾಗ,ಹಿನ್ನಡೆ ಅನುಭವಿಸಿದ ಪೋಲಿಸರು 42 ಮಂದಿ ದಾಳಿಕೋರರ ಜೊತೆಗೆ ದುರುದ್ದೇಶದಿಂದ 43ನೇ ಆರೋಪಿಯಾಗಿ ಸೂರಿಂಜೆಯನ್ನೂ ಬಂಧಿಸುತ್ತಾರೆ. ಕೂಡಲೇ ಜಾಮೀನು ಪಡೆಯಬಹುದಾದ ಅವಕಾಶಗಳಿದ್ದರೂ, ತಾನು ಜಾಮೀನು ಪಡೆದರೆ ಆ 42 ಮಂದಿಗೂ ಜಾಮೀನು ದೊರೆಯುತ್ತದೆ, ಅದಾಗಬಾರದು ಅನ್ನುವ ಒಂದೇ ಕಾರಣಕ್ಕೆ ಗೌರಿ ಲಂಕೇಶ್ ಅಂತವರ ಸಲಹೆಯನ್ನೂ ಧಿಕ್ಕರಿಸಿ ನವೀನ್ ಜಾಮೀನು ಪಡೆಯದೆ ನಾಲ್ಕೂವರೆ ತಿಂಗಳ ಕಾಲ ಜೈಲುವಾಸ ಅನುಭವಿಸುತ್ತಾರೆ.ಜೈಲಿನಲ್ಲಿದ್ದಾಗಲೂ ನಿರಪರಾಧಿಗಳಾದ ರೆಹಮಾನ್ ರಂತಹ ವೃದ್ದ, ಇಬ್ರಾಹಿಮ್ ನಂತಹ ಬಾಲಕನನ್ನು ಬಿಡುಗಡೆ ಮಾಡಿಸುತ್ತಾರೆ.ಜೈಲಿನ ಮಹಿಳಾ ಖೈದಿಗಳ ದಾರುಣ ಪರಿಸ್ಥಿತಿ ಬದಲಾಯಿಸಲು ಪ್ರಯತ್ನಿಸುತ್ತಾರೆ. ಸೂರಿಂಜೆ, ವಿದ್ಯಾ ದಿನಕರ್, ಅಬ್ದುಲ್ ಮುನೀರ್ ರಂತಹ ಬದ್ಧತೆಯುಳ್ಳ ಸಮಾಜಮುಖಿಗಳ ಸಂತತಿ ಇನ್ನಷ್ಟು ಹೆಚ್ಚಾಗಲಿ.
ಪುಸ್ತಕದುದ್ದಕ್ಕೂ ಕರಾವಳಿಯ ಕೋಮುದ್ವೇಷ,ಗಲಭೆ, ನೈತಿಕ ಪೋಲೀಸರ ಅಮಾನುಷ ಕ್ರೌರ್ಯ,ಹಿಂದುತ್ವದ ಅಮಲಿನ ಪೋಲಿಸ್ ದೌರ್ಜನ್ಯದ ಹಲವು ಮುಖಗಳನ್ನು ಸೂರಿಂಜೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.ಕರಾವಳಿಯ ಪ್ರತಿಯೊಬ್ಬರೂ ಈ ಪುಸ್ತಕವನ್ನು ಅಗತ್ಯವಾಗಿ ಓದಲೇ ಬೇಕು. ಶತಮಾನಗಳಿಂದ ಕರಾವಳಿಯಲ್ಲಿ ನೆಲೆಸಿದ್ದ ಸಾಮರಸ್ಯ, ಸೌಹಾರ್ದತೆಯ ವಿವೇಕದ ಪರಂಪರೆ, ಡಾ.ಅಂಬೇಡ್ಕರ್ ರೂಪಿಸಿಕೊಟ್ಟ ಸಂವಿಧಾನದ ಪುಟಗಳು, 90ರ ದಶಕದಿಂದೀಚೆಗೆ ಕರಾವಳಿಯ ಜೀವನದಿ ನೇತ್ರಾವತಿಯಲ್ಲಿ ಹರಿಯುತ್ತಿರುವ ಕೋಮುದ್ವೇಷದ ನೆತ್ತರಿನಲ್ಲಿ ತೊಯ್ಯುತ್ತಲೇ ಇವೆ.
ಅದೂ ಸಾಲದೆಂಬಂತೆ, ಈಗ ಪಠ್ಯ ಪರಿಷ್ಕರಣೆ ದಾಂಧಲೆಯ ಮೂಲಕ ಎಳೆಯ ಮಕ್ಕಳ ಮನಸ್ಸಿನಲ್ಲೂ ಹುಸಿ ದೇಶಭಕ್ತಿಯ ಕೋಮು ವಿಷ ಬಿಜ ಬಿತ್ತಲು ಸರ್ಕಾರವೇ ಟೊಂಕಕಟ್ಟಿ ನಿಂತಿದೆ. ಪುಸ್ತಕಕ್ಕೆ ಮುನ್ನುಡಿ ಬರೆದಿರುವ ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಬಿ.ಕೆ.ಶಿವರಾಮ್, ಮೇಲ್ವರ್ಗದ ಶೂದ್ರರು,ಹಿಂದುಳಿದ ವರ್ಗ ಮತ್ತು ದಲಿತರು ಕೋಮುವಾದ ಮನುವಾದದ ಅಪಾಯಗಳನ್ನು ಅರಿಯಬೇಕು ಎನ್ನುವುದೇ ಈ ಪುಸ್ತಕದ ತಾತ್ಪರ್ಯ ಎನ್ನುತ್ತಾರೆ.ಕೋಮುವಾದದ ಸೂತ್ರಧಾರಿಗಳು ಎಂದೂ ಬೀದಿಗಿಳಿದು ಯುದ್ಧ ಮಾಡುವವರಲ್ಲ,ಕಾಲಾಳುಗಳನ್ನಷ್ಟೇ ಬಾವಿಗಿಳಿಸಿ ಆಳನೋಡುವವರು ಎಂಬುದಕ್ಕೆ ಸೂರಿಂಜೆಯವರೂ ಪುಸ್ತಕದುದ್ದಕ್ಕೂ ಸಾಕ್ಷಿ ನೀಡುತ್ತಾ ಹೋಗುತ್ತಾರೆ.
“ಪೋಲೀಸರು ತಮ್ಮ ವೈಯಕ್ತಿಕ ಬದುಕಿನ ಧರ್ಮಗ್ರಂಥವನ್ನು ಮನೆಯಲ್ಲಿಟ್ಟು ಬರಬೇಕು.ಪೋಲೀಸರಿಗೆ ಪೋಲಿಸ್ ಮ್ಯಾನುವಲ್ ಮಾತ್ರ ಧರ್ಮಗ್ರಂಥವಾಗಬೇಕು “ಅನ್ನುವ ಬಿ.ಕೆ.ಶಿವರಾಮ್ ಅವರ ಮಾತು, ಕೇವಲ ಪೋಲೀಸರಿಗಷ್ಟೇ ಅಲ್ಲ ಎಲ್ಲರಿಗೂ ಅನ್ವಯವಾಗಬೇಕು.ಸಂವಿಧಾನವೇ ಎಲ್ಲರ ಧರ್ಮಗ್ರಂಥವಾಗಬೇಕು. ಕರಾವಳಿಯಲ್ಲಿ ನಿಗಿನಿಗಿ ಸುಡುತ್ತಿರುವ ಕೋಮುದ್ವೇಷದ ಜ್ವಾಲೆಗೆ,ಸಂವಿಧಾನದ ಆಶಯಗಳ,ಪ್ರೀತಿ,ನಂಬಿಕೆ, ಸಾಮರಸ್ಯ ಜಾತ್ಯಾತೀತ ಸೌಹಾರ್ದದ ನೀರೆರೆಯದಿದ್ದರೆ – ಕರಾವಳಿಗೆ ಕರಾವಳಿಯೇ ಸುಟ್ಟು ಭಸ್ಮವಾದೀತು. ಹಾಗಾಗದಂತೆ ಕಟ್ಟೆಚ್ಚರ ವಹಿಸಬೇಕೆಂಬುದು ನವೀನ್ ಸೂರಿಂಜೆಯವರ ಪುಸ್ತಕದ ಸದಾಶಯ. ಆ ಆಶಯವನ್ನು ಸಾಕಾರಗೊಳಿಸುವತ್ತ ನಾವೆಲ್ಲರೂ ಒಂದಾಗಬೇಕಿದೆ.
ಈ ಪುಸ್ತಕವನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಬೆಲೆ ರೂ 185.