ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿರೋಧಿಸಿ ಎಸ್‌ಎಫ್‌ಐ ಪ್ರತಿಭಟನೆ

ಗಜೇಂದ್ರಗಡ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಯಾರನ್ನೊ ಮೆಚ್ಚಿಸಲು ಜಾರಿ ಮಾಡಿದ್ದು ಸರಿಯಲ್ಲ. ಸರ್ಕಾರ ತನ್ನ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಗಜೇಂದ್ರಗಡ ತಾಲ್ಲೂಕು ಸಮಿತಿ ಸದಸ್ಯರು ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕರಡನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಎಸ್‌ಎಫ್‌ಐನ ರಾಜ್ಯ ಮುಖಂಡ ಗಣೇಶ ರಾಠೋಡ ಮಾತನಾಡಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿ ಮಾಡುವ ಕುರಿತು ರಾಜ್ಯದ ವಿಧಾನಸಭೆಯಲ್ಲಿ ಸಮಗ್ರವಾಗಿ ಚರ್ಚೆ ಮಾಡಬೇಕೆಂದು ಫೆಬ್ರವರಿ 2020 ರಿಂದಲೂ ಸರ್ಕಾರಕ್ಕೆ ಹೋರಾಟದ ಮೂಲಕ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದೆ. ಅಲ್ಲದೆ ರಾಜ್ಯದ ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪರವರಿಗೆ ಮನವಿ ಪತ್ರ ಸಲ್ಲಿಸಿ ಸಮಗ್ರ ಚರ್ಚೆಗೆ ಒತ್ತಾಯಿಸಿದೆವು. ಆದರೆ ಅವರು ಈ ಕುರಿತು ಚರ್ಚೆ ಮಾಡಲೇ ಇಲ್ಲಾ.

ವಿಪಕ್ಷ ನಾಯಕ ಸಿದ್ಧರಾಮಯ್ಯನವರು ಮಾತ್ರ ಶಿಕ್ಷಣ ನೀತಿ ಬೇಡ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

ಶಿಕ್ಷಣವು ಸಂವಿಧಾನದ ಒಕ್ಕೂಟ ವ್ಯವಸ್ಥೆಯಲ್ಲಿ ಬರುತ್ತಿದ್ದು ಕೇಂದ್ರ ಸರ್ಕಾರವು ಸರ್ವಾಧಿಕಾರಿತನದಿಂದ ಯಾವುದೇ ರೀತಿಯಲ್ಲಿ ಚರ್ಚೆ ಮಾಡದೆ ಹಿಟ್ಲರ್ ಆಡಳಿತ ನಡೆಸುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದ ನೂತನ ಉನ್ನತ ಶಿಕ್ಷಣ ಸಚಿವರು ಯಾರನ್ನೋ ಮೆಚ್ಚಿಸಲು ತಾವು ಕೂಡ ಸರ್ವಾಧಿಕಾರತ್ವ ಮಾದರಿಯಲ್ಲಿ ಆದೇಶವನ್ನು ಜಾರಿ ಮಾಡಿರುವುದು ಸರಿಯಲ್ಲ ಎಂದರು.

ಜಿಲ್ಲಾ ಸಮಿತಿ ಸದಸ್ಯ ಚಂದ್ರು ರಾಠೋಡ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಬೇಕಾದರೆ ರಾಜ್ಯ ವಿಧಾನಸಭೆಯಲ್ಲಿ ಚರ್ಚಿಸಿ, ಉಪನ್ಯಾಸಕರು, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು, ಸಾಹಿತಿಗಳು, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಮಗ್ರವಾಗಿ ಚರ್ಚಿಸಿ ಜಾರಿ ಮಾಡುವ ಕುರಿತು ಚಿಂತನೆ ಮಾಡಬೇಕಿತ್ತು. ಆದರೆ ಅವುಗಳನ್ನು ಮಾಡದೇ ಜಾರಿ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಅದರಲ್ಲಿ ಕನ್ನಡ ಭಾಷೆಯ ಕುರಿತು ಗೊಂದಲಗಳಿವೆ, ಅಲ್ಲದೆ ಖಾಸಗಿ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಒಳಗೊಂಡಿದೆ ಎಂದರು.

ರಾಜ್ಯದ ಬಹುತೇಕ ಪದವಿ ಕಾಲೇಜು, ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲ, ಶೌಚಾಲಯಗಳಿಲ್ಲ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ವಿಶ್ರಾಂತಿ ಕೊಠಡಿಗಳಿಲ್ಲ. ಉಪನ್ಯಾಸಕರಿಲ್ಲ,  ಪ್ರಾಥಮಿಕ ಶಿಕ್ಷಣ ತುಂಬಾ ಹೀನಾಯ ಸ್ಥಿತಿಯಲ್ಲಿ ಇದೆ. ಸರಕಾರ ಮೊದಲು ಪೂರ್ಣ ಪ್ರಮಾಣದಲ್ಲಿ ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ಭರ್ತಿ ಮಾಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಶಿಕ್ಷಣ ಪದ್ಧತಿಯನ್ನು ಬಲಿಷ್ಠಗೊಳಿಸಲಿ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮುತ್ತು‌, ಶರಣಪ್ಪ, ಬೀಮಪ್ಪ, ಸುನೀಲ್, ದಚ್ಚು, ವಿಜಯಕುಮಾರ್, ಅಭಿಷೇಕ್, ಜಾಫರಸಾಬ್, ಮಂಜುನಾಥ್, ದರ್ಮಣ್ಣ, ಕಾಳಿಂಗಪ್ಪ, ಮಣಿಕಂಠ, ಕಳಕಮಲ್ಲೇಶ ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ದಾವಲಸಾಬ ತಾಳಿಕೋಟಿ

Donate Janashakthi Media

Leave a Reply

Your email address will not be published. Required fields are marked *