ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ವಿರುದ್ಧ ಸಿಪಿಐ(ಎಂ) ರಾಜ್ಯವ್ಯಾಪಿ ಪ್ರತಿಭಟನಾ ಧರಣಿ

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಕೆಲಸವನ್ನು ಈ ಕೂಡಲೇ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)- ಸಿಪಿಐ(ಎಂ) ಪಕ್ಷದ ವತಿಯಿಂದ ಇಂದು ರಾಜ್ಯದಾದ್ಯಂತ ತೀವ್ರರೀತಿಯ ಪ್ರತಿಭಟನಾ ಧರಣಿಗಳು ನಡೆದಿವೆ.

ಕನ್ನಡ ಭಾಷೆ ಹಾಗೂ ಕನ್ನಡಿಗರ ಅಭಿವೃದ್ಧಿಗೆ ಮಾರಕವಾದ, ಅದರಲ್ಲೂ ಎಲ್ಲ ಮಹಿಳೆಯರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಬಡವರಿಗೆ ಅಂದರೇ ರಾಜ್ಯದ ಶೇಕಡಾ 95 ರಷ್ಠು ಜನರಿಗೆ ಶಿಕ್ಷಣವನ್ನು ಮರೀಚಿಕೆಯಾಗಿಸುವ ಅತ್ಯಂತ ಅಪಾಯಕಾರಿಯಾದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರಬಾರದೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಈ ನೀತಿಯು ರಾಜ್ಯದ ಕನ್ನಡ ಹಾಗೂ ಕನ್ನಡಿಗರ ಇತರೇ ಮಾತೃ ಭಾಷೆಗಳಾದ ತುಳು, ಕೊಡವಾ, ತೆಲುಗು, ಉರ್ದು, ಮರಾಠಿ, ಕೊಂಕಣಿ, ಲಂಬಾಣಿ ಮುಂತಾದ ಭಾಷೆಗಳ ಮೇಲೆ ಇಂಗ್ಲೀಷ್ ಹಾಗೂ ಸಂಸ್ಕೃತ, ಹಿಂದಿ ಭಾಷೆಗಳನ್ನು ಹೇರುವ ಹುನ್ನಾರವಾಗಿದೆ. ಇದರಿಂದ ಈ ಭಾಷೆಗಳು ಮತ್ತಷ್ಟು ಅಪಾಯವನ್ನು ಎದುರಿಸಲಿವೆ ಎಂದು ಸಿಪಿಐ(ಎಂ ಪಕ್ಷವು ಆರೋಪಿಸಿದೆ.

ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಕಾರ್ಪೊರೇಟ್ ಕಂಪನಿಗಳ ಹಾಗೂ ಖಾಸಗೀ ಶಿಕ್ಷಣ ಸಂಸ್ಥೆಗಳ ಬೃಹತ್ ಲೂಟಿಗೆ ರಾಜ್ಯವನ್ನು ತೆರೆಯುವ ಮುಂದುವರಿದ ಸಂಚಿನ ಭಾಗವಿದಾಗಿದೆ. ಇದರಿಂದ ಲಕ್ಷಾಂತರ ಅಂಗನವಾಡಿ ಕೇಂದ್ರಗಳು, ಏಕೋಪಾಧ್ಯಾಯ ಹಾಗೂ ವಿದ್ಯಾರ್ಥಿಗಳ ಕೊರತೆ ಎದುರಿಸುವ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಮುಚ್ಚಿ ಹೋಗಲಿವೆ. ಬಾಣಂತಿಯರು, ಗರ್ಭಿಣಿ ಮಹಿಳೆಯರು, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಯೋಜನೆಯು ಕಣ್ಮರೆಯಾಗಲಿದೆ ಎಂದು ಪಕ್ಷವು ತಿಳಿಸಿದೆ.

ಅಗ್ಗದ ದರದಲ್ಲಿ ಆಧುನಿಕ ನೈಪುಣ್ಯತೆ ಪಡೆದ ಗುಲಾಮರನ್ನು ಕಾರ್ಪೊರೇಟ್ ಕಂಪನಿಗಳಿಗೆ ಒದಗಿಸುವ ಮತ್ತು ಮತೀಯ ಭಾವನೆಗಳನ್ನು ಹರಡುವ, ರಾಜ್ಯದ ಸಮಗ್ರತೆ, ಏಕತೆಗೆ ಭಂಗ ಉಂಟುಮಾಡುವ ದುರುದ್ದೇಶವನ್ನು ಅದು ಹೊಂದಿದೆ. ಇದು ಸ್ವಾತಂತ್ರ್ಯ ನಂತರ ದೇಶದಲ್ಲಿ ಶೈಕ್ಷಣಿಕ ಹಾಗೂ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಸಾಧನೆಗಳ ಮುನ್ನಡೆಗೆ ಮತ್ತು ರಾಜ್ಯದಲ್ಲಿ ಬೆಳೆಯುತ್ತಿರುವ ಜನತೆಯ ವೈಜ್ಞಾನಿಕ ಮನೋಭಾವದ ಮೇಲೆ ಬಲವಾದ ತಡೆಯಾಗಲಿದೆ ಸಿಪಿಐ(ಎಂ) ಪಕ್ಷವು ಹೇಳಿದೆ.

ಇದು ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಆ ಸಂಬಂಧಿ ಇತರೆ ವಲಯಗಳ ಉದ್ಯೋಗಿಗಳನ್ನು ವ್ಯಾಪಕವಾದ ನಿರುದ್ಯೋಗಕ್ಕೆ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳನ್ನು ಕಡಿತಗೊಳಿಸುವಿಕೆಗೆ ಕಾರಣವಾಗಲಿದೆ. ಅದೇ ರೀತಿ, ದುರ್ಬಲರ ಸಾಮಾಜಿಕ ನ್ಯಾಯದ ಮೀಸಲಾತಿಯ ಹಕ್ಕನ್ನು ಹೊಸಕಿ ಹಾಕಲಿದೆ.

ಇಷ್ಠೊಂದು ಗಂಭೀರ ಅಪಾಯಗಳನ್ನು ರಾಜ್ಯದ ಜನತೆಯ ಮೇಲೆ ಹೇರಲಿರುವ ಇದು ಮತ್ತಷ್ಟು ವ್ಯಾಪಕ ಚರ್ಚೆಗೊಳಪಡಿಸದೇ ಜಾರಿಗೊಳಿಸಬಾರದು.

ಕಳೆದ ಎರಡು ವರ್ಷಗಳ ಕಾಲ ರಾಜ್ಯದ ಜನತೆ ಕೋವಿಡ್ ಸಂಕಷ್ಠದಲ್ಲಿದ್ದುದರಿಂದ ಜನತೆಗೆ ವ್ಯಾಪಕವಾಗಿ ಭಾಗಿಯಾಗಿ, ಈ ವಿಚಾರದಲ್ಲಿ ಅಭಿಪ್ರಾಯ ನೀಡಲು ಸಾಧ್ಯವಾಗಿಲ್ಲವೆಂಬುದನ್ನು ಗಮನಿಸಬೇಕಾದ ಅಂಶವಾಗಿದೆ.

ಆದ್ದರಿಂದ, ರಾಜ್ಯದ ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ, ಎಲ್ಲ ರಾಜಕೀಯ ಪಕ್ಷಗಳ ಜೊತೆ ಮತ್ತು ಶೈಕ್ಷಣಿಕ ವಲಯದ ತಜ್ಞರು, ಭಾಷಾ ತಜ್ಞರು, ಅಕಾಡೆಮಿಕ್ ವಲಯಗಳು, ಶಿಕ್ಷಕರ, ಅಧ್ಯಾಪಕ, ಪ್ರಾಧ್ಯಾಪಕರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿಶ್ವವಿದ್ಯಾನಿಲಯಗಳು ಮುಂತಾದ ಗಣ್ಯ ಸಂಸ್ಥೆಗಳು ಹಾಗೂ ನಾಗರೀಕರ ಜೊತೆ ವ್ಯಾಪಕವಾಗಿ ಚರ್ಚಿಸಲು ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಸಿ ಸಲ್ಲಿಸಿರುವ ಸಿಪಿಐ(ಎಂ) ಪಕ್ಷವು, ಅದುವರೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವುದೇ ಕಾರಣಕ್ಕೆ ಜಾರಿಗೊಳಿಸಬಾರದೆಂದು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *