ನೇಪಾಳದಲ್ಲಿ ನಡೆದಿರುವ ಇಂಟರ್ನೆಟ್ ಪೀಳಿಗೆಯ (GenZ) ಪ್ರತಿಭಟನೆಗಳು, ಜನರ, ವಿಶೇಷವಾಗಿ ಯುವಜನರ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವರ ಆಕಾಂಕ್ಷೆಗಳನ್ನು ಪೂರೈಸಲು ಅಲ್ಲಿ ಬಂದ ಎಲ್ಲ ಸರಕಾರಗಳು ಪದೇ ಪದೇ ವಿಫಲವಾಗುತ್ತಿರುವುದರಿಂದಾಗಿ ಹೆಚ್ಚುತ್ತಿರುವ ಬೇಗುದಿಗಳಿಂದ ಉಂಟಾಗಿರುವ ವ್ಯಾಪಕ ಆಕ್ರೋಶವನ್ನು ಪ್ರತಿಬಿಂಬಿಸುತ್ತವೆ. ಈ ಕುರಿತಾಗಿ ಲೇಖಕ ಹರೀಶ್ ಗಂಗಾಧರ್ ಮತ್ತು ಹಿರಿಯ ಚಿಂತಕ ಜಿ. ಎನ್, ನಾಗರಾಜ್ ಅವರು ಬರೆದ ಲೇಖನಗಳು.
-ಹರೀಶ್ ಗಂಗಾಧರ
ನಿಜವಾಗಿಯು ಉಳ್ಳವರ ಹೇಸಿಗೆ ತರಿಸುವಂತಹ ಆಡಂಬರ, ಅಧಿಕಾರಸ್ಥರ ಭ್ರಷ್ಟಚಾರ, ವ್ಯಾಪಕ ನಿರುದ್ಯೋಗ ನೇಪಾಳದಲ್ಲಿ ಉದ್ಭವವಾಗಿರುವ ಕಳವಳಕಾರಿ ಬೆಳವಣಿಗೆಗೆ ಕಾರಣ ಎಂದು ನಂಬಿದ್ದರೆ ಅದರಲ್ಲಿ ಯಾವ ತಪ್ಪಿಲ್ಲ. ಆದರೆ ಜಾಗತಿಕ ರಾಜಕೀಯವನ್ನು ಗಮನಿಸುತ್ತಿರುವವರಿಗೆ ಈ ಘಟನಾವಳಿಗಳು ಬೇರೆಯದೇ ಕತೆಯನ್ನು ಸೂಚಿಸಿದರೆ ಅದರಲ್ಲೂ ಅಚ್ಚರಿಯಿಲ್ಲ.
ಚೀನಾಕ್ಕೆ ಹತ್ತಿರವಾಗಿದ್ದ ನೇಪಾಳದ ಪ್ರಧಾನಿ ಒಲಿ ಅಧಿಕಾರ ಕಳೆದುಕೊಂಡಿದ್ದಾರೆ. Gen Z ಕೋಪಕ್ಕೆ ಅವರು ತುತ್ತಾದರು, Gen Z ಕ್ರಾಂತಿ ಮಹತ್ತರವಾದುದು ಎಂದು ಮಾಧ್ಯಮಗಳು ಅಬ್ಬರಿಸುತ್ತಿವೆ. ಫೇಸ್ಬುಕ್ ನಲ್ಲಿ ನನ್ನ ಗೆಳೆಯರೂ ಕೂಡ ಹಿಂಸಾತ್ಮಕ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೇಪಾಳ ಸರ್ಕಾರ ಏಕಾಏಕಿ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿದ್ದು ಈ ತ್ವರಿತ ಕ್ರಾಂತಿಗೆ ನಾಂದಿ ಹಾಡಿತು, Gen Z ತಮ್ಮ ವಾಕ್ ಸ್ವಾತಂತ್ರ್ಯ ಮರಳಿ ಪಡೆಯಲು ರೊಚ್ಚಿಗೆದ್ದರು, ನಿರುದ್ಯೋಗದಿಂದ ಹತಾಶಗೊಂಡ, ಭ್ರಷ್ಟಾಚಾರದಿಂದ ಬೇಸತ್ತ ಯುವಜನತೆಗೆ ಸೋಶಿಯಲ್ ಮೀಡಿಯಾ ಬ್ಯಾನ್ ಒಂದು ಕಿಚ್ಚಿನಂತೆ ವರ್ತಿಸಿತು. ನೇಪಾಳದ ಸರ್ಕಾರವನ್ನು ಆಹುತಿ ತೆಗೆದುಕೊಂಡ ಭುಗಿಲೆದ್ದ ಜ್ವಾಲೆಗೆ ಈ ಕಿಚ್ಚು ಕಾರಣವಾಯಿತು ಎಂದು ನನ್ನ ಮಿತ್ರರು ನಂಬಿದ ಹಾಗಿದೆ.
ಮುಂದೆ ಸಾಗಿ ನೋಡಿದರೆ ನಮಗೆ ಮತ್ತೊಂದು ವಿಷಯ ಸ್ಪಷ್ಟವಾಗುತ್ತೆ. ಒಲಿಯವರ ಎಕ್ಸಿಟ್ ನಿಂದ ತೆರವಾದ ಪ್ರಧಾನಿ ಪಟ್ಟಕ್ಕೆ ಯುವಕ ಬಾಲೆನ್ ಶಾ ಬರುವುದು ಸಾಕಷ್ಟು ಖಚಿತವಾಗಿದೆ. (ಬಾಂಗ್ಲಾದಲ್ಲಿ ಯುನೂಸ್ ಅಧಿಕಾರಕ್ಕೆ ಬಂದಂತೆ) ನೇಪಾಳದ ಮುಂದಿನ ಪ್ರಧಾನಿ ಬಾಲೆನ್ ಶಾ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ ನೇಪಾಳದಲ್ಲಿ ರ್ಯಾಪರ್ ಆಗಿ ಹೆಸರು ಮಾಡಿದವರು. ಮುಂದೆ ಕಾಟ್ಮಂಡು ಮೇಯರ್ ಆದರು ಕೂಡ. ಭಾರತದ ಬಗ್ಗೆ ಅವರಿಗೆ ಒಲವಿಲ್ಲ. ಭಾರತದ ಹಿಮಾಚಲ ಪ್ರದೇಶ, ಉತ್ತರಕಾಂಡ್, ಸಿಕ್ಕಿಂ ಒಳಗೊಂಡ ಅಖಂಡ ನೇಪಾಳದ ಕನಸು ಕಾಣುವವ ಬಾಲೆನ್, ಅಮೇರಿಕಾಕ್ಕೆ ಆಪ್ತ!
ಇದನ್ನೂ ಓದಿ: ನವದೆಹಲಿ |ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಸುಪ್ರೀಂ ಕೋರ್ಟ್ ಮೊರೆ
2015, ನೇಪಾಳ ಭಯಾನಕ ಭೂಕಂಪ ಒಂದಕ್ಕೆ ತುತ್ತಾಯಿತು. ಆಗ ಸೂರು, ಆಪ್ತರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಹಸ್ರಾರು ಸಂತ್ರಸ್ತರಿಗೆ ನೆರವು ನೀಡಿದ್ದು ಹಮಿ ನೇಪಾಳ ಎಂಬ NGO. ಸುಡಾನ್ ಗುರುಂಗ್ ಇದರ ಸ್ಥಾಪಕ. ಈ NGO ಸಣ್ಣದಾಗಿ ಶುರುವಾದರು ಮುಂದೆ ಬೃಹದಾಕಾರವಾಗಿ ಬೆಳೆಯಿತು. ಈ ಸಂಸ್ಥೆಗೆ ವಿದೇಶಿ ಫಂಡ್ ಹರಿದು ಬಂದಿದೆ ಮತ್ತು ನೇಪಾಳದ ಪರಮ ಭ್ರಷ್ಟರು, arms ಡೀಲರ್ ಗಳು ಕೂಡ ಈ NGO ಗೆ ಬಹಳ ಧಾರಾಳವಾಗಿ ದಾನ ನೀಡಿದ್ದಾರೆ. ಪ್ರತಿಭಟನೆಗೆ ಕರೆ ನೀಡಿದ್ದು ಇದೇ ಹಮಿ ನೇಪಾಳ! Everything is so well planned. ಒಂಥರಾ ಅಣ್ಣಾ ಹಜಾರೆ ಹೋರಾಟದಂತೆ!
ಸೋಶಿಯಲ್ ಮೀಡಿಯಾ ಪ್ರಪಂಚದಲ್ಲಿ ಬಹಳಷ್ಟು ಕ್ರಾಂತಿಗಳಿಗೆ ಉತ್ತೇಜನ ನೀಡಿದೆ. ಅರೇಬಿಯನ್ ಸ್ಪ್ರಿಂಗ್, ಜಾಸ್ಮಿನ್ ಕ್ರಾಂತಿ, ಬಾಂಗ್ಲಾದೇಶದ ಕ್ಷಿಪ್ರ ಕ್ರಾಂತಿಯ ಹಿಂದೆ ಸೋಶಿಯಲ್ ಮೀಡಿಯಾ ಸಕ್ರಿಯವಾಗಿದ್ದು ಎದ್ದು ಕಾಣುತ್ತದೆ. ಅದರೆ ಈ ಎಲ್ಲಾ ಕ್ರಾಂತಿಗಳು ಅಮೇರಿಕಾ ಕೈಗೊಂಬೆ ರಿಜೀಮ್ ಗಳನ್ನು ಸ್ಥಾಪಿಸಲು ಬಳಸಿಕೊಳ್ಳಲಾಯಿತು ಎಂಬುದು ಗಮನಿಸಬೇಕಾದ ವಿಷಯ. ಈಜಿಪ್ಟ್, ಲಿಬಿಯಾ, ಟ್ಯೂನಿಶಿಯಾ, ಇರಾಕ್ ನಲ್ಲಿ ಯಶಸ್ವಿಯಾದ ಅಮೆರಿಕ ಇತ್ತೀಚಿಗೆ ಬಾಂಗ್ಲಾದೇಶ್, ಪಾಕಿಸ್ತಾನ ಮತ್ತೀಗ ನೇಪಾಳದಲ್ಲೂ ಯಶಸ್ಸು ಸಾಧಿಸಿದೆ.
ನಿನ್ನೆ ನಡೆದ್ದದ್ದು Gen Z ಕ್ರಾಂತಿ, ಅದು nepo ಕಿಡ್ಸ್ ವಿರುದ್ಧದ ಹೋರಾಟ, ಸೋಶಿಯಲ್ ಮೀಡಿಯಾ ಕ್ರಾಂತಿಯ ಸಾಧನ ಎಂಬುದೆಲ್ಲಾ ತೀರಾ simplistic ನೋಟಗಳು ಎಂಬ ಅನಿಸಿಕೆ ನನ್ನದು. ಭಾರತ, ಚೀನಾ, ರಷ್ಯಾವನ್ನು ಸ್ಟ್ರಾಟೆಜಿಕ್ ಆಗಿ ನಿಯಂತ್ರಿಸಲು ಅಮೆರಿಕಾಕ್ಕೆ ಬಾಂಗ್ಲಾ, ಪಾಕಿಸ್ತಾನ ಮತ್ತು ನೇಪಾಳ ಅತ್ಯಾವಶ್ಯಕ.

ಇತ್ತೀಚಿಗೆ ಒಂದು ವಿಡಿಯೋ ತುಣುಕು ನೋಡಿದ್ದೆ. ಡೊನಾಲ್ಡ್ ಟ್ರಂಪ್, ಸುಂದರ್ ಪಿಚೈ, ಟಿಮ್ ಕುಕ್, ಸತ್ಯ ನಾದೆಲ್ಲಾ, ಬಿಲ್ ಗೆಟ್ಸ್, ಮಾರ್ಕ್ ಜಾಕರ್ಬರ್ಗ್ ಅವರನ್ನು ಅಮೆರಿಕದಲ್ಲಿ ಎಷ್ಟು ಹೂಡಿಗೆ ಮಾಡ್ತೀರಾ ಎಂದು ಧಿಮಾಕಿನಿಂದ ಕೇಳುತ್ತಿದ್ದ ತುಣುಕದು. ಈ ಸಿರಿವಂತರು ಅತಿ ವಿನಮ್ರತೆಯಿಂದ ಉತ್ತರ ಕೊಡುತ್ತಿದ್ದರು. ಇಂತಹದೇ ಒಂದು ಮೀಟಿಂಗ್ಗಳಲ್ಲಿ ಪ್ರಪಂಚದ ಯಾವ ಭಾಗದಲ್ಲಿ ಕ್ರಾಂತಿ ಹುಟ್ಟಬೇಕು, ಎಲ್ಲಿ ಅದು ಯಶಸ್ವಿಯಾಗಬೇಕು, ಮತ್ತೆಲ್ಲಿಯ ಕ್ರಾಂತಿ ಕಮರಿಹೊಗಬೇಕೆಂಬುದು ನಿರ್ಧಾರವಾಗುತ್ತದೆ! ಈ ಅರಿವು ಮುಖ್ಯ. Social media can’t give rise to a revolution. ಪುಟ್ಟ ಚಳುವಳಿಗೆ ಅಮೇರಿಕಾ ಸಹಮತವಿದ್ದರೆ ಅದು ಬೃಹತ್ ಕ್ರಾಂತಿಯಾಗುತ್ತದೆ ಎಂಬುದಂತೂ ದಿಟ.
ನಮ್ಮ ಸುತ್ತಲ ಮುತ್ತಲ ರಾಷ್ಟ್ರಗಳಲ್ಲಿ ಇಷ್ಟೆಲ್ಲಾ ಅಸ್ಥಿರತೆ, ಅರಾಜಕತೆ ತಾಂಡವವಾಡುತ್ತಿರುವಾಗ, ನಮ್ಮ ಮಿತ್ರರು ಕಾಣೆಯಾಗಿ ವೈರಿಗಳೇ ನಮ್ಮನ್ನು ಸುತ್ತುವರೆದಿರುವಾಗ ಭಾರತ ಮತ್ತಷ್ಟು ಒಳಗಿನಿಂದ ಬಲಿಷ್ಠವಾಗಬೇಕು, ಸೌಹಾರ್ದತೆಗೆ ಆದ್ಯತೆ ನೀಡಿ ದೇಶದ ಜನರು ಒಗ್ಗೂಡಬೇಕು. ಸ್ವಾಯತ್ತತೆಯ ಕಡೆಗೆ ಹೆಜ್ಜೆಯಾಕಬೇಕು. ಕೋಮುವಾದ ಗೆಲುವು ಕಂಡು, ನಮ್ಮಲ್ಲೇ ಒಡಕುಗಳು ನೂರಾರಿದ್ದರೆ… Enemy is at the gates.
ಜಿ.ಎನ್. ನಾಗರಾಜ
IMF, ವರ್ಲ್ಡ್ ಬ್ಯಾಂಕ್ ಮತ್ತು ಅಮೆರಿಕಾಗಳು ಜಗತ್ತಿನ ಬಡ ದೇಶಗಳ ಜನರನ್ನು ಮಾತ್ರವಲ್ಲ, ಯುರೋಪಿನ , ಅಮೆರಿಕ ಖಂಡದ, ಸ್ವತಃ ಅಮೆರಿಕದ ದೇಶಗಳ ಜನರನ್ನು ಹಿಂಡಿ ಹಿಪ್ಪೆ ಮಾಡಿ ಬಿಸಾಕುತ್ತಿವೆ. ಯಾವ ಪಕ್ಷಗಳು ಎಂತೆಂತಹ “ಜನಪರ” ಘೋಷಣೆಗಳನ್ನು ನೀಡಿ ಅಧಿಕಾರಕ್ಕೆ ಬಂದರೂ ಆರ್ಥಿಕ ನೀತಿ ಮಾತ್ರ IMF ಕೈಯಲ್ಲಿ , ಅಮೆರಿಕದ ಆಣತಿಯಂತೆ ಇರುತ್ತದೆ.
ಈ ದೇಶಗಳ ಆಳುವ ಪಕ್ಷಗಳು ಯಾರು ಗೆದ್ದರೂ ಕೂಡ , ಸ್ವಾತಂತ್ರ್ಯ ಹೋರಾಟದ ಕಾವೆಲ್ಲ ತಣ್ಣಗಾಗಿ, ಪ್ರಜಾಪ್ರಭುತ್ವದ ತತ್ವಗಳನ್ನು ಮಡಚಿ ಮೂಲೆಗಿಟ್ಟು ಆಡಳಿತ ನಡೆಸುತ್ತಿವೆ . ಇಂತಹ ಪರಿಸ್ಥಿತಿಗೆ ಆಯಾ ದೇಶಗಳ ಆಳುವ ವರ್ಗ ಹೊಂದಿಕೊಂಡು , ಆಳುವ ವರ್ಗದ ಎರಡು ಮೂರು ಪಕ್ಷಗಳು ತಮ್ಮ ತಮ್ಮಲ್ಲಿಯೇ ಕಚ್ಚಾಡಿಕೊಂಡು IMF ಆಣತಿಗೇ ತಲೆ ಬಾಗಿ ನಡೆಯುತ್ತಿವೆ.
IMF ಅಮೆರಿಕ ಹೇರಿದ ನೀತಿಗಳ ಫಲವಾಗಿ ಬೆಲೆ ಏರಿಕೆ, ತೆರಿಗೆಗಳ ವಿಪರೀತ ಏರಿಕೆ, ನಿರುದ್ಯೋಗಗಳಿಂದ ಜನತೆ , ಅದರಲ್ಲಿಯೂ ಯುವ ಜನತೆ ಕಂಗೆಟ್ಟು ಬಸವಳಿದು ಹೋಗಿದೆ. ಆಯಾ ದೇಶಗಳ ರಾಜಕೀಯ ಪಕ್ಷಗಳಲ್ಲಿ ನಂಬಿಕೆ ಕಳೆದುಕೊಂಡಿವೆ.

ಅಂತಹ ಯುವ ಜನತೆಯ ದಂಗೆಗಳು ಇವು. ಆದರೆ ಯುವಜನರಲ್ಲಿ ಮೊಳೆತು ಬೃಹದಾಕಾರವಾಗಿ ಬೆಳೆಯುತ್ತಿರುವ ಈ ಸಿಟ್ಟುಗಳನ್ನೇ ಮತ್ತೆ ತನ್ನ ಕೈ ವಶ ಮಾಡಿಕೊಂಡು regime change ಮಾಡುವ ಕಲೆ ಅಮೆರಿಕಕ್ಕೆ ಸಿದ್ಧಿಸಿದೆ.
ಅಮೆರಿಕಕ್ಕೆ ವಿರುದ್ಧವಾಗಿರುವ ಆಳುವ ಪಕ್ಷಗಳ ನಾಯಕರನ್ನು ಮಿಲಿಟರಿ ಒಳಸಂಚುಗಳ ಮೂಲಕ ಕಿತ್ತು ಹಾಕು ಇಲ್ಲವೇ ಹಣ ಹರಿಸಿ ಯುವ ಜನ ದಂಗೆಗಳನ್ನು ಎಬ್ಬಿಸು. ಇದೇ ಅವರ ಎರಡು ಬಗೆಯ ನೀತಿ.
ಈ ದಂಗೆಗಳನ್ನೆಲಾ ತಣ್ಣಗಾಗಿಸಿ ತನ್ನ ky ಗೊಂಬೆಗಳನ್ನು ಅಧಿಕಾರಕ್ಕೆ ತರುತ್ತಿದ್ದಾರೆ.
ಇದಕ್ಕೆ exception ಎಂದರೆ ಶ್ರೀ ಲಂಕ, ಬ್ರೆಜಿಲ್, ವೆನೆಜುವೆಲಾ, ಚಿಲಿ ಒಂದು ದಶಕ ಕಾಲ ಬೊಲಿವಿಯಾ ಹೀಗೆ ಈ ದಂಗೆಗಳೇ ಎಡ ತಿರುವು ಪಡೆದುಕೊಂಡು ಅಮೆರಿಕಕ್ಕೆ ಸೆಡ್ಡು ಹೊಡೆಯುತ್ತಿವೆ. ಒಂದಿಷ್ಟು ಜನಪರ ನೀತಿಗಳನ್ನು ಅನುಸರಿಸುವ ಪ್ರಯತ್ನ ಮಾಡುತ್ತಿವೆ. ಅವುಗಳ ವಿರುದ್ಧ ಅಮೆರಿಕ ಕತ್ತಿ ಮಸೆಯುತ್ತಾ sanction ಹಾಲನ್ನು ಹೇರುತ್ತಾ, ಮಿಲಿಟರಿ ಮುತ್ತಿಗೆ ಹೆಣೆಯುತ್ತಾ ಅವುಗಳನ್ನು ಉರುಳಿಸಲು ಹೊಂಚು ಹಾಕುತ್ತಿದೆ. ಬೊಲಿವಿಯಾ ಅದಕ್ಕೆ ಬಲಿಯಾಯಿತು.
ಹೀಗಿದೆ ದಂಗೆಗಳ ಹೂರಣ.
ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಎಸ್‌ಐಟಿ ತನಿಖೆಗೆ ಅಡ್ಡಿಪಡಿಸಿದವರ ಮೇಲೆ ಕ್ರಮ ಜರುಗಿಸಬೇಕು – ಹಿರಿಯ ವಕೀಲ ಬಿ.ಟಿ. ವೆಂಕಟೇಶ್
