ನೇಪಾಳ ಸಂಸತ್ತು ವಿಸರ್ಜನೆ: ನವೆಂಬರ್‌ನಲ್ಲಿ ಚುನಾವಣೆ

ಕಾಠ್ಮಂಡು: ನೇಪಾಳ ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅಥವಾ ವಿರೋಧ ಪಕ್ಷದ ನಾಯಕ ಶುಕ್ರವಾರದೊಳಗೆ ಸರ್ಕಾರ ರಚನೆಗೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿರುವ ಬೆನ್ನಲ್ಲೇ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಇಂದು ನೇಪಾಳ ಸರಕಾರವನ್ನು ವಿಸರ್ಜಿಸಿದ್ದಾರೆ.

ನೆನ್ನೆ ಮಧ್ಯರಾತ್ರಿ ರಾಷ್ಟ್ರಿಪತಿಗಳು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ‘ಜನಪ್ರತಿನಿಧಿಗಳ ಸಭೆಯನ್ನು ವಿಸರ್ಜಿಸಿದ್ದಾರೆ. ಮೊದಲ ಹಂತದ ಸಾರ್ವತ್ರಿಕ ಚುನಾವಣೆಯನ್ನು ನವೆಂಬರ್ 12 ರಂದು ಮತ್ತು ಎರಡನೇ ಹಂತದ ಚುನಾವಣೆಯನ್ನು ನವೆಂಬರ್ 19 ರಂದು ನಡೆಸಲು ಆದೇಶಿಸಲಾಗಿದೆ. ಹಾಗೆಯೇ ಉಸ್ತುವಾರಿ ಪ್ರಧಾನಿ ಒಲಿ ನೇತೃತ್ವದ ಸಂಪುಟದ ಶಿಫಾರಸಿನ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ’ಎಂದು ಅದರಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: ಕೇರಳ ಎಲ್‌ಡಿಎಫ್‌ ಸರಕಾರದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ

ಮೇ 10ರಂದು ವಿಶ್ವಾಸಮತ ಯಾಚನೆ ನಡೆದಿದ್ದು ಈ ಸಂದರ್ಭದಲ್ಲಿ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಸೋತ ಹಿನ್ನೆಲೆಯಲ್ಲಿ ತಮ್ಮ ಹುದ್ದೆಯನ್ನು ತ್ಯಜಿಸಬೇಕಾದ ಪರಿಸ್ಥಿತಿ ಎದುರಾಯಿತು. ನೇಪಾಳ ಸಂಸತ್ತಿನ ಕೆಳಮನೆಯಲ್ಲಿ 275 ಸದಸ್ಯರು ಇದ್ದು, ವಿಶ್ವಾಸ ಮತ ಪಡೆದು ಅಧಿಕಾರ ಮುಂದುವರೆಸಲು ಕನಿಷ್ಠ 136 ಮತಗಳು ಬೇಕಾಗಿತ್ತು. ಆದರೆ ಪ್ರಧಾನಿ ಒಲಿಗೆ 93 ಮತಗಳು ಮಾತ್ರ ಲಭಿಸಿತ್ತು. ಪ್ರಮುಖವಾಗಿ 124 ಸದಸ್ಯರು ಒಲಿ ವಿರುದ್ಧ ಮತಹಾಕಿದ್ದು 15 ಸದಸ್ಯರು ತಟಸ್ಥರಾಗಿದ್ದರು.

ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ತಮ್ಮ ಸಿಪಿಎನ್‌–ಯುಎಂಎಲ್‌ ಪಕ್ಷದ 121 ಸಂಸದರು ಮತ್ತು ಜನತಾ ಸಮಾಜವಾದಿ  ಪಕ್ಷ–ನೇಪಾಳ (ಜೆಎಸ್‌ಪಿ–ಎನ್‌) ಪಕ್ಷದ 32 ಸಂಸದರ ಬೆಂಬಲ ಇದೆ ಹೇಳಿಕೊಂಡಿದ್ದಾರೆ.  ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ಡಿಯುಬಾ ಅವರು ತಮಗೆ 149 ಸಂಸದರ ಬೆಂಬಲ ಇದ್ದು ಸರ್ಕಾರ ರಚನೆಯ ಹಕ್ಕು ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ.

ಸಿಪಿನ್‌–ಯುಎಂಎಲ್‌ ಪಕ್ಷದ ಅಧ್ಯಕ್ಷ ಕೆ.ಪಿ. ಶರ್ಮಾ ಒಲಿ ಅವರು ಸಂವಿಧಾನದ 76(3)ನೇ ವಿಧಿ ಪ್ರಕಾರ ಮೇ 14ರಂದು ನೇಪಾಳದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಮಾಣ ವಚನಕ್ಕೆ ನಾಲ್ಕು ದಿನಗಳ ಹಿಂದೆ ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಅವರು 30  ದಿನದೊಳಗೆ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕಾಗಿತ್ತು. ಆದರೆ ಮತ್ತೆ ಸದನದಲ್ಲಿ ಈ ಪರೀಕ್ಷೆ ಎದುರಿಸಿಲು ಅವರು ಸಿದ್ಧರಿರಲಿಲ್ಲ. ಹೀಗಾಗಿ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಇತರ ರಾಜಕೀಯ ಪಕ್ಷಗಳಿಗೆ ಸರ್ಕಾರ ರಚನೆಯ ಹಕ್ಕು ಮಂಡಿಸಲು ಅವಕಾಶ ನೀಡಿದ್ದರು. ಇದಕ್ಕಾಗಿ ಶುಕ್ರವಾರ ಸಂಜೆ  5ರವರೆಗೆ ಗಡುವು ನಿಗದಿ ಮಾಡಿದ್ದರು.

ಇದನ್ನು ಓದಿ: ನಿರುದ್ಯೋಗ ದರ ಮತ್ತೆ ಹೆಚ್ಚಳ – ಒಂದೇ ತಿಂಗಳಲ್ಲಿ 72 ಲಕ್ಷ ಉದ್ಯೋಗಗಳಿಗೆ ಕತ್ತರಿ

ಆದರೆ ಇದೀಗ ಯಾವುದೇ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ಉಭಯ ನಾಯಕರ ಸರ್ಕಾರ ರಚನೆ ಹಕ್ಕು ಮನವಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದು ಮಧ್ಯಂತರ ಚುನಾವಣೆಗೆ ಆದೇಶಿಸಿದ್ದಾರೆ.

2020 ರ ಡಿಸೆಂಬರ್‌ನಲ್ಲಿ ಒಲಿ ನೇತೃತ್ವದ ಸರಕಾರ ಮಾಡಿದ್ದ ಸಂಸತ್ತಿನ ವಿಸರ್ಜನೆಯ ನಿರ್ಧಾರದ ವಿರುದ್ಧ ಭಾರೀ ಪ್ರತಿಭಟನೆ ಭುಗಿಲೆದ್ದಿತ್ತು. ಬಳಿಕ, ಫೆಬ್ರವರಿಯಲ್ಲಿ ಆ ಆದೇಶ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ನೇಪಾಳದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ನೇಪಾಳ ಹೈರಾಣಾಗಿದ್ದು ಈ ನಡುವೆ ರಾಜಕೀಯ ಬೆಳವಣಿಗೆಗಳು ಜನರನ್ನು ಮತ್ತಷ್ಟು ಸಂಕಷ್ಟ ಎಡೆಮಾಡಿಕೊಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *