ಎನ್‌ಇಪಿ ನೀತಿಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲಿ ಎಲ್ಲಿಯೂ ಜಾರಿಯಾಗದಿದ್ದರೂ ಅತ್ಯಂತ ತರಾತುರಿಯಲ್ಲಿ ಎಲ್ಲರಿಗಿಂತ ಮೊದಲು ಜಾರಿಗೆ ತಂದಿರುವುದು ಉನ್ನತ ಶಿಕ್ಷಣ ಇಲಾಖೆಗೆ ತೀವ್ರ ಹಿನ್ನಡೆಯಾಗಿದೆ. ಕೇಂದ್ರ ಸರಕಾರವು ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಆಕ್ಷೇಪಗಳು ಕೇಳಿ ಬರುತ್ತಿವೆ. ಇದರೊಂದಿಗೆ ಇದೀಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಧ್ವನಿಗೂಡಿಸಿದ್ದು, ದೊಡ್ಡ ಬಲ ಬಂದಂತಾಗಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರಿಗೆ ವಿಪಕ್ಷ ನಾಯಕ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.

ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರು ಮಾಡಿರುವ ತಪ್ಪನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಎತ್ತಿ ತೋರಿಸಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಕ್ಷಣ ಹಿಂದಕ್ಕೆ ಪಡೆಯಿರಿ ಎಂದು ಅವರು ಪತ್ರ ಬರೆದಿದ್ದಾರೆ.  ತಕ್ಷಣ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆಯಿರಿ ಎಂದು ಪತ್ರ ಬರೆದಿದ್ದಾರೆ.

ಇದನ್ನು ಓದಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 20 – ಹೊಸದು ಏನಿದೆ? NEP ಹೇಳಿದ್ದೇನು? ಬಚ್ಚಿಟ್ಟಿದ್ದೇನು?

ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಅನುಷ್ಠಾನಗೊಳಿಸಲು ಚಾಲನೆ ನೀಡಲಾಗಿದೆಯೆಂದು ಹಾಗೂ ಈ ಕುರಿತು ಚರ್ಚಿಸಲು ದಿನಾಂಕವನ್ನು ನೀಡುವಂತೆ ತಮ್ಮ ಕಛೇರಿಯಿಂದ ಪತ್ರ ಬರೆದು ಕೋರಲಾಗಿದೆ. ಕರ್ನಾಟಕದಲ್ಲಿ ಈಗಾಗಲೆ ತರಾತುರಿಯಲ್ಲಿ ವಿದ್ಯಾರ್ಥಿಗಳು, ತಜ್ಞರು, ಪ್ರಾಧ್ಯಾಪಕರು, ಪೋಷಕರುಗಳ ಜೊತೆ ಚರ್ಚಿಸದೆ, ಸಾಧಕ-ಬಾಧಕಗಳನ್ನು ಪರಿಶೀಲಿಸದೆ ಈ ಶೈಕ್ಷಣಿಕ ವರ್ಷದಿಂದಲೆ ಅನುಷ್ಠಾನ ಮಾಡುವುದಾಗಿ ಹೇಳಿ ಉದ್ಘಾಟನೆಯನ್ನೂ ಮಾಡಲಾಗಿದೆ. ಉದ್ಘಾಟನೆಯನ್ನೂ ಮುಗಿಸಿ ಚರ್ಚೆ ಮಾಡಬೇಕು ಎಂದು ಕರೆಯುವುದು ಸಂಸದೀಯವಾಗಿ ಸರಿಯಲ್ಲ ಎಂದು ಸಿದ್ದರಾಮಯ್ಯ ಸಚಿವರನ್ನು ತರಾಟೆಗೆ ತಗೆದುಕೊಂಡಿದ್ದಾರೆ.

ಒಂದು ಶಿಕ್ಷಣ ನೀತಿಯ ಅನುಷ್ಠಾನವೆಂದರೆ ಸಣ್ಣ ಸಂಗತಿಯೆ? ತಾವೂ ಕೂಡ ಬೆವರಿನ ಸಂಸ್ಕೃತಿಯ ಹಿನ್ನೆಲೆಯ ಸಮುದಾಯದಿಂದ ಬಂದಿದ್ದೀರಿ. ರಾಷ್ಟ್ರಕವಿ ಕುವೆಂಪು ಅವರು ಶಿಕ್ಷಣ, ಅದರ ಗುಣಮಟ್ಟವನ್ನು ಸುಧಾರಣೆ, ಕಲಿಕೆಯ ಮಾಧ್ಯಮ ಹಾಗೂ ಸರ್ಕಾರದ ಜವಾಬ್ಧಾರಿಗಳ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣದ ಕುರಿತಂತೆ ಕೆಲಸ ಮಾಡುತ್ತಿರುವವರೆಲ್ಲರೂ ಕುವೆಂಪು ಅವರ ವಿಚಾರಗಳನ್ನು ಓದಿ, ಅದರಂತೆ ನಡೆದುಕೊಳ್ಳಬೇಕಾಗಿದೆ.

ಮುಂದುವರೆದ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಸರ್ಕಾರಗಳೆ ನಿರ್ವಹಿಸುತ್ತವೆ. ಯಾವುದೇ ನಾಡಿನಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಸಮರ್ಪಕವಾಗಿದ್ದರೆ ಆ ನಾಡಿನ ಸಮಸ್ತ ಆರೋಗ್ಯವೂ ಸರಿಯಾಗಿರುತ್ತದೆ. ಇಂದು ಭಾರತದ ಸಮಾಜಗಳು ತೀವ್ರ ರೂಪದ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಅದಕ್ಕೆ ಕಾರಣಗಳು ಹಲವಿವೆ ಎಂದಿದ್ದಾರೆ.

ಹೊಸ ಶಿಕ್ಷಣ ನೀತಿಯಲ್ಲಿನ ಸಮಸ್ಯೆಗಳು!

ಮೊದಲನೆಯದಾಗಿ ವಿದ್ಯಾರ್ಥಿಗಳಿಗೆ ತಕ್ಕಂತೆ ಶಿಕ್ಷಕರ ಸಂಖ್ಯೆಯಿರಬೇಕು. ಶಿಕ್ಷಣ ಕ್ಷೇತ್ರಕ್ಕೆ ಅತಿ ಕಡಿಮೆ ಅನುದಾನ ನೀಡಲಾಗುತ್ತಿದೆ. ಈ ನೀತಿಯ ಶಿಫಾರಸ್ಸುಗಳ ಪ್ರಕಾರ ಜಿಡಿಪಿಯಲ್ಲಿ ಕನಿಷ್ಠ ಶೇಕಡಾ 6 ರಷ್ಟು ಮೀಸಲಿರಿಸಬೇಕು. ಇದಾಗಬೇಕೆಂದರೆ ಕರ್ನಾಟಕದಲ್ಲಿ ಕನಿಷ್ಠ 1.08 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿರಿಸಬೇಕಾಗುತ್ತದೆ.

ಇದನ್ನು ಓದಿ: ನಾಲ್ಕು ವರ್ಷಗಳ ಪದವಿ ಶಿಕ್ಷಣ: ಬೆಂಕಿಯಿಂದ ಬಾಣಲೆಗೆ

ಹೊಸ ಶಿಕ್ಷಣ ನೀತಿಯ ಹೇರಿಕೆಯು ಹಲವು ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಹೇಳುತ್ತಿದೆ. ಒಕ್ಕೂಟ ವ್ಯವಸ್ಥೆಯ ಮೂಲ ಸ್ಫೂರ್ತಿಯ ನಿರಾಕರಣೆ, ಖಾಸಗೀಕರಣ, ತರಗತಿಗಳನ್ನು ನಿರಾಕರಿಸಿ ಕಾಲೇಜು, ವಿಶ್ವ ವಿದ್ಯಾಲಯಗಳ ಪಾವಿತ್ರ್ಯದ ನಿರಾಕರಣೆ, ಬಡವರು, ಹಿಂದುಳಿದವರು, ದಮನಿತರ ಸಿಗಬಹುದಾದ ಸುಲಭ ಶಿಕ್ಷ,ಣದ ನಿರಾಕರಣೆ, ಕೋಮು ಅಜೆಂಡಾಗಳನ್ನು ತಂದು ಅವೈಜ್ಞಾನಿಕತೆಯನ್ನು, ದ್ವೇಷವನ್ನು ತುಂಬಿ ಭಾರತವನ್ನು ಶಾಶ್ವತ ಅಂಧಕಾರಕ್ಕೆ ತಳ್ಳಲಾಗುತ್ತಿದೆ ಮುಂತಾದ ಗಂಭೀರ ಆರೋಪಗಳಿವೆ.

ನೂತನ ಶಿಕ್ಷಣ ನೀತಿಯ ಹೆಸರಲ್ಲಿ ಮಕ್ಕಳು ಬಲಿಪಶು

ಸರ್ಕಾರ ಈ ಎಲ್ಲದರ ಕುರಿತು ಚರ್ಚೆ ನಡೆಸಬೇಕಾಗಿತ್ತು. ಇದೇನನ್ನೂ ನೀವು ಮಾಡಿಲ್ಲ. ನನ್ನ, ನಿಮ್ಮ ಆಯಸ್ಸು, ರಾಜಕೀಯ ವೃತ್ತಿ ಎಲ್ಲವೂ ಮುಂದೆ ಎಂದೊ ಒಂದು ದಿನ ಮುಗಿಯುತ್ತದೆ. ಆದರೆ ಶಿಕ್ಷಣ ನೀತಿಯ ಹೆಸರಲ್ಲಿ ಬಲಿಪಶುಗಳಾಗುವ ಮಕ್ಕಳ ಮುಂದೆ ೭೦- ೮೦ ವರ್ಷಗಳ ಭವಿಷ್ಯವಿದೆ. ಶಿಕ್ಷಣದ ಹಂತದಲ್ಲಿ ಅವರ ಭವಿಷ್ಯ ಅಲ್ಲೋಲ, ಕಲ್ಲೋಲವಾದರೆ ಅದರ ಶಾಪವನ್ನು ಹೊರುವವರು ಯಾರು? ಈ ನಾಡಿನ , ರೈತರ, ಪಶುಪಾಲಕರ, ಕುಶಲಕರ್ಮಿಗಳ, ಸಣ್ಣ ಪುಟ್ಟ ವ್ಯಾಪಾರಿಗಳ, ಕಾರ್ಮಿಕರ ಮನೆಗಳಿಂದ ಬಂದ ಮಕ್ಕಳು ಗುಣ ಮಟ್ಟದ ಶಿಕ್ಷಣ ಪಡೆದು ಜಾಗತಿಕ ಮಟ್ಟದ ಉದಾರ ಮಾನವತಾವಾದಿ, ವೈಜ್ಞಾನಿಕ ಶಿಕ್ಷಣ ಪಡೆಯಬಾರದೆ?

ತಾವು ನಿಜವಾಗಿಯೂ ನೈಜ ಸ್ಫೂರ್ತಿಯಲ್ಲಿ ಚರ್ಚೆಮಾಡಬಯಸಿದರೆ, ಕೂಡಲೆ ಈ ಹೊಸ ಶಿಕ್ಷಣ ನೀತಿಯನ್ನು ಹಿಂದಕ್ಕೆ ಪಡೆಯಿರಿ. ಚರ್ಚೆ ನಡೆಸಿದ ಮೇಲೆ ನಿಜವಾಗಿಯೂ ಈ ನೀತಿ ಆರೋಗ್ಯಕರವೆನ್ನಿಸಿ ಅನುಷ್ಠಾನ ಸೂಕ್ತವೆನ್ನಿಸಿದರೆ, ಈ ಶತಮಾನಕ್ಕೆ ಅತ್ಯಗತ್ಯ ಎನ್ನಿಸಿದರೆ ನಾವೆ ನಿಂತು ಅನುಷ್ಠಾನ ಮಾಡಲು ಬೆಂಬಲಿಸುತ್ತೇವೆ. ಇಲ್ಲದಿದ್ದರೆ ಮಕ್ಕಳ ಭವಿಷ್ಯದ ಕುತ್ತಿಗೆ ಕೊಯ್ಯುವಂಥ ಪಾಪದ ಕೆಲಸದಲ್ಲಿ ಭಾಗಿಯಾದೆವು ಎಂಬ ಪಶ್ಚಾತ್ತಾಪವನ್ನು ಹೊರಬೇಕಾಗುತ್ತದೆ ಎಂಬುದನ್ನು ತಮಗೆ ತಿಳಿಸ ಬಯಸುತ್ತೇನೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ವಿವರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *