ಬೆಂಗಳೂರು:ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನ ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ಕೆ.ರೆಹಮಾನ್ ಖಾನ್, ಆರ್‌ಎಸ್‌ಎಸ್ ಕಾರ್ಯಸೂಚಿಯ ಭಾಗವಾಗಿರುವ ಎನ್‌ಇಪಿಯನ್ನು ರಾಜ್ಯದಲ್ಲಿ ಕೈಬಿಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಎಷ್ಟೇ ಕಷ್ಟವಾದರೂ ಸಂವಿಧಾನ ಉಳಿಸಿಕೊಳ್ಳುವ ಕೆಲಸ ಮಾಡಬೇಕು:ಸಿಎಂ ಸಿದ್ದರಾಮಯ್ಯ
ಅದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಈ ವರ್ಷ ತಡವಾಯಿತು ಮುಂದಿನ ವರ್ಷದಿಂದ ಎನ್‌ಇಪಿಯನ್ನು ಪೂರ್ಣವಾಗಿ ರದ್ದು ಮಾಡುತ್ತೇವೆ. ಸಂವಿಧಾನಕ್ಕೆ ಪೂರಕವಾದ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದರು.
ಎನ್‌ಇಪಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಎಲ್ಲರ ವಿರೋಧವಿದೆ. ಬಿಜೆಪಿ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಕರ್ನಾಟಕದಲ್ಲಿ ತರಾತುರಿಯಲ್ಲಿ ಅನುಷ್ಠಾನ ಆರಂಭಿಸಲಾಯಿತು ಎಂದರು.
ನಾಗಪುರದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲೇ ಎನ್‌ಇಪಿ ಕರಡು ತಯಾರಾಗಿತ್ತು. ಬಹಳ ಹಿಂದೆಯೇ ಅದು ಸೋರಿಕೆಯಾಗಿತ್ತು. ರಾಜ್ಯಸಭೆಯಲ್ಲೇ ಈ ಬಗ್ಗೆ ನಾನು ಪ್ರಶ್ನೆ ಎತ್ತಿದ್ದೆ. ಆರ್‌ಎಸ್‌ಎಸ್ ತನ್ನ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸಲು ಎನ್‌ಇಪಿಯನ್ನು ಬಳಸಿಕೊಳ್ಳುತ್ತಿದೆ ಎಂದು ರೆಹಮಾನ್ ಖಾನ್ ದೂರಿದರು.