- ದೇಶದ ಹಲವು ಭಾಷೆಗಳು ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ
- ಸ್ಥಳೀಯ ಅಥವಾ ಬುಡಕಟ್ಟು ಭಾಷೆ ಎನ್ನುವ ಬದಲಾಗಿ ‘ಮಾತೃ ಭಾಷೆ’ ಎಂದು ಉಲ್ಲೇಖಿಸಿ
- ಪಿಎಂ ಶ್ರೀ ಮಾದರಿ ಶಾಲೆ ಸ್ಥಾಪನೆಗೆ ಚಿಂತನೆ
ನವದೆಹಲಿ: ಮುಂದಿನ ʻಉತ್ತಮ ಭವಿಷ್ಯಕ್ಕಾಗಿʼ ವಿದ್ಯಾರ್ಥಿಗಳನ್ನು ರೂಪುಗೊಳಿಸಲು ಕೇಂದ್ರ ಸರ್ಕಾರವು ‘ಪಿಎಂ ಶ್ರೀ ಮಾದರಿ ಶಾಲೆ’ಗಳನ್ನು ಸ್ಥಾಪಿಸುವ ಸಾಧ್ಯತೆಗಳಿವೆ. ಇವು, ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್ಇಪಿ) ಪ್ರಯೋಗಶಾಲೆಗಳು ಆಗಿರಲಿವೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕರೆ ನೀಡಿದ್ದಾರೆ.
ಗುಜರಾತಿನಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಶಿಕ್ಷಣ ಸಚಿವರ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘21ನೇ ಶತಮಾನದ ಜ್ಞಾನ, ಕೌಶಲಗಳನ್ನು ಹೊಸ ಪೀಳಿಗೆಗೆ ನಿರಾಕರಿಸಲಾಗದು. ‘ಪಿಎಂ ಶ್ರೀ ಸ್ಕೂಲ್’ ಸ್ವರೂಪದಲ್ಲಿ ಇಡೀ ಶಿಕ್ಷಣ ವ್ಯವಸ್ಥೆ ಭವಿಷ್ಯದ ಸೂಚ್ಯಂಕವಾಗಿ ಇರಬೇಕು. ಇದಕ್ಕಾಗಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ಸಲಹೆ ಪಡೆಯಲು ಬಯಸುತ್ತೇವೆ’ ಎಂದು ತಿಳಿಸಿದ್ದಾರೆ.
ಭಾರತವನ್ನು ಜ್ಞಾನಧಾರಿತ ಆರ್ಥಿಕತೆ ರಾಷ್ಟ್ರವನ್ನಾಗಿಸುವಲ್ಲಿ ಮುಂದಿನ 25 ವರ್ಷ ಮಹತ್ವದ್ದಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಪರಸ್ಪರ ಅನುಭವಗಳನ್ನು ಯಶಸ್ಸು ಹಂಚಿಕೊಳ್ಳುವ ಮೂಲಕ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ ಎಂದರು.
‘ಕಳೆದ ಹಲವು ದಿನಗಳಿಂದ ಭಾಷೆಯ ವಿಚಾರವಾಗಿ ಹಲವು ವಿವಾದಗಳನ್ನು ಹುಟ್ಟುಹಾಕಲಾಗಿತ್ತುದೆ. ಆದರೆ, ಮತ್ತೊಮ್ಮೆ ಪುನರುಚ್ಛರಿಸುವುದಾದರೆ, ಗುಜರಾತಿ, ತಮಿಳು, ಪಂಜಾಬಿ, ಅಸ್ಸಾಮಿ, ಬಂಗಾಳಿ ಅಥವಾ ಮರಾಠಿ ಎಲ್ಲ ಭಾಷೆಗಳು ರಾಷ್ಟ್ರೀಯ ಭಾಷೆಗಳೇ, ಈ ಎಲ್ಲಾ ಭಾಷೆಯೂ ಹಿಂದಿ ಮತ್ತು ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ’ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಮುಖ್ಯಸ್ಥ ಡಾ.ಕೆ.ಕಸ್ತೂರಿರಂಗನ್ ಅವರು, ಸ್ಥಳೀಯ ಭಾಷೆಗಳು ಅಥವಾ ಬುಡಕಟ್ಟು ಭಾಷೆಗಳು ಎಂದು ಬಳಸುವ ಬದಲು ಅವುಗಳು ‘ಮಾತೃ ಭಾಷೆ’ ಎಂದು ಉಲ್ಲೇಖಿಸಿದ್ದಾರೆ. ತಂತ್ರಜ್ಞಾನದ ಸಹಾಯದಿಂದ ಈ ಎಲ್ಲಾ ಭಾಷೆಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
‘ಹಿಂದಿ ರಾಷ್ಟ್ರ ಭಾಷೆ’ ಎಂಬ ನಟ ಅಜಯ್ ದೇವಗನ್ ಹೇಳಿಕೆ ಕುರಿತು ಇತ್ತೀಚೆಗೆ ಮಾತನಾಡಿದ್ದ ಅವರು, ‘ಹಿಂದಿ ರಾಷ್ಟ್ರೀಯ ಭಾಷೆಯಲ್ಲ. ಅದು ರಾಷ್ಟ್ರೀಯ ಭಾಷೆ ಎಂದು ಯಾರೂ ಹೇಳಿಲ್ಲ. ನಾವು ಹಿಂದಿ ಹೇರಿಕೆ ಕೂಡಾ ಮಾಡುವುದಿಲ್ಲ. ಇಂಥದ್ದೇ ಭಾಷೆ ಕಲಿಯಬೇಕು ಎಂದು ಯಾರ ಮೇಲೂ ಒತ್ತಡ ಹೇರಲಾಗುವುದಿಲ್ಲʼ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿರುವ 5+3+3+4 ದೃಷ್ಟಿಕೋನವನ್ನು ಸಚಿವರು ವಿವರಿಸಿದರು. 21ನೇ ಶತಮಾನದ ಜಾಗತಿಕ ನಾಗರಿಕರಾಗಲು ನಮ್ಮ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಲು ಪೂರ್ವಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಯವರೆಗೆ ಸಮಗ್ರವಾಗಿ ಗಮನ ಹರಿಸಬೇಕಿದೆ. ಇದರೊಂದಿಗೆ ಶಿಕ್ಷಕರ ತರಬೇತಿ, ಕೌಶಲಾಭಿವೃದ್ಧಿ, ಮಾತೃಭಾಷೆಯಲ್ಲಿ ಶಿಕ್ಷಣ ಅತ್ಯಗತ್ಯ ಎಂದು ತಿಳಿಸಿದರು.
ಸಮಾವೇಶದಲ್ಲಿ ಗುಜರಾತ್ ಮುಖ್ಯಮಂತ್ರಿ ಭುಪೇಂದ್ರ ಪಟೇಲ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವರು, ವಿವಿಧ ರಾಜ್ಯಗಳ ಶಿಕ್ಷಣ ಸಚಿವರು, ರಾಷ್ಟ್ರಮಟ್ಟದಲ್ಲಿ ಹೊಸ ಪಠ್ಯಕ್ರಮ ರೂಪಿಸಲು ರಚಿಸಿರುವ ಮಾರ್ಗದರ್ಶಿ ಮಂಡಳಿಯ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಮತ್ತು ಕೇಂದ್ರ, ರಾಜ್ಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.