ಎನ್ಇಪಿ-2020 ಎಂದರೆ ‘ನಾಗಪುರ ಬ್ರಾಹ್ಮಣರ ಪಾಲಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಾಧ್ಯಾಪಕರು
ಬೆಂಗಳೂರು: “ಕಾಣದ ಕೈ ಎಲ್ಲೋ ಕುಳಿತು ‘ಎನ್‌ಇಪಿ-2020’ ಎಂಬ ಕೃತ್ಯವನ್ನು ಎಸಗಿದೆ. ಎನ್‌ಇಪಿ ಎಂದರೆ ರಾಷ್ಟ್ರೀಯ ಶಿಕ್ಷಣ ನೀತಿ ಎಂದರ್ಥವಲ್ಲ, ‘ನಾಗಪುರ ಎಜುಕೇಶನ್ ಪಾಲಿಸಿ’ ಎಂದರ್ಥ” ಎಂದು ಸಂಸ್ಕೃತಿ ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು. ಲೇಖಕ ಬಿ. ಶ್ರೀಪಾದ್ ಭಟ್ ಅವರು ಬರೆದಿರುವ “ಕಣ್ಕಟ್ಟು” ಪುಸ್ತಕ ಮತ್ತು “ಎನ್‌ಇಪಿ-2020” ಕುರಿತ ಚರ್ಚೆ ಹಾಗೂ ಸಂವಾದ “ತಿಂಗಳ ಮಾತುಕತೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
“ಪುಸ್ತಕ ಪ್ರೀತಿ” ಪ್ರತಿ ತಿಂಗಳು ನಡೆಸಿಕೊಡುವ “ತಿಂಗಳ ಮಾತುಕತೆ” ಕಾರ್ಯಕ್ರಮವೂ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿಯ “ಪುಸ್ತಕ ಪ್ರೀತಿ” ಪುಸ್ತಕ ಮಳಿಗೆಯಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ.ಜಿ.ಎಸ್. ಸಿದ್ದರಾಮಯ್ಯ ಅವರು, “ಎನ್‌ಇಪಿ-2020 ವಿದ್ಯಾರ್ಥಿಗಳನ್ನು ವಂಚಿಸುವ ಹುನ್ನಾರವಾಗಿದ್ದು, ಅವರನ್ನು ಕಾಳಾಲುಗಳಾಗಿ ಕತ್ತಿ-ಮಚ್ಚು ಹಿಡಿದುಕೊಂಡು ಬೀದಿಯಲ್ಲಿ ಹೊಡೆದಾಡಿಸಲು ಹೊರಟಿದೆ. ಶಿಕ್ಷಣ ಹೆಸರಿನಲ್ಲಿ ವಿಷವನ್ನು ತುಂಬಲು ಹೊರಟಿದೆ. ಎನ್‌ಇಪಿ-2020 ವಿರೋಧ ಮಾಡುತ್ತಿರುವ ಅಧ್ಯಾಪಕರ ವಿಚಾರಗಳನ್ನು ಶಿಕ್ಷಣ ಸಚಿವರುಗಳು ಕೇಳಬೇಕಿದೆ. ಈ ಸಚಿವರುಗಳು ಎನ್‌ಇಪಿ-2020ಯನ್ನು ಓದಿಕೊಂಡಿರುವುದಿಲ್ಲ, ಒಂದು ವೇಳೆ ಓದಿದ್ದರೂ ಕಣ್ಕಟ್ಟಿನ ಒಳಗೆ ಕರಗಿಹೋಗುವವರು” ಎಂದು ಹೇಳಿದರು.
ಇದನ್ನೂ ಓದಿ: ಮೊಟ್ಟೆ ನೀಡದಂತೆ ಶಿಕ್ಷಣ ಇಲಾಖೆಗೆ ಶಿಫಾರಸ್ಸು : ಎನ್‌ಇಪಿ ಸಮಿತಿ ವಿರುದ್ಧ ತೀವ್ರ ಆಕ್ರೋಶ
“ಎನ್‌ಇಪಿ-2020 ಯ ಪ್ರಸ್ತಾವನೆಯಲ್ಲಿ ಇರುವ ಎಲ್ಲಾ ಮಾತುಗಳು ಭ್ರಮೆಗಳಾಗಿದ್ದು, ನಮ್ಮನ್ನು ಮೋಸ ಮಾಡುವುದಕ್ಕೆ ಬಳಸಿದ ಶಬ್ದಜಾಲಗಳಾಗಿವೆ. ಅದರ ಒಳಹೊಕ್ಕು ನೋಡಿದರೆ ಅದರ ಹುನ್ನಾರ ತುಂಬಾ ಭಯಾನಕವಾಗಿದೆ ಎಂಬುವುದನ್ನು ‘ಕಣ್ಕಟ್ಟು’ ಪುಸ್ತಕ ತಿಳಿಸುತ್ತದೆ. ಈ ಎಲ್ಲಾ ಹುನ್ನಾರಗಳನ್ನು ಬಯಲಿಗೆಳೆಯುವ ಲೇಖಕ ಬಿ. ಶ್ರೀಪಾದ ಭಟ್ ಅವರು ಪುಸ್ತಕಕ್ಕೆ ‘ಕಣ್ಕಟ್ಟು’ ಎಂಬ ಹೆಸರಿಟ್ಟಿದ್ದು ಸರಿಯಾಗಿದೆ. ಎನ್‌ಇಪಿ-2020 ವಿದ್ಯಾರ್ಥಿಗಳನ್ನು ವಂಚಿಸುವ ಹುನ್ನಾರವಾಗಿದ್ದು, ಅವರನ್ನು ಕಾಳಾಲುಗಳಾಗಿ ಕತ್ತಿ-ಮಚ್ಚು ಹಿಡಿದುಕೊಂಡು ಬೀದಿಯಲ್ಲಿ ಹೊಡೆದಾಡಿಸಲು ಹೊರಟಿದೆ. ಶಿಕ್ಷಣ ಹೆಸರಿನಲ್ಲಿ ವಿಷವನ್ನು ತುಂಬಲು ಹೊರಟಿದೆ” ಎಂದು ಪ್ರೊ. ಸಿದ್ದರಾಮಯ್ಯ ಅವರು ಹೇಳಿದರು.
ಸಹಾಯಕ ಪ್ರಾಧ್ಯಾಪಕರಾದ ಪ್ರೊ. ವಿನುತಾ ಅವರು “ಕಣ್ಕಟ್ಟು” ಪುಸ್ತಕವನ್ನು ಪರಿಚಯಿಸಿ, “ಕರ್ನಾಟಕದಲ್ಲಿ ಎಇಪಿ-2020 ಬಗ್ಗೆ ಜನ ಜಾಗೃತಿ ಬಂದಿದ್ದರೆ ಅದಕ್ಕೆ ಶ್ರೀಪಾದ ಭಟ್ ಮತ್ತು ನಿರಂಜನಾರಾಧ್ಯ ಅವರುಗಳು ಕಾರಣ. ಎನ್‌ಇಪಿಯಲ್ಲಿ ಮಾಯಾ, ಮಾಟ, ಮೋಸ ಇದೆ” ಎಂದು ಅಭಿಪ್ರಾಯಪಟ್ಟರು.
“ಸಂಸ್ಕೃತ ಭಾಷೆ ಕಲಿಯಬೇಕು ಎಂಬ ಒತ್ತಾಯವಿರುವ ಎನ್‌ಇಪಿ ಸಮಿತಿಯು ಆರೆಸ್ಸೆಸ್ ಜೊತೆಗೆ ನಿರಂತವಾಗಿ ಸತತ ಚರ್ಚೆ ನಡೆಸಿದೆ. ಈ ನೀತಿಯು ಭಾರತವನ್ನು 3 ಸಾವಿರ ವರ್ಷಗಳ ಹಿಂದಕ್ಕೆ ಒಯ್ಯುತ್ತದೆ” ಎಂಂದು ವಿನುತಾ ಅವರು ಹೇಳಿದರು.
ಎನ್‌ಇಪಿ-2020ಯ ಸಾಧಕ ಭಾಧಕಗಳ ಬಗ್ಗೆ ಮಾತನಾಡಿದ ಸಹ ಪ್ರಾಧ್ಯಾಪಕ ಡಾ. ಎಚ್.ಡಿ. ಉಮಾಶಂಕರ್, “ಎನ್‌ಇಪಿ-2020ಯಿಂದಾಗಿ ಯಾವುದೇ ತಯಾರಿ ಇಲ್ಲದ ವಿದ್ಯಾರ್ಥಿಗಳು ಎಲ್ಲವನ್ನೂ ಆನ್‌ಲೈನ್ ಮುಖಾಂತರ ದಾಖಲಿಸಬೇಕಾಗಿದೆ. ಇವುಗಳನ್ನು ಮಾಡಲು ತಿಳಿಯದ ಹಲವು ವಿದ್ಯಾರ್ಥಿಗಳು ಪರೀಕ್ಷೆಗೂ ಹಾಜರಾಗದ ಪರಿಸ್ಥಿತಿಯಿದೆ. ವಿಷಯ ಆಯ್ಕೆ ವಿಚಾರದಲ್ಲೂ ವಿದ್ಯಾರ್ಥಿಗಳು ಗೊಂದಲಕ್ಕೆ ಈಡಾಗುತ್ತಿದ್ದಾರೆ. ಹಿಂದುಳಿದ ಮತ್ತು ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್‌ಗೆ ಬಗ್ಗೆ ಎನ್‌ಇಪಿ ಮಾತನಾಡುವುದಿಲ್ಲ. ಇದು ಕಲಿಕೆಗಿಂತಲೂ ಕಾಲೇಜು ಬಿಟ್ಟು ಹೋಗುವ ಆಯ್ಕೆಯನ್ನು ಸರಳವಾಗಿ ನೀಡುವ ಎನ್‌ಇಪಿ-2020ಯಿಂದಾಗಿ ನಿಜಕ್ಕೂ ದೊಡ್ಡದೊಂದು ದುರಂತ ಕಾದಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಎನ್‌ಇಪಿಗೆ ವಿಷಯಗಳ ಸೇರ್ಪಡೆ ಕುರಿತ ಸಮಿತಿಯ ಶಿಫಾರಸ್ಸು ಅವೈಜ್ಞಾನಿಕ: ಎಐಡಿಎಸ್‌ಓ
ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ, ಸಹಾಯಕ ಪ್ರಾಧ್ಯಾಪಕ ಡಾ. ರವಿಕುಮಾರ್ ಬಾಗಿ, “ಎನ್‌ಇಪಿ ಅಂದರೆ ನಾಗಪುರ ಎಜುಕೇಷನ್ ಪಾಲಿಸಿ. ಕರ್ನಾಟಕವನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿದ್ದಾರೆ. ಇದು ಸಾಂವಿಧಾನಿಕ ಮೌಲ್ಯಗಳನ್ನು ಒಳಗೊಳ್ಳದೆ, ಮತೀಯತೆ, ಕೋಮುದ್ವೇಷವನ್ನು ಒಳಗೊಂಡಿದೆ. ಪಶ್ಚಿಮದ ದೇಶಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಹಿಂದೆ ಓಡುತ್ತಿದ್ದರೆ, ನಾವು ಸಾವಿರಾರು ವರ್ಷಗಳ ಹಿಂದೆ ಓಡುತ್ತಿದ್ದೇವೆ” ಎಂದು ಹೇಳಿದರು.
“ಸಂಸ್ಕೃತ ಭಾಷೆ ಐಚ್ಛಿಕ ಭಾಷೆಯಾಗಿ ಇಡಬೇಕು ಎಂದು ಎನ್‌ಇಪಿ-2020 ಹೇಳುತ್ತದೆ. ಮೃತ ಭಾಷೆಯೊಮದಕ್ಕೆ ಒಂದು ವಿಶ್ವವಿದ್ಯಾನಿಲಯದ ಕಟ್ಟಿ ಅದಕ್ಕೆ ಸಾವಿರಾರು ಕೋಟಿ ಖರ್ಚು ಮಾಡುವುದೆ ಮೂರ್ಖತನ. ಶಿಕ್ಷಣವನ್ನು ದುಡ್ಡಿರುವ ಜನರು ಕೊಳ್ಳುವ ವಸ್ತುವನ್ನಾಗಿ ಮಾಡ ಹೊರಟಿದ್ದಾರೆ. ಮೆರಿಟ್ ಇದ್ದವರಿಗೆ ಸ್ಕಾಲರ್ ಶಿಪ್ ಎಂದು ಎನ್‌ಇಪಿ-2020 ಹೇಳುತ್ತದೆ, ಆದರೆ ಮೆರಿಟ್ ಅನ್ನುವುದೇ ಮಹಾಮೋಸ. ಇದು ದಲಿತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮೇಲೆ ಚಪ್ಪಡಿ ಕಲ್ಲು ಎಳೆಯುವ ಹುನ್ನಾರ. ಯತಾಸ್ಥಿತಿ ವಾದ ಹೇರಲು ಎನ್ಇಪಿ ಒಂದು ಮಾನದಂಡವಾಗಿ ಕೆಲಸ ಮಾಡಲಿದೆ” ಎಂದು ರವಿಕುಮಾರ್ ಬಾಗಿ ಎಚ್ಚರಿಸಿರು.
ಸಹಾಯಕ ಪ್ರಾಧ್ಯಾಪಕ ವಿ.ಎಲ್. ನರಸಿಂಹಮೂರ್ತಿ ಮಾತನಾಡಿ, “ಎನ್‌ಇಪಿ ಅಂದರೆ ‘ನಾಗಪುರ ಬ್ರಾಹ್ಮಣರ ಪಾಲಿಸಿ’. ಸಂವಿಧಾನದ ಕೊಟ್ಟಿರುವ ಹಕ್ಕುಗಳನ್ನು ಪಡೆದುಕೊಂಡು ಶಾಲಾಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳನ್ನು ತಡೆಯುವ ಹುನ್ನಾರ ಇದರಲ್ಲಿದೆ. ಜಗತ್ತಿನಲ್ಲೇ ಅತೀ ಹೆಚ್ಚು ಜಾತಿಯತೆ ಮತ್ತು ಜನಾಂಗೀಯತೆಯನ್ನು ಪಾಲಿಸುವ ಒಂದು ಪಾಲಿಸಿ ಇದ್ದರೆ ಅದು NEP-2020” ಎಂದು ಹೇಳಿದರು.
ಇದನ್ನೂ ಓದಿ: ಎನ್‌ಇಪಿ ಅಡಿ ಪಿಎಂ ಶ್ರೀ ಮಾದರಿ ಶಾಲೆಗಳ ಸ್ಥಾಪನೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ ಮಾತನಾಡಿ, “ಎನ್‌ಇಪಿ-2020 ಸುಂದರ ಪ್ರಸ್ತುತಿಯಾಗಿದೆ. ಆದರೆ ಅದರ ಮೋಸ ಮತ್ತು ಹುನ್ನಾರವನ್ನು ‘ಕಣ್ಕಟ್ಟು’ ಪುಸ್ತಕ ಬಿಚ್ಚಿಡುತ್ತದೆ. ವಿದ್ಯಾರ್ಥಿಗಳು ಕಾಲೇಜು ಪ್ರವೇಶವನ್ನು ಹಾಗೂ ಪ್ರವೇಶ ಶುಲ್ಕವನ್ನು ಒಂದು ಖಾಸಗಿ ವೆಬ್ ಮೂಲಕ ಮಾಡಬೇಕಾಗುತ್ತದೆ. ಆದರೆ ಈ ಖಾಸಗಿ ವೆಬ್‌ನವರು ಕಾಲೇಜಿಗೆ ಮೂರು ಅಥವಾ ಆರು ತಿಂಗಳಾದರೂ ವಿದ್ಯಾರ್ಥಿಗಳ ಹಣವನ್ನು ನೀಡುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್‌ಶಿಪ್‌ಗೆ ತೊಂದರೆಯಾಗುತ್ತಿದೆ. ಡಿಜಿಟಲೀಕರಣದ ಬಗ್ಗೆ ಎನ್‌ಇಪಿ-2020 ಮಾತನಾಡುತ್ತದೆ, ಆದರೆ ರಾಜ್ಯದ ಹಲವಾರು ಶಾಲೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ” ಎಂದು ಹೇಳಿದರು.
ಸಂವಾದದಲ್ಲಿ ಲೇಖಕರು, ವಿದ್ಯಾರ್ಥಿ ಮುಖಂಡರು, ಅಧ್ಯಾಪಕರು ಹಾಗೂ ಹೋರಾಟಗಾರರು ಭಾವಹಿಸಿದ್ದರು. ಪುಸ್ತಕ ಪ್ರೀತಿಯ ಕೆ.ಎಸ್. ವಿಮಲ ಕಾರ್ಯಕ್ರಮ ನಿರೂಪಿಸಿದರು. ಕ್ರಿಯಾ ಮಾಧ್ಯಮದ ಎನ್. ಕೆ. ವಸಂತರಾಜ್ ಉಪಸ್ಥಿತರಿದ್ದರು.