ಹೊಸ ಶಿಕ್ಷಣ ನೀತಿ ಜಾರಿಯ ಹುನ್ನಾರವನ್ನು ಅರಿಯಬೇಕಿದೆ – ದುರ್ಗಾದಾಸ್

ಹಾವೇರಿ: ಆಡಳಿತ ಪಕ್ಷ ಈ ಶಿಕ್ಷಣ ನೀತಿ ಒಳಿತನ್ನೆ ಮಾಡುತ್ತೆ ಅಂತ ಹೇಳುತ್ತಿದ್ದಾರೆ. ಆದರೆ ಇಂತಹ ಗಂಭೀರ ವಿಷಯವನ್ನು ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಯಾಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವಿಚಾರವಂತರು ಈ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ವಿಶ್ರಾಂತ ಕುಲಸಚಿವ ಡಾ. ಕೆ.ಆರ್ ದುರ್ಗಾದಾಸ್ ಹೇಳಿದರು.

ನಗರದ ಗುರುಭವನದಲ್ಲಿ ಶನಿವಾರ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ಆಯೋಜಿಸಿದ್ದ ಅಪಾಯಕಾರಿ ನೂತನ ಶಿಕ್ಷಣ ನೀತಿ 2020 ನ್ನು ವಿರೋಧಿಸಿ, ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ, ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ರಾಜಕೀಯ ನಾಯಕರು ಕೇವಲ ತಮ್ಮ ಪಕ್ಷದ ವಕ್ತಾರಿಕೆಯಾಗಿ ಕೆಲಸ ಮಾಡುತ್ತಿದ್ದಾರೆಯೆ ವಿನಃ ತಮಗೆ ದೊರೆತಿರುವ ಅಧಿಕಾರವನ್ನು ಜನತೆ ಪರವಾಗಿ ನಿಷ್ಠೆಯಿಂದ ಚಲಾಯಿಸುವ ಯಾವ ನೈತಿಕತೆಯನ್ನು ಹೊಂದದೆ ದಿವಾಳಿತನ ಮೆರೆಯುತ್ತಿದ್ದಾರೆ ಎಂದರು.
ಶಿಕ್ಷಣ ನೀತಿಯಂತಹ ಗಂಭಿರ ವಿಷಯಗಳನ್ನು ವಿರೋಧ ಪಕ್ಷದ ನಾಯಕರು ಸರ್ಕಾರಕ್ಕೆ ಪ್ರಶ್ನೆ ಮಾಡಿದರೆ, ಆಳುವ ಸರ್ಕಾರ ವಿರೋಧ ಪಕ್ಷದ ನಾಯಕರನ್ನು ಹೀಗಳೆದು ನಿರ್ಲಕ್ಷಿಸುತ್ತಿರುವುದು ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡುವಂತಹ ಕಟು ವಾಸ್ತವ ನಮ್ಮ ಕಣ್ಣೆದುರು ನಡೆಯುತ್ತಿರುವುದು ಅಪಾಯಕಾರಿಯಾದುದು ಎಂದು ಆತಂಕ ವ್ಯಕ್ತಪಡಿಸಿದರು.

 

ದೇಶದಲ್ಲಿ ಈಗಾಗಲೇ ಒಂದು ಶಿಕ್ಷಣ ನೀತಿ ಇದೆ. ಅದರ ಸಾಧಕ ಬಾಧಕಗಳನ್ನು ವಿಮರ್ಶೆ ಮಾಡಬೇಕಿತ್ತು. ಅದರಲ್ಲಿ ಕೊರತೆ ಇದ್ದರೆ ಸರಿ ಮಾಡುವ ಬದಲಾಗಿ ಏಕಾಏಕಿ ಎನ್.ಇ.ಪಿ ಜಾರಿ ಮಾಡುತ್ತಿರುವುದರ ಹಿಂದಿನ ಉದ್ದೇಶದ ಹುನ್ನಾರವೇನು ಎಂಬುದನ್ನು ಅರಿಯಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, 1964-66 ಕೊಠಾರಿ ಆಯೋಗವು ಸರಕಾರಕ್ಕೆ ಶಿಕ್ಷಣ ಬಲಪಡಿಸುವ ಅಂಶಗಳನ್ನು ಶಿಪಾರಸ್ಸು ಮಾಡಿತ್ತು. ರಾಜ್ಯ ಸರ್ಕಾರ ಶೇಕಡಾ 30% ರಷ್ಟು, ಕೇಂದ್ರ ಸರ್ಕಾರ ಶೇಕಡಾ 10 ರಷ್ಟು ಮತ್ತು ಜಿಡಿಪಿಯಲ್ಲಿ ಶೇಕಡಾ 6 ರಷ್ಟು ಹಣವನ್ನು ತಮ್ಮ ಬಜೆಟ್ ನಲ್ಲಿ ಮೀಸಲಿಡಬೇಕೆಂದು ಹೇಳಿದೆ‌ ಆದರೆ ಅದನ್ನು ಈವರೆಗೆ ಆಳಿದ ಯಾವ ಸರ್ಕಾರವೂ ಜಾರಿ ಮಾಡದೇ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ದೇಶದ ಭವಿಷ್ಯವನ್ನು ನಿರ್ಮಿಸುವಂತಹ ಶಿಕ್ಷಣ ನೀತಿಯನ್ನು ಏಕಾಏಕಿ ಯಾವುದೇ ಚರ್ಚೆ ಮಾಡದೇ ಅಪ್ರಜಾಸತ್ತಾತ್ಮಕವಾಗಿ, ಆಕ್ರಮಣಕಾರಿ ರೀತಿಯಲ್ಲಿ ಜಾರಿ ಮಾಡುತ್ತಿರುವುದು ಅಪಾಯಕಾರಿಯಾಗಿದೆ. ಇದನ್ನು ತಡೆಯಲು ವಿದ್ಯಾರ್ಥಿ, ಯುವಜನರು ಎಸ್ಎಫ್ಐ ಮತ್ತು ಡಿವೈಎಫ್ಐ ಸಂಘಟನೆಗಳಡಿ ಒಗ್ಗೂಡಿ ಐಕ್ಯ ಹಾಗೂ ಬಲಿಷ್ಠ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಅಖಿಲ ಭಾರತ ವಕೀಲರ ಸಂಘಟನೆ ಮುಖಂಡ ನಾರಾಯಣ ಕಾಳೆ ಮಾತನಾಡಿ, ಶಿಕ್ಷಣ ವ್ಯವಸ್ಥೆ ಸರಿಪಡಿಸಲು ವಿದ್ಯಾರ್ಥಿಗಳು ಸಮಗ್ರ ಅಧ್ಯಯನ, ವೈಜ್ಞಾನಿಕ ಹಾಗೂ ಪ್ರಗತಿಪರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಚಿಂತಕರಾದ ಡಾ. ಕೆ ಪ್ರಕಾಶ, ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಕಾರ್ಯದರ್ಶಿ ವಾಸುದೇವ ರೆಡ್ಡಿ, ಮಾಜಿ ರಾಜ್ಯ ಮುಖಂಡರಾದ ರೇಣುಕಾ ಕಹಾರ, ರಾಜ್ಯ ಸಮಿತಿ ಸದಸ್ಯ ಗಣೇಶ ರಾಠೋಡ, ಬೀರೇಶ ನೆಟಗಲ್ಲಣ್ಣವರ, ಕಾವ್ಯ ಎಸ್.ಎಚ್,ಅರುಣ ಆರೇರ, ಮಹೇಶ ನರೇಗಲ್ಲ್ ಸೇರಿದಂತೆ ವಿದ್ಯಾರ್ಥಿ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Donate Janashakthi Media

Leave a Reply

Your email address will not be published. Required fields are marked *