ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರಡಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸುವಂತಿಲ್ಲ, ಆ ಕುರಿತು ಯಾವುದೇ ನಿಯಮಗಳಿಲ್ಲ ಎಂದು ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಕನ್ನಡ ಕಡ್ಡಾಯ ಕಲಿಕೆಯ ಆದೇಶ ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್ ಹಾಗೂ ವಿದ್ಯಾರ್ಥಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯನ್ನು ನಡೆಸಿತು.
ಈ ಸಂಬಂಧ ಹೈಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಪ್ರಮಾಣಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರ “ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಆಶೋತ್ತರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಗ್ರ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಎನ್‌ಇಪಿ ಜಾರಿಗೊಳಿಸಲಾಗಿದೆ. ಎನ್‌ಇಪಿಯಲ್ಲಿ ಭಾರತದ ಭಾಷೆ, ಕಲೆ ಮತ್ತು ಸಂಸ್ಕೃತಿ ಪ್ರಚಾರ ತಲೆಬರಹ ಹೊಂದಿರುವ 22ನೇ ಅಧ್ಯಾಯವನ್ನು ಭಾರತೀಯ ಭಾಷೆ ಮತ್ತು ಪ್ರಾದೇಶಿಕ ಭಾಷೆಗಳ ಪ್ರಚಾರಕ್ಕೆ ಮೀಸಲಿಡಲಾಗಿದೆ. ಆದರೆ ಅದರಲ್ಲಿ ಪ್ರಾದೇಶಿಕ ಭಾಷೆ ಕಡ್ಡಾಯ ವಿಚಾರವಿಲ್ಲವೆಂದು ತಿಳಿಸಿದೆ.
ಇದರಿಂದಾಗಿ ಪದವಿ ಹಂತದಲ್ಲಿ ಒಂದು ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯಗೊಳಿಸುವ ರಾಜ್ಯದ ಕನಸಿಗೆ ಧಕ್ಕೆಯಾಗಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳ ಪರ ವಕೀಲರು, ಎನ್‌ಇಪಿ ಮತ್ತದರ ನಿಯಮಗಳಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಿಲ್ಲ ಎಂದು ಕೇಂದ್ರವು ತನ್ನ ಪ್ರಮಾಣಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ.
ಅಲ್ಲದೆ, ಅದರಂತೆ ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯವಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅರ್ಜಿದಾರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಭಾಷೆಯ ಅಧ್ಯಯನ ಮುಂದುವರಿಸಲು ಸ್ವತಂತ್ರರು ಎಂದು ಆದೇಶ ಮಾಡಬೇಕೆಂಬುದು ಕೋರಿದರು.
ಕೇಂದ್ರದ ಪರ ವಕೀಲರು, ವಿದ್ಯಾರ್ಥಿಗಳ ಅರ್ಜಿಗಳ ಇತ್ಯರ್ಥಪಡಿಸುವುದು ಸೂಕ್ತವಿರಬಹುದು. ಆದರೆ, ಈ ವಿಚಾರದಲ್ಲಿ ಎಜಿ ಅವರ ನಿಲುವು ಕೇಳಿ ಮುಂದುವರಿಯುವುದು ಸೂಕ್ತ ಎಂದು ಸಲಹೆ ನೀಡಿದರು.
ನ್ಯಾಯಪೀಠವು ” ಕನ್ನಡ ಕಡ್ಡಾಯ ಕಲಿಕೆ ವಿಚಾರವನ್ನು ಮರು ಪರಿಶೀಲಿಸಲು ಹಿಂದೆಯೇ ರಾಜ್ಯ ಸರ್ಕಾರಕ್ಕೆ ಸಮಯ ನೀಡಲಾಗಿತ್ತು, ಆದರೆ ಅದು ಒಪ್ಪಲಿಲ್ಲ, ವ್ಯಾಜ್ಯ ಮುಂದುವರಿಸಲು ಬಯಸಿತು, ಇದೀಗ ಮತ್ತೆ ಇನ್ನೊಮ್ಮೆ ಕೇಳಿ ನೋಡೋಣ ಎಂದು ಹೇಳಿತು.
ಪ್ರಸಕ್ತ ಮನವಿಯಲ್ಲಿ ಅರ್ಜಿದಾರರು, ರಾಜ್ಯ ಸರ್ಕಾರವು 2021ರ ಆಗಸ್ಟ್ 7 ಮತ್ತು ಸೆಪ್ಟೆಂಬರ್ 15ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿದ್ದಾರೆ. ಉನ್ನತ ಶಿಕ್ಷಣ ಪಠ್ಯಕ್ರಮದ ಭಾಗವಾಗಿ ನಿರ್ದಿಷ್ಟ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಮೇಲೆ ಎನ್‌ಇಪಿ ನಿರ್ಬಂಧ ವಿಧಿಸುವುದಿಲ್ಲ ಎಂದು ಘೋಷಿಸುವಂತೆ ಕೋರಿದ್ದಾರೆ.
ಯಾವುದೇ ಭಾಷೆ ಕಡ್ಡಾಯವಿಲ್ಲ:
ಕೇಂದ್ರ ಸರ್ಕಾರ ತನ್ನ ಅಫಿಡವಿಟ್ ನಲ್ಲಿ ,”ಎನ್‌ಇಪಿಯ ಅಧ್ಯಾಯದ 22.10 ನೇ ಪ್ಯಾರಾದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮಾತೃಭಾಷೆ/ಸ್ಥಳೀಯ ಭಾಷೆಯನ್ನು ಬೋಧನಾ ಭಾಷೆ ಬಳಕೆ ಮಾಡಬಹುದಾಗಿದ್ದು, ಎರಡು ಭಾಷೆಗೆ ಅವಕಾಶ ನೀಡುತ್ತದೆ. ಎಲ್ಲಾ ಮಟ್ಟದಲ್ಲೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಕೂಲಕ್ಕಾಗಿ ಭಿನ್ನ ಬಗೆಯ ಶೈಕ್ಷಣಿಕ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ಅದು ಎಲ್ಲರಿಗೂ ದೊರೆಯುವಂತೆ ಮಾಡುವ ಉದ್ದೇಶವಿದೆ. ಎನ್‌ಇಪಿ ಮತ್ತದರ ನಿಯಮಗಳಲ್ಲಿ ಯಾವುದೇ ಭಾಷೆ ಕಡ್ಡಾಯಗೊಳಿಸುವ ಅಂಶಗಳಿಲ್ಲ” ಎಂದು ಹೇಳಿದೆ.